ದಿನಕೆ ಏನಿಲ್ಲವೆಂದರೂ
ಹತ್ತಾರು ಬಾರಿ
ಮುಚ್ಚಿಸಿಕೊಂಡಿದ್ದೇನೆ ಮತ್ತೆ
ಮತ್ತೆ ತೆರೆದುಕೊಂಡಿದ್ದೇನೆ
ಪ್ರತಿ ಬಾರಿ ಮುಚ್ಚಿದಾಗ
ಹಗುರಾಗಿ ತೇಲಾಡಿದ್ದೇನೆ
ತೆರೆದಾಗ ಚುಚ್ಚುನುಡಿಗೆ
ಬೆಚ್ಚಿ, ಹೋಗು ಎನಲಾರದೆ
ಒಳಸೇರಿಸಿ ಭಾರವಾಗಿದ್ದೇನೆ.
ಕೆಲವಾದರೂ ಹೋಗಬಾರದೆ,
ಎಲ್ಲಾ ಒಳಸೇರಿ ನನಗೆ
ಗೆದ್ದಲು ಹಿಡಿಸುತ್ತಿವೆ.
ನನಗೋ ಚಿಲಕವಿಲ್ಲ, ಬೀಗವಿಲ್ಲ.
ನನ್ನ ಕೈಕಾಲುಗಳನೆಲ್ಲಾ
ಒಂದೊಂದಾಗಿ ತಿನ್ನುತ್ತಿವೆ.
ಪಳೆಯುಳಿಕೆಯಾಗುತ್ತಿದ್ದೇನೆ.
ಮುಚ್ಚಿದರೂ ತೆರೆದಂತೆ
ತೆರೆದರೂ ಮುಚ್ಚಿದಂತೆ
ಕಾಣುವ ನನಗೆ
ಮುಕ್ತಿ ಎಂದು?