ಲೋಕ ಭರಿತನೋ ರಂಗಾನೇಕ ಚರಿತನೊ ||ಪ||
ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ||

ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು-
ದೇವಸುತನು ಈತನೆ ಸಭಾಪೂಜೆಗರ್ಹನೆನಿಸಿದಾತ|

ಮಿಕ್ಕ ನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆ
ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ|

ಉತ್ತರೆಯ ಗರ್ಭದಲ್ಲಿ ಸುತ್ತುಮುತ್ತಿದ ಅಸ್ತ್ರವನ್ನು
ಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ|

ಜ್ಞಾನಶೂನ್ಯನಾಗಿ ಸೊಕ್ಕಿ ನಾನೇ ವಾಸುದೇವನೆಂದ
ದೀನ ಪೌಂಡ್ರಕನ ಶಿರವ ಜಾಣರಾಯ ಖಂಡಿಸಿ ಮೆರೆದ|

ತನ್ನ ಸೇವಕಜನರ ಪೊರೆದು ಉನ್ನತ ಉಡುಪಿಯಲ್ಲಿ ನಿಂತು
ಘನ್ನ ಮಹಿಮೆಯಿಂದ ಮೆರೆವ ಪ್ರಸನ್ನ ಹಯವದನನ ಕೃಷ್ಣ|