( ರಾಗ ಕಾಂಭೋಜ. ಅಟ ತಾಳ)

ಹರಿನಾಮದರಗಿಣಿಯು ಹಾರುತಿದೆ ಜಗದಿ
ಪರಮ ಭಾಗವತರು ಬಲೆಯ ಬೀಸುವರು ||ಪ||

ಕೋಪವೆಂಬ ಮಾರ್ಜಾಲ ಕಂಡರೆ ನುಂಗುವುದು
ತಾಪವೆಂಬುವ ಹುಲಿಯು ಕೊಂಡೊಯ್ವುದು
ಕಾಪಾಡಲದನೊಯ್ದು ಹೃದಯದೊಳಗಿಂಬಿಟ್ಟು
ಆಪತ್ತಿಗೊದಗುವುದು ಆ ಮುದ್ದು ಅರಗಿಣಿಯು ||

ದಾರಿಯೊಳು ನಡೆವಾಗ ಚೋರರುಪಟಳವಿಲ್ಲ
ಮಾರಿ ಬಂದರೆ ಅದನು ಹೊಡೆದು ನೂಕುವುದು
ಕ್ರೂರ ಯಮಭಟರನು ಮೂಗು ರೆಕ್ಕಿಲಿ ಬಡಿದು
ದಾರಿ ತೋರುವುದು ಮುರಾರಿಪಟ್ಟಣಕೆ ||

ಎಷ್ಟು ವರ್ಣಿಸಲಿ ನೀನೀ ಮುದ್ದು ಅರಗಿಣಿಯ
ಹೊಟ್ಟೆಯೊಳಗಿರೇಳು ಜಗವನಿಂಬಿಟ್ಟು
ಸೃಷ್ಟೀಶ ಪುರಂದರವಿಠಲನ ನೆನೆನೆನೆದು
ಮುಟ್ಟಿ ಭಜಿಸುವುದು ಈ ಮುದ್ದು ಅರಗಿಣಿಯು ||