ರಾಗ ಮುಖಾರಿ/ಆದಿ ತಾಳ

ಪಾಲಿಸೆಮ್ಮ ಮುದ್ದುಶಾರದೆ
ಎನ್ನ ನಾಲಿಗೆಯಲಿ ತಪ್ಪು ಬಾರದೆ || ಪಲ್ಲವಿ ||

ಲೋಲಲೋಚನೆ ತಾಯೆ
ನಿರುತ ನಂಬಿದೆ ನಿನ್ನ || ಅನುಪಲ್ಲವಿ ||

ಅಕ್ಷರಕ್ಷರ ವಿವೇಕವಾ ನಿಮ್ಮ ಕುಕ್ಷಿಯೊಳೀರೇಳು ಲೋಕವ
ಸಾಕ್ಷಾತು ರೂಪದಿಂದ ಒಲಿದು ರಕ್ಷಿಸು ತಾಯೆ || ೧ ||

ಶೃಂಗಾರಪುರ ನೆಲೆವಾಸಿನೀ ದೇವಿ
ಸಂಗೀತಗಾನವಿಲಾಸಿನೀ
ಮಂಗಳಗಾತ್ರೆ ತಾಯೆ ಭಳಿರೆ ಬ್ರಹ್ಮನ ರಾಣಿ || ೨ ||

ಸರ್ವಾಲಂಕಾರ ದಯಾಮೂರುತಿ ನಿಮ್ಮ
ಚರಣವ ಸ್ಮರಿಸುವೆ ಕೀರುತಿ
ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ || ೩ ||

~~~~ * ~~~~

ಅಕ್ಷರಕ್ಷರ ವಿವೇಕವಾ -- ಅಕ್ಷರವೆಂದರೆ ನಾಶವಿಲ್ಲದಿರುವ ಮುಕ್ತಿ, ಕ್ಷರವೆಂದರೆ ಇದ್ದು ಹೋಗುವ ಪ್ರಾಕೃತಿಕ ಸಂಪತ್ತು, ಇವೆರಡರ ನಡುವೆ ಇರುವ ಭೇದವನ್ನು ಮನಗಾಣುವುದು ವಿವೇಕ ; ನಿತ್ಯಾನಿತ್ಯ ವಸ್ತುವಿವೇಕವೆಂದೂ ಕರೆಯುತ್ತಾರೆ.
ಆಧ್ಯಾತ್ಮಿಕ ಸಾಧನೆಯಲ್ಲಿ ಇದು ಮುಖ್ಯವಾದ ಅಂಗ.

ನಿಮ್ಮ ಕುಕ್ಷಿಯೊಳೀರೇಳು ಲೋಕವ -- ದೇವಿಯ ಹೊಟ್ಟೆಯೊಳಗೆ ಹದಿನಾಲ್ಕು ಲೋಕಗಳೂ (ಈರೇಳು, ಎರಡು ಏಳು) ಅಡಗಿವೆ.

[ಪುರಂದರ ಸಾಹಿತ್ಯ ದರ್ಶನ - ಸಂಪುಟ ೧]