( ರಾಗ ನಾಟ ಝಂಪೆತಾಳ)

ಶರಣು ಶರಣು ||ಪ||
ಶರಣು ಸಕಲೋದ್ಧಾರ ಅಸುರಕುಲಸಂಹಾರ
ಅರಸುದಶರಥಬಾಲ ಜಾನಕೀಲೋಲ ||ಅ||

ಈ ಮುದ್ದು ಈ ಮುಖವು ಈ ತನುವಿನ ಕಾಂತಿ
ಈ ಬಿಲ್ಲು ಈ ಬಾಣ ಈ ನೀತಿ ಭಾವ
ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ
ಆವ ದೇವರಿಗುಂಟು ಭೂಲೋಕದೊಳಗೆ ||

ಉಟ್ಟ ಪೀತಾಂಬರವು ಉಡಿಘಂಟೆ ಮಾಣಿಕವು
ತೊಟ್ಟ ನವರತ್ನಸರ ಕರುಣವಿರಲು
ಕೊಟ್ಟ ನಂಬಿಕೆ ತಪ್ಪ ತನ್ನ ಭಕುತರಿಗೆಲ್ಲ
ಸೃಷ್ಟಿಯೊಳೆಣೆಗಾಣೆ ಕೌಸಲ್ಯರಾಮ ||

ಭಾವಿಸಲು ಅಯೋಧ್ಯಾ ಪಟ್ಟಣದಲಿ ವಾಸ
ಬೇಡಿದಿಷ್ಟಾರ್ಥಗಳ ಕೊಡುವೆನೆನುತಿರಲು
ಭಾವಶುದ್ದಿಗಳೆಲ್ಲ ತನ್ನ ಭಕುತರ ಪೊರೆವ
ಪುರಂದರವಿಠಲನೆ ರಘುರಾಮ ನಿಸ್ಸೀಮರಾಮ ||