( ರಾಗ ಆನಂದಭೈರವಿ ಆದಿತಾಳ)

ತಾಂಬೂಲವ ಕೊಳ್ಳೋ ತಮನ ಮರ್ದನನೆ, ಕಮಲ ವದನನನೆ ||ಪ||
ಅಂಬುಜಾಕ್ಷಿ ಮೋದದಿಂ ಮಡಚಿ ಕೊಡುತಾಳೆ ||ಅ||

ಸಂಪಿಗೆಣ್ಣೆ ಅತ್ತರು ಚಂದನದೆಣ್ಣೆ
ಈ ಪರಿಪರಿವಿಧ ಪರಿಮಳದ ಎಣ್ಣೆ
ಕೆಂಪುಕೇಸರಿ ಗಂಧಕಸ್ತೂರಿಯು
ಚಂಪಕ ಮೊದಲಾದ ಪುಷ್ಪವ ಮುಡಿಯೊ ||

ಚಿಕ್ಕಣಿ ಅಡಿಗೆ ಕೇದಿಗೆ ಕಾಚ್ ಕೂಡಿದ ಏ-
ಲಕ್ಕಿ ಜಾಯಿಕಾಯಿ ಲವಂಗ ಜಾಯಪತ್ರೆಯು
ಮೌಕ್ತಿಕದ ಸುಣ್ಣ ಕರ್ಪೂರ ಬೆರಸಿ ತಾ
ರುಕ್ಮಿಣಿದೇವಿಯು ಸಮರ್ಪಿಸುತಾಳೆ ||

ಮಂಚವ ಹಾಕಿದೆ ಮಲ್ಲಿಗೆಹೂವ ತರಿಸಿದೆ
ಮುಂಚೆ ಬಂದು ಮಲಗಯ್ಯ ಮಿಂಚುತಲಿ
ಚಂಚಲಾಕ್ಷಿಯು ನಿನ್ನ ಇದಿರು ನೋಡುತಾಳೆ
ಪಂಚಬಾಣನಯ್ಯ ಶ್ರೀಪುರಂದರವಿಠಲ ||