( ರಾಗ ಕಾಪಿ. ಏಕ ತಾಳ)

ಬೈಯಿರೋ ಬೈಯಿರೋ
ಮನಮುಟ್ಟಿ ಬೈಯಿರೋ ||ಪ||
ಚೆನ್ನಾಗಿ ಬೈದೆನ್ನ ಧನ್ಯನ ಮಾಡಿರೋ ||ಅ||

ಅವರು ಇವರು ಬೈದರೆಂಬೊ
ಹೀನ ಬುದ್ಧಿ ನನಗಿಲ್ಲ
ನಾ ಮಾಡಿದಷ್ಟು ಪಾಪವನ್ನು
ಅಳೆದು ಹಾಕಿ ಹಂಚಿಕೊಳ್ಳಿರೋ ||

ಇರುವೆ ನೊಣ ಕೊಂದ ಪಾಪ
ಪರನಿಂದೆಯ ಮಾಡಿದ ಪಾಪ
ಹೊಲೆಯ ಪಾಪ ಕೆಲವು ಉಂಟು
ಅಳೆದು ಹಾಕಿ ಹಂಚಿಕೊಳ್ಳಿರೋ ||

ಅತ್ತೆ ಮಾವನ ಬೈದ ಪಾಪ
ಮತ್ತೆ ಹಿರಿಯರ ನುಡಿದ ಪಾಪ
ಕರ್ತು ಶ್ರೀ ಪುರಂದರವಿಠಲನ್ನ
ಚಿತ್ತದಲ್ಲಿ ನೆನೆಯದ ಪಾಪ||