ಡಿಸ್ನಿಲ್ಯಾಂಡ್ ನ ಮೇನ್ ಸ್ಟ್ರೀಟ್ ಯು.ಎಸ್.ಎ, ನಲ್ಲಿ ಹಾಗೇ ಅಡ್ಡಾಡುತ್ತಾ ಹೋದರೆ, ವಾಲ್ಟ್ ಡಿಸ್ನೆ ಚೌಕವನ್ನು ತಲುಪುತ್ತೇವೆ. ನೇರವಾಗಿ ಹೋದರೆ, ಫ್ಯಾಂಟಸಿ ಲ್ಯಾಂಡ್, ಕೊನೆಗೆ, ಮಿಕಿಸ್ ’ಟೂನ್ ಟೌನ್’ ಸಿಗುತ್ತದೆ. ಚೌಕದ ಬಲಭಾಗದಲ್ಲಿ, ಟುಮಾರೊ ಲ್ಯಾಂಡ್, ಸಿಗುತ್ತದೆ. ಅಲ್ಲಿ " ಸ್ಪೇಸ್ ಮೌಂಟೆನ್" ಇದೆ. ಅದೇ ಯೆಲ್ಲರೂ ಸುಮಾರು ೧ ಗಂಟೆಗೂ ಮಿಗಿಲಾಗಿ ಲೈನಿನಲ್ಲಿ ನಿಂತು ’ರೋಲರ್ ಕೋಸ್ಟರ್ ’ ನ ಸವಿಪ್ರಯಾಣಕ್ಕಾಗಿ ಕಾತುರದಿಂದ ಕಾಯುತ್ತಿರುವ ಆಕರ್ಷಕ ತಾಣ !

ರೋಲರ್ ಕೋಸ್ಟರ್ ಬಗ್ಗೆ ಓದಿದ್ದೆವು. ಕೇಳಿದ್ದೆವು. ಆದರೆ ಆ ಮೈನವಿರೇಳಿಸುವ ಅದ್ಭುತ ಅನುಭವ ನಮ್ಮ ಜೀವಿತದುದ್ದಕ್ಕೂ ನೆನೆಪಿನ ಪದರಗಳಲ್ಲಿ ಉಳಿಯುವುದು ಖಂಡಿತ ! ಸ್ವಲ್ಪ ವಯಸ್ಸಾದ ನನ್ನಂತಹವರಿಗೆ ಅದು ಉಸುರುಸಿಕ್ಕಿಹಾಕಿಕೊಳ್ಳುವ, ಒಮ್ಮಿಂದೊಮ್ಮೆ ಏದುಸಿರುಪಡುವ, ’ಓಹ್ ” ಎಂದು ನಿಟ್ಟಿಸುರುಪಡುವ, ಮಿಶ್ರ ಅನುಭವ ! ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿ, ಗಣೇಶನ ಜಪವನ್ನು ಮಾಡಲಾರಂಭಿಸಿದೆ. ಸದ್ಯ, ಈಗ ಅಲ್ಲಿ ಲೈಟ್ ಹಾಕಲ್ಲ. ಎಲ್ಲ ಪರಿಪಾಟಲುಗಳೆಲ್ಲಾ ಕತ್ತಲಿನಲ್ಲಿ ! ಏಕ್ದಮ್ ಎತ್ತರದಿಂದ ಕೆಳಗೆ ದಿಢೀರನೆ ಇಳಿದುಬರುವಾಗ ರಕ್ತ ’ಝುಂ’ ಎಂದು ರಕ್ತ-ನಾಳಗಳಲ್ಲಿ ಹರಿಯುವುದನ್ನು ಅನುಭವಿಸುತ್ತೇವೆ. ಇಷ್ಟರಲ್ಲೇ ನಮ್ಮ ಪುಟ್ಟವಾಹನ, ಪಕ್ಕದಲ್ಲಿ ಅತಿಯಾಗಿ ಎಷ್ಟೋ ಡಿಗ್ರಿಯಲ್ಲಿ ವಾಲುತ್ತಲೇ ನುಗ್ಗಿ, ಒಮ್ಮೆಲೇ ಗಬಗಬನೆ ಮೇಲೇ ಏರುತ್ತದೆ. ಗಡ-ಗಡ ಅಲ್ಲಾಡುತ್ತಾ ನಾಗಾಲೋಟದ ಓಟದಲ್ಲಿ ಮಗ್ನವಾಗುತ್ತದೆ. ಹೋ ಎಂದು ಕೂಗುವ ಮಕ್ಕಳ, ಯುವಕ-ಯುವತಿಯರ ಕೇಕೋತ್ಸಾಹ, ಆನಂದ, ಸಂಭ್ರಮ, ರೆಕಾರ್ಡೆಡ್ ಅಬ್ಬರದ ಸಂಗೀತದ ಪ್ರವಾಹದಲ್ಲಿ ತೇಲಿಹೋಗುತ್ತವೆ.

ಹಾ... ! ಸದ್ಯ, ಹೊರಟ ಜಾಗ ಬಂತು. ನನಗೋ ತಲೆನೋವು ! ಹೆಂಡತಿ, ಮಗನ ಮುಖದಲ್ಲಿ ವಿಜಯೋತ್ಸಾಹ, ಮಂದಹಾಸ ! ನಾನು ಕಾಲು ನೋವು, ತಲೆ ನೋವಿನಿಂದ ಮುಲುಗುತ್ತಿದ್ದೆ. ಕಾಲುಗಳು, ನಡುಗುತ್ತಿದ್ದವು. ಮುಖಬೆವರಿನಿಂದ ಕಪ್ಪಿಟ್ಟುಹೋಗಿತ್ತು. ಹೊರಗೆ ಬೆಂಚಿನಮೇಲೆ ೧೫ ನಿಮಿಷ ಸುಧಾರಿಸಿಕೊಂಡೆ ! , ಹೆಂಡತಿ ನನಗೆ ಸಮಾಧಾನಮಾಡುತ್ತಿದ್ದಳು. ಮಗ ಅಲ್ಲಿನ ಗ್ಯಾಲರಿಯಲ್ಲಿ ನಮ್ಮ ೩ ಜನರ ಫೋಟೋಗಳನ್ನು ನೋಡಿ ಆನಂದಿಸುತ್ತಿದ್ದ ! ಈ ಫೋಟೊಗಳು ೫-೮ ನಿಮಿಷ ನೋಡಲು ಮಾತ್ರ ಲಭ್ಯ !

ಖಂಡಿತವಾಗಿ, ನೀವು ಕೂಡ, ಈ ಅನೌಖಿಕ ಅನುಭವವನ್ನು ಪಡೆಯಲು ಮರೆಯದಿರಿ !! ಆದರೆ, ಹೃದಯರೋಗ, ಅಥವಾ ಬೇರೆಯೇನಾದರೂ ಡಿಸೆಬಿಲಿಟಿಯಿದ್ದಲ್ಲಿ, ಖಂಡಿತಾ ಛಾನ್ಸ್ ತೆಗೆದುಕೊಳ್ಳಬೇಡಿ. ಜೀವಕ್ಕಿಂತ ಹೆಚ್ಚು, ಬೇರೆ ಯೇನಿದೆ ?