( ರಾಗ ಮೋಹನ. ಝಂಪೆ ತಾಳ)

ಏಕೆ ವೃಂದಾವನ ಸಾಕು ಗೋಕುಲವಾಸ
ಏಕೇ ಬಂದೆಲೊ ಉದ್ಧವ
ಸಾಕು ಸ್ನೇಹದ ಮಾತನೇಕಮಹಿಮನು ತಾನು
ಆ ಕುಬುಜೆಯನು ಕೂಡಿದ, ಉದ್ಧವ ||ಪ||

ಬಿಲ್ಲು ಬಿಳಿನಯ್ಯನ ಬೇಟೆ ನಗೆ ನುಡಿ ನೋಟ
ಇಲ್ಲದಂತಾಯಿತಲ್ಲ
ಎಲ್ಲರಿಂದಗಲಿಸಿದ ಕ್ರೂರ ಅಕ್ರೂರನು
ವಲ್ಲಭನ ಒಯ್ದನಲ್ಲ |
ಮಲ್ಲರನು ಮರ್ದಿಸುತ ಮಾವ ಕಂಸನ ಕೊಂದ
ಮಾಧವನ ತಂದು ತೋರಿಸೈ, ಉದ್ಧವ ||

ಅನುದಿನದೊಳಾದರಿಸಿ ಅಧರಾಮೃತವನಿತ್ತು
ಇನಯವದನನು ಮಾತಿಲಿ
ಮನಸು ಮರ್ಮವ ತಿಳಿದ ಮನಸಿಜಪಿತನ ಸುಖವು
ಮನಸಿಜನ ಕೇಳಿಯಲ್ಲಿ |
ಕನಸಿನಲಿ ಕಂಡ ತೆರನಾಯಿತಾತನ ಕಾಣದೆ
ಬದುಕುವ ಭರವಸೆ, ಹೇ ಉದ್ಧವ ||

ಕರುಣನಿಧಿಯೆಂಬೋರು ಕಪಟನಾಟಕದರಸು
ಸರಸ ವಿರಸವ ಮಾಡಿದ
ಸ್ಮರಿಸಿದವರನು ಕಾಯ್ವ ಬಿರುದುಳ್ಳ ಶ್ರೀ ರಮಣ
ಮರೆತು ಮಧುರೆಯ ಸೇರಿದ
ಪರಮ ಭಕ್ತರ ಪ್ರೀಯ ಪುರಂದರವಿಠಲನ
ಒಡಗೂಡಿಸೈ ಕೋವಿದ, ಉದ್ಧವ ||