( ರಾಗ ಸೌರಾಷ್ಟ್ರ ಅಟ ತಾಳ)

ಸಕಲ ದುರಿತಗಳ ಪರಿಹಾರ ಮಾಡಿದ್ಯೊ ವೆಂಕಟೇಶ ||ಪ ||
ಭಕುತಿಗೊಲಿದು ಬಂದು ಭಕ್ತರ ಕಾಯ್ದೆಯೊ ವೆಂಕಟೇಶ ||ಅ||

ಮತ್ಸ್ಯಾವತಾರದಿ ನಾಲ್ಕು ವೇದವ ತಂದ್ಯೊ ವೆಂಕಟೇಶ
ಪೃಥ್ವೀಧರವ ಪೊತ್ತು ಭ್ರುತ್ಯರ ನೀ ಕಾಯ್ದ್ಯೊ ವೆಂಕಟೇಶ ||

ಧರೆಯನೊಯ್ದನ ಕೋರೆದಾಡೆಯಿಂದಲಿ ಕೊಂದ್ಯೋ ವೆಂಕಟೇಶ
ತರಳಗೊಲಿದು ನೀ ಕಂಭದಿಂದಲಿ ಬಂದ್ಯೊ ವೆಂಕಟೇಶ ||

ಭೂಮಿ ದಾನವ ನೀಡಿದವನ ಬಾಗಿಲ ಕಾಯ್ದ್ಯೊ ವೆಂಕಟೇಶ
ಭೂಮಿಪಾಲರನಳಿದು ಭಾರ್ಗವನೆನಿಸಿದ್ಯೊ ವೆಂಕಟೇಶ ||

ದಶಶಿರನನು ಕುಟ್ಟಿ ಶಶಿಮುಖಿಯಳ ತಂದ್ಯೊ ವೆಂಕಟೇಶ
ಅಸುರೆಯ ಸಂಹರಿಸಿ ಕಂಸನ ಮಡುಹಿದ್ಯೊ ವೆಂಕಟೇಶ ||

ಅಧಮ ಜನರಿಗೆ ಬೋಧಿಸಿ ಬತ್ತಲೆ ನಿಂತ್ಯೊ ವೇಂಕಟೇಶ
ಕುದುರೆಯೇರಿ ಕಲ್ಕಿ ರೂಪವ ತಾಳಿದ್ಯೊ ವೆಂಕಟೇಶ ||

ಹರಿದಾಸರ ಮೇಲೆ ಒಲಿದು ಬೇಗದಿ ಬಂದ್ಯೊ ವೆಂಕಟೇಶ
ವರದ ಪುರಂದರವಿಠಲ ನಮೋ ವೆಂಕಟೇಶ ||