(ರಾಗ ಧನಶ್ರೀ ಅಟ ತಾಳ )

ನೋಡುವುದೇ ಕಣ್ಣು ಕೇಳುವುದೇ ಕಿವಿ
ಪಾಡುವುದೇ ವದನ ||ಪ||
ಗಾಡಿಗಾರ ಶ್ರೀ ವೇಣುಗೋಪಾಲನ
ಕೂಡಿ ಕೊಂಡಾಡುವ ಸುಖವ ಸೊಬಗನು ||ಅ||

ಪೊಂಗೊಳಲೂದುತ ಮೃಗ ಪಕ್ಷಿಗಳನೆಲ್ಲ
ಸಂಗಳಿಸುತಲಿಪ್ಪನ
ಅಂಗಜಜನಕ ಗೋಪಾಂಗನೇರೊಡನೆ ಬೆಳ-
ದಿಂಗಳೊಳಗೆ ಸುಳಿದಾಡೊ ರಂಗಯ್ಯನ ||

ನವಿಲಂತೆ ಕುಣಿವ ಹಂಸೆಯಂತೆ ನಲಿಯುವ
ಮರಿಕೋಗಿಲೆಯಂತೆ ಕೂಗುವ
ಎರಳೆಯ ಮರಿಯಂತೆ ಜಿಗಿಜಿಗಿದಾಡುವ
ತುಂಬಿ ಝೇಂಕರಿಸುವಂದದಿ ಝೇಂಕರಿಪನ ||

ಮುರುಡು ಕುಬ್ಜೆಯ ಡೊಂಕು ತಿದ್ದಿ ರೂಪವ ಮಾಡಿ
ಸೆರೆಯ ಪಿಡಿಸಿಕೊಂಬನ
ಗರುಡಗಮನ ಗುರು ಪುರಂದರವಿಠಲನ
ಶರಣಾಗತಸುರಧೇನು ರಂಗಯ್ಯನ ||