ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದಕ್ಕೆ ಬದ್ದವಾಗಿರಬೇಕಿದ್ದ ರಾಜ್ಯ ಸರ್ಕಾರ ಇದೀಗ ರಾಜ್ಯದ ಮೂರು ಪ್ರಮುಖ ನಗರಗಳಾದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಗುಲ್ಬರ್ಗಾಗಳಲ್ಲಿನ ಕುಡಿಯುವ ನೀರಿನ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಮುಂದಿನ ದಿನಗಳಲ್ಲಿ ಯೋಜನೆಯನ್ನು ಹಂತ ಹಂತವಾಗಿ ರಾಜ್ಯದ ವಿವಿಧ ಪಟ್ಟಣಗಳಿಗೂ ವಿಸ್ತರಿಸಲಿದೆ ಎನ್ನುವ ವಿಚಾರ ಆಂತಕ ತರುವಂತಹದ್ದು ಅಲ್ಲದೆ ಇದನ್ನು ಹಲವಾರು ವೇದಿಕೆಗಳಲ್ಲಿ ಚರ್ಚಿಸುವುದು ಅಗತ್ಯವಾಗಿದೆ.

735 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಇದನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಸರ್ಕಾರಕ್ಕೆ ಯೋಜನೆಯ ಕಲ್ಪನೆಯೂ ಇಲ್ಲ ಬಿಡ್ಡಿಂಗ್್ಗಾಗಿ ದಾಖಲೆಗಳನ್ನು ಸಿದ್ದಪಡಿಸಲೂ ಸರ್ಕಾರದ ಅಧಿಕಾರಿಗಳಿಗೆ ಸಾಧ್ಯವಿಲ್ಲ ಇದನ್ನೂ ಖಾಸಗಿ ಕಂಪೆನಿಗೆ ವಹಿಸುತ್ತಿರುವುದನ್ನು ನೋಡಿದರೆ ಇದರ ಹಿಂದೆ ಬೇರಾವುದೊ ಹಿತಾಸಕ್ತಿ ಇರುವ ಅನುಮಾನ ನನಗೆ.

ಖಾಸಗಿ ಕಂಪೆನಿಗಳ ಕೈಗೆ ಕುಡಿಯುವ ನೀರಿನ ಹಿಡಿತ ನೀಡಲು ಮುಂದಾಗಿರುವ ಸರ್ಕಾರ ಸ್ಥಳೀಯ ನೀರಿನ ಮೂಲಗಳಾದ ಕೆರೆ, ಕಟ್ಟೆಗಳ ನಿಯಂತ್ರಣವನ್ನು ಖಾಸಗಿ ಕಂಪೆನಿಗಳಿಗೆ ವಹಿಸಲಿದೆ. ಮೂಲಭೂತ ಸೌಕರ್ಯ ನಿರ್ಮಾಣಗೊಂಡ ನಂತರ ಜನರಿಂದ ಹಣ ವಸೂಲಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಇದರಿಂದ ಉಳ್ಳವರು ಹಣಕೊಟ್ಟು ನೀರನ್ನು ಖರೀದಿಸುತ್ತಾರೆ. ಬಡವರಿಗೆ ಉಚಿತ ಸೌಲಭ್ಯ ಮಧ್ಯಮ ವರ್ಗದವರು ತೊಂದರೆಗೆ ಒಳಗಾಗುತ್ತಾರೆ. ಅಲ್ಲದೆ ನೀರಿನ ಮೂಲಗಳನ್ನೇ ಅವಲಂಭಿಸಿರುವ ಜಾನುವಾರುಗಳು, ಪ್ರಾಣಿ ಪಕ್ಷಿಗಳು ಇದರಿಂದ ತೊಂದರೆಗೆ ಒಳಗಾಗುತ್ತವೆ.

ಉತ್ತಮ ರಸ್ತೆ ನಿರ್ಮಾಣ, ಅದರ ನಿರ್ವಹಣೆಗಾಗಿಯೇ ಸರ್ಕಾರದ ಇಲಾಖೆ ಇದೆ, ಇದಕ್ಕಾಗಿ ಜನರ ತೆರಿಗೆ ಬಳಕೆ ಆಗುತ್ತಿದೆ, ಆದರೆ ನಮ್ಮ ಅಡಳಿತ ಯಂತ್ರವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೇ ರಸ್ತೆ ನಿರ್ಮಾಣ ನಿರ್ವಹಣೆಯನ್ನು ಖಾಸಗಿಗೆ ವಹಿಸುವ ಮೂಲಕ ಮೂಲಭೂತ ಸೌಕರ್ಯ ನೀಡುವ ಉದ್ದೇಶದಿಂದ ಸರ್ಕಾರ ಹಿಂದಕ್ಕೆ ಸರಿಯುತ್ತಿದ್ದು ಹಣ ಕೊಟ್ಟರೆ ಮಾತ್ರ ಸೌಲಭ್ಯ ಎನ್ನುವ ಸ್ಥಿತಿಗೆ ಸರ್ಕಾರ ಬರುತ್ತಿರುವುದು ಸರಿಯಲ್ಲ.

ಕುಡಿಯುವ ನೀರಿನ ಕುರಿತಾಗಿಯೂ ಸರ್ಕಾರದ ಕರ್ತವ್ಯವೇನು ಇದನ್ನು ಹಕ್ಕಿನಿಂದ ಕೇಳಬೇಕಾದ ಜನರು ಸುಮ್ಮನಿದ್ದರೇನಂತೆ, ವಿರೋಧಿಸಿ ಪ್ರತಿಭಟಿಸಬೇಕಿರುವ ಪಕ್ಷಗಳು ವಿರೋಧಿಸದಿದ್ದರೂ ತಾವಾದರೂ ಇದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತೀರಾ......