ರಾಗ ಆರಭಿ/ಆದಿ ತಾಳ

ವೇಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ, ಬ್ರಹ್ಮ || ಪಲ್ಲವಿ ||
ಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ || ಅನು ಪಲ್ಲವಿ ||

ನಷ್ಟ ಮೊದಲಾದಂಥ ಕಷ್ಟ ಬಿಡಿಸೋ, ನಿನ್ನ
ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ
ಇಷ್ಟ ಭಕ್ತ ಜನರೊಳು ಎನ್ನ ಸೇರಿಸೊ ಈ
ಸೃಷ್ಟಿಯೊಳು ನಿನ್ನ ದಾಸರ ದಾಸನೆನಿಸೊ || ೧ ||

ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ ಪೊಂ
ಬಟ್ಟಲೊಳಗಿನ ಹಾಲು ಉಚ್ಛಿಷ್ಟ ಹಾಕಿಸೊ
ಘಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣಿಸೋ ಮುಂದೆ
ಹುಟ್ಟಿ ಬಹ ಜನ್ಮಂಗಳ ಎನಗೆ ಬಿಡಿಸೊ || ೨ ||

ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ ಉ
ತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೊ
ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ, ಸ್ವಾಮಿ
ದಿಟ್ಟ ಪುರಂದರವಿಠಲನೆ ದಯದಿ ಪಾಲಿಸೊ || ೩ ||

~~~ * ~~~

ಪಟ್ಟದ ರಾಣಿಗೆ - ಲಕ್ಷ್ಮಿಗೆ.
ಉಚ್ಛಿಷ್ಟ - ಎಂಜಲು, ದೇವರ ಪ್ರಸಾದ.
ಪೊಂಬಟ್ಟಲು - ದೇವರಿಗೆ ಎಡೆ ಇಡಲು ಬಳಸುವ ಬಂಗಾರದ ಪಾತ್ರೆ.
ಹುಟ್ಟಿ ಬಹ - ಹುಟ್ಟಿ ಬರುವ, ಮುಂದೆ ಬರಬಹುದಾದ.
ಕಿಟ್ಟಗಟ್ಟಿದ - ಕಿಲುಬು ಕಟ್ಟಿದ.

[ಪುರಂದರ ಸಾಹಿತ್ಯ ದರ್ಶನ - ಭಾಗ ೧]