( ರಾಗ ತೋಡಿ ರೂಪಕ ತಾಳ)

ಪೂಜೆ ಯಾತಕೋ, ಮನುಜ
ಪೂಜೆ ಯಾತಕೋ ||ಪ ||
ಪೂಜೆಯಲಿ ನಿನ್ನ ಮನ
ನಿಲ್ಲದಿದ್ದ ಮೇಲೆ ನಿನಗೆ ||ಅ ||

ಭೂತದಯಾ ಪಶ್ಚಾತ್ತಾಪ
ನೀತಿಯೆಂಬುದು ಮತ್ತಿಲ್ಲ
ಮಾತಿನಲಿ ಜ್ಞಾನಿಯಲ್ಲ
ಕೋತಿ ಬುದ್ಧಿ ಬಿಡಲಿಲ್ಲ ||

ಹಾಕುವುದು ಸಾಧುವೇಷ
ಸಾಕುವುದು ಹಲವು ದೋಷ
ಬೇಕೇ ನಿನಗೆ ಒಳ್ಳೆ ಪದ
ಏಕೆ ಭ್ರಾಂತಿ ಉನ್ಮತ್ತ ||

ಪೂಜೆಯಲ್ಲಿ ಹೊಲೆಯನಿಸಿ( ಹೊಲೆ ಎಣಿಸಿ ? / ಹೊಲೆಯನಲಿ? )
ಜಾಜಿ ತುಳಸಿ ಕೈಯಲಿ
ಮೂರ್ಜಗದೊಡೆಯ ಅವನು ಎಲ್ಲಿ
ಮಾರ್ಜಾಲನಂತೆ ನೋಡದಲಿ ||

ಆಸೆಯನು ಬಿಡಲಿಲ್ಲ
ಶೇಷಶಯನನ ಪೂಜೆಯೆಲ್ಲ
ಗಾಸಿಬಟ್ಟು ಮಾಡುತಿಯಲ್ಲ
ಮೋಸ ಹೋಗದೆ ತಿಳಿಯೊ ಎಲ್ಲ ||

ತಂದೆ ಪುರಂದರವಿಠಲನ
ಒಂದೆ ಮನದಿ ನೆನೆ ಅಣ್ಣಯ್ಯ
ಎಂದು ಕುಂದದ ಪದವನೀವ
ನಂದ ನಂದನ ತಂದೆ ಕೃಷ್ಣ ||