ಪಲ್ಲವಿ:

ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ ಪಾಮರ ಜನರಿಗೆ ಸಾಮಾನ್ಯವಲ್ಲ

ಅನುಪಲ್ಲವಿ:

ಸಾಮಜ ವರದನ ಪ್ರೇಮದಿ ನೆನೆವುದು ತಾಮಸ ಬುದ್ಧಿಯ ತಾ ತಗ್ಗಿಸದೆ

ಚರಣಗಳು:

1:

ಅಂತರ ಮಲಿನವಳಿಯಬೇಕು ಸಂತತ ಶ್ರವಣದಿ ಶ್ರೀಕಾಂತನ ಚರಿತ ಕೇಳಲು ಬೇಕು
ಸಂತತವಿರಬೇಕು ಸಂತ ಜನರ ಗುಣ ನಿರಂತರದಲಿ ತಾ ಚಿಂತಿಸಬೇಕು

2:

ಜ್ಞಾನ ಕರ್ಮೇಂದ್ರಿಯ ನಿಗ್ರಹಿಸಿ ಜ್ಞಾನವ ಸಂಗ್ರಹಿಸಿ ಹೀನ ವೃದ್ಧಿಗಳೆರಡಕೆ ತಾ ಸಹಿಸಿ
ದೀನತೆಯನು ವಹಿಸಿ ಮಾನಾಪಮಾನ ಸಮಾನವೆಂದರಿತು ನಿಧಾನದಿ ಹರಿ ಗುಣ ಧ್ಯಾನವ ಮಾಳ್ಪುದು

3:

ಸರ್ವಾಂತರ್ಯಾಮಿ ಶ್ರೀ ಹರಿಯೆಂದು ಸರ್ವೇಶ್ವರನೆಂದು ಸ್ವರಮಣನೆಂದು
ಸರ್ವಾನುಗ್ರಹನೆಂದು ಸರ್ವ ಮೂರುತಿ ಪುರಂದರ ವಿಟ್ಠಲನ ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು