( ರಾಗ ಶಂಕರಾಭರಣ ಛಾಪುತಾಳ)

ಸ್ಮರಿಸೊ ಸರ್ವದ ಹರಿಯ ||ಪ||
ಸುರವರ ದೊರೆಯ ಕರುಣಾನಿಧಿಯ ||ಅ||

ಮುನಿಜನ ವಂದ್ಯನ ಮನಸಿಜನಯ್ಯನ
ಮನದಲಿ ಅನುದಿನ ನೆನೆಯೊ ಹರಿಯ ||

ನಂದನ ಕಂದನ ಇಂದಿರೆಯರಸನ
ಮಂದರೋದ್ಧರನ ಚಂದದಿಂದಲಿ ಹರಿಯ ||

ವರಗುಣಪೂರ್ಣನ ಸರಸಿಜನೇತ್ರನ
ಪರವಾಸುದೇವನ ಪ್ರಾಣದ ಪ್ರಿಯನ ||

ಕಂಜದಳೇಕ್ಷಣ ಮಂಜುಳಹಾರನ
ಅರ್ಜುನಸಾರಥಿ ಸಜ್ಜನಪ್ರಿಯನ ||

ವೆಂಕಟರಮಣನ ಸಂಕಟಹರಣನ
ಲಕ್ಷ್ಮೀರಮಣನ ಪುರಂದರವಿಠಲನ ||