( ರಾಗ ಸೌರಾಷ್ಟ್ರ. ಅಟ ತಾಳ)

ಎರವಿನ ಸಿರಿಗೆ ಬಿಮ್ಮನೆ ಬೆರೆತರೆ
ನೀರ ಕಡೆದರುಂಟೆ ಬೆಣ್ಣೆ ಜೀವವೆ
ಉರಗಳ ಹೆಡೆಯ ನೆಳಲ ಸೇರಿದ ಕಪ್ಪೆ
ಸ್ಥಿರಕಾಲ ಬಾಳ್ವುದೆ ಜೀವವೆ ||ಪ||

ಸತಿ ಸುತರೆಂದು ನೆಚ್ಚಲುಬೇಡ ಮನದೊಳು
ಹಿತವರೊಬ್ಬರ ಕಾಣೆ ಜೀವವೆ
ವೃಥಾ ನೀನು ಕೆಡಬೇಡ ಮರಣವು ತಪ್ಪದು
ದಶಕಂಠಗಾದರು ಜೀವವೆ ||

ಆಸೆ ಮಾಡಲು ಬೇಡ ಭಾಷೆ ತಪ್ಪಲು ಬೇಡನ್ಯ-
ಸ್ತ್ರೀ ಸಂಗವು ಬೇಡ ಜೀವವೆ
ಏಸೇಸು ಜನ್ಮಾಂತರ ಕಳೆದುಳಿದರು
ಈ ಸಾವು ತಪ್ಪದು ಜೀವವೆ ||

ಆನೆ ಕುದುರೆ ಮಂದಿ ಶಾನೆ ಭಂಡಾರವು
ಏನು ಪಡೆದರಿಲ್ಲ ಜೀವವೆ
ಮಾನಸಹ ಸರ್ವ ಹರಿಗೆ ಅರ್ಪಣ ಮಾಡಿ
ಪುನೀತನಾಗಿರು ಜೀವವೆ ||

ಕೆರೆಯ ಕಟ್ಟಿಸು ಮತ್ತೆ ಪೂತೋಟ ಹಾಕಿಸು
ಸೆರೆಯ ಬಿಡಿಸು ಪುಣ್ಯ ಜೀವವೆ
ಕರೆಯದೆ ಮನೆಗೆ ಬಂದವರಿಗನ್ನವ ನೀಡು
ಪರಲೋಕ ಸಾಧನ ಜೀವವೆ ||

ಸತ್ಯವಂತರ ಸಂಗದೊಳಗೆ ಚರಿಸೆ ಮೃತ್ಯು
ಅತ್ತತ್ತಲಿರುವಳು ಜೀವವೆ
ಸತ್ಯವಂತ ಗುರು ಪುರಂದರವಿಠಲೆನ್ನೆ
ಸತ್ತು ಹುಟ್ಟುವದಿಲ್ಲ ಜೀವವೆ ||