(ರಾಗ ಧನಶ್ರೀ. ಆದಿತಾಳ )

ಹರಿನಾಮ ಕೀರ್ತನೆ ಅನುದಿನ ಮಾಳ್ಪಗೆ ನರಕ ಭಯಗಳುಂಟೆ ||ಪ||
ಹರಿನಾಮವೊಂದೆ ಯಮನಾಳ್ಗಳನೊದೆದು ಅಜಮಿಳನಿಗೆ ಸುಕ್ಷೇಮವಿತ್ತ ಹರಿ ||ಅ||

ಕೇಸರಿಗಂಜದ ಮೃಗವುಂಟೆ ದಿನೇಶನಿಗಂಜದ ತಮವುಂಟೆ
ವಾಸುದೇವ ವೈಕುಂಠ ಜಗನ್ಮಯ ಕೇಶವ ಕೃಷ್ಣಾ ಎಂದುಚ್ಚರಿಸುತ ||

ಕುಲಿಶಕ್ಕೆದುರಹ ಗಿರಿಯುಂಟೆ ಬಲು ಪ್ರಳಯ ಬಂದಾಗ ಜೀವಿಪರುಂಟೆ
ಜಲಜನಾಭ ಗೋವಿಂದ ಜನಾರ್ದನ ಕಲುಷಹರಣ ಕರಿರಾಜ ವರದನೆಂದು ||

ಗರುಡನಿಗಂಜದ ಫಣಿಯುಂಟೆ ದಳ್ಳುರಿಯಲಿ ಬೇಯದ ತೃಣವುಂಟೆ
ನರಹರಿ ನಾರಾಯಣ ದಾಮೋದರ ಪುರಂದರವಿಠಲನೆಂದುಚ್ಚರಿಸುತ ||