ಏಳು ನಾರಾಯಣ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿಗೊಡೆಯ ಶ್ರೀವೆಂಕಟೇಶ
ಏಳಯ್ಯ ಬೆಳಗಾಯಿತು ||

ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ
ಶೇಷಶಯನನೆ ಏಳು ಸಮುದ್ರ ಮಂಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೇ ||

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿದ್ದಾರೆ ಬಲು ಭಕುತಿಯಿಂದ
ಅರವಿಂದನಾಭ ಸಿರಿವಿಧಿಭವಾದಿಗಳೊಡೆಯ
ಹಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ ||

ದಾಸರೆಲ್ಲರು ಬಂದು ಧೂಳಿನದರ್ಶನಕೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು
ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು
ಲೇಸಾಗಿ ಸ್ಮರಿಸಿ ಪೊಗಳುವರು ಹರಿಯೇ ||

ಇದೇ ಹಾಡನ್ನು ನಾವು ಪ್ರತಿ ಶನಿವಾರ ನಮ್ಮ ಊರಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಳದಲ್ಲಿ ಬೆಳಗ್ಗೆ ಬಾಗಿಲು ತೆರೆಯುವ ಮೊದಲು ಹಾಡುತ್ತೇವೆ.