ಗೊಂದಲದಾಚೆಗಿನ ಬದುಕು

ಕೂತ ಜಾಗ ಕಿರಿದಾಗುತ್ತಾ ನನ್ನ ಆವರಿಸಿಕೊಂಡಂತೆ, ನನ್ನ ಎರಡು ಪಕ್ಕೆಲುಬುಗಳನ್ನು ಮುರಿಯುವಷ್ಟು ಸಂಕುಚಿತವಾದಂತೆ ಅನಿಸಲು ಶುರುವಾಯ್ತು. ಕಳೆದು ಹೋದ ಬದುಕಿನ ದಿನಗಳಲ್ಲಿ ಹೀಗಾದ ಸಾಕಷ್ಟು ನಿದರ್ಶನಗಳಿದ್ದರೂ, ಸಮಂಜಸವಾದ ವಿವರಣೆ, ಕಾರಣಗಳಿನ್ನು ದೊರಕಿರಲಿಲ್ಲ. ನೆಟ್ಟ ನೋಟ ಸಿಕ್ಕ ವಸ್ತುಗಳನ್ನೆಲ್ಲಾ ಸೀಳಿ ಹಿಮ್ಮೆಟ್ಟಿ, ಕೊನೆಯಿರದ ಅದಾವುದೋ ಹಾದಿಯ ಹುಡುಕಾಟದಲ್ಲಿತ್ತು. ಆಲೋಚನೆಯ ರಹದಾರಿ, ದೃಷ್ಟಿಯ ಪಯಣಗಳೆರಡೂ ಒಂದೇ ದಿಕ್ಕತ್ತ ಹೊರಟಿದ್ದರೂ, ಎರಡು ಸಮನಾಂತರ ರೇಖೆಗಳಂತೆ ಮುನ್ನುಗ್ಗುತ್ತಿದ್ದವು, ನಾ ಮುಂದು, ತಾ ಮುಂದು ಎಂಬಂತೆ. ಯೋಚನೆಗಳ್ಯಾಕೆ ಯಾವುದೇ ಅಡೆತಡೆಗಳಿಲ್ಲದೆ ಸಾಂಗವಾಗಿ ಸಾಗುತ್ತವೆ? ಬದುಕಿನ ಪಯಣದಲ್ಲಿ ಅದೆಷ್ಟು ದೃಢ ನಿರ್ಧಾರದಿಂದ ಇಟ್ಟ ಹೆಜ್ಜೆಗಳು, ಒಂದಿಷ್ಟು ಹೆಜ್ಜೆಗಳ ನಂತರ ಅದ್ಯಾಕೆ ತಪ್ಪು ಹೆಜ್ಜೆ ಅನಿಸುವಂತಾಗಬೇಕು? ನಿಂತು ಹಿಂದೆ ತಿರುಗಿ ನೋಡುವುದರಲ್ಲಿ ಅರ್ಥವಿದೆ, ಹಿಂದೆ ಹೋಗಬೇಕೆನಿಸುವುದ್ಯಾಕೆ, ಹಾದಿ ತಪ್ಪಿ ಬೇರೆ ದಿಕ್ಕತ್ತ ಮುನ್ನುಗ್ಗಬೇಕೆನಿಸುವುದ್ಯಾಕೆ? ಜಗತ್ತಿನಲ್ಲಿರುವ ಅಮೂಲಾಗ್ರ ಜೀವಜಂತುಗಳೆಲ್ಲವೂ ಸತ್ಯ, ನಾನೊಬ್ಬ ಅರ್ಥವಿರದೆ, ಕಾರಣಗಳಿರದೆ, ಅಸಹಜ ಬದುಕನ್ನು ನಡೆಸುತ್ತಿರುವೆನೆಂಬ ಅಲೋಚನೆ ಮನಸ್ಸನ್ನು ಘಾಸಿಗೊಳಿಸುತ್ತಿದ್ದರೆ, ಮನದ ಮೂಲೆಯಿಂದೊಂದು ಕ್ಷೀಣ ಕೂಗು, ಕಹಿ ಸತ್ಯವನ್ನು ಒಪ್ಪಿಕೊಳ್ಳಲು ಧೈರ್ಯ, ಮನಸ್ಥೈರ್ಯ ಬೇಕೆನ್ನುತಿತ್ತು.

ನಿನ್ನೆ ಮೊನ್ನೆಗಳ ತನಕ ನಾನಾಗಿದ್ದ ನಾನು, ಕಳೆದೆರಡು ದಿನಗಳಿಂದ ಯಾಕೆ ಕಳೆದು ಹೋಗುತ್ತಿದ್ದೇನೆನ್ನುವುದು ಅರಿವಿಗೆ ಬರುತ್ತಿಲ್ಲ. ಬೆಳಗಿನ ಜಾವದಲ್ಲೆ ಎಚ್ಚರವಾದರೂ ಹಾಸಿಗೆಯ ಬಿಟ್ಟೇಳದಷ್ಟು ಆಲಸ್ಯ. ಹೊದ್ದ ಚಾದರದ ಒಳಗೆ ನನ್ನನ್ನು ಅಡಗಿಸಿಕೊಳ್ಳುವುದರಲ್ಲಿ ಸಾಪಲ್ಯತೆಯನ್ನು ಕಂಡರೂ, ಸುಪ್ತ ಭಾವನೆಗಳನ್ನು ಮುಚ್ಚಿಡಲಾಗದೆ ವಿಲವಿಲನೆ ಒದ್ದಾಡುತ್ತಿದ್ದೆ. ಇಷ್ಟಾದರೂ ನಾನು ಅನುಭವಿಸುತ್ತಿರುವುದೇನು ಅನ್ನುವುದು ಇನ್ನೂ ಅರ್ಥವಾಗುತ್ತಿಲ್ಲ. ಸಮಸ್ಯೆಗಳ ಮಧ್ಯೆ ಸಿಲುಕಿ ಒದ್ದಾಡುತ್ತಲೂ ಇಲ್ಲ. ನನ್ನ ಮನಸ್ಸಿನ ಪರಿಜ್ಞಾನದ ಪರಿಧಿಯೊಳಗೆ ಸರಿಯಾಗಿ ಬರದೆ ನನ್ನನ್ನು ಕಾಡುತ್ತಿರುವುದಾದರೂ ಏನು?

ಅವಳು ಆದಿನ ಆ ಮಾತುಗಳನ್ನು ಆಡದಿದ್ದರೆ ನನ್ನ ಈ ಸ್ಥಿತಿಯಲ್ಲೇನಾದರೂ ಬದಲಾವಣೆ ಇರುತಿತ್ತೆ? ಪ್ರಾಯಶಃ ಹೌದು. ಈ ಗೊಂದಲಗಳ ಮೂಲಬಿಂದು ನನ್ನ ಆ ಪ್ರತಿಕ್ರೀಯೆ ಆಗಿತ್ತು ಅನ್ನುವುದೊಂದು ತಿಳಿದ ವಿಷಯ, ಬಿಟ್ಟರೆ ಮಿಕ್ಕಿದ್ದೆಲ್ಲಾ ಗೊಂದಲಮಯ. ನಾನು ಅವಳಲ್ಲಿ ನನ್ನನ್ನು ಕಾಣುತ್ತಿದ್ದರೆ ತಪ್ಪೆ? ತಪ್ಪೆನ್ನಲು ನನ್ನ ಮನಸ್ಥಿತಿ ಯಾಕೋ ಒಪ್ಪುತ್ತಿಲ್ಲವಾದರೂ, ಅದು ಸರಿ ಎಂದೆಂದುಕೊಳ್ಳಲು ನನಗಿರುವ ಒಂದೇ ದಾರಿ ನಾನು ತಪ್ಪು ಮಾಡಿದ್ದೇನೆಂದು ಸಾರುವಂತಿದೆ.
"ನನಗ್ಯಾಕೋ ನಮ್ಮಿಬ್ಬರಲ್ಲಿ ಸಾಕಷ್ಟು ಹೊಂದಾಣಿಕೆಯ ವೈಪರಿತ್ಯ ಕಾಣಿಸುತ್ತಿದೆ, ನಾವಿಬ್ಬರು ಬೇರೆ ಬೇರೆ ಪ್ರಪಂಚಕ್ಕೆ ಸೇರಿದರೆನ್ನುವಷ್ಟರ ಮಟ್ಟಿಗೆ" ಅವಳಾಡಿದ ಈ ಮಾತುಗಳು ಸತ್ಯವಾಗಿದ್ದರೂ, ಅವಳು ಅನಾವಶ್ಯಕವಾಗಿ exaggerating it ಅನಿಸುತಿತ್ತು. ನಮ್ಮಲ್ಲಿ ಸಾಕಷ್ಟು ಭಾವನಾತ್ಮಕ, ವ್ಯವಹಾರಾತ್ಮಕ, ಭೌದ್ಧಿಕ ಹಾಗೂ ಅಭಿರುಚಿಗಳಲ್ಲಿಯ ವ್ಯತ್ಯಾಸಗಳಿರುವುದು ಮುಂಚಿತವಾಗಿ ತಿಳಿದ ವಿಷಯವಾಗಿತ್ತು. ಅದರ ಬಗ್ಗೆ ಯೋಚಿಸಿಯಲ್ಲವೆ ನಾವು ಈ ನಿರ್ಧಾರಕ್ಕೆ ಬಂದಿದ್ದು. ನಾವು ಇನ್ನೊಬ್ಬರ ವ್ಯಕ್ತಿತ್ವಕ್ಕೆ ಕೊಡಬೇಕಾಗಿರುವ ಗೌರವ, ಇಟ್ಟಿರಬೇಕಾಗಿರುವ ನಂಬಿಕೆ ಇಟ್ಟಿದ್ದರೆ, ಜೊತೆಯಾಗಿ ಬದುಕಲು ಯಾವುದೇ ಸಮಸ್ಯೆಗಳಿರುವುದಿಲ್ಲವೆಂದು ಇಬ್ಬರಿಗೂ ತಿಳಿದ ವಿಷಯವಾಗಿತ್ತು.

ಇಷ್ಟು ದಿನಗಳು ಇಲ್ಲದದ್ದು ಈಗ್ಯಾಕೆ ಅವಳ ಮನಸ್ಸಿನಲ್ಲಿ ಮನೆ ಮಾಡಿದೆ, ನನ್ನ ಮನಸ್ಸಿನಲ್ಲು ಆ ಬೀಜವನ್ನು ಯಾಕೆ ಬಿತ್ತಿದಳು? ಹೌದು, ಮೊದಲಿನಿಂದಲೂ ಹಾಗೆ ಅವಳು; ಮನಸ್ಸಿನಲ್ಲಿ ಏನೇ ಮೂಡಿದರೂ ಅದನ್ನು ಹಾಗೆ ಬಂದು ನನ್ನಲ್ಲಿ ಹೇಳುತಿದ್ದ ಅವಳ ಆ ಗುಣವೆ ನನಗೆ ಮೆಚ್ಚಿಗೆಯಾಗಿದ್ದಲ್ಲವೆ. You are brutally honest ಕಣೆ ಅಂದಿದ್ದೆ ನಾನು ಬಹಳ ದಿನಗಳ ಹಿಂದೆ. ಮತ್ತೆ ಅವಳ ಅನಿಸಿಕೆಗಳನ್ನು ಹೇಳಿದಾಕ್ಷಣ ಅದರ ಸಥ್ಯಾಸತ್ತತೆಯ ಬಗ್ಗೆ ಯೋಚಿಸಲು ಯಾಕೆ ಹೋಗುತ್ತಿದ್ದೇನೆ ನಾನು? ನಮ್ಮ ವ್ಯತ್ಯಾಸಗಳಲ್ಲಿ ನಮ್ಮನ್ನು ಗುರುತಿಸಿಕೊಂಡು ಬದುಕಬೇಕಾಗಿರುವವರು ನಾವು, ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಅವಳಿಗೊಂದಿಷ್ಟು ಸಮಾಧಾನದ ಮಾತುಗಳನ್ನು ಹೇಳಿ, ಅದನ್ನು ಅಲ್ಲಿಯೆ ಗಾಳಿಯಲ್ಲಿ ತೂರಲಿಲ್ಲವೇಕೆ ನಾನು? ಅವಳಿಗೇನೊ ಕಾಡಿಸುತ್ತಿದೆ ಎಂದು ಯೋಚಿಸುತ್ತಾ, ನನ್ನ ಪ್ರತಿಕ್ರೀಯೆಯಲ್ಲೇಕೆ ಬದಲಾವಣೆ ತಂದುಕೊಳ್ಳುತ್ತಿದ್ದೇನೆ ನಾನು?

ಜನವರಿ ತಿಂಗಳ ಬೆಳಗಿನ ಜಾವದ ಚಳಿ ಹೊರಟು ಹೋಗಿ, ಉರಿ ಬಿಸಿಲಿನ ಸೂರ್ಯನ ದರ್ಶನದಿಂದ, ನಾ ಮಲಗಿದ್ದ ಕೋಣೆಗೂ ಬಿಸಿಲು ರಾಚಿ, ಇನ್ನು ಮಲಗುವುದು ಅಸಾಧ್ಯವೆನಿಸಿ, ಹಾಸಿಗೆಯನ್ನು ಮಡಚಿ, ಮತ್ತೆ ಹಾಗೆ ಕೂತೆ. ಅವಳು ಕೊಡಿಸಿದ ಡಿಜಿಟಲ್ ವಾಚ್ ಟಿಣ್ ಟಿಣ್ ಎಂದು ಶಬ್ಧ ಮಾಡುತ್ತಾ ಅದರ ಇರುವಿಕೆಯನ್ನು ತೋರಿಸಿದಾಗಲೆ, ಸಮಯದ ಅರಿವಾಗಿದ್ದು. ಸರಿಯಾಗಿ ೧೦ ಗಂಟೆ. ಪಕ್ಕದಲ್ಲಿಟ್ಟಿದ್ದ ಮೊಬೈಲ್ ನೋಡಿದರೆ, ೩ ಮಿಸ್ಸೆಡ್ ಕಾಲ್ಸ್ ಮತ್ತು ೮ ಮೆಸೇಜ್‌ಗಳು. ಎಲ್ಲಾ ಅವಳದ್ದೆ ಎಂದು ತಿಳಿದರೂ ಮೊಬೈಲ್ ನೋಡದಷ್ಟು ಆಲಸ್ಯ! ಆ ಆಲಸ್ಯವನ್ನು ಅವಳ ಮೇಲೆ ತೋರುತ್ತಿರುವೆನೆ ನಾನು? ಭಯವಾಯಿತೊಮ್ಮೆ. ಗಕ್ಕನೆ ಮೊಬೈಲ್ ಅನ್ನು ಕೈಗೆತ್ತಿಕೊಂಡು ನೋಡಿದೆ. ನಾನಂದುಕೊಂಡಂತೆ ಎಲ್ಲಾ ಅವಳವೆ. ಮನಸ್ಸಿನಾಳದಿಂದ ಎದ್ದು ಬರುತ್ತಿದ್ದ ಭಾವನೆಗಳನ್ನು ಹತ್ತಿಕ್ಕುವಂತೆ ಮತ್ತೆ ನೀರವತೆ ನನ್ನನ್ನು ಕಾಡತೊಡಗಿತು.

ಯಾಂತ್ರಿಕವಾಗಿ ಅವಳಿಗೊಂದು ಮೆಸೇಜ್ ಮಾಡಿದೆ. ಕಳುಹಿಸಿದ ನಂತರ ತಿಳಿಯಿತು, ಅದರಲ್ಲಿ ಎಳ್ಳಷ್ಟು ಭಾವನೆಗಳಿರಲಿಲ್ಲವೆಂದು! ಕೂತಲಿಂದ ಎದ್ದು ಹಲ್ಲುಜ್ಜಲೂ ಮನಸ್ಸಿಲ್ಲದಂತ ಮನಸ್ಥಿತಿ! ವಾರಾಂತ್ಯವಾದುದರಿಂದ ನನ್ನ ರೂಂಮೇಟ್ ಅವನ ಊರಿಗೆ ಹೋಗಿದ್ದ, ನನ್ನ ಮನಸ್ಸಿನ ಒಂಟಿತನಕ್ಕೆ ಇಂಬು ಕೊಡುವಂತೆ. ಇವತ್ತ್ಯಾಕೊ ಅವಳನ್ನು ನೋಡಬೇಕನ್ನಿಸುತ್ತಿರಲಿಲ್ಲ. ನನ್ನ ಇರುವಿಕೆಯನ್ನೆ ನಂಬದಂತ ಸ್ಥಿತಿಯಲ್ಲಿ ಅವಳ ಪ್ರೀತಿಗೆ ಹೇಗೆ ಸ್ಪಂದಿಸಿಯೇನು ನಾನು? ಹತ್ತಿರದಲ್ಲಿದ್ದ ಪ್ಲಾಸ್ಟಿಕ್ ಚೇರ್ ಎಳೆದುಕೊಂಡು ಕಾಲುಗಳನ್ನು ನೀಡಿ, ತಲೆಯನ್ನು ಹಿಂದಕ್ಕೆ ಬಾಗಿ ಕೂತೆ, ತಲೆಯ ಭಾರ ಇಳಿದು ಕೆಳಗಿಳಿಯಬಹುದೇನೊ ಎಂಬ ಮೂರ್ಖತನದಿಂದೆಂಬಂತೆ! ಅರೆಕ್ಷಣದ ಮೌನದ ಜೊತೆಗೆ ಮತ್ತೆ ಗದ್ದಲದ ಮಡುವಾಯ್ತು ಮನಸ್ಸು. ಅದಕ್ಕೆ ಹೊಂದಿಕೊಂಡಂತೆ ನಾನು ಅದರ ಒಳ ಹೊಕ್ಕೆ, ಗೋಜಲನು ಬಿಡಿಸುವುವನಂತೆ.

ಮುಚ್ಚಿದ ಕಣ್ಣಡಿಗಳಿಂದ ನನ್ನದೆ ಪ್ರಪಂಚ ಯಾಂತ್ರಿಕವಾಗಿ ಚಲಿಸುತಿತ್ತು. ಅಲ್ಲಿ ನಾನೊಬ್ಬನೆ! ಮನುಷ್ಯ ಜಾತಿಯ ಸುಳಿವಿಲ್ಲ, ಪ್ರಾಣಿಸಂಕುಲವಿಲ್ಲ, ಪಕ್ಷಿಗಳ ಕಿಲ-ಕಿಲ ಕಲರವ, ಹರಿವ ನದಿಯ ಜುಳು-ಜುಳು ನಾದ ಕೇಳಿಸುತ್ತಿವೆ, ಗಾಳಿಗೆ ಗುಂಯ್‌-ಗುಂಯ್ ಅನ್ನುತ್ತಿರುವ ಮರಗಳು, ಹಸಿರು ಹಾಸು ಎಲ್ಲೆಲ್ಲೂ ಕಾಣಿಸುತ್ತಿದೆ. ಅಳಿದುಳಿದ ಜೀವರಾಶಿಗಳ ಮಧ್ಯೆ ನಾನೊಬ್ಬ ಅಲೆಮಾರಿಯಂತೆ, ಗೊತ್ತು ಗುರಿ ಇಲ್ಲದೆ ಕೊನೆ ಎಂಬ ನಿಲ್ದಾಣವಿಲ್ಲದಿರುವ ಪಯಣಿಗನಂತೆ ನಡೆಯುತ್ತಿದ್ದೇನೆ. ಹಾಗೆ ನಡೆಯುತ್ತಿದಂತೆ, ನನ್ನ ದೇಹವೆಲ್ಲಾ ಕರಗಿ ನನ್ನ ಕಣ್ಣಿನ ಇರುವಿಕೆಯನ್ನು ಬಿಟ್ಟರೆ ಬೇರೆಲ್ಲ ಇಲ್ಲವೆನ್ನುವಂತಹ ಅನುಭವ. ನನ್ನ ಕಣ್ಣುಗಳು ನೆಲದ ಮೇಲೆ ಅಲೆದಾಡುತ್ತಿವೆ, ಗಾಳಿಯಲ್ಲಿ ತೇಲಾಡುತ್ತಿವೆ, ನೀರಲ್ಲಿ ಈಜಾಡುತ್ತಿವೆ. ಮತ್ತೆ ಕೊನೆಗೊಮ್ಮೆ ಹಕ್ಕಿಗಳೆಲ್ಲಾ ನನ್ನ ಅಟ್ಟಿಸಿಕೊಂಡು ಬಂದಂತೆ, ಕೂಗಲೂ ದನಿಯಿದರೆ ನಾನು ಕಿರುಚಿದಂತೆ. ಹಾಳು ಬಾವಿಯಲ್ಲಿ ನನ್ನ ಕಣ್ಣುಗಳು ಬಿದ್ದಂತೆ. ಮೇಲಿಂದ ಮಣ್ಣನ್ನು ನನ್ನ ಕಣ್ಣ ಮೇಲೆ ಸುರಿದಂತೆ. ಮತ್ತೆ ಕತ್ತಲು, ಬರಿ ಕತ್ತಲು.

ತೆರೆದಿಟ್ಟ ಕಿಟಕಿಯ ಬಾಗಿಲಿಂದ ತೂರಿ ಬಂದ ಗಾಳಿ, ಪಟ ಪಟನೆ ಶಬ್ಧ ಮಾಡಿದಾಗ, ನನ್ನಿರುವಿಕೆಯ ಗೋಚರವಾಯ್ತು. ಎದ್ದು ಬ್ರಶ್ ಮಾಡಿ, ಸ್ನಾನವನ್ನೂ ಮುಗಿಸಿ ಮನೆಯಿಂದ ಹೊರಬಿದ್ದೆ ತಿಂಡಿ ತಿನ್ನುವ ನೆಪದಿಂದ. ಕೈಯಲ್ಲಿದ್ದ ಮೊಬೈಲು ರಿಂಗ್ ಆಗಿದ್ದರ ಅರಿವಾಗಿ ಕರೆಯನ್ನು ಸ್ವೀಕರಿಸಿ ಕಿವಿಗಾನಿಸಿಕೊಂಡೆ. ಊರಿಂದ ಅಮ್ಮನ ಕರೆ ಅದಾಗಿತ್ತು.
"ಯಾವಾಗ ಎದ್ದೆ? ತಿಂಡಿ ತಿಂದಾಯಿತಾ? ಸರಿಯಾಗಿ ಊಟ ತಿಂಡಿ ಮಾಡುತ್ತಿದ್ದೀಯಾ? ಮನೆಯಲ್ಲಿ ಸ್ವಲ್ಪ ಹಣ್ಣು-ಹಾಲು ತಂದಿಡು. ಮುಂದಿನ ತಿಂಗಳು ನಾನು ಬಂದಿರುತ್ತೇನೆ ಒಂದೆರಡು ವಾರದ ಮಟ್ಟಿಗೆ". ನಿನ್ನೆ ಹೇಳಿದ್ದನ್ನೆ ಮತ್ತೆ ಪುನರಾವರ್ತಿಸಿದಳು ಅಮ್ಮ. ಅವಳಿಗೆ ನಿನ್ನೆ ಕೊಟ್ಟ ಉತ್ತರವನ್ನೆ ಸ್ವಲ್ಪ ನಿರ್ವೀಕಾರವಾಗಿ ಕೊಟ್ಟೆ, ನನ್ನ ಕೆಟ್ಟ ಮನಸ್ಥಿತಿಯ ಪರಿಣಾಮವೆಂಬಂತೆ.
"ಅನಘನ ವಿಷಯ ಏನು ಮಾಡಿದೆ? ಇಬ್ಬರು ಏನಾದರೂ ನಿರ್ಧಾರಕ್ಕೆ ಬಂದಿದ್ದೀರಾ?"
ಮೌನದ ಜೊತೆಗಿನ ನಿಟ್ಟುಸಿರೇ ನನ್ನ ಉತ್ತವಾಯ್ತು.
ಅರೆ ಕ್ಷಣದ ಮೌನ ನಮ್ಮಿಬ್ಬರ ನಡುವೆ.
"ಯಾಕೋ, ಎನಾಯ್ತು?" ಕಾಳಜಿಯಿಂದ ಕೇಳಿದಳು ಅಮ್ಮ.
"ಬೇರೆ ಏನಾದ್ರು ಮಾತಾಡಮ್ಮಾ", ದೈನ್ಯತೆಯಲ್ಲಿ ಬೇಡಿಕೊಳ್ಳುವಂತಿತ್ತು ನನ್ನ ಮಾತು.
ಅರೆ ಕ್ಷಣದ ಮೌನದ ನಂತರ ಅಮ್ಮ ಮುಂದುವರಿಸಿದಳು, "ಸರಿ! ಹೋಗ್ಲಿ, ನಿನಗೊಂದು ಸಂಬಂದ ಹುಡುಕಿಕೊಂಡು ಬಂದಿದ್ದರು ನಿನ್ನ ಅಪ್ಪನ ಪರಿಚಯದವರೊಬ್ಬರು. ಹುಡುಗಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನೀಯರ್ ಅಂತೆ. ನೋಡಲು ಚೆನ್ನಾಗಿದ್ದಾಳೆ ಅಂತೆ. ಏನಂತೀಯಾ ನೀನು? ನೀನು ಹು ಅಂದರೆ, ನಾನೊಮ್ಮೆ ಮಾತಾಡಿ ಬರಲೇ?"
"ಯಾರದು ಹುಡುಗಿ, ನನಗೆ ಗೊತ್ತೇನೊ ನೊಡ್ತೀನಿ" ನಾನಂದೆ.
"ನಿನ್ನ ತಂದೆಯ ಬ್ಯಾಂಕ್‌ನಲ್ಲಿದ್ದ ಜಗದೀಶ್ ಅನ್ನೊ ಬ್ಯಾಂಕ್ ಮೆನೇಜರ್ ಮಗಳು, ನಂದಿನಿ ಅವಳ ಹೆಸರು"
"ನಂದಿನಿ, ಗೊತ್ತು ನನಗವಳು, ಚೆನ್ನಾಗಿದ್ದಾಳೆ ನೋಡಲು, ಮಾತಾಡಬಹುದೇನೊ!"
ನನಗರಿವಿಲ್ಲದೆ ನಾನೇ ಆಡಿದ ಮಾತುಗಳು ನನ್ನನ್ನು ಅವಕ್ಕಾಗಿಸಿತು. ನನಗೇನಾಗಿದೆ! ನಾನ್ಯಾಕೆ ಹೀಗಂದೆ. ನನ್ಯಾಕೆ ನನ್ನವಳ, ನನ್ನ ಪ್ರೀತಿಯನ್ನು ಮರೆತು ಒಮ್ಮೆಲೆ ಹೀಗಂದೆ?
ಖುಷಿಯಿಂದ ಅಮ್ಮ ಮುಂದುವರಿಸಿದಳು, "ನಾಳೆ ನಾನೇ ಹೋಗಿ ಹುಡುಗಿಯನ್ನೊಮ್ಮೆ ನೋಡಿ ಬರುತ್ತೇನೆ"
"ಬೇಡಮ್ಮಾ, ನಾನು ನಾಳೆ ಹೇಳುತ್ತೇನೆ ನಿನಗೆ, ಅವಸರಿಸದಿರು" ನನಗರಿವಿಲ್ಲದೆ ಮತ್ತೆ ಉಸುರಿದೆ.
ಮುಂದೆ ಮಾತನಾಡುವ ಮನಸ್ಸಿಲ್ಲದೆ ಕರೆಯನ್ನು ಕೊನೆಗೊಳಿಸಿ, ಮೊಬೈಲನ್ನು ಜೇಬಿಗಿಳಿಸಿದೆ. ಹಾಗೆ ತಿಂಡಿ ತಿಂದ ಶಾಸ್ತ್ರ ಮುಗಿಸಿ, ರೂಂ ಕಡೆ ಹೊರಟೆ.

ಮತ್ತೆ ಮನೆ ಸೇರಿದರೂ ಮನಸ್ಸನ್ನು ಹೊಕ್ಕ ಹುಳವಿನ್ನೂ ಹೊರ ಬಂದಿರಲಿಲ್ಲ. ಅವಳಿಲ್ಲದ ಬದುಕನ್ನು ಯೋಚಿಸದ ನಾನು, ಅವಳಿಲ್ಲದ ಮದುವೆಯ ಬಗ್ಗೆ ಹೇಗೆ ಯೋಚಿಸಿದೆ? ಅವಳ ಮೇಲಿನ ನನ್ನ ಪ್ರೀತಿ, ನಂಬಿಕೆ ಕಡಿಮೆ ಆಗುತ್ತಿದೆಯೆ, ಅದೂ ಒಂದು ದಿನದ ಒಂದು ಮಾತಿನಿಂದ? ನನ್ನಲ್ಲಿಯ ಬದಲಾವಣೆ ನನ್ನನ್ನೇ ಅಣಕಿಸುವಂತಿತ್ತು. ಒಂಟಿತನದ ಸಾಮಿಪ್ಯವನ್ನು ಮನಸ್ಸು ಬಯಸುತಿತ್ತು. ಮೊದಲಿಂದನೂ ಹೀಗೆ ನಾನು, ಮನದ ದುಗುಡವನ್ನು ಆಪ್ತರೊಂದಿಗೆ ಹಂಚಿಕೊಳ್ಳುವ ಮೊದಲು ಒಂಟಿತನದಲ್ಲಿ ಕಳೆದು ಹೋಗುತ್ತಿದ್ದೆ. ಚಿಕ್ಕ ವಯಸ್ಸಿನಿಂದ ಮುದಿವಯಸ್ಸಿನ ಅಜ್ಜಿಯ ಜೊತೆಗೆ ಹೆಚ್ಚು ಕಡಿಮೆ ಒಬ್ಬಂಟಿಗನಾಗೆ ಬಾಳಿದ ಬದುಕು, ಒಂಟಿತನವನ್ನೆ ಅರಸುವುದರಲ್ಲಿ ಏನು ಆಶ್ಚರ್ಯವಿಲ್ಲ! ಮತ್ತೆ ಹೊರ ನಡೆದೆ, ಬೈಕಿನ ಕೀ ಎತ್ತಿಕೊಂಡು, ಹೆಲ್ಮೆಟ್ ತಲೆಗೆ ಏರಿಸಿಕೊಂಡು. ಬೈಕ್ ಏರಿ, ತುಸು ಜೋರಾಗೆ accelerator ಅದುಮಿ ರಿಂಗ್ ರೋಡ್‌ನತ್ತ ನುಗ್ಗಿಸಿದೆ. ಸೂರ್ಯ ನಡು ನೆತ್ತಿಯಲ್ಲಿದ್ದರಿಂದ ಉರಿ ಬಿಸಲು ಮೈ ಸುಡುವಷ್ಟಿತ್ತು.

ಓಡಿಸುತ್ತಿದ್ದ ಬೈಕ್‌ಗೆ ಸವಾಲೆಸೆಯುವಂತೆ, ಎದುರಿನಿಂದ ಗಾಳಿ ಮುನ್ನುಗ್ಗಿ ಬರುತ್ತಿತ್ತು. ಗಾಲಿಯ ರಭಸಕ್ಕೆ ಸವಾಲೊಡ್ಡುವಂತೆ ಮನಸ್ಸು ಇನ್ನೂ ಜೋರಾಗಿ ಅಲೆದಾಡುತ್ತಿತ್ತು. ಚಿಕ್ಕ ವಯಸ್ಸಿನಲ್ಲಿ ನನ್ನನ್ನು ಒಬ್ಬಂಟಿಯಾಗಿ ಮಾಡಿ, ಮುಂಬೈಗೆ ಅಪ್ಪನ ಜೊತೆ ಹೊರಟು ಹೋದಾಗ ಅದೆಷ್ಟು ಅತ್ತಿದ್ದೆ ನಾನು. ಜೊತೆಗೆ ಸದಾ ಬಾಲದಂತೆ ಅಂಟಿಕೊಂಡಿದ್ದ ತಂಗಿಯನ್ನೂ ಜೊತೆಗೆ ಕರೆದೊಯ್ದಿದ್ದಳು ಅಮ್ಮ. ಅಜ್ಜಿಯಿಂದೇನೋ ಪ್ರೀತಿ ಸಿಗುತಿತ್ತು, ಆದರೆ ಅಮ್ಮ ಮತ್ತು ತಂಗಿಯ ಪ್ರೀತಿ, ಸಾಮಿಪ್ಯದ ಇಲ್ಲದಿರುವಿಕೆ ಸದಾ ಕಾಡುತಿತ್ತು. ಕೊನೆ ಕೊನೆಗೆ ಅದು ಅಭ್ಯಾಸವಾಗಿ ಹೋಯಿತು. ಮೊದಲಿನಿಂದಲೂ ಗೆಳೆಯರಾಗಿದ್ದ ಅಕ್ಕ-ಪಕ್ಕದ ನನ್ನ ಪ್ರಾಯದ ಒಡನಾಡಿಗಳೊಂದಿಗೆ ನನ್ನ ಬಿಡುವಿನ ಕಾಲ ಕಳೆಯುತ್ತಿದ್ದೆ. ಹಾಗೂ ಹೀಗೂ ಇಂಜನಿಯರಿಂಗ್ ಮುಗಿಸಿ, ಬೆಂಗಳೂರಿನಲ್ಲೊಂದು ಕೆಲಸ ಗಿಟ್ಟಿಸಿಕೊಂಡು ತೀರ ಹತ್ತಿರದ ಗೆಳೆಯನೊಂದಿಗೆ ಒಂದು ಅಪಾರ್ಟ್‌ಮೆಂಟ್ ಹಂಚಿಕೊಂಡು ಬದುಕುತಿದ್ದೆ. ಇಷ್ಟರಲ್ಲಿ ಅಪ್ಪ ಅಮ್ಮ ಎಲ್ಲರೂ ಊರಿಗೆ ವಾಪಾಸು ಬಂದಿದ್ದರು, ಕಳೆದ ೩ ವರ್ಷಗಳಿಂದ. ೨-೩ ತಿಂಗಳಿಗೊಮ್ಮೆ ಇಲ್ಲಿಗೂ ಬಂದಿರುತ್ತಿದ್ದರು.

ಇಂಜಿನಿಯರಿಂಗ್ ಮಾಡುತ್ತಿದ್ದ ದಿನಗಳಲ್ಲಿ ಪರಿಚಿತವಾದ ನನ್ನ ಜೂನಿಯರ್ ಹುಡುಗಿ ಅನಘ, ಇಂಜಿನಿಯರಿಂಗ್ ಮುಗಿಸುವಷ್ಟರಲ್ಲಿ ಆಪ್ತ ಸ್ನೇಹಿತೆಯಾಗಿದ್ದಳು. ಬೆಂಗಳೂರಿಗೆ ಬಂದ ಮೊದಲ ದಿನಗಳಲ್ಲಿ ಅವಳನ್ನು ಬಹಳಷ್ಟು ಮಿಸ್ ಮಾಡಿಕೊಂಡ ನಂತರ ತಿಳಿದಿದ್ದು, ಅವಳನ್ನು ನಾನು ಬಹಳಷ್ಟು ಪ್ರೀತಿಸುತ್ತಿದ್ದೆ ಎಂದು. ಮತ್ತೆ ಒಂದೆರಡು ವಾರಗಳ ಸಮಯ ತೆಗೆದುಕೊಂಡು ಸೀದಾ ಕಾಲೇಜ್‌ಗೆ ಹೋಗಿ ಅವಳಿಗೆ ಪ್ರಪೋಸ್ ಮಾಡಿದ್ದೆ. ಅರೆಕ್ಷಣವೂ ಯೋಚಿಸದೆ, ಬಾಚಿ ತಬ್ಬಿದ್ದಳು ನನ್ನ. ಮತ್ತೆ ಕಳೆದ ೨ ವರ್ಷಗಳಿಂದ ಯಾವುದೇ ಸಂಘರ್ಷಗಳಿಲ್ಲದೆ ಸುಲಲಿತವಾಗಿ ನಡೆದು ಬಂದಿತ್ತು ನನ್ನ ಪ್ರಣಯ ಪರಿಕ್ರಮ. ೪ ತಿಂಗಳ ಹಿಂದೆ ಕಳೆದ ಬೆಂಗಳೂರಿಗೆ ಬಂದಿದ್ದಳು ಅವಳು, ಇಲ್ಲೇ ಒಂದು ಕಂಪೆನಿಯಲ್ಲಿ ಕೆಲಸ ದೊರಕಿದ ನಂತರ.

ಅನಘ ಬೆಂಗಳೂರಿಗೆ ಬಂದಾಗಿಂದೆಲ್ಲಾ, ವಾರಾಂತ್ಯದಲ್ಲಿ ಬಿಡುವು ಮಾಡಿಕೊಂಡು ಭೇಟಿಯಾಗುತ್ತಿದ್ದೆವು. ಹರಟೆ ಹೊಡೆಯುವುದು, ಕನಸು ಕಟ್ಟುವುದು, ಭವಿಷ್ಯದ ಬಗ್ಗೆ ನಮ್ಮದೆ ಯೋಚನೆಗಳು ನಿರಂತರವಾಗಿ ನಡೆಯುತ್ತಿದ್ದವು, ಹಾಗೆ ಚಿಕ್ಕ ಚಿಕ್ಕ ವಿಷಯಗಳಿಗೆ ಬಿನ್ನಾಭಿಪ್ರಾಯದಿಂದ ಜಗಳ ಕೂಡ. ಜಗಳ ಆದ ಕ್ಷಣದಲ್ಲೆ ಅದನ್ನು ವ್ಯಕ್ತಪಡಿಸಿ, ಹೊರಟು ಹೋಗುವ ಕೆಟ್ಟ ಹವ್ಯಾಸ ನನಗಿದ್ದರೆ, ಅದನ್ನು ಅಲ್ಲಿಗೆ ಮುಗಿಸಿ, ಮುಂದಿನ ಬಗ್ಗೆ ಯೋಚಿಸುವ ಒಳ್ಳೆಯ ಗುಣ ಅವಳಿಗಿತ್ತು. ಒಂದಿಷ್ಟು ಬಾರಿ ಕೋಪಿಸಿಕೊಂಡು, ಅವಳನ್ನು ಕಾಫೀಡೆ, ಹೋಟೇಲ್‌ಗಳಲ್ಲಿ ಹಾಗೆ ಬಿಟ್ಟು ಬಂದಿದ್ದೂ ಇದೆ! ಮತ್ತೆ ಮನೆ ಸೇರಿಕೊಂಡ ನಂತರ, ನಾನು ಮಾಡಿದ್ದು ತಪ್ಪು ಅನಿಸುತ್ತಿದ್ದರೂ, ಮತ್ತೆ ಮುಂದೆ ಅದನ್ನೇ ಮಾಡುತ್ತಿದ್ದೆ. ನನ್ನ ಈ ಅಭ್ಯಾಸ ಅವಳಿಗೆ ಬೇಸರ ತಂದರೂ ಅದನ್ನು ಯಾವತ್ತೂ ಒಂದು ಸಮಸ್ಯೆ ಎಂದು ನನ್ನಲ್ಲಿ ಹೇಳಿಕೊಂಡವಳಲ್ಲ ಅನಘ. "ತುಂಬಾ ನೋಯತ್ತೆ ಕಣೊ ನನ್ನ ನೀನು ಹಾಗೆ ಒಬ್ಬಂಟಿಯಾಗಿ ಬಿಟ್ಟು ಬಂದರೆ. ಆದರೆ ಬದುಕಿನಲ್ಲಿ ನನ್ನ ಬಿಟ್ಟು ಹೋಗಲ್ಲ ನೀನು ಅನ್ನುವ ನಂಬಿಕೆ ಇದೆ ನನಗೆ" ಎಂದು ಕಣ್ಣೀರಿಟ್ಟಿದ್ದಳು ಒಮ್ಮೆ. ನನ್ನ ಕೋಪ ಒಂದು ದಿನದ ಮುಂದೆ ಹೋಗದಿದ್ದರೂ, ನನ್ನ ಈ ನಡವಳಿಕೆಯನ್ನು ತಿದ್ದಿಕೊಳ್ಳುವಲ್ಲಿ ಸದಾ ಸೋಲುತ್ತಿದ್ದೆ ನಾನು.

ಎಲ್ಲರಂತೆ ಆರಂಭದ ದಿನಗಳಲ್ಲಿ ಬರಿ ಹೋಲಿಕೆಗಳಿರುವ ಗುಣ ವಿಶೇಷಗಳು, ಅಭಿರುಚಿಗಳ ಹುಡುಕಾಟಕ್ಕೆ ಗಂಟು ಬಿದ್ದವರಲ್ಲ ನಾವಿಬ್ಬರು. ನಮ್ಮ ಸಂಭಾಷಣೆಗಳ ಕೇಂದ್ರ ಬಿಂದು ಅವುಗಳನ್ನು ಮೀರಿದ್ದಾಗಿದ್ದರಿಂದ, "ನಾನು" ಅನ್ನುವ ನಮ್ಮ ನೈಜರೂಪು ಪದರಗಳಂತೆ ತಂತಾನೆ ಬಿಚ್ಚಿಕೊಳ್ಳುತ್ತಾ ಹೊಗಿತ್ತು ನಿಮ್ಮಿಬ್ಬರೆದಿರು. ಬಹಳ ಮುಂಚಿತವಾಗಿ ಅವಳ ವ್ಯಕ್ತಿತ್ವದ, ಅಭಿರುಚಿಗಳ ಸ್ಪೃಷ್ಟ ಚಿತ್ರ ಮನಸ್ಸಿನಲ್ಲಿ ಚಿತ್ರಿತವಾಗಿತ್ತು. "ನಮ್ಮಿಬ್ಬರಲ್ಲಿ ಮುಖವಾಡಗಳ ಅವಶ್ಯಕತೆ ಇರಲ್ಲ ಕಣೆ. ನೀನು ನೀನಾಗಿರು, ನಾನು ನಾನಾಗೆ ಇರುತ್ತೇನೆ ಸದಾ. I want to be as clear and open as possible with u. I don't want to leave assumptions, impressions. I want to leave feelings in u, all over u, inside, outside and every where. ಒಂದು ಕನ್ನಡಿಯ ಮುಂದೆ ನೀನು ನಿಂತರೆ, ನಿನಗೆ ನಿನ್ನ ಪ್ರತಿಬಿಂಬದಲ್ಲಿ ಏನು ಕಾಣಿಸುವುದೋ, ಅದಕ್ಕಿಂತ ಹೆಚ್ಚಾಗಿ, ನೀನು ನನ್ನಲ್ಲಿ ನಿನ್ನನ್ನು ಕಂಡುಕೊಳ್ಳೊವಷ್ಟು ಪ್ರೀತಿ ಕೊಡ್ತೀನಿ ನಾನು" ಪ್ರೀತಿಯ ಉತ್ತುಂಗದಲ್ಲಾಡಿದ ಮಾತುಗಳಂತಿದ್ದರೂ, ಇಬ್ಬರೂ ಅದೇ ಭಾವನೆಯನ್ನು ಮನದಲ್ಲಿಟ್ಟು ಜೊತೆಗಿದ್ದೆವು, ಒಂದು ಸೂತ್ರಕ್ಕೆ ಬದ್ಧರಾಗಿರುವುವೆವು ಎಂಬಂತೆ!

"ಪಾಂವ್ ಪಾಂವ್" ಎಂದು ಜೋರಾಗಿ ಹಾರ್ನ್ ಶಬ್ದ ಕೇಳಿಸಿದಾಗಲೆ ತಿಳಿದದ್ದು, ನಾನು ರಿಂಗ್ ರೋಡ್ ದಾಟಿ, ಮಾಗಡಿ ರೋಡ್‌ನತ್ತ ಹೊರಟಿದ್ದೆ ಎಂದು. ಹಿಂದೆ ಓವರ್‌ಟೇಕ್ ಮಾಡುತ್ತಿದ್ದ ಕಾರೊಂದು ಜೋರಾಗಿ ಹಾರ್ನ್ ಹೊಡೆಯುತ್ತಿತ್ತು. ಮುಂದೆ ಮಾಗಡಿಗೆ ೨೦ ಕಿ.ಮಿ ಇದೆ ಅನ್ನುವಾಗ ಬಲಗಡೆಗೆ ಬೈಕ್‌ಅನ್ನು ತಿರುಗಿಸಿ ಮುಂದೆ ಒಂದು ಮರದ ಕೆಳಗಡೆ ನಿಲ್ಲಿಸಿದೆ. ಮರಕ್ಕೊರಗಿ ಕೂತೆ, ಮರದ ನೆರಳನ್ನು ಸ್ಮರಿಸುತ್ತಾ. "ಸದಾ ನಿನ್ನ ನೆರಳಾಗಿ ನಿನ್ನ ಜೊತೆಗಿರುವೆ ಕಣೊ" ಅವಳ ದನಿ ನನ್ನ ಕಿವಿಗಳಲ್ಲಿ ಇನ್ನೂ ಗುನುಗುನಿಸುವಂತೆ. ಅದೆಷ್ಟು ಪ್ರೀತಿಸುತ್ತಿದ್ದಳು ನನ್ನ! ಇಷ್ಟಿದ್ದೂ ಈಗ್ಯಾಕೆ ಅವಳಿಗೆ ಈ differences ಅಂತ ಬಂದಿದೆ ತಲೆಯಲ್ಲಿ? ನನ್ನ ಪ್ರೀತಿಯಲ್ಲಿ ಎನಾದರೂ ಹುಳುಕು ಕಾಣಿಸುತ್ತಿದೆಯೆ ಅವಳಿಗೆ? ಅಥವಾ, ನಾನು ಯೋಗ್ಯನಲ್ಲ ಅನ್ನುವ ಯೋಚನೆ ಅವಳ ತಲೆಯಲ್ಲಿ ಹುಟ್ಟಿಕೊಂಡಿದೆಯೊ? ನಮ್ಮ ಈ ಸಂಭಂದಕ್ಕೆ ಒಂದು ಅಂತ್ಯ ಕಾಣಿಸಲು ಹೊರಟಿರುವ ಸೂಚನೆಯೆ ಇದು? ತಲೆ ಯೋಚನೆಗಳ ಜೇನುಗೂಡಾಯಿತು.

ನನ್ನ ಯೋಚನೆಯ ಲಹರಿ ನನ್ನನ್ನು ನನಗರಿವಿಲ್ಲದೆ ಒಂದು ಹೊಸ ದಿಕ್ಕಿನತ್ತ ಕೊಂಡೊಯ್ಯಿತು. ಇತ್ತೀಚೆಗೆ ಬಹಳಷ್ಟು ಬದಲಾವಣೆ ಅವಳಲ್ಲಿ ಗಮನಿಸಿದಂತೆ! ಅದೆಷ್ಟು ಸವಿಯಾಗಿ ಮಾತನಾಡುತ್ತಿದ್ದಳು ಮೊದಲು, ಇತ್ತೀಚೆಗೆ ಮಾತುಗಳೆ ಕಡಿಮೆಯಾಗಿವೆ. ಕಾಲೇಜ್ ದಿನಗಳಲ್ಲಿ ವಾರಕ್ಕೆ ೩-೪ ಈ-ಮೈಲ್ ಬರುತ್ತಿದ್ದವು ಅವಳಿಂದ. ಈಗಂತೂ ವಾರಕ್ಕೊಂದು ಈ-ಮೈಲ್ ಬಂದರೆ ಅದು ನನ್ನ ಭಾಗ್ಯ! ಕೇಳಿದರೆ, ನೀನು ಇಲ್ಲೆ ಇರುವಾಗ, ಪ್ರತಿದಿನ ಫೋನ್‌ನಲ್ಲಿ ಮಾತಾಡುತ್ತಿರುವಾಗ ಈ-ಮೈಲ್‌ನ ಅವಶ್ಯಕತೆ ಇಲ್ಲ ತಾನೆ ಅನ್ನುತ್ತಾಳೆ.

ಒಂದು ದೃಡ ನಿರ್ದಾರಕ್ಕೆ ಬರಲಾರದೆ ಒದ್ದಾಡುತ್ತಿದ್ದ ಮನಸ್ಸನ್ನು ಬದಿಗೊತ್ತಿ, ಮತ್ತೆ ಬೈಕ್ ಅನ್ನು ಏರಿದೆ. ಏನು, ಎತ್ತ, ಹೇಗೆ, ಎಲ್ಲಿ ಯಾವುದಕ್ಕೂ ಉತ್ತರವೀಯದೆ, ಮನಸ್ಸು ಹೇಳಿದಂತೆ ಬೈಕ್ ಚಲಾಯುಸುತ್ತಿದ್ದೆ. ಗಿಡ ಮರಗಳು, ಕಾರ್, ಲಾರಿ, ಬಸ್ಸು, ಆಟೊ, ಜನ-ಜಂಗುಳಿ ಎಲ್ಲವನ್ನೂ ಹಿಂದಕ್ಕೆ ಹಾಕಿ ನಾನು ಮುಂದೆ ಹೋಗುತ್ತಿದ್ದೆ. ಬರ್ ಬರ್ ಎಂದು ಎದುರುಗಡೆಯಿಂದ ವಾಹನಗಳು ಹಾದುಹೋಗುತ್ತಿದ್ದವು, ನನ್ನ ಯೋಚನೆಗಳ ತಿಕ್ಕಾಟಕ್ಕೂ ತಮಗೂ ಸಂಭಂದವೇ ಇಲ್ಲವೆನ್ನುವುದನ್ನು ಕೂಗಿ ಹೇಳುತ್ತ ಎಂಬಂತೆ. ಮುಂದೆಲ್ಲೊ ಒಂದು ಜೋಪಡಿಯಲ್ಲಿ ಹೊರಗೆ ನಿಂತು ಆಡುತ್ತಿರುವ ಮಕ್ಕಳು, ಅವರ ಪಕ್ಕ ಕೂತಿರುವ ಅವರ ಅಪ್ಪ-ಅಮ್ಮ. ಬಡತನವೇ ಬದುಕಾಗಿದ್ದರೂ, ನೋವಿನ ಎಳೆ ಕಾಣಿಸುತ್ತಿಲ್ಲ ಮೊಗದಲ್ಲಿ, ನಲಿವಿನ ಸವಿಯ ಹೊರತುಪಡಿಸಿ! ಬಡತನದಲ್ಲಿ ಇರುವುದೇ ಸುಖ ಅಥವಾ ಮನಸ್ಸಿನಲ್ಲಿರುವುದೇ? ಇರುವುದರಲ್ಲಿ ಹಿತ ಕಾಣುವುದು, ತೃಪ್ತಿಯ ನೆಲೆ ಕಾಣುವುದರಲ್ಲಿ ಇರುವುದಲ್ಲವೆ ಬದುಕು? ನಮ್ಮಲ್ಲಿರುವುದನ್ನು ಬದಿಗೊತ್ತಿ, ನಮ್ಮದಲ್ಲದರ ಬಗ್ಗೆ ಯಾಕೆ ನೆಮ್ಮದಿ ಕೆಡಿಸಿಕೊಳ್ಳಬೇಕು? ನಮ್ಮಲ್ಲಿರುವುದರಲ್ಲಿ ನಾವ್ಯಾಕೆ ಹುಳುಕು ಹುಡುಕಿ ಮನಸ್ಸು, ನೆಮ್ಮದಿ, ಬದುಕನ್ನು ಕದಡಿಕೊಳ್ಳಬೇಕು? ನೆಮ್ಮದಿಯಲ್ಲಿ ಬದುಕಿನ ಸಾರ್ಥಕತೆ ಇರುವಾಗ, ಲೋಪ-ದೋಷಗಳ ಹುಡುಕಿ, ಪಟ್ಟಿ ಮಾಡಿ, ಹೊಸ ಸಮಸ್ಯೆಗಳ ಯಾಕೆ ಹುಟ್ಟಿ ಹಾಕಿಕೊಳ್ಳಬೇಕು? ಯಾವುದೂ ಪರಿಪೂರ್ಣ ಅಲ್ಲ ಅನ್ನುವಾಗ, ಇರುವ ವೈಪರಿತ್ಯಗಳನ್ನು ಅನುಸರಿಸಿ ಬದುಕನ್ನು ನೆಡೆಸಿ, ಬದುಕನ್ನ ಪರಿಪೂರ್ಣಗೊಳಿಸುವುದರಲ್ಲಿ ಅಲ್ಲವೆ ಇರುವುದು ನಮ್ಮ ಸಾರ್ಥಕತೆ? ಹುಟ್ಟಿಸಿದ ಅಪ್ಪ-ಅಮ್ಮನನ್ನೇ ಹೋಲದಿರುವ ಮಕ್ಕಳು ಜನಿಸುವಾಗ, ಸಿಕ್ಕಿರುವ ವ್ಯಕ್ತಿಗಳ ಜೊತೆಗಿನ ಸಂಭಂದದಲ್ಲಿ ಎಲ್ಲಾ ಹೋಲಿಕೆ ಹೇಗೆ ಸಾದ್ಯ? ಬದುಕಿನಲ್ಲಿ ಬರುವ ಸಂಭಂದಗಳಲ್ಲಿ ಬೇಕಿರುವುದು ಸಾಮರಸ್ಯವೆ ಹೊರತು, ಹೋಲಿಕೆಗಳಲ್ಲ!

ಬೈಕ್‌ನ ಬ್ರೇಕ್ ಅಮುಕಿ ನಿಲ್ಲಿಸಿದಾಗಲೆ ನನ್ನ ಯೋಚನೆಯು ನಿಂತಿದ್ದು. ನಿಂತ ನಂತರವೇ ಅರಿವಾಗಿದ್ದು, ನಾನು ಅನಘನ ಮನೆಯ ಮುಂದೆ ನಿಂತಿರುವೆ ಎಂದು! ಹೌದು, ನಾನ್ಯಾಕೆ ಇಲ್ಲಿಗೆ ಬಂದೆ ನನ್ನ ಆಜ್ಞೆ ಇಲ್ಲದೆ! ನನ್ನ ಸುಪ್ತ ಮನಸ್ಸು ನನ್ನನ್ನು ಇಲ್ಲಿಗೆ ಕರೆದು ತಂದೊಯ್ಯಿತೆ? ಇಲ್ಲಾ, ಅವಳ ಪ್ರೀತಿ ನನ್ನನ್ನು ಇಲ್ಲಿ ಸೆಳೆದು ತಂದೊಯ್ಯಿತೆ? ಇಲ್ಲ ನನ್ನಲ್ಲಿರುವ ಅವಳ ಮೇಲಿನ ಪ್ರೀತಿಯ ಕೆಲಸವೆ ಇದು? ಮತ್ತೆ ಪ್ರಶ್ನೆಗಳ ಹೊಡೆತ, ಒಂದಕ್ಕೂ ಉತ್ತರವಿಲ್ಲ ನನ್ನಲ್ಲಿ! ಇಲ್ಲ, ಇದು ನಮ್ಮಿಬ್ಬರ ಪ್ರೀತಿಯ ಜೀವಂತಿಕೆಯ ಸಂಕೇತ! ನಾನು ಅವಳನ್ನು ಗಾಡವಾಗಿ ಪ್ರೀತಿಸುತ್ತಿದ್ದೇನೆ. ಅರೆಕ್ಷಣದ ಮಾತುಗಳಿಗೆ ಅನಾವಶ್ಯಕವಾಗಿ ಯೋಚಿಸಿ, ನನ್ನ ಪ್ರೀತಿಯಲ್ಲೆ ಹುಳುಕು ಹುಡುಕಿ, ಪ್ರೀತಿಯನ್ನು ಕಳೆದು ಕೊಳ್ಳಲು ಹೊರಟ ಮಹಾಮೂರ್ಖ ನಾನು ಎಂದೆನಿಸಿತು. ನನ್ನ ಬಗ್ಗೆ ನನಗೆ ಅಸಹ್ಯವೆನಿಸುವಷ್ಟು ನಾಚಿಕೆಯಾಯಿತು, ಹಿಂಸೆ ಅನಿಸಿತು. ಮತ್ತೆ ಅವಳ ನೆನಪಿನ ಗುಂಗಿನಲ್ಲಿ ಒಂದು ಕ್ಷಣ ನನ್ನನ್ನೆ ಮರೆತೆ. ಕೈ ನನ್ನರಿವಿಗೆ ಬರದೆ, ನನ್ನ ಮೊಬೈಲ್ ಎತ್ತಿಕೊಂಡಿತು. ಮತ್ತೆ ಅವಳ ಮೆಸ್ಸೇಜ್‌ಗಳು. "ಎಲ್ಲಿದ್ದೀಯಾ, ಯಾಕೆ ಹಿಂಸೆ ಕೊಡುತ್ತಿದ್ದೀಯಾ, ಬೇಗ ಬಂದು ಬಿಡೊ ನನ್ನಲ್ಲಿ".

ಅವಳ ನಂಬರ್ ಅಮುಕಿ, ಅವಳಿಗೆ ಫೋನ್ ಕಾಲ್ ಮಾಡಿದೆ, "ಇಲ್ಲೆ, ನಿನ್ನ ಮನೆಯ ಎದುರುಗಡೆ ನಿಂತಿದ್ದೇನೆ, ಪ್ಲೀಸ್ ಹೊರಗೆ ಬಾ". ಇಷ್ಟೆ ಹೇಳಿ ಕಟ್ ಮಾಡಿದೆ. ಅದೇನೋ, ಅಸಹನೀಯವಾದ ತಪ್ಪಿತಸ್ಥ ಭಾವನೆ ನನ್ನನ್ನು ಕಾಡಲಾರಂಬಿಸಿತು. ಬಾಗಿದ ತಲೆ ಎತ್ತದೆ, ಅವಳು ನಡೆದು ಬರುವ ಶಬ್ದಕ್ಕಾಗಿ ಕಿವಿಯನ್ನು ಕಣ್ಣಾಗಿಸಿ ಕಾದೆ. ನಡೆದು ಬರುತ್ತಿಲ್ಲ, ಓಡೋಡಿ ಬರುತ್ತಿರುವ ಶಬ್ದ ಕಿವಿಗೆ ನಿಚ್ಚಳವಾಗಿ ಅಪ್ಪಳಿಸುತ್ತಿತ್ತು. ಬಳಿ ಬಂದವಳನ್ನು ಎದೆಗಾನಿಸಿಕೊಂಡೆ, ಅವಳ ಎದುರಿಸುವ ದೈರ್ಯವಿಲ್ಲದೆ, ಮುಖ ನೋಡುವುದನ್ನು ತಪ್ಪಿಸಿ. ತಲೆಯೆತ್ತಿ ನನ್ನತ್ತ ನೋಡಿದವಳ ಕಣ್ಣುಗಳ ನೋಡಲು ಭಯ!

"ಐ ಲವ್ ಯು ಅ ಲಾಟ್ ಕಣೆ ಅನಘ" ಎದೆಯಾಳದಿಂದ ಹೊರ ಬಂತು ನನ್ನ ದನಿ.
ಮುಂದುವರಿಸಿದೆ, "ಐ ಯಾಮ್ ವೆರಿ ವೆರಿ ಸಾರಿ ಕಣೆ, ನಿಂಗೆ ನೋವು ಮಾಡಿದಕ್ಕೆ, ನಿನ್ನ ನಿರ್ಲಕ್ಷಿಸಿದಕ್ಕೆ, ನಿನ್ನ ಪ್ರೀತಿಯನ್ನು ಅನುಮಾನಿಸಿದ್ದಕ್ಕೆ"
"ಬೇಡ, ಏನೂ ಮಾತನಾಡಬೇಡ" ಅವಳಂದಳು.
ಬಾಗಿ, ಅವಳ ಕೆನ್ನೆಗೊಂದು ಮುತ್ತನಿತ್ತೆ, ತುಟಿಗಳಿಗೆ ಆದ ಅನುಭವದಿಂದ ತಿಳಿಯಿತು, ಕೆನ್ನೆ, ಕಣ್ಣುಗಳು ಕಣ್ಣೀರಿನ ಕೊಳವಾಗಿಸಿದ್ದಳು ಇಲ್ಲಿಯ ತನಕವೆಂದು.
"ನಿನ್ನ ಮೀರಿದ ಬದುಕಿಲ್ಲ ಕಣೊ ನನಗೆ, ಬಿಟ್ಟು ಹೋಗಬೇಡ ನನ್ನ ಇನ್ನು ಮುಂದೆಂದು" ಬಿಗಿದಪ್ಪಿದಳು ನನ್ನ.
ಅವಳ ಬಿಗಿತವನ್ನು ಇನ್ನೂ ಬಿಗಿ ಮಾಡಿ, ಅವಳನ್ನು ಆಲಂಗಿಸಿ, ನನ್ನಲ್ಲಿ ಲೀನವಾಗಿಸಿಕೊಂಡೆ.
ನನ್ನ ತುಟಿಗಳಂಚಲಿ ತೃಪ್ತಿಯ ನಗು, ನನ್ನ ಪ್ರೀತಿಗೆ ಮರುಜನ್ಮವನಿತ್ತ ಖುಷಿಯಿಂದ.

-------------------

ದಿನಾಂಕ: ಜನವರಿ ೧೫, ೨೦೦೮