( ರಾಗ ತೋಡಿ. ಆದಿ ತಾಳ)

ಏನು ಬರೆದೆಯೊ ಬ್ರಹ್ಮ ಎಷ್ಟು ನಿರ್ದಯವೋ ||ಪ|| ಅಭಿ-
ಮಾನವನು ತೊರೆದು ಪರರನ್ನು ಬೇಡುವುದ ||ಅ||

ಗೇಣೊಡಲು ಪೊರೆವುದಕೆ ಪೋಗಿ ಪರರನು ಪಂಚ-
ಬಾಣಸಮರೂಪ ನೀನೆಂದು ಪೋಗಳೆ
ಆನೆ ನಿನ್ನಾಣಿಲ್ಲ ನಾಳೆ ಬಾರೆಂದೆನಲು
ಗಾಣ ತಿರುಗುವ ಎತ್ತಿನಂತೆ ಬಳಲುವುದ ||

ಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು
ಸೊಲ್ಲು ಸೊಲ್ಲಿಗೆ ಅವರ ಕೊಂಡಾಡುತ
ಇಲ್ಲ ಈ ವೇಳೆಯಲಿ ತಿರುಗಿ ಬಾರೆಂದೆನಲು
ಅಲ್ಲವನು ತಿಂದ ಇಲಿಯಂತೆ ಕೊರಗುವುದ ||

ಹಿಂದೆ ಬರೆದೆ ಬರೆಹ ಹೇಗಾದರಾಗಲಿ
ಮುಂದೆನ್ನ ವಂಶದಲಿ ಜನಿಸುವರ ಕಾಯೋ
ಸಂದೇಹಿಸಲು ಬೇಡ ಪುರಂದರವಿಠಲ
ಕಂದರ್ಪ ಜನಕ ಉಡುಪಿಯ ಕೃಷ್ಣನಾಣೆ ||