( ರಾಗ ಆರಭಿ ರೂಪಕ ತಾಳ)

ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ||ಪ||
ಬ್ರಹ್ಮಶಂಕರಾದಿ ವಂದ್ಯ ಎನಗೆ ಮುಕ್ತಿ ತೋರಿಸೊ ||ಅ||

ನಷ್ಟ ಮೊದಲಾದಂಥ ಕಷ್ಟ ಬಿಡಿಸೊ, ನಿನ್ನ
ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ
ಇಷ್ಟಭಕ್ತ ಜನರೊಳು ಎನ್ನ ಸೇರಿಸೊ ಈ
ಸೃಷ್ಟಿಯೊಳು ನಿನ್ನ ದಾಸ ದಾಸನೆನಿಸೊ ||

ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ, ಪೊಂ-
ಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ
ಗಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೊ, ಮುಂದೆ
ಹುಟ್ಟಿ ಬಹು ಜನ್ಮಂಗಳ ಎನಗೆ ಬಿಡಿಸೊ ||

ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ
ಉತ್ಕೃಷ್ಟ ಬಂಗಾರದೊಳು ಎನ್ನ ಸೇರಿಸೊ
ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ, ಸ್ವಾಮಿ
ದಿಟ್ಟ ಪುರಂದರವಿಠಲನೆ ದಯದಿ ಪಾಲಿಸೊ ||