ಗುರುವಾರ ಶುಕ್ರವಾರ ಸೌದಿ ಅರೇಬಿಯದಲ್ಲಿ ವಾರಾಂತ್ಯ. ಅಪರಾಹ್ನದ ವಿಶೇಷ ಪ್ರಾರ್ಥನೆ (ಜುಮ್ಮಾ) ಮುಗಿಸಿ ಊಟದ ನಂತರ ಮನೆಯವರಿಗೆ ಫೋನಾಯಿಸಿ ಕುಶಲೋಪರಿ ವಿಚಾರಿಸಿಕೊಂಡು ಅಕ್ಕ ಪಕ್ಕದಲ್ಲಿರುವ ಮಿತ್ರರ ಮನೆಗೋ ಅಥವಾ ಬೇರೆಲ್ಲಾದರೋ ಒಂದು ಸುತ್ತು ಹೊಡೆದು ದಿನ ಕಳೆಯುವುದು ವಾಡಿಕೆ. ನನ್ನ ವಾಸ್ತವ್ಯದ ಸಮೀಪದಲ್ಲೇ ಕಿರಿಯ ಸೋದರಿಯ ವಿಲ್ಲಾ. ಈ ಶುಕ್ರವಾರ ವಿಶೇಷ ದಿನ. ಚುನಾವಣೆಯಲ್ಲಿ ಮನಸ್ಸಿಗೆ ತೋಚಿದಂತೆ ಒಬ್ಬರನ್ನೊಬ್ಬರ ಮೇಲೆ ಕೆಸರೆರೆಚಿ, ಒಂದಿಷ್ಟು ಹೆಂಡ ಹಣ ಹರಿಸಿ, ವಾಗ್ದಾಳಿ ಮಾಡಿ, ಒಂದಿಷ್ಟು ಚಾರಿತ್ರ್ಯ ಹರಣ ಮಾಡಿ ದಕ್ಕಿದ ಫಲವನ್ನು ರಾಷ್ಟ್ರಪತಿ ಭವನದಲ್ಲಿ ಪ್ರತಿಜ್ಞಾವಿಧಿ ಎಂಬ party ಮಾಡಿ ಖುಷಿ ಪಡುವ ದಿನ. ಇಲ್ಲಿನ ಸಮಯ ೪ ಕ್ಕೆ ಶುರುವಾಯಿತು ನಮ್ಮ ಪ್ರಜಾಪ್ರಭುತ್ವದ ಮೋಹಕ ಕ್ಷಣ, ವಿಶ್ವ ಅಸೂಯೆ ಪಡುವ ಘಳಿಗೆ.

ಈ ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನು ವೀಕ್ಷಿಸುತ್ತಾ ಕೂತ ನಮಗೆ expert commentary ಕೇಳುವ ಅವಕಾಶ.

ಪ್ರಾರಂಭದಲ್ಲೇ ಶುರು ಅಪಸ್ವರ. ರಾಷ್ಟ್ರಗೀತೆ ಸಂಗೀತದಲ್ಲಿ ಕೇಳುತ್ತಾ ನನ್ನ ಸೋದರಿ ಹೇಳಿದ್ದು, ಬಹುತೇಕ ಭಾರತೀಯರಿಗೆ ಅರ್ಥವಾಗದ ಬಂಗಾಳಿ ಭಾಷೆಯ ಗೀತೆಗಿಂತ ಎಲ್ಲರಿಗೂ ಅರ್ಥವಾಗುವ ಮಧುರ ಉರ್ದು ಭಾಷೆಯ " ಸಾರೆ ಜಹಾನ್ ಸೆ ಅಚ್ಛ " ಗೀತೆ ಇರಬೇಕಿತ್ತು ಎಂದು. ಬಹುಶಃ ಆ ಗೀತೆ ಬರೆದ ಅಲ್ಲಮಾ ಇಕ್ಬಾಲರು ಪಾಕಿಗೆ ವಲಸೆ ಹೋಗದೆ ನಮ್ಮಲ್ಲೇ ಉಳಿದಿದ್ದರೆ ಅದು ನಮ್ಮ ರಾಷ್ಟ್ರ ಗೀತೆ ಆಗುತ್ತಿತ್ತೇನೋ ಎಂದು ನಾನಂದೆ.

ರಾಷ್ಟ್ರಪತಿಗಳು default ಭಾಷೆಯಾಗಿ english ನಲ್ಲಿ I (ನಾನು) ಎನ್ನುವುದಕ್ಕಿಂತ ರಾಷ್ಟ್ರ ಭಾಷೆ ಉಪಯೋಗಿಸಬಹುದಿತ್ತು ಎಂದು ನನ್ನ ಉವಾಚ.

ಆಕರ್ಷಕ, ಶುಭ್ರ, ಉಡುಗೆಗಳಲ್ಲಿ ಬಂದಿದ್ದರು ಮಂತ್ರಿ ಮಹೋದಯರು. ಇವರನ್ನು ಕಂಡಾಗ ಅನ್ನಿಸಿದ್ದು ಇವರೇನಾ ತೋಳಗಳ ರೀತಿ ಒಬ್ಬರನ್ನೊಬ್ಬರು ಚುನಾವಣಾ ಕಣದಲ್ಲಿ ಹರಿದು ತಿನ್ನುತ್ತಿದ್ದವರು ಎಂದು. ನನ್ನ ತಂಗಿ ಹೇಳಿದಳು, ಅಣ್ಣಾ, ಇವರೆಲ್ಲಾ ಚುನಾವಣಾ ಸಮಯದಲ್ಲಿ "ರೌಡಿ ರಂಗಣ್ಣ" ಗಳಿರಬೇಕು ಆಲ್ವಾ, ಈಗ ನೋಡಿದರೆ ಸಭ್ಯರ ಹಾಗೆ ಅತ್ಯಂತ ಭಕ್ತಿ ಭಾವದಿಂದ ಪ್ರತಿಜ್ಞೆ ಸ್ವೀಕರಿಸುತ್ತಿದ್ದಾರೆ.

ಇವೆಲ್ಲದರ ನಡುವೆ ಅಡ್ವಾಣಿ ಜೀ ಸೋತು ಸೊರಗಿ ಕೂತಿದ್ದರು. ಇದನ್ನು ನೋಡಿ ನನ್ನ ಮಡದಿಗೆ ಮರುಕ. ಅಡ್ವಾಣಿ ಅವರಿಗೆ ನಮ್ಮನ್ನು ( ಮುಸ್ಲಿಮರನ್ನು ) ಕಂಡರೆ ಆಗದಿದ್ದರೂ ನನ್ನಾಕೆಗೆ ಅವರ ಮೇಲೆ ಸ್ವಲ್ಪ mercy. ಒಮ್ಮೆಯಾದರೂ ಪ್ರಧಾನಿ ಆಗಬೇಕಿತ್ತು ಎಂದು ಎಲ್ಲರಿಗೂ ಕೇಳಿಸುವಂತೆ ಮರುಗಿದಳು.

ಸ್ವಲ್ಪ ಸಮಯದ ನಂತರ ಗುಲಾಂ ನಬಿ ಆಜಾದ್ ಬಂದರು. ಈಗ ನನ್ನ ತಂಗಿಯ ಕಾಮೆಂಟ್ಸ್; ನೋಡಿ ಮುಸ್ಲಿಂ ಆಗಿ ಎಷ್ಟು ಹೆಮ್ಮೆಯಿಂದ ಪ್ರತಿಜ್ಞೆ ಸ್ವೀಕರಿಸ್ತಾ ಇದ್ದಾರೆ, ಪಾಕಿಸ್ತಾನದಲ್ಲಿ ಹಿಂದೂ ಒಬ್ಬ ಈ ರೀತಿ ಮಂತ್ರಿ ಆಗಿದ್ದನ್ನು ಕಂಡಿದ್ದೀವಾ ಎಂದು ಥಾಕ್ರೆ ಥರ ಪೋಸ್ ಕೊಟ್ಟಳು. ಈ ಸಂಕುಚಿತತೆ ಬಿಟ್ಟು ಬೆಳಿಯಮ್ಮಾ ಎಂದು ಮನದಲ್ಲೇ ಅಂದುಕೊಂಡೆ.

ಈಗ ಮೀರಾ ಕುಮಾರ್ ಅವರ ಸರತಿ. ಅವರನ್ನು ನೋಡಿದ ನನ್ನ ಅರ್ಧಾಂಗಿ "ಇವರಿಗೆಲ್ಲಾ ಬೇರೆ ಕೆಲಸ ಇಲ್ವಾ, ಮೊಮ್ಮಕ್ಕಳನ್ನು ಆಡಿಸುತ್ತಾ ಕೂರಬಾರದೇ, ಗಂಡಸರು ನಡೆಸಲಿ ರಾಜ್ಯ' ಎಂದು. ಇವಳು ಸ್ವಲ್ಪ ಸ್ತ್ರೀ ಧ್ವೇಷಿ ಎಂದು ನನಗೆ ಅನುಮಾನ.

ನನ್ನ ತಂಗಿ ನಮ್ಮ ಪಕ್ಕದಲ್ಲೇ ಕುಳಿತಿದ್ದ ಮುಂದಿನ ತಿಂಗಳು ಮದುವೆಯಾಗಲು ಹೊರಟಿರುವ ತನ್ನ ಮೈದುನನನ್ನು ಉದ್ದೇಶಿಸಿ ಹೇಳಿದಳು, ನೀನೂ ಇದೇ ರೀತಿ "ನಿಕಾಹ್" (ವಿವಾಹ) ದಿನದಂದು ಪ್ರತಿಜ್ಞೆ ತೊಗೋಬೇಕು. "ನಾನು, ನನ್ನ ಹೆಂಡತಿಯ ಮಾತನ್ನು ಅಕ್ಷರಶಃ ಪಾಲಿಸುತ್ತೇನೆ, ಆಕೆ ಹೇಳುವ ಮಾತುಗಳಿಗೆಲ್ಲಾ ಕೋಲೆ ಬಸವನಂತೆ ಗೋಣು ಹಾಕುತ್ತೇನೆ, ಆಕೆಯನ್ನು ಪಟ್ಟದ ರಾಣಿ ಥರ ನೋಡಿಕೊಳ್ಳುತ್ತೇನೆ, ಅವಳ ಎಲ್ಲಾ ಶಾಪಿಂಗ್ ತೆವಲುಗಳನ್ನು ನನ್ನ ಕ್ರೆಡಿಟ್ ಕಾರ್ಡ್ ಕೊಟ್ಟು ತೀರಿಸುತ್ತೇನೆ" ಎಂದು.

ಬೋರ್ ಆಗಿ ಎದ್ದ ನನ್ನ ತಂಗಿ ಮತ್ತು ಮಡದಿಗೆ ನಾನು ಆಸೆ ತೋರಿಸಿ ಕೂರಿಸಿದೆ. " ಹೋಗಬೇಡಿ ತಾಳಿ, ಈಗ ನಮ್ಮ ಕನ್ನಡ ಸಚಿವರುಗಳು ಕನ್ನಡದಲ್ಲಿ ಪ್ರಮಾಣ ವಚನ ತೊಗೊಳ್ತಾರೆ ಅಂತ. ನನಗೂ, ನನ್ನ ತಂಗಿಗೂ ಕನ್ನಡದ ಮೇಲೆ ಸ್ವಲ್ಪ ಪ್ರೀತಿ ಜಾಸ್ತಿ. ಇದ ಕೇಳಿ ಪಾಪ ಆಸೆಯಿಂದ ಕೂತರು ಇಬ್ಬರೂ. ಬಂತು ಸವಾರಿ S.M. ಕೃಷ್ಣ ಅವರದು. ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಎಂದ ಕೂಡಲೇ ನಮ್ಮ ಕಿವಿಗಳು ನಿಮಿರಿದವು, ಇನ್ನೇನು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಚರಿತ್ರೆ ಸೃಷ್ಟಿಸುತ್ತಾರೆ ಅಂತ. ಆಸೆ ಸೂಜಿಯ ಚುಂಬನಕ್ಕೆ ಸಿಕ್ಕ ಬಲ್ಲೂನಾಯಿತು. ಇನ್ನು hope ಇದ್ದದ್ದು ಮೊಯ್ಲಿ ಸಾಹೇಬರ ಮೇಲೆ. ದಕ್ಷಿಣ ಕನ್ನಡದವರಿಗೆ ಕನ್ನಡದ ವ್ಯಾಮೋಹ ಅಷ್ಟಕ್ಕಷ್ಟೇ. ಆದರೂ ಒಂದು ಆಸೆ. ಗಾರ್ದಭ ಕಿವಿಗಳನ್ನು ಅರಳಿಸಿ ಕೇಳಿದೆವು, ಉಹೂಂ, ನೋ ಚಾನ್ಸ್ ಬೇಬಿ... I, Moodabidre Moily ಎನ್ನುತ್ತಾ ಸಾಗಿತು ನಮ್ಮ ೨೦೦ ವರ್ಷಗಳ ಬ್ರಿಟಿಷ್ ದಾಸ್ಯದ ಅತ್ಯಂತ ವಿನೀತ ಲಜ್ಜೆಗೆಟ್ಟ ಸೇವೆ.

ಒಂದು ಸುಂದರ, disappointment ಮಿಳಿತ ಸಂಜೆಯ ಕ್ಷಣಗಳು ಈ ರೀತಿ ಕಳೆದವು.