(ರಾಗ ಅಸಾವೇರಿ ಅಟತಾಳ)

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ಬಾಯಿಗೆ ಬರಲಿ, ಬಾ ರಂಗ ||ಪ||

ಆಡುವಾಗ ನಲಿದಾಡುವಾಗಲಿ
ನೋಡುತ ನಿಂದು ಮಾತಾಡುವಾಗ
ಕೇಡುತನದಿಂದ ಕೂಡಿ ಈ ಭವದೊಳು
ಮಾಡಿದ ಪಾಪವು ಓಡಿ ಹೋಗುವ ಹಾಗೆ ||

ಉರಿ ಬಂದಾಗಲಿ ಛಳಿ ಬಂದಾಗಲಿ
ಗಡಗಡ ನಡುಗುತ್ತಿರುವಾಗಲಿ
ಹರಿ ನಾರಾಯಣ ದುರಿತ ನಿವಾರಣ
ಇರುಳು ಹಗಲು ನಿನ್ನ ಸ್ಮರಣೆ ಮಾಡುವಂತೆ ||

ಕಷ್ಟವಾಗಿರಲಿ ಉತ್ಕೃಷ್ಟವಾಗಿರಲಿ
ಇಷ್ಟಾರ್ಥಗಳೆಲ್ಲ ಕೂಡಿರಲಿ
ಕೃಷ್ಣ ಕೃಷ್ಣ ಎಂಬಭೀಷ್ಟನಾಮದ
ಅಷ್ಟಾಕ್ಷರಿ ಮಂತ್ರ ಜಪಿಸುವ ಹಾಗೆ ||

ಕನಸಿನೊಳಾಗಲಿ ಮನಸಿನೊಳಾಗಲಿ
ಮನಸು ಕೆಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ನಾಮದ ಸ್ಮರಣೆಯು
ಮನಸಿನೊಳಗೆ ಒಮ್ಮೆ ನೆನೆಸುವ ಹಾಗೆ ||

ಸಂತತ ನಿನ್ನಯ ಸಾಸಿರನಾಮವೆನ್ನ
ಅಂತರಂಗದೊಳಗಿರುತಿರಲಿ
ಸಂತತ ವರದ ಶ್ರೀಪುರಂದರವಿಠಲ ಎ-
ನ್ನಂತ್ಯಕಾಲದೊಳ್ ಒಮ್ಮೆ ನೆನೆಸುವ ಹಾಗೆ ||