(ರಾಗ ಶಂಕರಾಭರಣ ಆದಿ ತಾಳ )

ಮಾಡಬಾರದೆ ಮದ್ದು ಮಾಯಾದೇವಿ, ಮಾಡಬಾರದೆ ||ಪ ||

ಕರಗಳಿಂದಲಿ ಹರಿಯ ಮಂದಿರದ ಕಸವ ತೆಗೆಯೋದಕ್ಕೆ
ನಿರತದಲ್ಲಿ ಬೇಸರದೆ ಹರುಷ ಪುಟ್ಟೋ ಹಾಗೆ ||

ವಚನಗಳೆಲ್ಲ ಶಾಸ್ತ್ರಪ್ರವಚನೆಯೆಂದು ತಿಳಿದುಕೊಂಡು
ಅಚಲಿತಭಕ್ತಿಯಲಿ ನಿತ್ಯ ರಚನೆ ಪುಟ್ಟೋ ಹಾಗೆ ||

ಶ್ರುತಿ ರಾಮಾಯಣ ಶ್ರೀ ಭಾಗವತ ಪಂಚರಾತ್ರಾಗಮದಿ
ಕಥೆಗಳಲಿ ಬಹಳ ರತಿಯು ಪುಟ್ಟೋ ಹಾಗೆ ||

ದೇಹವು ಅನಿತ್ಯವೆಂದು ಮೋಹದಿಂದಲಿ ಪೋಷಿಸದಲೆ
ಮಹೇಂದ್ರಾವರಜನ ಅಹರಹ ಭಜಿಸೋ ಹಾಗೆ ||

ನರರ ಸ್ತವನ ಹೇಯವೆಂದು ಅರೆಘಳಿಗೆ ಅಗಲದೆ
ನರಹರಿಯ ಸ್ಮರಣೆಯನು ನಿರತ ಮಾಳ್ಪ ಹಾಗೆ ||

ಸಂತೆ ನೆರೆದಂತೆ ಸ್ತ್ರೀಪುತ್ರರೆಂತೆಂಬೊರು ಎಂದು ಅರಿತು
ಕಂತುಪಿತನ ಚರಣ ಸ್ವಾಂತದಿ ಸ್ಮರಿಸೋ ಹಾಗೆ ||

ಮನೋವಾಕ್ಕಾಯಗಳಿಂದಲಿ ಸದ್ಗುಣದಿ ಪುರಂದರವಿಠಲನ
ಅನುರಾಗದಿ ಪಾಡಿ ಕುಣಿದು ಕುಣಿದು ದಣಿಯೋ ಹಾಗೆ ||