(ರಾಗ ಕಾಂಭೋಜ ಆದಿ ತಾಳ )

ನೆಚ್ಚದಿರು ಬೆಕ್ಕು ನೆವ ನೋಡುತ್ತಿದೆ
ಎಚ್ಚತ್ತಿರೆಚ್ಚತ್ತಿರೆಲೋ ರಾಮುಗ ||ಪ||

ಒಂಭತ್ತು ಬಾಗಿಲ ಪಂಜರವನಯ್ದಿದೆ
ಕಂಭವಿಲ್ಲ ಕದವು ಮೊದಲೆ ಇಲ್ಲ
ಎಂಭತ್ತು ಸಾವಿರ ಸಂದು ಗಂಟಿನ ಗೂಡ
ನಂಬಿ ನೀ ಕೆಡದಿರೊ ಎಲೊ ರಾಮುಗ ||

ಮುನಿವರು ಐವರು ಮೋಹಿಸುವರಾರು ಮಂದಿ
ಮನ ಕಾಕುಗೊಳಿಸುವರೆಂಟು ಮಂದಿ
ಇನಿತು ತಿಳಿದು ಹಿಂದು ಮುಂದು ವಿಚಾರಿಸಿ
ಮನಮೆಚ್ಚಿ ಕೆಡದಿರೊ ಎಲೊ ರಾಮುಗ ||

ಸತಿ ಸುತರಿಗೆ ಮತ್ತೆ ಹಿತರಿಗೆ ಬೇಕೆಂಬ
ಅತಿ ಲೋಭತನ ಬೇಡವೆಲೊ ರಾಮುಗ
ಕ್ಷಿತಿಸುರರೆಂಬ ಭೂಮಿಲಿ ಬಿತ್ತಿ ಮುಂದಣ
ಪಥಕೆ ಸಾಧನ ಮಾಡಿಕೊ ರಾಮುಗ ||

ಹೊನ್ನು ಹೆಣ್ಣು ಮಣ್ಣು ಎಂಬ ಮೋಹದೊಳಿದ್ದು
ಬಣ್ಣಗೆಡಲು ಬೇಡ ಎಲೊ ರಾಮುಗ
ಸುಣ್ಣವ ಸುಡುವಂತೆ ಸುಡುತಿದೆ ಬೆಕ್ಕು ನಿನ್ನ
ಕಣ್ಣು ತೆರೆದೆಚ್ಚತ್ತಿರೆಲೊ ರಾಮುಗ ||

ಸ್ಥಿರವೆಂದು ನೆಚ್ಚದಿರು ಈ ಪಂಜರವನು ನೀ
ಉರವಣಿಸುತ ಬೆಕ್ಕು ಮೆರೆಯುತಿದೆ
ಪರಮಕೃಪಾಳು ಶ್ರೀ ಪುರಂದರವಿಟ್ಠಲನ
ನೆರೆ ನಂಬಿ ಸುಖಿಯಾಗಿರೆಲೊ ರಾಮುಗ ||