ಸಾಧ್ಯವಾದರೆ ಒಮ್ಮೆ
ತಂಗಾಳಿಯ ಹಿಡಿದು
ಜೇಬಿನೊಳಗೆ ತುಂಬಬೇಕು
ಕೆಂಜ್ವಾಲೆಯನು ಹಿಡಿದು
ಡಬ್ಬಿಯೊಳಗೆ ತುಂಬಿಡಬೇಕು
ಮಗುವಿನ ನಗೆಯಂತೆ
ಮತ್ತೊಮ್ಮೆ ನಗಬೇಕು
ಹೀಗೇ ಇನ್ನೂ ಹಲವಾರು
ಕೈಲಾಗದವನ ಚಡಪಡಿಕೆ
ಸಾಧ್ಯವಾದರೆ ಒಮ್ಮೆ
ಎಲ್ಲೆರೆದುರು ನಿಂತು
ಕಂಠ ಹರಿವನಕ ಕೂಗಬೇಕು
ಅಣಕಿಸಿದವನ ಮುಖಕ್ಕೆ
ಕಪ್ಪು ಮಸಿ ಹಚ್ಚಬೇಕು
ಚುಚ್ಚುನುಡಿಯಾಡಿದವನಿಗೆ
ತಿರುಗಿ ಹೊಡೆಯಲೇಬೇಕು
ಹೀಗೇ ಇನ್ನೂ ಕೆಲವಾರು
ಹೇಡಿಯೊಬ್ಬನ ಹಪಹಪಿಕೆ
ಸಾಧ್ಯವಾದರೆ ಒಮ್ಮೆ
ಅನುಭವಿಸಿದ ಹಾಗೆ
ಸತ್ತು ಹುಟ್ಟಬೇಕು
ಸ್ಪರ್ಶಕೆ ಸಿಕ್ಕಿದ ಹಾಗೆ
ನನ್ನಾತ್ಮವನು ಮುಟ್ಟಬೇಕು
ನನ್ನೊಳಗಿನ ಭಾವ ಬಂದ ಹಾಗೆ
ಹೊರಗೂ ಕೆನೆಗಟ್ಟಬೇಕು
ಹೀಗೇ ಇನ್ನೂ ಸರಿಸುಮಾರು
ಕನಸುಗಾರನ ಕನವರಿಕೆ
ಪ್ರತಿಕ್ರಿಯೆ (3)