ನಾನು ಈ ಬರಹವನ್ನು ಟೈಪಿಸುವ ಹೊತ್ತಿಗೆ ಶರತ್ ಅವರ ನಾನು ಕಂಡ ಮೊದಲ ಸಾವು ಲೇಖನ ನೋಡಿದೆ. ಛೇ! ಬರೇ ಸಾವಿನ ಸುದ್ಧಿಯೇ ಆಯ್ತಲ್ಲಾ ಅಂತ ಅನ್ನಿಸಿದರೂ ಬರೆಯದೇ ಇರಲಾರೆ ಅಂದುಕೊಂಡು ಈ ಸಾಲುಗಳನ್ನ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.
ಮೊನ್ನೆ ಎಂದಿನಂತೆ ಆಫೀಸಿಗೆ ಹೋಗುವ ತರಾತುರಿಯಲ್ಲಿದ್ದಾಗ ಊರಿನಿಂದ ನನ್ನ ಚಿಕ್ಕಮ್ಮ ಫೋನ್ ಮಾಡಿದರು. "ದೊಡ್ಡಮ್ಮನಿಗೆ ( ನನ್ನ ಸೋದರತ್ತೆ) ಎದೆನೋವಿದೆ, ಹುಶಾರಿಲ್ಲ ಕರೆತರುತ್ತೇನೆ ಸ್ವಲ್ಪ ಬಿಡುವು ಮಾಡಿಕೋ ತೋರಿಸೋಣ " ಅಂದರು. ನಾನೂ ’ಆಗಲಿ ’ಅನ್ನುತ್ತಾ ಆಫೀಸಿಗೆ ಬಂದೆ. ಸುಮಾರು ಹತ್ತೂ ಕಾಲರ ಹೊತ್ತಿಗೆ ನನ್ನ ಚಿಕ್ಕಮ್ಮ ಮತ್ತು ಸೋದರತ್ತೆ ಬಂದರು. ತಕ್ಷಣ ವೈದ್ಯಕೀಯ ವಿಭಾಗದ ವೈದ್ಯರ ಬಳಿಗೆ ಹೋಗಿ ತೋರಿಸಿದೆ. ಇ.ಸಿ.ಜಿ. ಮಾಡಿಸಿ ರಿಪೋರ್ಟ್ ನೋಡಿದ ಕೂಡಲೇ ವೈದ್ಯರು " ಇವರಿಗೆ ಇನ್ಸ್ಟೇಬಲ್ ಎಂಜೈಮ ಆಗಿದೆ. ತಕ್ಷಣ ಐ.ಸಿ.ಸಿ.ಯು ಗೆ ಅಡ್ಮಿಟ್ ಮಾಡಿಬಿಡಿ" ಎಂದರು. ನನ್ನ ಅತ್ತೆಗೆ ಇದಾವುದನ್ನೂ ಹೇಳುವಂತಿರಲಿಲ್ಲ. ನೋವಿಗೆ ಇಂಜೆಕ್ಷನ್ ಕೊಡ್ತಾರಂತೆ ಅದಕ್ಕೆ ಅಡ್ಮಿಟ್ ಮಾಡಬೇಕು ಎಂದಷ್ಟೇ ಹೇಳಿ ಸೇರಿಸಿದೆವು. ವಾರ್ಡಿನಲ್ಲಿ ಸೇಬಿನ ಜ್ಯೂಸ್ ಕುಡಿದು ಚೆನ್ನಾಗಿಯೇ ಮಾತನಾಡಿದರು. ಅವರು ಸ್ವಲ್ಪ ಗೆಲುವಾದ ಮೇಲೆ ಇನ್ನೇನೂ ಆಗದು ಎನ್ನುತ್ತಾ ನಾನು ಮತ್ತೆ ಆಫೀಸಿಗೆ ಬಂದು ಕೆಲಸದಲ್ಲಿ ತೊಡಗಿದೆ. ಸಂಜೆ ನಾಲ್ಕಕ್ಕೆ ಕೆಲಸ ಮುಗಿಸಿ ಮತ್ತೆ ಹೋಗುವ ಹೊತ್ತಿಗೆ ಅವರಿಗೆ ಹಾರ್ಟ್ ಅಟ್ಯಾಕ್ ಆಗಿಬಿಟ್ಟಿತ್ತು. ಸಿಬ್ಬಂದಿಯಾದ್ದರಿಂದ ಐ.ಸಿ.ಸಿ.ಯು ಒಳಗೆ ಹೋಗಿ ನೋಡುತ್ತಾ ಅಲ್ಲೇ ನಿಂತುಬಿಟ್ಟೆ. ಅಲ್ಲಿಯೇ ಇದ್ದ ವೈದ್ಯರು ಇಂಜೆಕ್ಷನ್ ಗಳನ್ನು ಕೊಡುತ್ತಾ , ಆಕ್ಸಿಜನ್ ನೀಡುತ್ತಾ , ಸಾಕಷ್ಟು ಪ್ರಯತ್ನ ಮಾಡುತ್ತಿದ್ದರು. ಅದ್ಯಾವ ನೋವು ಅನುಭವಿಸುತ್ತಿದ್ದರೋ ಏನೋ ! ಕೈ ಸನ್ನೆಯಲ್ಲೊಮ್ಮೆ ನನ್ನಿಂದಾಗದು ಅಂದರು. ಏನೂ ಆಗೋದಿಲ್ಲ ಸುಮ್ಮನಿರಿ ಎಂದಷ್ಟೇ ಹೇಳಿ ಅವರ ಕೈಯನ್ನೊಮ್ಮೆ ಮೆಲ್ಲನೆ ಒತ್ತಿದೆ. ಇದ್ದಕ್ಕಿದ್ದಂತೇ ಎದುರಿಗಿದ್ದ ರೀಡಿಂಗ್ ಮೆಷೀನು ಸೊನ್ನೆ , ಪ್ರಶ್ನಾರ್ಥಕ ಚಿಹ್ನೆ ತೋರಿಸಿ ಬೀಪ್ ಶಬ್ಧದೊಂದಿಗೆ ಭಯ ಹುಟ್ಟಿಸುತ್ತಿತ್ತು. ಅಷ್ಟೇ ! ಅತ್ತೆಯವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ವೈದ್ಯರು "ವೆರಿ ಸಾರಿ ಭವಾನಿ" ಅಂದರು .ಇಷ್ಟು ವರ್ಷಕ್ಕೆ ಮೊತ್ತಮೊದಲ ಬಾರಿಗೆ ಕಣ್ಣೆದುರು ನೋಡಿದ ಸಾವಿಗೆ ಮನಸ್ಸು ಕುಗ್ಗಿಹೋಗಿತ್ತು. ಇನ್ನೂ ಆ ಘಟನೆಯ ಗುಂಗು ಕೊರೆಯುತ್ತಲೇ ಇದೆ.
ಪ್ರತಿಕ್ರಿಯೆ (1)