"ಪ್ರೇಮಾಂತರಂಗ"
(ಸಣ್ಣ ಕಥೆ)

ಡಾ. ಮೀನಾ ಸುಬ್ಬರಾವ್.

ಪ್ರೇಮಕ್ಕೆ ಎರಡು ಮುಖಗಳಿವೆಯೇ? ಇದ್ದರೆ, ಸಹನಾ ಮೌನವಾಗಿ ಒಂದೇ ಧಿಕ್ಕಿನಲ್ಲಿ ಹರಿಯುವ ಪ್ರೇಮದಿಂದ ಮಧುವನ್ನು ಪ್ರೀತಿಸಿದ್ದು "ಪ್ರೇಮಾಂತರಂಗವೇ"? ಅದು ಅನುಭವಿಸುವವರಿಗೆ ಮಾತ್ರ ಅರಿವಾಗುವುದೇ? ಪ್ರೇಮದ ೨- ಮುಖಗಳೂ ಬಹಳಷ್ಟು ಬಾರಿ ಬೇತಾಳದಂತೆ ಬರಡಾಗುವುದು, ಬೆಂಬೂತದಂತೆ ಕಾಡುವುದು ಒಂದು ಋಣ-ಆ-ಬಂಧನವಲ್ಲವೇ?----(ಋಣಾನುಬಂಧ ವಿಲ್ಲದಿರಲು).

ನನ್ನ ನೆನಪಿನ ಸುರಳಿ ಸಾವಕಾಶವಾಗಿ ಬಿಚ್ಚಿದಾಗ, ನನಗಾಯಿತು ರೋಮಾಂಚನ.!!!

ಸಹನಾ ನಮ್ಮೆಲ್ಲರಂತೆ (ನೂರು ವಿಧ್ಯಾರ್ಥಿಗಳಲ್ಲಿ ಒಬ್ಬಳಾಗಿ) ಮೆಡಿಕಲ್ ಕಾಲೇಜಿಗೆ ಮೊದಲನೇ ವರ್ಷದ ವಿಧ್ಯಾರ್ಥಿನಿಯಾಗಿ ಬಂದು ಸೇರಿದ್ದಳು. ಸಹನಾ ಬೆಂಗಳೂರಿನವಳು (ಒಂದು ರೀತಿಯಲ್ಲಷ್ಟೆ) ಹೆಸರಿಗಷ್ಟೆ. ಏಕೆಂದರೆ, ಸಹನಾ ಮನೆ ಬೆಂಗಳೂರಿನಲ್ಲಿದ್ದರೂ (ಅಪ್ಪ, ಅಮ್ಮ,ಅಣ್ಣ ಮತ್ತು ಅಕ್ಕ ರನ್ನೊಳಗೊಂಡ), ಸಹನಾ ಮಾತ್ರ ಬೆಳಗಾಮ್ ನ ಪ್ರಸಿದ್ಧ ಬೋರ್ಡಿಂಗ್ ಸ್ಕೂಲ್ ನಲ್ಲಿ ಓದಿದವಳು. ತುಂಬಾ ಸಣ್ಣ ತರಗತಿಯಲ್ಲಿದ್ದಾಗಲೇ ಅಂದರೆ ಪ್ರೈಮರಿ ಸ್ಕೂಲ್ ಮುಗಿಸಿದ ತಕ್ಷಣವೇ ಅವಳ ಅಪ್ಪ, ಅಮ್ಮ ಅವಳನ್ನು ಬೋರ್ಡಿಂಗ್ ಸ್ಕೂಲ್ ಗೆ ಹಾಕಿದ್ದರು. ಪಿ.ಯು.ಸಿ. ಮುಗಿದ ಮೇಲೆ ನೇರವಾಗಿ ಮೆಡಿಕಲ್ ಕಾಲೇಜ್ ಗೆ ಬಂದು ಸೇರಿದ್ದಳು. "ಅವಳ ಬೋರ್ಡಿಂಗ್ ಸ್ಕೂಲ್ ಸಾಕಷ್ಟು ಸ್ಟ್ರಿಕ್ಟ್ ಇತ್ತಂತೆ, ಹುಡುಗಿಯರದಷ್ಟೇ ಆಗಿದ್ದರಿಂದ ಹುಡುಗರ ಸುಳಿವೇ ಇರಲಿಲ್ಲವಂತೆ, ಓದಾಯಿತು ಅವರಾಯಿತಂತೆ, ಇನ್ನೇನೂ ಹೇಳಕ್ಕೆ, ಕೇಳಕ್ಕೆ ವಿಷಯವೇ ಇರಲಿಲ್ವಂತೆ" ಹೀಗೆ ಸಹನಾ ಹೇಳುತ್ತಿದ್ದಾಗ, ನಾವೆಲ್ಲಾ ಕಥೆಯನ್ನು ಕೇಳುವಂತೆ ತುಟಿಕ್ ಪಿಟಿಕ್ ಅನ್ನದೆ ಕೇಳುತ್ತಿದ್ದೆವು. ಇದನ್ನು ಕೇಳಿದ ತಕ್ಷಣ ನನಗೆ "ಜೈಲಿಗೆ ಹೋದಂತಾಗಿತ್ತು" ಸ್ವಲ್ಪ ಹೊತ್ತು. ಅದಕ್ಕೇ ಇರಬೇಕು, ಹುಡುಗರನ್ನು ನೋಡಿದಾಗಲೆಲ್ಲ ಒಂದು ತರಹ ಎಕ್ಸೈಟ್ ಆಗುತ್ತಿದ್ದಳು ಸಹನಾ ಮೊದಲ (ಮೆಡಿಕಲ್ ಕಾಲೇಜ್) ವರ್ಷದಲ್ಲಿ.

ಎರಡನೇ ವರ್ಷದಲ್ಲಿ ಸಹನಾ ಮೌನವಾಗಿ ಹುಡುಗನೊಬ್ಬನನ್ನು (ನಮಗೆಲ್ಲಾ ಒಂದು ವರ್ಷ ಸೀನಿಯರ್ ಆಗಿದ್ದ) ಪ್ರೀತಿಸತೊಡಗಿದಳು. ಇದೊಂದು ಒಂದೇ ಧಿಕ್ಕಿನಲ್ಲಿ ಹರಿಯುವ ಪ್ರೇಮವಾಗಿದ್ದರಿಂದ (ವಿಶೇಷ ಒಲವು) ನಮ್ಮ ತರಗತಿಯಲ್ಲಿ ಎಲ್ಲರಿಗೂ ಈ ವಿಷಯ ತಿಳಿಯದಿರುವುದು ಸಹನಾಳಿಗೆ ಒಂದು ರೀತಿಯಲ್ಲಿ ಸಹಾಯವಾದಂತಿತ್ತು. ಸಹನಾ ಹಾಸ್ಟೆಲ್ ನಲ್ಲಿದ್ದರಿಂದ ಅವಳ ರೂಮ್ ಮೇಟ್ಸ್ ಮತ್ತು ಇತರ ಹತ್ತಿರದ ಸ್ನೇಹಿತೆಯರಿಗೆ ಮಾತ್ರ ಇದರ ಅರಿವಿತ್ತು. ನಾನು ಕಾಲೇಜಿನಲ್ಲಿ ಮಾತ್ರ ಅವಳನ್ನು ಭೆಟ್ಟಿಯಾಗುತ್ತಿದ್ದರಿಂದ ನನಗೆ ಇವಳ ಪ್ರೇಮ ಪರಾಗ ತಿಳಿಯುವ ಹೊತ್ತಿಗೆ ನಾವೆಲ್ಲಾ ೩-ನೇ ವರ್ಷದಲ್ಲಿದ್ದೆವು. ಸಹನಾ ತುಂಬ ಬುದ್ಧಿವಂತ ಹುಡುಗಿ, ಎಲ್ಲಾ ವಿಷಯದಲ್ಲೂ ಮೆಚೂರಿಟಿ ಕಂಡರೂ, ಈ ಪ್ರೇಮಲೋಕದಲ್ಲಿ ಸ್ವಲ್ಪ ಚಿಂತನೆ ಕಡಿಮೆ ಇದ್ದಂತಿತ್ತು. ಸಹನಾ ಬಲು ಚೆಲುವೆಯಲ್ಲದಿದ್ದರೂ, ಒಳ್ಳೆಯ ಎತ್ತರ, ಮೀಡಿಯಮ್ ಕಾಮ್ಪ್ಲೆಕ್ಶನ್ ಮತ್ತು ಗುಂಗುರು ಕೂದಲು ಹೊತ್ತು, ನನ್ನ ಅಭಿಪ್ರಾಯದಮೇರೆಗೆ ಯಾರನ್ನಾದರೂ ಆಕರ್ಷಿಸುವ ನೋಟ ಇವಳಿಗಿತ್ತು. ತುಂಬಾ ಟ್ಯಾಲೆಂಟೆಡ್ ಹುಡುಗಿ ಕೂಡಾ, ಡ್ರಾಯಿಂಗ್, ಪೈಂಟಿಂಗ್ ಮಾಡುವುದಷ್ಟೇ ಅಲ್ಲಾ ಬರಹಗಾರ್ತಿಯೂ ಆಗಿದ್ದಳು. ಸಿನಿಮಾ ನೋಡುವುದು ಇವಳಿಗೊಂದು ದೊಡ್ಡ ಹಾಬಿಯಾಗಿತ್ತು. ಬೆಳಗಾಮ್ ಬದುಕಲ್ಲಿ ಸಿನಿಮಾಕ್ಕೆ ಕಾಲಿಡದಿದ್ದು ಈಗ " ನೀರಿಗೆ ಫ್ಲಡ್ ಗೇಟ್ಸ್ ಓಪನ್" ಆದಂತಾಗಿತ್ತು ಸಿನಿಮಾ ನೋಡುವುದು. ನಾನೂ ಸಹನಾಳ ಜೊತೆ ಒಂದೆರಡು ಸಿನಿಮಾ ನೋಡಿದಾಗಲೇ ನನಗೆ ಅವಳ ಪ್ರೇಮದ ಪರಿಮಳ ಪರಿಚಯವಾಗಿದ್ದು.

ಸಹನಾ ಪ್ರೇಮಿಸುತ್ತಿದ್ದ ಹುಡುಗ, ಮನ್ಮಥ ನಂತೆ ರೂಪವಿದ್ದು (ಮನ್ಮಥನ ನಾನು ನೋಡಿದ್ದೆಲ್ಲಿ? ಅಂತ ಕೇಳಬೇಡಿ, ನಾನೂ ನಿಮ್ಮಂತೆಯೇ ಓದಿ ತಿಳಿದಿದ್ದೆ ಅವನ ರೂಪವನ್ನು. ಆದರೆ, ಅದನ್ನು ಮಧುಕೇಶ್ ನಲ್ಲಿ ನೋಡಿದ್ದೆವು), ಸಾಕ್ಷಾತ್ ಕೃಷ್ಣ ಪರಮಾತ್ಮನಂತೆಯೇ ಹುಡುಗಿಯರೆಲ್ಲರ ಮನಸೆಳೆದಿದ್ದ "ಮಧುಕೇಶ್". ಮಧುಗೆ ಸಹನಾಳ ಪ್ರೇಮದ ತಿಳುವಳಿಕೆಯಾಗಲು ಬಹಳ ದಿನ ಬೇಕಾಗಿರಲಿಲ್ಲ. ಆದರೂ, ಇದೊಂದು ವಿಚಿತ್ರ ಒಲವಾಗಿದ್ದರಿಂದ (ಒಂದೇ ಧಿಕ್ಕಿನಲ್ಲಿ ಹರಿಯುವ ಪ್ರೇಮ), ಸಹನಾಳಿಗೆ ಮಧುವಿಂದ "ಯೆಸ್ ಆಗಲಿ ಅಥವಾ ನೋ ಆಗಲಿ" ಯಾವ ಉತ್ತರವೂ ಸಿಗುತ್ತಿರಲಿಲ್ಲ. ( "ನಿನ್ನ ಒಗಟಿಗೇ ಉತ್ತರ ಕೊಡುವೆ ಬಾರೆ ಹತ್ತಿರ" ಎಂದು ಮಧು ಹಾಡಲೇ ಇಲ್ಲಾ.) ಇದರಿಂದ ಬರಡಾಗಬೇಕಾಗಿದ್ದ ಪ್ರೀತಿ, ಪ್ರೇಮ ಭಲವಾಗಿದ್ದು ನನಗೆ ಇಂದಿಗೂ ಬಿಡಿಸಲಾಗದ "ಚಾಲೆಂಜಿಂಗ್ ಸೈಕಲಾಜಿಕಲ್ ಒಗಟಾಗಿರುವುದು" ಈಗ ಬೇಡವಾದ ಬೇರೆಯ ವಿಷಯ.

ಹೀಗೇ ಒಂದು ದಿನ, ಕ್ಯಾಂಟೀನ್ ನಲ್ಲಿ ಕಾಫಿ ಸೇವನೆಯಾಗುತ್ತಿತ್ತು. ನಾವು ಐದು ಸ್ನೇಹಿತೆಯರು ಮೇಜಿನ ಸುತ್ತ ಕುಳಿತು ಮಾತಾಡುತ್ತಿದ್ದೆವು. ಏನೋ ಪಾಠದ ವಿಷಯ ಮಾತಾಡುತ್ತಿದ್ದೆವಾದರೂ, ಸಹನಾ ಸಡನ್ ಆಗಿ "ನೋಡ್ರೇ, ಅವನೂ ಬಂದಿದ್ದಾನೆ ಕ್ಯಾಂಟೀನ್ ಗೆ, ಕಿಟಕಿಯ ಬಳಿ ಇರುವ ಕುರ್ಚಿಯಲ್ಲಿ ಕುಳಿತು ಕಿಟಕಿಯ ಹೊರಗೆ ನೋಡುತ್ತಿದ್ದಾನೆ. ಎಷ್ಟು ಸುಂದರವಾಗಿದ್ದಾನಲ್ವಾ? ಭಾವನಾತ್ಮಕನಾಗಿ ಯೋಚನಾಲಹರಿಯಲ್ಲಿ ಇನ್ನಷ್ಟು ಹ್ಯಾಂಡ್ ಸಮ್ ಆಗಿ ಕಾಣಿಸುತ್ತಿದ್ದಾನೆ." ಎಂದಳು. ಬೇರೇ ಸ್ನೇಹಿತೆಯರು "ಸದಾಶಿವಂಗೆ ಅದೇ ಧ್ಯಾನ ಅಂತೆ" ಅಂದು ಅವರವರ ಮಾತುಗಳನ್ನು ಮುಂದುವರೆಸಿದರು. ನಾನು ಮನಸ್ಸಿನಲ್ಲಿ "ಅಜ್ಜಿಗೆ ಅರಿವೆ ಚಿಂತೆ ಮಗಳಿಗೆ ಮಿಂಡನ ಚಿಂತೆ" ಅಂದು ಕೊಂಡು ಸಹನಾಳ ಮೇಲೆ ಒಂದು ತರಹ ಅನು
ಕಂಪ ತೋರಿಸುತ್ತಾ, " ಎಷ್ಟು ಸುಂದರವಾಗಿದ್ದರೇನು ಲಾಭ? ನಿನ್ನನ್ನು ತಲೆ ಎತ್ತಿಕೂಡಾ (ಒಂದು ಸಲವಾದರೂ) ನೋಡುತ್ತಿಲ್ಲವಲ್ಲಾ?" ಎಂದು, ಸಹನಾಳ ಪ್ರತಿಕ್ರಿಯೆಗಾಗಿ ಕಾದು ಅವಳಕಡೆ ನೋಡಿದೆ. "ಯಾವ ರೀತಿಯ ನಿರಾಸೆಯೂ ಕಾಣಿಸಲಿಲ್ಲ. ಆಶ್ಚರ್ಯದಿಂದ " ಮಧು ಬೇರೇ ಯಾರನ್ನೋ ಪ್ರೀತಿಸುತ್ತಿರಬೇಕು, ನಿನ್ನ ಹೃದಯದಿಂದ ಅವನಿಗೆ ಕೊಟ್ಟ ಜಾಗವನ್ನು ಖಾಲಿಮಾಡು, ನಿನ್ನ ಹೃದಯ ಹಗುರಾದೀತು" ಎಂದೆ.

ಸಹನಾ ಆರಾಮವಾಗಿ ನಗುತ್ತಾ "ಏನಮ್ಮಾ, ಏನೋ ವೇದಾಂತ ಹೇಳುತ್ತಿದ್ದೀಯಾ ? ವೇದಾಂತ ಸೊಸೈಟಿಗೆ ಹೋಗೋದು ಬಿಟ್ಟು ಇನ್ನೂ ಇಲ್ಲೇ ಮೆಡಿಕಲ್ ಕಾಲೇಜ್ನಲ್ಲಿ ಕಂಟಿನ್ಯೂ ಮಾಡುತ್ತಿದ್ದೀಯಾ? " ಎಂದು, ಸೀರಿಯಸ್ ವಿಷಯಕ್ಕೆ ಹಗುರಾದ ಉತ್ತರದಿಂದ ಉತ್ತರಿಸಿದ್ದಳು. (ಇವಳಿಗೆಲ್ಲೋ ಪ್ರೀತಿ, ಪ್ರೇಮದ ಹುಚ್ಚು ಹಿಡಿದುಬಿಟ್ಟಿದೆ, ಮದುವೆ ಹುಚ್ಚು ಅಂತ ಹೇಳುವುದು, ಅಷ್ಟು ಸೂಕ್ತವಾಗಿ ಕಾಣಿಸುತ್ತಿಲ್ಲ ಎಂದುಕೊಂಡು)

" ನಾ ಏನೋ ಹೇಳಿದರೆ, ನೀನೇನೋ ಹೇಳ್ತೀಯಲ್ಲಾ, "ಉಂಡ್ಯೇನೋ ಗುಂಡ ಅಂದರೆ, ಮುಂಡಾಸ್ ಮೂವತ್ತು ಮೊಳ ಅಂದನಂತೆ" ಹಾಗಾಯಿತು ನಿನ್ನ ಸಮಾಚಾರ ಅಂದೆ. ಸಹನಾ ನಕ್ಕು "ಥ್ಯಾಂಕ್ಸ್ ಫಾರ್ ದ ಪ್ರಾವರ್ಬ್" ಎಂದು ಅದಕ್ಕೆ ಸಮನಾದ ಇಂಗ್ಲೀಷ್ ಪ್ರಾವರ್ಬ್ ಯೋಚಿಸುತ್ತಿದ್ದಳು. ( ಸಹನಾ ಮೊದಲಿಂದ ಇಂಗ್ಲೀಷ್ ಓದಿದ್ದರಿಂದ, ಅವಳ ಬರವಣಿಗೆ ಎಲ್ಲಾ ಇಂಗ್ಲೀಷ್ ನಲ್ಲೇ ಇರುತ್ತಿತ್ತು, ಆದರೂ ಕನ್ನಡದ ಮೇಲೆ ಸಾಕಷ್ಟು ಒಲವಿತ್ತು.)

ನಾನು: "ಸಹನಾ, ಪ್ಲೀಸ್ ಕಮ್ ಟು ದ ಪಾಯಿಂಟ್, ನೀನಾಗೇ ವೇದಾಂತ ಸೊಸೈಟಿ ಗೆ ಹೋಗಿ ಲೆಕ್ಚರ್ ಕೇಳಲ್ಲಾ, ಅವರಾಗೇ ನಮ್ಮಂತಹ ಕಾಲೇಜ್ ಗೆ ಬಂದು, ಲೆಕ್ಚರ್ ಕೊಡೋಲ್ಲಾ. ಹಾಗಿರುವಾಗ, ನಿನ್ನ ಈ ಪುಳಕಗೊಳ್ಳುವ ಸಮಸ್ಯೆಯನ್ನು ಕೇಳಿದ ಮೇಲಾದರೂ, ಯಾರಾದರೂ ಒಂದಿಷ್ಟು ಕ್ಲಾಸ್ ತಗೊಳ್ಳಲೇ ಬೇಕಲ್ವೇ?" ಎಂದೆ.

ಸಹನಾ: (ನಕ್ಕು) "ನಿನಗೆ ಪ್ರೇಮಿಸುವುದರ ವಿಷಯದಲ್ಲಿ ಎಷ್ಟು ಅನುಭವ ಇದೇ ಅಂತ ಯಾವ ಆಧಾರದ ಮೇಲೆ ನಿನ್ನ ಈ ಉಪದೇಶನ ನಂಬಿ ಸ್ವೀಕರಿಸಲಿ? ನೀನು ಯಾವತ್ತಾದರೂ ಯಾರನ್ನಾದರೂ (ಹುಡುಗರನ್ನು) ಪ್ರೇಮಿಸಿದ ಅನುಭವ ಇದೆಯಾ ಹೇಳು? " ಎಂದಳು.

ಸಹನಾಳ ಮಾತು ಕೇಳಿ ನನಗೆ ಜೋರಾಗಿ ನಗಬೇಕೆನಿಸಿತು, ಸೀರಿಯಸ್ ಆಗಿದ್ದವಳು, ನಗುತ್ತಾ ಹೇಳಿದೆ: "ನೀನು ಹೇಳೋದೆಲ್ಲಾ ಸರಿಯಾಗೇ ಇದೆ. ನಾನು ಪ್ರೈಮರಿ ಸ್ಕೂಲ್ ನಿಂದ ಇದುವರೆಗೆ ಕೋ-ಎಜುಕೇಶನ್ ನಲ್ಲಿ ಓದಿ, ಎಲ್ಲೆಲ್ಲೂ ಹುಡುಗರ ಅಕ್ಕ-ಪಕ್ಕ ಬೆಳೆದು ಬಂದಿದ್ದೇನೆ. ಅದಕ್ಕೆ ಸಾಲದು ಅಂತ ನಮ್ಮ ಡಿಸೆಕ್ಶನ್ ಟೀಮ್ ನಲ್ಲಿ ಹತ್ತು ಜನರಿದ್ದರೂ, ನಾನೊಬ್ಬಳೇ ಹುಡುಗಿ ಬೇರೆ. ನನಗೆ ಹುಡುಗರನ್ನು ನೋಡಿದರೆ, ಏನೋ ಒಂದು "ಹಿತವಾದ ಸ್ನೇಹ" ತಕ್ಷಣ ಮನಸ್ಸಿಗೆ ಬಂದಿದೆಯೇ ಹೊರತು, ನಿನ್ನ ತರಹ "ಪ್ರೇಮ ಪರಾಗ" ಪಸರಿಸಿಲ್ಲ. ಅದೂ ಅಲ್ಲದೇ "ಒಂದೇ ಧಿಕ್ಕಿನ ಈ ಮೌನ ಪ್ರೇಮ-ಪ್ರೇಮಾಂತರಂಗ" ಇದುವರೆಗೆ ಹುಟ್ಟೇ ಇಲ್ಲ. " (ಇದು ಒಂದು ವಿಧದಲ್ಲಿ ಒಳಿತೇ ಆಗಿತ್ತು, ೩-ಜನ ಅಕ್ಕ, ಒಬ್ಬ- ಅಣ್ಣ ರನ್ನು ಹೊಂದಿದ್ದ ನನಗೆ ಮೆಡಿಕಲ್ ಕಾಲೇಜಿನಲ್ಲಿ "ಪ್ರೇಮ ಪಂಜರದಲ್ಲಿ" ಸಿಕ್ಕಿ " ಬಿಸಿ ತುಪ್ಪ ನುಂಗೋಕ್ಕು ಆಗೋಲ್ಲಾ, ಉಗಿಯಕ್ಕೂ ಆಗೋಲ್ಲಾ" ಅನ್ನೋತರಹ ಪರಿಸ್ಥಿತಿಗೆ ಅವಕಾಶವಿರಲಿಲ್ಲ).

ಸಹನಾ: " ಸರಿ, ನಿನ್ನ ಪಾಸ್ಟ್ ಅಂಡ್ ಪ್ರಸಂಟ್ ಹಿಸ್ಟರಿ ಎಲ್ಲಾ ಗೊತ್ತಾಯಿತು, ಈಗ ಫಿಸಿಕಲ್ ಎಕ್ಸಾಮ್ ಮಾಡೋಣ ಬಾ, ಡಾ. ರಾಮಚಂದ್ರ ರಾವ್ ಕಾಯ್ತಾ ಇದಾರೆ, ಕ್ಲಿನಿಕಲ್ ಡಿಸ್ಕಶನ್ ಆನ್ ದಟ್ ಕೇಸ್ ೨-ಗಂಟೆಗೆ. ಇನ್ನೊಂದ್ ಸಲ ಸಿಕ್ಕಾಗ ವಿವರವಾಗಿ ಮಾತಾಡೋಣ." ಅಂತ ಹೇಳಿ ಮಧುವಿನ ಹಿಂದೆ ಓಡಿದ್ದಳು.

ನಮ್ಮ ಮಾತುಕತೆಗೆ ಕಡಿವಾಣ ಬಿದ್ದಿದ್ದು ನನ್ನ ಮನಸ್ಸಿಗೆ ಸಮಾಧಾನವಾದರೂ, ಅದು ಸಹನಾ ಮತ್ತು ಮಧುವಿನ ಪ್ರೇಮ ಸೌರಭವನ್ನು ಮೆಲುಕು ಹಾಕುತ್ತಿತ್ತು. "ಈ ಪ್ರೇಮಾಂತರಂಗವು" ಇದೇ ವೇಗದಲ್ಲಿ ಮುಂದುವರೆದರೆ, ಮುಂದೇನು ಗತಿ? ಒಂದಲ್ಲಾ ಒಂದು ದಿನಾ( ಎಂದಾದರೂ), ಸಹನಾ ಮಾನಸಿಕವಾಗಿ ನಿಶ್ಯಕ್ತಳಾಗಿ, ಭಗ್ನಪ್ರೇಮಿಯಂತೆ ಅವಳ ಜೀವನವನ್ನು ಹಾಳುಮಾಡಿಕೊಂಡರೆ? ಅಥವಾ ಬಾಳನ್ನು ಕೊನೆಗೊಳಿಸಲು ಆತ್ಮಹತ್ಯೆಗೆ ಪ್ರಯತ್ನಿಸಿದರೆ?" ಎಂಬುದು ಬೆಂಬೂತದಂತೆ ಕಾಡತೊಡಗಿತು. ನನ್ನ ಮತ್ತು ಸಹನಾಳ ಗೆಳತಿ, ಗೆಳೆಯರು ನನ್ನ ಈ ಕಾಳಜಿಗೆ ಮೂಗು ಮುರಿದು "ಈ ವಿಷಯಾನ ಸಹನಾಳ ಅಪ್ಪ, ಅಮ್ಮ ಅವಲೋಕಿಸಿ ಆಲೋಚಿಸಬೇಕು. ಅದುಬಿಟ್ಟು, ನಿನಗ್ಯಾಕೆ ಅವಳ ಈ ವಿಷಯದಲ್ಲಿ ಅವಳಿಗಿಂತ ಆತಂಕ?" ಎಂದು ನನ್ನ ಬಾಯಿ ಮುಚ್ಚಿಸಿದರು.

ಸಹನಾ ಇತ್ತೀಚೆಗೆ ಶನಿವಾರ ಭಾನುವಾರದ ರಜೆದಿನಗಳಲ್ಲಿ (ಮೊದಲಿನಂತೆ) ಬೆಂಗಳೂರ್ ಗೆ ಹೋಗುವುದನ್ನು ಸಂಪೂರ್ಣ ನಿಲ್ಲಿಸಿದ್ದರಿಂದ, ಅವಳ ಅಪ್ಪ ಅಮ್ಮನೂ ಮೈಸೂರ್ ಗೆ ಬಂದು ಹೋಗುತ್ತಿರಲಿಲ್ಲವಾದರಿಂದ ಅವರಿಗೆ ಈ ವಿಷಯ ತಿಳಿಯುವ ಅವಕಾಶವು ಕಲ್ಪಿಸಿಯೇ ಇರಲಿಲ್ಲ. ಸಹನಾ ಎಲ್ಲಾ ಪರೀಕ್ಷೆಗಳಲ್ಲೂ ಉತ್ತೀರ್ಣಳಾಗುತ್ತಿದ್ದರಿಂದ ಅವಳ ಅಪ್ಪ ಅಮ್ಮಂದಿರಿಗೆ ಯಾವುದೇ ವಿಷಯದಲ್ಲಿ ಅನುಮಾನ ಬರದೇ ಇದ್ದಿದ್ದು, ಸಹನಾಳಿಗೆ ಅನುಕೂಲವಾದಂತ್ತಿತ್ತು. ನಾನು ಸಹನಾಳ "ಪ್ರೇಮ ಸಂಭಂಧ" ದಲ್ಲಿ ಅನುಕಂಪ ತೋರಿಸಿದ್ದರಿಂದಲೋ ಏನೋ, ನನಗೆ ಸಿಕ್ಕಾಗಲೆಲ್ಲ ಸಹನಾ ಅವಳ ಪ್ರೇಮ ದ ವಿಷಯವನ್ನು ಸ್ವಲ್ಪ ಹೊತ್ತಾದರೂ ಮಾತನಾಡಿ ಆಗು ಹೋಗುಗಳನ್ನು ಅರುಹಿ ವಿಷಯವನ್ನು ವರ್ತಮಾನದಲ್ಲಿರಿಸುತ್ತಿದ್ದಳು. ನಮ್ಮ ಮತ್ತು ಮಧುವಿನ ಕ್ಲಾಸ್ ನಲ್ಲಿ ಎಲ್ಲರಿಗೂ ಈಗ ವಿಷಯ ತಿಳಿದು, ಒಂದು ರೀತಿಯ ಕುತೂಹಲ ಕುದುರಿತ್ತು "ಯಾವ ರೀತಿ ಕೊನೆಗೊಳ್ಳಬಹುದು ಈ ಒನ್ ವೇ ಟ್ರಾಫಿಕ್ಕಿಂಗ್ ಲೌ? ಮೆಡಿಕಲ್ ಡಿಗ್ರೀ ಮುಗಿಯುವ ಹೊತ್ತಿಗೆ? ಮದುವೆಯೋ?, ಇಲ್ಲಾ ಮಸಣವೋ?" ಎಂಬಂತಿತ್ತು.

ನನಗೆ ಮಧುವಿನ ಪರಿಚಯ ಅಷ್ಟಾಗಿ ಇರಲಿಲ್ಲ. ("ಬುದ್ಧಿವಂತ, ಸುಂದರಾಂಗ, ಎಲ್ಲದರಲ್ಲೂ ತೊಡಗಿಸಿಕೊಂಡಿದ್ದರಿಂದ ಕಾಲೇಜ್ ನಲ್ಲಿ ಎಲ್ಲರಿಗೂ ಅವನ (ಒಂದು ರೀತಿಯ) ಪರಿಚಯ ಇತ್ತು".) ಆದರೂ, ಒಂದು ಸಲ ನೇರವಾಗಿ ಅವನನ್ನು ಮಾತನಾಡಿಸಿ, ನನ್ನ ಸ್ನೇಹಿತೆ ಸಹನಾ ಬಗ್ಗೆ ಅವನಿಗಿರುವುದು ಪ್ರೇಮವೋ?, ಅನುಕಂಪವೋ, ಸ್ನೇಹವೋ?, ಅನುಮಾನವೋ? " ಅಂತ ಕೇಳಬೇಕೆನಿಸಿತು. ಅದಕ್ಕೆ ಒಂದು ಉಪಾಯವೂ ಹೊಳೆಯಿತು. ನನ್ನ ಡಿಸೆಕ್ಶನ್ ಟೀಮ್ ನಲ್ಲಿದ್ದ ೯-ಜನ ಹುಡುಗರಿಗೂ ನನ್ನ ಕಂಡರೆ ಗೌರವ ಮತ್ತು ಅಭಿಮಾನ ಇತ್ತು. ನಾನು ಏನು ಕೆಲಸ ಹೇಳಿದ್ದರೂ, "ಇಲ್ಲ" ಅನ್ನುತ್ತಿರಲಿಲ್ಲ. ನಮ್ಮ ಟೀಮ್ ನ ನರೇಶ್ ಮತ್ತು ಮಧು ಹಾಸ್ಟಲ್ ನಲ್ಲಿ ಅಕ್ಕಪಕ್ಕದ ರೂಮ್ ನಲ್ಲಿದ್ದು, ಇಬ್ಬರ ನಡುವೆ ಸ್ನೇಹವೂ ಇತ್ತು. ಹಾಗಾಗಿ ನರೇಶನಿಗೆ ಸೂಕ್ಷ್ಮವಾಗಿ ಮಧುವಿನ ಮೇಲೆ ಮಾಹಿತಿಯನ್ನು ಸಂಗ್ರಹಿಸಲು ಹೇಳಿದೆ. ನನಗಾದ್ದರಿಂದ "ಆಗಲಿ" ಎಂದು " ನೀನು ಸಹನಾಳ ಲೊಕಲ್ ಗಾರ್ಡಿಯನ್ ಆಗಿರುವಂತಿದೆ, ನನಗೂ ಸ್ವಲ್ಪ ಆ ತರಹ ಸರ್ವೀಸಸ್ ಬೇಕು, ಬೇಕಾದರೆ ಸ್ವಲ್ಪ ಅಡ್ವಾನ್ಸ್ ಕೊಡುತ್ತೇನೆ" ಎಂದು ಗೇಲಿ ಮಾಡಿದ.

ಹೀಗೇ ದಿನಗಳು ಉರುಳಿದವು! ಸಹನಾಳ ಪ್ರೇಮ ಮಾತ್ರ ಹಸಿರಾಗೇ ಇತ್ತು. ಚೆನ್ನಾಗಿ ಪೋಷಿಸುತ್ತಿದ್ದಳು.

ಹೀಗೇ ಒಂದು ದಿನ ನಮ್ಮ ವಾರ್ಷಿಕ ಸಂಚಿಕೆ ಯನ್ನು ಓದುತ್ತಿದ್ದೆ. ಕೆಲವೊಮ್ಮೆ ಡಾ. ಅನುಪಮಾ ನಿರಂಜನ ಅವರ ಕಥೆಗಳು ಇರುತ್ತಿದ್ದವು. ( ಡಾ. ಅನುಪಮಾ ನಿರಂಜನ, ಮೈಸೂರ್ ಕಾಲೇಜ್ ನ ಹಳೆಯ ವಿಧ್ಯಾರ್ಥಿನಿ ಹಾಗೂ ಹೆಸರು ಮಾಡಿದ ಸಾಹಿತಿ). ನನಗೆ ಅವರ ಕಥೆ ಓದುವುದು ತುಂಬಾ ಸ್ವಾರಸ್ಯಕರವಾಗಿತ್ತು. ಸಂಚಿಕೆಯ ಪುಟ ತಿರುವಿ ಹಾಕುವಾಗ ಮಧು ಬರೆದ ಒಂದು ಆರ್ಟಿಕಲ್ ಇಂಗ್ಲೀಷ್ ಸೆಕ್ಶನ್ ನಲ್ಲಿ ಇತ್ತು. ಅದನ್ನೂ ಓದಿದೆ, ಅವನು " ಹಣ, ಹೆಂಡ, ಹೆಣ್ಣು ಮತ್ತು ನಾನು" ಎಂಬ ಆರ್ಟಿಕಲ್ ಅನ್ನು ಇಂಗ್ಲೀಷ್ ನಲ್ಲಿ ತುಂಬಾ ಕುತೂಹಲಕಾರಿಯಾಗಿ ಬರೆದಿದ್ದ. ಇದರಲ್ಲಿ ಹಾಲಿವುಡ್ ಮೂವೀಸ್, ಸ್ಟಾರ್ಸ್ ಬಗ್ಗೆ ಉತ್ಪ್ರೇಕ್ಷೆ ಯೂ ಇತ್ತು. ಅದಿಲ್ಲದೇ ಹೇಗೆ ಸಾಧ್ಯ? ಈ ಮೂರೂ ವಸ್ತುಗಳು ಒಟ್ಟಿಗೇ ಸಿಗುವ ಸ್ಥಳ ಅಂದರೆ ಹಾಲಿವುಡ್ ಅಲ್ಲವೇ "ಶಬ್ದಕೋಶ" ವನ್ನು ಬಿಟ್ಟರೆ?. ಇಷ್ಟೆಲ್ಲಾ ಬರೆದವನು ಸಹನಾಳನ್ನು ತಲೆ ಎತ್ತಿ ಕೂಡಾ ನೋಡದಿರುವುದಕ್ಕೆ ಕಾರಣ ಯೋಚಿಸಿದರೂ ಸಿಗಲಿಲ್ಲ. ನಂತರ ಹೀಗೆನಿಸಿತು "ಮಧು ಗೆ ಅಮೇರಿಕಾಕ್ಕೆ ಹೋಗುವ ಹಂಬಲ, ಅಲ್ಲಿ ಓದು ಮುಂದುವರೆಸಿ ಅಲ್ಲೇ ನೆಲಸುವ ಆಸೆ ಭಲವಾಗಿರಬೇಕು" ಅದಕ್ಕೇ ಸಹನಾಳನ್ನು ಕಂಡರೆ ಈ ರೀತಿಯ ಪ್ರತಿಕ್ರಿಯೆ".

ಇವುಗಳ ಮಧ್ಯೆ ಕಾಲ ಹೋಗಿದ್ದು ತಿಳಿಯದಾಗಿತ್ತು.

ನಾವೆಲ್ಲಾ ೪-ನೇ ವರ್ಷದಲ್ಲಿದ್ದೆವು. ಸಹನಾ ನನ್ನ ಜೊತೆ ಆಫ್ತಲ್ಮಾಲಜಿ ರೊಟೆಶನ್ ಮಾಡುವಾಗ, ಕಾಲಾವಕಾಶ ಇದ್ದಿದ್ದರಿಂದ ಅವಳನ್ನು ಭೆಟ್ಟಿ ಮಾಡಿ ಮಾತಾಡಲು ಪ್ರಸ್ಥಾಪಿಸಿದೆ.

ನಾನು: "ಹೇಗಿದೆ ನಿನ್ನ ಪ್ರೇಮ ಸಾಗರ? ಏನಾದರೂ ಬದಲಾವಣೆ ಆಗಿದೆಯಾ?" ಎಂದೆ.

ಸಹನಾ: "ಬದಲಾವಣೆ ಅವನ ಕಡೆಯಿಂದ ಏನೂ ಇಲ್ಲ. ಆದರೆ, ನನ್ನ ಕಡೆಯಿಂದ ಇನ್ನಷ್ಟು ಭಲವಾಗಿದೆ" ಎಂದಳು.

ನಾನು: ("ಅಯ್ಯೋ ಹುಚ್ಚೀ" ಎಂದು ಹೇಳಬೇಕೆನಿಸಿದರೂ ತಡೆದು,) ನನಗೊಂದು ಪ್ರಶ್ನೆ ಇದೆ, ನಿನ್ನ ಈ ಮೌನ ಪ್ರೇಮ ಭಲ

ವಾಗುವುದಕ್ಕೆ ಇನ್-ಸೆಂಟೀವಾದರೂ ಏನು?" ಏಂದೆ.

ಸಹನಾ: ಅಯ್ಯೋ ಹುಚ್ಚೀ, "ಯಾವುದು ಮನಸ್ಸಿಗೆ ಉತ್ಸಾಹ, ಸಂತೋಷ ತರುವುದೋ, ಅದನ್ನು ಸಹಜವಾಗಿ ಹುಡುಕಿಕೊಂಡು ಹೋಗತ್ತೆ ಆ ಮನಸ್ಸು. ಇದು ನನ್ನ ಮನಸ್ ಅಷ್ಟೇ ಅಲ್ಲಾ, ಮಾನವ ಮನಸ್ಸಿನ ಸಹಜವಾದ "ಮನೋ ಪ್ರವೃತ್ತಿ" (ಮನುಷ್ಯ ಪ್ರವೃತ್ತಿ) ಮತ್ತು ಮಮಕಾರವೂ ಹೌದು". ಕುವೆಂಪು ರಚಿಸಿರುವ ಕವಿತೆ (ಹಾಡು) ಕೇಳಿಲ್ವಾ,?

"ತನುವು ನಿನ್ನದು, ಮನವು ನಿನ್ನದು,--ಎನ್ನ ಜೀವನ ಧನವು ನಿನ್ನದು,-- ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೆ ನನ್ನದು,-- ನೀನು ಹೊಳೆದರೆ, ನಾನು ಹೊಳೆವನು,-- ನೀನು ಬೆಳೆದರೆ, ನಾನು ಬೆಳೆವೆನು--" ಮೈಸೂರ್ ಅನಂತ ಸ್ವಾಮಿ (ಧ್ವನಿಯಲ್ಲಿ) ಗಾಯನದಲ್ಲಿ ಇನ್ನೂ ಚೆನ್ನಾಗಿ ಗೋಚರಿಸಿದೆ, ಒಂದು ಸಲ ಕೇಳಿನೋಡು." ಎಂದು ಕವಯತ್ರಿಯ ಹಾಗೆ ಕೊರೆದಳು.

ನನಗೆ ಬಾಯೇ ಹೊರಡಲಿಲ್ಲ, ಸ್ವಲ್ಪ ಹೊತ್ತು ಯೋಚಿಸಿ, "ಅರ್ಥವಾಯಿತು! ಆದರೆ,--- "ನಿನ್ನ ಈ ಶುದ್ಧ ಪವಿತ್ರ ಪ್ರೇಮಕ್ಕೆ ಕೇಳುವ ಕಿವಿಗಳಿಲ್ಲ ಎಂದ ಮೇಲೆ ಹೀಗೇ ಎಷ್ಟು ದಿನ ಹಾಡಲು ಸಾಧ್ಯ ಈ ಹೃದಯದ ಕೋಗಿಲೆಗೆ?" ಎಂದೆ.

ಸಹನಾ: "ಉತ್ಸಾಹದಿಂದ ಹಾಡುವ ಹೃದಯದ ಕೋಗಿಲೆಗೆ ಆಯಾಸವೆಂಬುದೇ ಇರುವುದಿಲ್ಲಾ. ಒಂದಲ್ಲಾ ಒಂದು ದಿನ ಈ ಹಾಡನ್ನು ಕೇಳಬೇಕಾದವರು ಕೇಳೇ ಕೇಳುತ್ತಾರೆ" ಎಂಬುದು ನನ್ನ ನಂಬಿಕೆ " ಎಂದು ಆಶಾವಾದಿಯಾಗಿ ನುಡಿದಳು.

ನಾನು: ಸಹನಾ, ಕರೆಕ್ಶನ್ ಪ್ಲೀಸ್, "ನಂಬಿಕೆ ಅಲ್ಲಾ, ಸುಳ್ಳು ನಂಬಿಕೆ, ಅಥವಾ ಮೂಢ ನಂಬಿಕೆ" ಎಂದೆ.

ಇದಾದ ನಂತರ ಸಹನಾ ನನಗೆ "ಪ್ರೇಮ" ದ ವಿಷಯ ಕುರಿತು ದೊಡ್ಡ ಲೆಕ್ಚರ್ ನೇ ಕೊಟ್ಟಿದ್ದಳು. ಅದಕ್ಕೆ ಈ ಕಥೆಯಲ್ಲಿ ಸಾಕಷ್ಟು ಸ್ಥಳ ಮತ್ತು ಸ್ಕೋಪ್ ಇಲ್ಲದಿರುವುದರಿಂದ, ಅದರ ಸಾರಾಂಶವನ್ನು ೨-ಸಾಲುಗಳಲ್ಲಿ ಹೀಗೆ ವ್ಯಾಖ್ಯಾನಿಸಬಹುದು. (" ಪ್ರೇಮ ಅಥವಾ ಪ್ರೇಮಿಸುವುದು ಎರಡೂ ಕುರುಡಲ್ಲ- (ಜನ ಸಾಮಾನ್ಯರು ಹೇಳುವಂತೆ), ಪ್ರೇಮಕ್ಕೆ ಅದರದೇ ಆದ ಕಣ್ಣುಗಳು ಮತ್ತು ಅಸಂಖ್ಯಾತ ಧೃಷ್ಟಿ ಕೋನಗಳಿವೆ, ಕೆಲವೊಮ್ಮೆ ಪ್ರೇಮಿಸುವವರ ಕೋನಗಳು ಬೇರೆ ಬೇರೆ ಯಾಗಿದ್ದಾಗ ಪ್ರೇಮಿಗಳ ಮಿಲನ( ಸಂಗಮ) ವಾಗದಿರಲೂಬಹುದು. - ದೇರ್ ಕ್ಯಾನ್ ಬಿ ನತಿಂಗ್ ಗ್ರೇಟರ್ ಇನ್ ಲೈಫ್ ದ್ಯಾನ್ ರಿನೌನ್ಸಿಂಗ್ ಯುವರ್ಲೌ ಟು ಸಮ್ ಒನ್ ಯು ಲೌ " ಎಂದಿದ್ದಳು.)

ಇಷ್ಟೆಲ್ಲಾ ಕೇಳಿದಮೇಲೆ, ನನ್ನ ಯೋಚನಾ ಲಹರಿ ಗರಿಕೆದರಿ ಕುಣಿಯುತ್ತಿತ್ತು. " ಸಹನಾ ಈ ಪ್ರೇಮ ಲೋಕದಲ್ಲಿ ಬಹುದೂರ ಪಯಣಿಸಿದ್ದಾಳೆ. ಪ್ರಣಯಕ್ಕಾಗಿ ಹುಡುಕುತ್ತಿದ್ದಾಳೆ. ಗುರಿಮುಟ್ಟದಿದ್ದರೂ ಹಿಂತಿರುಗಿ ಬರಲು ಸಾಧ್ಯವಿಲ್ಲ."

"ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲ,

ಪ್ರೇಮಾಂತರಂಗದಲ್ಲಿ ಇನ್ನೇನು ಕೋಲಾಹಲ."

ಸಹನಾ ಹೇಳುವುದು ಸರಿಯಾಗೇ ಇರಬಹುದಲ್ಲವೇ, "ಸರಿ, ತಪ್ಪು, ಅಂತ ಬೇರೆಯವರು ಇವಳ ಪ್ರೇಮ ಸಮಾಚಾರಗಳಲ್ಲಿ ನಿರ್ಧರಿಸುವುದು ಎಷ್ಟು ಸರಿಯಾಗಿರಲು ಸಾಧ್ಯ? ಇವಳ ಹೃದಯ ಮಧುವನ್ನು ಕಂಡರೆ ಉಲ್ಲಾಸದಿಂದ ಹಾಡುತ್ತದೆ, ಮನಸ್ಸು ಸಂತೋಷದಿಂದ ಮಾರು ಹೋಗುತ್ತದೆ. ಮಧು ಇವಳನ್ನು ಇಷ್ಟಪಡದಿದ್ದರೇನು? ಒಂದು "ಶನಿ" ಅಂತ ಪರಿಗಣಿಸದಿದ್ದರೆ ಸಾಕು ಎಂದರಿತಿರುವಾಗ, ಇನ್ನು ಇವಳ ಅಂತರಾಳ ದಲ್ಲಿರುವ "ಪ್ರೇಮಾಮೃತ ವಾಹಿನಿ" ಹರಿಯದೇ ನಿಲ್ಲುವುದೇ? ಮಧು, ಇವಳ ಕುಹು ಕುಹು ಕೂಗಿಗೆ ಓಗೊಡಲಿಲ್ಲ ಅಂತ ಸಹನಾ ಒಂದು ದಿನಾನೂ ಬಡಬಡಿಸಿಲ್ಲ. ನಮ್ಮೆಲ್ಲರಿಗೂ ಇದರ ಬಗ್ಗೆ ಒಂದು ರೀತಿಯ ಆತಂಕ, ಅನುಮಾನ, ಅಸಹನೆ ಇದೆಯೇ ಹೊರತು ಸಹನಾಳಿಗೆ ಇದರ ಬಗ್ಗೆ ಎಳ್ಳಷ್ಟೂ ಬೇಸರವಿಲ್ಲ. ಇದಿಷ್ಟೇ ಆಗಿದ್ದರೆ, ನಾವೆಲ್ಲಾ ಈ ವಿಷಯದ ಬಗ್ಗೆ ಚಿಂತಿಸುವುದು ಅನಗತ್ಯ ವಷ್ಟೇ ಅಲ್ಲಾ, ಸಹನಾಳ ಧೃಷ್ಟಿಯಲ್ಲಿ ಅಸಮಂಜಸವೂ ಹೌದು. ಆದರೂ, ಮನಸ್ಸಿನಲ್ಲಿ ಎಲ್ಲೋ ಅಡಗಿದ್ದ ಈ "ಮಾನಸಿಕ ನಿಶ್ಯಕ್ತಿ, ಆತ್ಮಹತ್ಯೆ " ಪದಗಳು ಕುಣಿದು ಕುಪ್ಪಳಿಸುತ್ತಿದ್ದವು.

ಅಷ್ಟರಲ್ಲಿ ನರೇಶನೂ ನನ್ನನ್ನು ಸಂದಿಸಿ ಮಧುವನ್ನು ಕುರಿತು " ಮಧುಗೆ ಸಹನಾಳ ಪ್ರೇಮದ ಅರಿವಿದೆ. ಆದರೆ, ಅವನಿಗೆ ಅದೇ ರೀತಿಯ ಒಲವಿಂದ ಸಹನಾಳನ್ನು ಆವರಿಸಲು ಅವನ ಮನಸ್ಸು ಆಮಂತ್ರಣ ನೀಡಿಲ್ಲ,- ಹಾಗಂದ ಮಾತ್ರಕ್ಕೆ ಬೇರೆ ಹುಡುಗಿಯ ಜೊತೆ ಈ ರೀತಿಯ ಅನುಬಂಧ ವಿನ್ನೂ ಹುಟ್ಟಿಲ್ಲವೆಂದ. ಮಧು ಸೌಜನ್ಯ ಶೀಲ ಹುಡುಗನಾದ್ದರಿಂದ ಈವರೆಗೂ ಸಹನಾಳ ಪ್ರೇಮವನ್ನು ದುರುಪಯೋಗಿಸಿಕೊಳ್ಳದೇ ಪವಿತ್ರವಾಗಿರಿಸಿದ್ದಾನೆ" ಎಂದು ವಿವರಿಸಿದ.

ನಾನು (ನಕ್ಕು) : "ಇವಿಷ್ಟೂ ನನಗೂ ಗೊತ್ತಿದ್ದ ವಿಷಯವಾಯಿತಲ್ಲ" ಅಂದೆ.

ನರೇಶ್ : "ಜಸ್ಟ್ ಲೀವ್ ದ ಮ್ಯಾಟರ್ ಯಾಸ್ ಇಟ್ ಈಸ್ " ಎಂದ

ನನಗೂ ಒಂದು ರೀತಿಯಲ್ಲಿ ಅದು ಸರಿ ಎನಿಸಿತು.

ನಾಲ್ಕನೇ ವರ್ಷ ಮುಗಿಯುತ್ತಾ ಬಂದಿತು. ಬೆಂಗಳೂರಿನ ಹುಡುಗ, ಹುಡುಗಿಯರೆಲ್ಲಾ ಹೌಸ್ ಸರ್ಜೆನ್ಸಿ ಗೆ ಬೆಂಗಳೂರ್ಗೆ ಟ್ರಾನ್ಸ್ಫರ್ ತಗೊಳ್ಳಲು ಅರ್ಜಿ ಸಲ್ಲಿಸಿ, ಕೆಲಸ ಶುರುಮಾಡಿದ್ದರು. ಸಹನಾ ಮಾತ್ರ ಇಲ್ಲೇ ಟ್ರೈನಿಂಗ್ ಮಾಡುವುದು ಎಂದು ತೀರ್ಮಾನಿಸಿದ್ದಳು, ಕಾರಣ ಎಲ್ಲರಿಗೂ ಗೊತ್ತಿತ್ತು, ಮಧುವನ್ನು ಅಗಾಗ್ಗೆ ನೋಡುತ್ತಿರಬಹುದೆಂದು. ಹೌಸ್ ಸರ್ಜೆನ್ಸಿಯಲ್ಲೂ ನನ್ನ ಜೊತೇನೇ ರೂರಲ್ ರೊಟೇಶನ್ ಮಾಡಿದ್ದರಿಂದ ಇನ್ನಷ್ಟು ಹತ್ತಿರವಾದಳು. ಒಂದು ದಿನ, ಸಹನಾಳು ಬರೆದ ಕಾರ್ಟೂನ್ ಓದುತ್ತಿದ್ದೆ, ಹಾಗೇ ಅವಳ ನೋಟ್ ಬುಕ್ ನಲ್ಲಿ ಎಲ್ಲೆಲ್ಲೂ ಮಧುವಿನ ಭಾವ ಚಿತ್ರಗಳು ಕಂಡವು- ಇವೆಲ್ಲಾ ಸಹನಾಳ ಹಸ್ತದಿಂದ ರಚಿಸಿದ್ದು, ತುಂಬಾ ಮನೋಹರವಾಗಿತ್ತು. ಸಹನಾ ಬರೆದಿದ್ದ ಕವನಗಳೂ ಇದ್ದವು, ಒಂದು ಕವನ ನನ್ನ ಮನಸೆಳೆಯಿತು. " ಈ ಕವನಕ್ಕೆ ನಾನು ಹೆಸರು ಕೊಡುತ್ತೇನೆ" ಎಂದೆ.

"ಏ ಕಳ್ಳೀ, ಕಾರ್ಟೂನ್ ಓದುತ್ತೀನಿ ಅಂತ ಕವನಾನೂ ಕದ್ದು ಓದುತ್ತಿದ್ದೀಯಾ? " ಅಂತ ರೇಗಿಸಿದ್ದಳು ಸಹನಾ.

ಸಹನಾ ಬರೆದ ಕವನವನ್ನು ನಾನು ಕನ್ನಡಕ್ಕೆ ಅನುವಾದಿಸಿದ ಸಾಲುಗಳು ಹೀಗೆ ಸಾಗಿತ್ತು-------

"ಪ್ರೇಮಾಂತರಂಗ"

ನೀ ಅರಿಯಲಾರದೇ ಹೋದೆ,

ನಾ ನಿಂತು ನಿಂತಲ್ಲೇ ನಿನ್ನ ನೋಡುತ್ತಾ ನಿಂತಿದ್ದು,

ನನ್ನ ಕಣ್ಣಿನ ಧೃಷ್ಟಿ ಖಣಜದ ಕಣ ಕಣಗಳಲ್ಲೂ,

ನಿನ್ನ ಭಾವ-ಚಿತ್ರವ ಬರೆದಿಟ್ಟಿದ್ದೂ,

ನನ್ನ ಸ್ಮೃತಿಪಟಲದ ಪದರ ಪದರಗಳಲ್ಲೂ,

ನಿನ್ನ ಪ್ರತಿಬಿಂಭವ ಪಸರಿಸಿದ್ದೂ,

ನನ್ನ, ಕಡೆಗೊಂದು ಸಲ ತಿರುಗಿ ನೋಡುವೆಯೆಂದು,

ಕಲ್ಲಾಗುವರೆಗೂ ಕಾದಿದ್ದು.

ನಾ ಮರೆಯಲಾರದೇ ಹೋದೆ,

ನಿನ್ನ ಮರುಕದ ಮುಖದ ಮೇಲಿದ್ದ ಮಾರಕ ನಗು,

ನನ್ನ ಕಣ್ಣುಗಳು ಕೇಳುತ್ತಾ (ಅರಸುತ್ತಾ) ಕೊರಗಿದವು,

ನಿನ್ನ ಹೊಳಪು ಕಣ್ಣುಗಳ "ಹಸಿರಾದ ಹುರುಪು".

ನನ್ನ ಮನ ಕಾಯುತ್ತಿತ್ತು,

ಕುಡಿ ಸ್ನೇಹ ಚಿಗುರೊಡೆಯಲೆಂದು,

ನಿನ್ನ ಹುಡುಕಿ ಹುಡುಕಿ ತಡಕಾಡಿತು.

ಇದನ್ನೆಲ್ಲಾ ನೋಡಿದಾಗ "ಸಹನಾ ಎಷ್ಟು ಟ್ಯಾಲೆಂಟೆಡ್ ಗರ್ಲ್", ಆದರೆ, ಅವಳ ಟ್ಯಾಲೆಂಟ್ಸ್ ಎಲ್ಲಾ ಸದುಪಯೋಗವಾದಂತೆ ಅನ್ನಿಸಲಿಲ್ಲ. ಎಲ್ಲಕ್ಕೂ ಒಂದು ಋಣಾನುಬಂಧ ವಿರಬೇಕೆನ್ನುವುದು ಸತ್ಯ" ಎನಿಸಿತು. ಹೌಸ್ ಸರ್ಜೆನ್ಸಿನೂ ಮುಗಿಯುತ್ತಾ ಬಂದಿತು. ಸಹನಾಳನ್ನು ಕುತೂಹೊಲದಿಂದ ಕೇಳಿದ್ದೆ "ಮುಂದೇನು ಮಾಡುತ್ತೀಯಾ?". ಅದಕ್ಕೆ "ಬೆಂಗಳೂರ್ ಗಂತೂ ಹೋಗಲೇಬೇಕು, ಹೊಗುತ್ತೀನಿ" ಎಂದಿದ್ದಳು.

ಈಚೀಚೆಗೆ ಬೆಂಗಳೂರಿಂದ ಬಂದಾಗಲೆಲ್ಲ ಅವಳ ಅಣ್ಣನ ಮಗಳ (ಪುಟಾಣಿ) ವಿಷಯ ಹೇಳುತ್ತಿದ್ದಳು. ಅದು ಒಂದು ರೀತಿಯಲ್ಲಿ ನನಗೆ ಸಮಾಧಾನ ಕೊಟ್ಟಿತ್ತು "ವಾಪಸ್ ಮನೆಗೆ ಹೋದರೆ( ಹಾಸ್ಟಲ್ ಬಿಟ್ಟು) ಸರಿ ಹೋಗುತ್ತಾಳೆ" ಎಂದು ಕೊಂಡೆ. ಹೌಸ್ ಸರ್ಜೆನ್ಸಿ ಟ್ರೈನಿಂಗ್ ಮುಗಿದು ನಾನು, ಕರ್ನಾಟಕ ಸರ್ಕಾರಕ್ಕೆ ೨- ವರ್ಷಗಳು ಸೇವೆ ಸಲ್ಲಿಸಿ, ನಂತರ ಮದುವೆಯಾಗಿ ಅಮೇರಿಕಾಕ್ಕೆ ಬಂದೆ. ಬೆಂಗಳೂರ್ ಗೆ ಹೋದಮೇಲೆ ಸಹನಾಳ ವಿಷಯ ಏನಾಯಿತು? ಎಂದು ತಿಳಿದಿರಲಿಲ್ಲ, ಕಥೆಯನ್ನು ಹೇಗೆ ಮುಕ್ತಾಯ ಗೊಳಿಸುವುದು ಎಂದು ಆಲೋಚಿಸುತ್ತಿದ್ದೆ. ಸಹನಾಳ ನಿಜ ಜೀವನದಲ್ಲಿ ಏನಾಗಿರಬಹುದು ಎಂದು

ಕಾತರದಿಂದ ಕಾಯುತ್ತಿರುವಾಗ, ನನ್ನ ಗೆಳತಿ ಲೀಲಳಿಂದ ಕರೆ ಬಂದಿತ್ತು.

ಲೀಲ ನನ್ನ ಮೆಡಿಕಲ್ ಕಾಲೇಜ್ ಗೆಳತಿ, ನನಗಿಂತ ೨- ವರ್ಷ ಮುಂಚೆನೇ ಅಮೇರಿಕಾಕ್ಕೆ ಬಂದಿದ್ದಳು. ಸಹನಾಳ ವಿಷಯ ಬಂದಾಗ, ಲೀಲ : "ನಾನು ಅಮೇರಿಕಾಕ್ಕೆ ಬರುವ ಮೊದಲು ಸಹನಾ ಒಂದು ಸಲ "ಆತ್ಮಹತ್ಯೆ" ಗೆ ಪ್ರಯತ್ನಿಸಿದ್ದಳು, ಅವಳ ಅಮ್ಮ ನನ್ನ ಹತ್ತಿರ ಬಂದು ಸಹನಾಳ ಜೊತೆ ಮಾತಾಡಲು ಕೇಳಿಕೊಂಡಿದ್ದರು (ಲೀಲ ಮತ್ತು ಸಹನಾಳ ಮನೆ ಬೆಂಗಳೂರಲ್ಲಿ ಹತ್ತಿರ ಇತ್ತಂತೆ). ಅಧೃಷ್ಟವಶಾತ್ ಪ್ರಾಣ ಹೋಗಲಿಲ್ಲ, ಬದುಕಿಕೊಂಡಳು. ಆಮೇಲೆ ಸಹನಾ, ಅವಳು ಕೆಲಸಮಾಡುತ್ತಿದ್ದ ಜಾಗದಲ್ಲಿ ಪರಿಚಯವಾದ ಒಬ್ಬ ಡಾ. ಜೊತೆ ಮದುವೆಯಾದಳು. ಅಮೇರಿಕಾಕ್ಕೂ ಬಂದು, ೨- ವರ್ಷ ವಿದ್ದು ಹೋದರು. ಅಮೇರಿಕಾಕ್ಕೆ ಬಂದಾಗ ನನಗೆ ಫೋನ್ ಮಾಡಿದ್ದಳು" ಎಂದಳು. ಆಗ ನನ್ನ ಮನಸ್ಸು ಸಂತೋಷದಿಂದ ಎದ್ದು ಕುಣಿದು ಭಾವನಾಲಹರಿಯನ್ನು ಮುಂದುವರೆಸಿತು...................................

"ಈ ಜನ್ಮದಲ್ಲಿ ಬೇರೆ ಯಾವುದೂ ಸಹನಾಳ ಮನಸ್ಸು ಬದಲಿಸುತ್ತದೆ" ಎಂದು ನನಗನಿಸಿರಲಿಲ್ಲ. "ಸಹನಾಳ ಶುದ್ಧ ಪವಿತ್ರ ಪ್ರೇಮಕ್ಕೆ ಸಾಕ್ಷಾತ್ ಆ ಕೇಶವನೇ ಬೇರೆ ರೂಪದಲ್ಲಿ ಬಂದೊಲಿದಿರಬೇಕು."

"ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ,

ಎಲ್ಲಿ ಭಕುತರು ಕರೆದರಲ್ಲೇ ಬಂದೊದಗುವನು."!

ಎಂಬುದು ನಿಜವಾಗಿತ್ತು.!!

"ಶುಭಂ"!!!