( ರಾಗ ಮುಖಾರಿ. ಝಂಪೆ ತಾಳ)
ಏನು ಮಾಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ ||ಪ||
ಅರುಣೋದಯದಲೆದ್ದು ಅತಿ ಸ್ನಾನಗಳ ಮಾಡಿ
ಬೆರಳನೆಣಿಸಿದೆ ಅದರ ನಿಜವರಿಯದೆ
ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ
ಹರಿ ನಿನ್ನ ಕರುಣಾಕಟಾಕ್ಷವಾಗದನಕ ||
ಶ್ರುತಿ ಶಾಸ್ತ್ರ ಪುರಾಣಗಳನೋದಿ ಬೆಂಡಾದೆ
ಅತಿ ಶೀಲಗಳನೆಲ್ಲ ಮಾಡಿ ದಣಿದೆ
ಗತಿಯ ಪಡೆವೆನೆಂದು ಕಾಯ ದಂಡಿಸಿದೆನೋ
ರತಿಪತಿಪಿತ ನಿನ್ನ ದಯವಾಗದನಕ ||
ಧ್ಯಾನವನು ಮಾಡಿದೆನು ಮೌನವನು ತಾಳಿದೆ ಮ-
ಹಾನು ಪುರುಷಾರ್ಥಕೆ ಮನವನಿಕ್ಕಿ
ಅನಾಥಬಂಧು ಶ್ರೀ ಪುರಂದರವಿಠಲನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!