ರಾಗ ಕಮಾಚ್/ಅಟ್ಟ ತಾಳ

ನಾರಾಯಣ ಎನ್ನಿರೋ, ಶ್ರೀ ನರಹರಿ ಪಾರಾಯಣ ಮಾಡಿರೋ || ಪಲ್ಲವಿ ||

ನಾರಾಯಣನೆಂದು ಅಜಮಿಳನು ಕೈವಲ್ಯ
ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರಾ || ಅನು ಪಲ್ಲವಿ ||

ಕಾಶಿಗೆ ಹೋಗಲೇಕೆ, ಕಾವಡಿ ಪೊತ್ತು
ಬೇಸತ್ತು ತಿರುಗಲೇಕೆ
ವಾಸುದೇವನ ನಾಮ ಬಾಯ್ತುಂಬ ನೆನೆದರೆ
ಕ್ಲೇಶಗಳೆಂಬುದನು ಲೇಶ ಮಾತ್ರವಿಲ್ಲದೆ || ೧ ||

ಚೋರರ ಭಯವಿಲ್ಲವೊ, ಹರಿನಾಮಕ್ಕೆ
ಯಾರ ಅಂಕೆಯಿಲ್ಲವೊ
ಊರನಾಳುವ ದೊರೆ ನೀತಿ ಭೀತಿಗಳಿಲ್ಲ
ಘೊರಪಾತಕವೆಲ್ಲ ದೂರ ಮಾಡುವುದಿಕ್ಕೆ || ೨ ||

ಸ್ನಾನವ ಮಾಡಲೇಕೆ, ಮಾನವರಿಗೆ
ಮೌನ ಮಂತ್ರಗಳೇಕೆ
ದೀನಪಾಲಕ ನಮ್ಮ ಬೆಟ್ಟದೊಡೆಯನ
ಧ್ಯಾನಕೆ ಸರಿಯುಂಟೆ ಪುರಂದರವಿಠಲನ || ೩ ||

~~~*~~~

ಅಜಮಿಳ - ಅಜಾಮಿಳ; ಕಾನ್ಯಕುಬ್ಜದ ಬ್ರಾಹ್ಮಣ. ದುರಾಚಾರಿಯಾಗಿದ್ದು ಸಾಯುವ ಗಳಿಗೆಯಲ್ಲಿ ತನ್ನ ಮಗನಾದ ನಾರಾಯಣನ್ನು ಕರೆದ;
ನಾರಾಯಣನೆಂಬ ಹೆಸರನ್ನು ಹೇಳಿದುದೇ ಅವನ ಸದ್ಗತಿಗೆ ಕಾರಣವಾಯಿತು.
ಕಾವಡಿ - ಅಡ್ಡೆ.