ರಾಗ ಹಿಂದೂಸ್ಥಾನಿ ಕಾಪಿ/ಆದಿ ತಾಳ

ಜಗದುಧ್ಧಾರನ ಆಡಿಸಿದಳೆಶೋದೆ || ಪಲ್ಲವಿ ||

ಜಗದುಧ್ಧಾರನ ಮಗನೆಂದು ತಿಳಿಯುತ
ಸುಗುಣಾಂತರಂಗನ ಆಡಿಸಿದಳೆಶೋದೆ || ೧ ||

ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆಶೋದೆ || ೨ ||

ಅಣೋರಣೀಯನ ಮಹತೋಮಹೀಯನ
ಅಪ್ರಮೇಯನ ಆಡಿಸಿದಳೆಶೋದೆ || ೩ ||

ಪರಮಪುರುಷನ ಪರವಾಸುದೇವನ
ಪುರಂದರವಿಠಲನ ಆಡಿಸಿದಳೆಶೋದೆ || ೪ ||

~~~~ * ~~~~

ಜಗದುಧ್ಧಾರನ - ಜಗತ್ತನ್ನು ಎತ್ತಿ (ಉತ್) ಹಿಡಿದು (ಧೃ) ಕಾಪಾಡುವವನನ್ನು.
ಸುಗುಣಾಂತರಂಗನ - ಸತ್ವಗುಣವೊಂದೇ ಸ್ವಭಾವವಾಗಿ ಉಳ್ಳವನನ್ನು.
ನಿಗಮಕೆ ಸಿಲುಕದ - ವೇದಗಳು ಕೂಡ ಯಾವನ ನೆಲೆಯನ್ನು ಅರಿಯಲಾರವೋ ಅವನ.
ಅಗಣಿತ ಮಹಿಮನ - ಯಾವನ ಹಿರಿಮೆಯನ್ನು ಇಷ್ಟೆಂದು ಹೇಳಬರುವುದಿಲ್ಲವೋ ಅವನ.
ಅಣೋರಣೀಯನ - ಅತಿ ಸಣ್ಣದಾದ ಅಣುವಿಗಿಂತ ಸಣ್ಣವನು (ಅದರಲ್ಲೂ ಅಂತರ್ಯಾಮಿಯಾಗಿ ಸೂಕ್ಷ್ಮವಾಗಿರುವನು);
ಅತಿ ದೊಡ್ಡದಕ್ಕಿಂತ (ಎಂದರೆ ಆಕಾಶಕ್ಕಿಂತ) ದೊಡ್ಡವನು (ಅದೂ ಅವನಲ್ಲಿಯೇ ನೆಲೆಗೊಂಡಿದೆಯಾಗಿ), ಎಂದರೆ ಸರ್ವವ್ಯಾಪಿ, ಸರ್ವಾಧಾರ.

[ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]