(ರಾಗ ಸೌರಾಷ್ಟ್ರ , ಆದಿತಾಳ)

ಕಲ್ಯಾಣಂ ತುಲಸಿ ಕಲ್ಯಾಣಂ
ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಲಸಿಗೆ
ಬಲ್ಲಿದ ಶ್ರೀವಾಸುದೇವನಿಗೆ ||ಪ||

ಅಂಗಳದೊಳಗೆಲ್ಲ ತುಲಸಿಯ ವನಮಾಡಿ
ಶೃಂಗಾರವ ಮಾಡಿ ಶೀಘ್ರದಿಂದ
ಕಂಗಳ ಪಾಪವ ಪರಿಹರಿಸುವ ಮುದ್ದು
ರಂಗ ಬಂದಲ್ಲಿ ತಾ ನೆಲೆಸಿದನು ||

ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು
ತಂದ ಶ್ರೀ ಗಂಧಾಕ್ಷತೆಗಳಿಂದ
ಸಿಂಧುಶಯನನ ವೃಂದಾವನದಿ ಪೂಜಿಸೆ
ಕುಂದದ ಭಾಗ್ಯವ ಕೊಡುತಿಹಳು ||

ಭಕ್ಷ್ಯ ಭೋಜ್ಯಂಗಳ ನೈವೇದ್ಯವನಿತ್ತು
ಲಕ್ಷಬತ್ತಿಯ ದೀಪವ ಹಚ್ಚಿ ಅ-
ಧೋಕ್ಷಜ ಸಹಿತ ವೃಂದಾವನವ ಪೂಜಿಸೆ
ಸಾಕ್ಷಾತ್ ಮೋಕ್ಷವ ಕೊಡುತಿಹಳು ||

ಉತ್ಥಾನದ್ವಾದಶಿ ದಿವಸದಿಂದಲಿ ಕೃಷ್ಣ
ಉತ್ತಮತುಲಸಿಗೆ ವಿವಾಹವ
ಚಿತ್ತನಿರ್ಮಲರಾಗಿ ಮಾಡಿದವರಿಗೆ
ಉತ್ತಮಗತಿ ಈವ ಪುರಂದರವಿಠಲ ||