(ರಾಗ ದ್ವಿಜಾವಂತಿ ಆದಿ ತಾಳ )

ನೆನೆಯಿರೋ ಭಕ್ತ ಜನರುಗಳು ಅನುದಿನ
ಘನಮಹಿಮನ ಸೇವೆಯ ಮಾಡಿದರೆ
ಮನದಲ್ಲಿ ನೆನೆದಂಥ ಅಭೀಷ್ಟವನೀವ ಹನುಮಂತ || ಪ ||

ಒಂದು ಯುಗದಲ್ಲಿ ಹನುಮಾವತಾರನಾಗಿ
ಬಂದು ನೆರೆದಯೋಧ್ಯಾಪುರಕಾಗಿ
ಬಂದ ಧೀರನ ನೋಡಿ ಸುಜನರೆಲ್ಲಾ
ನಂದದಿಂದಲಿ ಪಾಡಿ ||

ವಾಯುಕುಮಾರಕ ದ್ವಾಪರದಲ್ಲಿ ಭೀಮ-
ರಾಯನೆಂದೆನಿಸಿದ ಕೌರವ ಬಲದಿ
ನಾಯಕನಾಗಿ ಬಂದು ದುಶ್ಯಾಸನನ
ಕಾಯವನಳಿಸಿ ನಿಂದು ||

ಕಾಯಜಪಿತನ ಮುಂದೆ ಕೌರವ ತರಿದು ರಾಜ-
ಸೂಯ ಯಾಗವ ಮಾಡಿದ ಬಲವಂತ
ರಾಯರಾಯರ ಧೀರ ಹನುಮಂತ
ಪ್ರಿಯಜನಮಂದಾರ ||

ಗುರು ಮಧ್ವಮುನಿಯಾಗಿ ಹರಿಗತಿಪ್ರಿಯನಾಗಿ
ಕರುಣಾಕರನಾಗಿ ಶರಣರ ಪೊರೆವ
ಮೆರೆವ ಶ್ರೀಹನುಮಂತನ ಈ ದೇವನ
ಸ್ಮರಿಸಿರೋ ಗುಣವಂತನ ||

ಲಂಕಾಪಟ್ಟಣ ಸಮೀಪ ಸಮುದ್ರವ ದಾಟಿ
ಪಂಕಜನಾಭ ಶ್ರೀಪುರಂದರವಿಠಲ ನಿ-
ಶ್ಶಂಕ ರಾವಣನ ಗೆದ್ದ ಈ ಹನುಮಂತ
ಪಂಕಜಮುಖಿಯ ಕಂಡ ||