ರಾಗ ರೇಗುಪ್ತಿ/ಅಟ್ಟ ತಾಳ

ಆವ ಕುಲವಾದರೇನು ಆವನಾದರೇನು ಆತ್ಮ
ಭಾವವರಿತ ಮೇಲೆ || ಪಲ್ಲವಿ ||

ಹಸಿ ಕಬ್ಬು ಡೊಂಕಿರಲು ಅದರ
ರಸ ತಾನು ಡೊಂಕೇನೊ
ವಿಷಯಾಸೆಗಳ ಬಿಟ್ಟು
ಹಸನಾದ ಗುರುಭಕ್ತಿ ಮಾಡೋ || ೧ ||
ರಾಗ ರೇಗುಪ್ತಿ/ಅಟ್ಟ ತಾಳ

ನಾನಾ ವರ್ಣದ ಆಕಳು ಅದು
ನಾನಾ ವರ್ಣದ ಕ್ಷೀರವೇನೋ
ಹೀನ ಕರ್ಮಗಳನ್ನು ಬಿಟ್ಟು ಹಿಗ್ಗಿ
ಜ್ಞಾನ ಒಲಿಸಿರೋ || ೨ ||

ಕುಲದ ಮೇಲೆ ಹೋಗಬೇಡ ಮನುಜಾ
ಕುಲವಿಲ್ಲ ಜ್ಞಾನಿಗಳಿಗೆ
ವರದ ಪುರಂದರವಿಠಲನ ಪಾದವ
ಸೇರಿ ಮುಕ್ತನಾಗೋ || ೩ ||

~~~~ * ~~~~

[ಕುಲ, ಮತ, ಜಾತಿಗಳು ಮುಖ್ಯವಲ್ಲ; ಭಕ್ತಿಯ ಭಾವ, ಜ್ಞಾನ ಇವೇ ಮುಖ್ಯ.
ಯಾವ ಕುಲದವರೇ ಆಗಲಿ ಭಕ್ತಿ, ಜ್ಞಾನಗಳಿದ್ದರೆ ಅವರು ಮಾನ್ಯರೇ.
ಅವಕ್ಕೆ ಕುಲ ಕಾರಣವಾಗುವುದಿಲ್ಲ. ವಿಷಯದ ಆಸೆ ಬಿಡುವುದು, ಗುರುಭಕ್ತಿ ಮಾಡುವುದು, ಕೆಟ್ಟ ಕೆಲಸಗಳನ್ನು ಮಾಡದಿರುವುದು, ಜ್ಞಾನವನ್ನು ಪಡೆದುಕೊಳ್ಳುವುದು ಇವು ಆಧ್ಯಾತ್ಮದಲ್ಲಿ ಆಸಕ್ತರಾದವರಿಗೆ ಮುಖ್ಯ.]

[ಪುರಂದರ ಸಾಹಿತ್ಯ ದರ್ಶನ - ಸಂಪುಟ ೩]