ಆರಭಿ - ಆದಿತಾಳ
ರಮಾ ಸಮುದ್ರನ ಕುಮಾರಿ ನಿನ್ನಯ
ಸಮಾನರ್ಯಾರಮ್ಮ |ಪ|
ಸುಮಾಸ್ತ್ರನಯ್ಯನೆದೆ ಮೇಲೆ ಸತತ ಬ
ಹುಮಾನದಲಿ ಮೆರೆವ ಮಹಾಮಹಿಮಳೇ |ಅ|
ಕನಕ ಮುಕುಟ ಮಂಡಿತ ಕುಟಲಾಳಕಜಾಲೇ | ಶ್ರೀ ಚಂ
ದನ ಕುಂಕುಮ ಕಸ್ತುರಿ ತಿಲಕಾಂಕಿತ ಫಾಲೇ|
ಮಣಿಮಯ ಕುಂಡಲ ಶೋಭಿತ ಕರ್ಣಕಪೋಲೇ| ಚಂಪಕ
ನನೆ ನಾಸಾಗ್ರದೊಳೂಗುವ ಮೌಕ್ತಿಕ ಲೋಲೇ
ಮಿನುಗುವ ಮಾಣಿಕದ ಮಣಿಯಧರ ಪುಟದೊ
ಳಿನಿವರ ವಜ್ರದಿ ಕಣಿಗಳ ರಾಜಿ ದ
ಶನಯುತ ಸ್ಮೇರಾನನನ ಶುಭಕಾಂತಿಯಿಂ
ವನಜ ಭವನ ಮನೆಗೆ ಮಂಗಳಗರೆವ |೧|
ಕೊರಳೊಳು ಪರಿಮಳ ಪರಿಪರಿ ಪುಷ್ಪದ ಮಾಲೇ | ಒಪ್ಪುವ
ಕರಿರಾಜನ ಕರದಿರುವಿಕೆ ಕರಗಳ ಲೀಲೇ||
ಶರಣಗತ ಜನ ಪರಿಪಾಲನರತ ಶೀಲೇ | ಗಂಡನ |
ಪರಿರಂಭಣ ಸಾಮ್ರಾಜ್ಯದ ಸುಖದನುಕೂಲೇ||
ಕರುಣಿಸಮ್ಮ ತವ ಕರುಣ ಕಟಾಕ್ಷದ
ಶಿರಿಯ ಬೆಳಗಿನೊಳ್ ಪರಿಚರಿಸುವ ಸುಜ
ನರ ಚರಣಾಂಬುಜ ಪರಿಮಳದೊಳು ಮನ
ವೆರಗಿಸುವದು ಸೌಂದರ್ಯ ಶಿಖಾಮಣಿ
ರಮಣೀಯ ವಿಮಲ ಕಮಲಾಯತದಳನೇತ್ರೇ | ಚಂಪಕ |
ಸುಮದ ಸುವರ್ಣ ಪರಿಮಳದ ಸುಂದರಗಾತ್ರೇ
ಕಮಲ ಭವೇಂದ್ರಾದ್ಯಮರ ಮುನಿಗಣಸ್ತೋತ್ರೇ | ಶ್ರೀ
ಕಮಲೇಶ ವಿಠಲರಾಯನ ಕರುಣಕೆ ಪಾತ್ರೇ
ಭ್ರಮಿಸುವೆನು ಭವದ ತಿಮಿರದೊಳಗಹಂ
ಮಮ ಮದದಿಂದಲಿ ಸುಮಾರ್ಗವರಿಯದೆ
ವಿಮಲದೃಷ್ಟಿ ಚಂದ್ರಮನಮೃತ ಕಿರಣ
ನಮಗೆ ಸಲಿಸೆ ಮಾರಮಣೆ ಮಜ್ಜನನಿ
(ಬೇಲೂರು ಕೇಶವದಾಸರ ಕರ್ನಾಟಕ ಭಕ್ತ ವಿಜಯದಿಂದ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!