( ರಾಗ ಮಧ್ಯಮಾವತಿ ಅಟ ತಾಳ)

ರಾಮ ರಾಮೆನ್ನಿರೋ, ಇಂಥಾ
ಸ್ವಾಮಿಯ ನಾಮವ ಮರೆಯದಿರೊ ||ಪ ||

ತುಂಬಿದ ಪಟ್ಟಣಕೊಂಭತ್ತು ಭಾಗಿಲು
ಸಂಭ್ರಮದರಸುಗಳೈದು ಮಂದಿ
ಡಂಭಕತನದಿಂದ ಕಾಯುವ ಜೀವವ
ನಂಬಿ ನೆಚ್ಚಿ ನೀವು ಕೆಡಬೇಡಿರೊ ||

ನೆಲೆ ಇಲ್ಲದ ಕಾಯ ಎಲುವಿನ ಹಂದರ
ಬಲಿದು ಸುತ್ತಿದ ಚರ್ಮದ ಹೊದಿಕೆ
ಮಲಮೂತ್ರಂಗಳು ಕೀವು ಕ್ರಿಮಿಗಳುಳ್ಳ
ಹೊಲಸು ತೊಗಲ ಮೆಚ್ಚಿ ಕೆಡಬೇಡಿರೊ ||

ಹರಿ ಬ್ರಹ್ಮ ಸುರರಿಗೆ ವಂದ್ಯನು ಆಗಿಪ್ಪ
ಹರಿ ಸರ್ವೋತ್ತಮನೆಂದೆನ್ನಿರೊ
ಪುರಂದರವಿಠಲನ ಚರಣವ ಭಜಿಸಿರೊ
ದುರಿತ ಭಯಗಳಿಂದ ದೂರಾಗಿರೊ ||