( ರಾಗ ಧನಶ್ರೀ ಆದಿತಾಳ)

ಯಶೋದೆ ನಿನ್ನ ಕಂದಗೆ ಏಸು ರೂಪವೆ ||ಪ||
ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೆ ||ಅ||

ಹಸುಗಳ ಕರೆವಲ್ಲಿ ಹಲವು ರೂಪ ತೋರುವ
ಬಿಸಿಯ ಹಾಲಿಡುವಲ್ಲಿ ಬೆನ್ನ ಹಿಂದೆ ಇರುವ
ಮೊಸರ ಕಡೆಯುವಲ್ಲಿ ಮುಂದೆ ತಾ ನಿಂತಿರುವ
ಹಸನಾಗಿ ಮೋಸ ಮಾಡಿ ಬೆಣ್ಣೆಯ ಮೆಲುವ ||

ಒಬ್ಬರ ಮನೆಯಲಿ ಮಲಗಿ ತಾನಿರುವ
ಒಬ್ಬರ ಮನೆಯಲಿ ಬೆಣ್ಣೆ ಕದ್ದು ಮೆಲುವ
ಒಬ್ಬರ ಮನೆಯಲಿ ರತಿಕ್ರೀಡೆಯಾಡುತಿರುವ
ಒಬ್ಬರ ಮನೆಯಲಿ ಪುಟಚೆಂಡನಾಡುವ ||

ಹಿಂದೆ ತಾ ನಿಂತಿರುವ ಮುಂದೆ ಹೋಗುತ್ತಿರುವ
ಇಂದುಮುಖಿಯರ ಕೂಡೆ ಸರಸವಾಡುವ
ಬಂದು ನೋಡೆ ಯಶೋದೆ ಬಣ್ಣದ ಮಾತಲ್ಲ
ನಂದಗೋಪನ ಕಂದ ಪುರಂದರವಿಠಲ ||