( ರಾಗ ಮುಖಾರಿ. ಝಂಪೆ ತಾಳ)

ಭಾಷೆಹೀನರ ಸಂಗವಭಿಮಾನಭಂಗ ||ಪ||
ಬೇಸತ್ತು ಬೇಲಿಯ ಮೇಲೊರಗಿದಂತೆ ||ಅ||

ಹಸಿವೆಯಾರದೆ ಬೆಕ್ಕು ಹತ್ತಿಯನು ಮೆದ್ದಂತೆ
ತೃಷಿವಿಗಾರದೆ ಕೂಪ ತೋಡಿದಂತೆ
ಬಿಸಿಲಿಗಾರದೆ ಕೋತಿ ಬಂಡೆ ಮೇಲೆ ಕುಳಿತಂತೆ
ಕುಸುಬಿಯ ಹೊಲದೊಳಗೆ ಕಳ್ಳ ಪೊಕ್ಕಂತೆ ||

ಮಳೆಯ ರಭಸಕ್ಕಂಜಿ ಮರವೇರಿ ಕುಳಿತಂತೆ
ಚಳಿಯ ತಾಳದೆ ಜಲದಿ ಮುಳುಗಿದಂತೆ
ಹುಳುವಿನ ಭಯಕಂಜಿ ಹುತ್ತದೊಳು ಪೊಕ್ಕಂತೆ
ಎಳೆ ನರಿಯು ಒಂಟೆಯ ತುಟಿಗೆ ಜೋತಂತೆ ||

ಸರಸ ನಾರಿಯ ವೇಷ ಪುರುಷ ನಾರಿಯ ಗಮನ
ಬಿಸಿಲುಕುದುರೆಯ ಭಾವ ಎಂದೆನಿಸದೆ
ವಸುದೇಶ ಪುರಂದರವಿಠಲನೆ ಕಾಯ್ವ ನಮ್ಮ
ಎಸೆವ ನಾಮವ ಭಜಿಸಿ ಸುಖಿಯಾಗೊ ಮನವೆ ||

ಇನ್ನೊಂದು ಪಾಠ ಹೀಗಿದೆ ....
------------------------------

ಭಾಷೆಹೀನರ ಆಸೆ ಪ್ರಾಣ ಗಾಸಿ
ಬೇಸತ್ತು ಬೇಲಿ ಮೇಲೊರಗಿದಂತೆ ||

ಚಳಿಗೆ ನಡುಗುತ ಪೋಗಿ ಜಲವ ಪೊಕ್ಕಂತೆ
ಮಳೆಯ ರಭಸಕೆ ಮರವೇರಿ ಕುಳಿತಂತೆ
ಹುಳುವಿನಟ್ಟುಳಿಗಂಜಿ ಹುತ್ತಿನೊಳು ಹೊಕ್ಕಂತೆ
ಎಳೆ ನರಿಯು ಒಂಟೆಯ ತುಟಿಗೆ ಜೋತಂತೆ ||

ಹಸಿವೆಯಾರದೆ ಬೆಕ್ಕು ಹತ್ತಿಯನು ತಿಂದಂತೆ
ತೃಷಿಗಾರನವ ತೆವರ ತೋಡಿದಂತೆ
ಬಿಸಿಲಿಗಾರದೆ ಕೋತಿ ಬಂಡೆ ಮೇಲ್ಕುಳಿತಂತೆ
ಕುಸುಬಿಯ ಹೊಲದೊಳಗೆ ಕಳ್ಳ ಪೊಕ್ಕಂತೆ ||

ಹುಸಿಯನಾಡುವರಾಸೆ ಪುರುಷ ನಾರಿಯ ವೇಷ
ಬಿಸಿಲುಗುದುರೆಯ ಭಾವ ಒಂದೇ ಕಾಣೊ
ಬಿಸಜಾಕ್ಷ ಸಿರಿಪುರಂದರವಿಠಲನ
ಎಸೆವ ಪದದ ಸೇವೆ ಪರಮಸುಖವಯ್ಯ ||