(ರಾಗ ಕೇದಾರಗೌಳ ಝಂಪೆತಾಳ )
ನಿನ್ನನೆ ನಂಬಿದೆನು ನೀನೆನ್ನ ಸಲಹಯ್ಯ
ಎನ್ನ ಗುಣ ದೋಷಗಳ ಎಣಿಸಬೇಡಯ್ಯ ||ಪ||
ಆಸೆಯೆಂಬುದು ಅಜನ ಲೋಕಕ್ಕೆ ಮುಟ್ಟುತಿದೆ
ಬೇಸರದೆ ಸ್ತ್ರೀಯರೊಳು ಬುದ್ಧಿಯೆನಗೆ
ವಾಸುದೇವನೆ ಸ್ಮರನೆ ಒಮ್ಮೆ ಮಾಡಿದವನಲ್ಲ
ಕೇಶವನೆ ಕ್ಲೇಶಗಳ ಪರಿಹರಿಸಿ ಕಾಯೊ ||
ಬಾಲ್ಯದಲಿ ಕೆಲವು ದಿನ ಬರಿದೆ ಹೋಯಿತು ಹೊತ್ತು
ಮೇಲೆ ಯೌವನದಲಿ ನಾನರಿಯದೆ
ಹಾಳು ಸಂಸಾರದಲಿ ಸಿಕ್ಕಿದೆನು ಹರಿಯೆ
ಪಾಲಿಸೋ ಪರಮಾತ್ಮ ಭಕುತಿಯನು ಕೊಟ್ಟು ||
ಈ ತೆರದಲಿ ಇಂದಿರೇಶ ಕಾಲವ ಕಳೆದೆ
ಭೀತನಾಗದೆ ಯಮಗೆ ಅಜ್ಞಾನದಿ
ಮಾತೆ ಶಿಶುವನು ಕರೆದು ಮನ್ನಿಸುವ ತೆರನಂತೆ
ದಾತ ಪುರಂದರವಿಠಲ ದಯಮಾಡಿ ಸಲಹೋ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!