ಮುದ್ದಾಡೆಂದಿದೆ ಮಲ್ಲಿಗೆ ಹೂ
ಮನಸಿ ಎಂದಿದೆ ಸಂಪಿಗೆ ಹೂ...
ಮನಸ್ಸು ಚಂಚಲ. ಜೀವನದಲ್ಲಿ ಕೆಲವೊಮ್ಮೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬುದೇ ತಿಳಿಯುವುದಿಲ್ಲ. ಅದಕ್ಕೆ ಮನಸೇ ಮರ್ಕಟ ಎಂದ ಬಲ್ಲವರು ಹೇಳಿರುವುದು. ಪ್ರೀತಿಗಾಗಿ ತುಡಿಯುವ ಹೆಣ್ಣಿನ ಮನಸ್ಸು ಅಂತಹದ್ದು. ತಾನು ಪ್ರೀತಿಸಿದ ಹುಡುಗ ಒಂದೆಡೆ, ಅಪ್ಪ ಅಮ್ಮ ತನಗಾಗಿ ಗೊತ್ತುಪಡಿಸಿದ ಭಾವೀ ಪತಿ ಇನ್ನೊಂದೆಡೆ. ದೂರದ ಊರಿನಲ್ಲಿರುವ ಹೆಣ್ಮಗಳು ಪ್ರೇಮದ ಬಲೆಯಲ್ಲಿ ಬಿದ್ದಿದ್ದಾಳೆ ಎಂಬುದನ್ನು ಅರಿಯದೆಯಿರುವ ಹೆತ್ತವರು, ತನ್ನ ಪ್ರೇಮವನ್ನು ಮನೆಯವರಿಂದ ಬಚ್ಚಿಟ್ಟ ಈ ಹುಡುಗಿಯ ಹೃದಯ ಮದುವೆ ಎಂದ ಕೂಡಲೇ ಡವ ಡವ ಬಡಿಯತೊಡಗುತ್ತದೆ. ಈ ನಡುವೆ ತಮ್ಮ ಮಗಳಿಗೆ ಉತ್ತಮ ಸಂಬಂಧವನ್ನು ಮನೆಯವರು ಆಲೋಚಿಸಿಯಾಗಿದೆ. ಎರಡೂ ಕುಟುಂಬಗಳು ಈ ಬಂಧಕ್ಕೆ ಒಪ್ಪಿಗೆ ಸೂಚಿಸಿಯಾಗಿದೆ. ಇನ್ನೇನು ಮಗಳ ಮದುವೆ ನಿಶ್ಚಿತಾರ್ಥ ಮಾಡಿದರಾಯಿತು ಎಂದು ಹುಡುಗಿಯ ಹೆತ್ತವರು ತಯಾರಿ ನಡೆಸುತ್ತಿರುತ್ತಾರೆ. ಇತ್ತ ಹುಡುಗಿಗೆ ತಾನು ಪ್ರೀತಿಸುತ್ತಿರುವ ಹುಡುಗ, ಈವರೆಗೆ ಜೀವನದಲ್ಲಿ ನೆಲೆಯೂರಿಲ್ಲ. ಇಲ್ಲದಿದ್ದರೆ ಅವನ ಮನೆಯಲ್ಲಿ ಯಾರಾದರೂ ಮದುವೆಯಾಗಲು ಬಾಕಿಇದ್ದು ಮದುವೆ ಮಾಡಿಕೊಳ್ಳುವ ಪಕ್ವತೆ ಅವನಿಗೆ ಬಂದಿರುವುದಿಲ್ಲ ಎಂದಿಟ್ಟುಕೊಳ್ಳಿ.
"ಮನೆಗೆ ಹುಡುಗಿ ನೋಡಲು ಬರುತ್ತಿದ್ದಾರೆ. ಅಕಸ್ಮಾತ್ ಆ ಹುಡುಗನಿಗೆ ನಾನು ಒಪ್ಪಿಗೆಯಾಗಿ ಮನೆ ಮಂದಿ ಪ್ರೊಸೀಡ್ ಮಾಡಿದ್ರೆ.? ಅಂತಾ ಹುಡುಗಿ ತನ್ನ ಪ್ರಿಯಕರನ ಮುಂದೆ ಕಣ್ಣೀರಿಡುತ್ತಾಳೆ. ಇನ್ನೇನು ಇವಳನ್ನು ಹಾರಿಸಿಕೊಂಡು ಹೋಗಿ ಮದುವೆಯಾಗಿ ಬಿಡೋಣ ಅಂದರೆ ತನ್ನ ಕೈಲಾಗುವ ಕೆಲಸವಲ್ಲ ಇದು ಎಂದು ಆತ ಚಿಂತಿತನಾಗುತ್ತಾನೆ. "ಏನೂ ಆಗಲ್ಲ ಬಿಡು. ನೀನು ಧೈರ್ಯಗುಂದ ಬೇಡ ಎಂದು ಆಕೆಯ ಕಣ್ಣೀರೊರಸಿ ಸಾಂತ್ವನ ಹೇಳುತ್ತಾನೆ. ಆದರೆ ಇಬ್ಬರ ಮನದಲ್ಲಿ ಒಳಗೊಳಗೇ ಭಯ ಕಾಡುತ್ತಲೇ ಇರುತ್ತದೆ. ಎಲ್ಲಿಯಾದರೂ ಈ ಮದುವೆ ಸೆಟ್ ಆದ್ರೆ? ಅವಳು ನನ್ನಿಂದ ದೂರ ಹೋಗುವ ಪರಿಸ್ಥಿತಿ ಬಂದರೆ?
ಇತ್ತ ಹುಡುಗಿಯನ್ನು ನೋಡಿದ ಕೂಡಲೇ ವರನ ಕಡೆಯವರಿಗೆ ಇಷ್ಟವಾಗುತ್ತದೆ. ಮಾತುಕತೆ ಮುಂದುವರಿದು ನಿಶ್ಚಿತಾರ್ಥ ದಿನ ನಿಗದಿಯಾಗುತ್ತದೆ. ಅಪ್ಪ ಅಮ್ಮನ ಮುದ್ದಿನ ಮಗಳಿಗೆ ತನ್ನ ಪ್ರೇಮ ಸಂಬಂಧದ ಕುರಿತು ಮನೆಯಲ್ಲಿ ಹೇಗೆ ಹೇಳುವುದು ಎಂಬ ಅಂಜಿಕೆ. ಹುಡುಗಿ ಮೌನಿಯಾಗುತ್ತಾಳೆ ಅಪ್ಪ ಅಮ್ಮ ತನ್ನ ಮಗಳ ಮನಸ್ಸನ್ನು ಚೆನ್ನಾಗಿ ಅರಿತುಕೊಂಡಿದ್ದೇವೆ ಎಂಬ ಭಾವನೆಯಿಂದ ಮಗಳ ಮೌನವೇ ಸಮ್ಮತಿ ಎಂದು ಮದುವೆಯ ಏರ್ಪಾಡು ಮಾಡುತ್ತಾರೆ.
ತನ್ನ ಮದುವೆ ನಿಶ್ಚಯಿಸಲಾಗಿದೆ ಎಂದು ಹುಡುಗಿ ತನ್ನ ಪ್ರಿಯತಮನಲ್ಲಿ ಹೇಳಿ ಕಣ್ಣೀರು ಸುರಿಸುತ್ತಾಳೆ. ಮೊದಲೇ ತನ್ನ ಜೀವನದಲ್ಲಿ ನೆಲೆಯೂರಿರದ ಹುಡುಗ ಇನ್ನೇನು ಹುಡುಗಿಯನ್ನು ಮದುವೆಯಾಗುವ ಯೋಚನೆ ನಡೆಸಿಯಾನು? ಏನೋ ಭಂಡ ಧೈರ್ಯದಿಂದ ಹುಡುಗಿಯನ್ನು ಹಾರಿಸಿಕೊಂಡು ಹೋಗುವ ಅಂತ ಯೋಚನೆ ಮಾಡಿದ್ರೂ "ತನ್ನ ಅಪ್ಪ ಅಮ್ಮ ನಿಶ್ಚಯಿಸಿದ ಮದುವೆ ಇದು. ಐ ಹ್ಯಾವ್ ಟು ಒಬೇ ಮೈ ಪೇರೆಂಟ್ಸ್. ಐ ಕಾಂಟ್ ಗೋ ಎಗೈಸ್ಟ್ ಮೈ ಪೇರೆಂಟ್ಸ್ ಎಂದು ಹುಡುಗಿ ಮನಸ್ಸು ಗಟ್ಟಿ ಮಾಡಿಕೊಂಡು ಹೇಳುತ್ತಾಳೆ. ಆವಾಗಲೇ ಹುಡುಗಿ ಈ ಹುಡುಗನನ್ನು ಬಿಟ್ಟು ಇನ್ನೊಬ್ಬನ ಮಡದಿಯಾಗಲು ತನ್ನ ಮನಸ್ಸನ್ನು ಸಜ್ಜುಗೊಳಿಸಿರುತ್ತಾಳೆ.
ನೋಡು ಇನ್ನು ಮೇಲೆ ನಾವಿಬ್ಬರೂ ಫ್ರೆಂಡ್ಸ್ ಆಗಿ ಇರೋಣ. ನಡೆದದ್ದೆಲ್ಲಾ ಆಯ್ತು. ನನ್ನನ್ನು ಮರೆತುಬಿಡು ಎಂದು ಹುಡುಗಿ ಉಸುರಿದಾಗ ಅವನೂ ಆಯ್ತು ಎನ್ನುತ್ತಾನೆ. ಮನಸ್ಸಿನಲ್ಲಿ ಪ್ರೀತಿ ಇದ್ದರೂ ಅವನಿಂದ ದೂರ ಸರಿಯಲು ಹುಡುಗಿ ತಯಾರಾಗುತ್ತಾಳೆ. ಈ ಮೊದಲು ತನ್ನ ಪ್ರಿಯಕರನ ಕರೆಯಿಂದ ರಿಂಗಣಿಸುತ್ತಿದ್ದ ಅವಳ ಮೊಬೈಲ್ ಈಗ ಭಾವೀ ಪತಿಯ ಕರೆಯಿಂದ ಬ್ಯುಸಿಯಾಗುತ್ತದೆ. ಎಲ್ಲಿದ್ದೀಯಾ? ಹೇಗಿದ್ದೀಯಾ? ಎಂಬ ಕ್ಷಣ ಕ್ಷಣದ ಪ್ರೇಮ ಸಂಭಾಷಣೆಯಲ್ಲಿ ಹುಡುಗಿ ಹಳೆಯ ಪ್ರೇಮಕ್ಕೆ ತೇಪೆ ಹಚ್ಚತೊಡಗುತ್ತಾಳೆ. ಇತ್ತ ಹುಡುಗ ಬೇರೆ ಹುಡುಗಿಯನ್ನು ಹುಡುಕಲು ಹೊರಡುತ್ತಾನೆ ಇಲ್ಲವೇ ದೇವದಾಸ್ ಆಗಿತ್ತಾನೆ.
ಇನ್ನೇನು ತಮ್ಮ ಮದುವೆಗೆ ಸಾಕಷ್ಟು ದಿನ ಬಾಕಿ ಇದೆ ಎನ್ನುವಾಗ ನಿಶ್ಚಿತಾರ್ಥ ನಡೆದ ಈ ಜೋಡಿ ಪರಸ್ಪರ ಭಾರೀ ಮೊಬೈಲ್ ಫೋನ್ ಸಂಭಾಷಣೆಯಲ್ಲಿ ತಲ್ಲೀನರಾಗುತ್ತಾರೆ. ಅವನ ಇಷ್ಟ ಅನಿಷ್ಟಗಳ ಬಗ್ಗೆ ತಿಳಿಯಲು ಹಾಗೇಯೇ ಅವಳ ಮನಸ್ಸನ್ನು ತಿಳಿಯಲು ಅವ ಪ್ರಯತ್ನಿಸುತ್ತಾನೆ. ಇಂತಿರುವಾಗ ಕೆಲವೊಮ್ಮೆ ಮಾತು ಮಾತಿನಲ್ಲಿ ಹುಡುಗ ತನ್ನ ಭಾವೀ ಪತ್ನಿಯ ಜೊತೆ ಒಂದಿಷ್ಟು ಮುನಿಸು ಮಾಡಿಕೊಳ್ಳಬಹುದು. ಹುಡುಗಿಯೂ ಪಟ್ಟು ಬಿಡದೇ ಇರುವಾಗ ಆ ಮುನಿಸು ಗಂಭೀರ ಸ್ವರೂಪವನ್ನು ತಾಳುತ್ತದೆ. ಈಮಧ್ಯೆ ಹುಡುಗ ಸಿಟ್ಟಿನಲ್ಲಿ ಏನಾದರೂ ಹೇಳಿ ಬಿಟ್ಟರೆ ಮುಗಿಯಿತು. ತನ್ನನ್ನು ಆತ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂಬ ನಿರ್ಧಾರಕ್ಕೆ ಹುಡುಗಿ ತಕ್ಷಣ ಬಂದು ಬಿಡುತ್ತಾಳೆ. ತಾನು ಪ್ರೀತಿಸುತ್ತಿದ್ದ ಆ ಹುಡುಗ ನನ್ನನ್ನು ಎಷ್ಟೊಂದು ಪ್ರೀತಿ ಮಾಡ್ತಾ ಇದ್ದನಲ್ಲಾ. ನಾನು ಸಿಟ್ಟು ಮಾಡಿಕೊಂಡಾಗೆಲ್ಲಾ ಅದನ್ನು ಮನ್ನಿಸಿ ಮುದ್ದು ಮಾಡುತ್ತಿದ್ದ ಆ ಕ್ಷಣಗಳು ಮನಸ್ಸಿನಲ್ಲಿ ಮೂಡಿ ಬರುತ್ತದೆ.
ತಾನು ಮದುವೆಯಾಗುವ ಮುನ್ನವೇ ಆತ ಇಷ್ಟೊಂದು ಸಿಡುಕುತನ ತೋರಿಸಿದರೆ ಮದುವೆಯಾದ ಮೇಲೆ ಏನಾಗಬಹುದು ಎಂದು ಹುಡುಗಿಯ ಮನಸ್ಸಲ್ಲೇ ಮಂಡಿಗೆ ಬೇಯುತ್ತದೆ. ಯಾರಲ್ಲಿ ಹೇಳಲಾಗದ ಪರಿಸ್ಥಿತಿ ಬಂದೊದಗಿದಾಗ ತಕ್ಷಣ ಪ್ರಿಯಕರ ನೆನಪಿಗೆ ಬರುತ್ತಾನೆ. ಅವನ ಪ್ರೀತಿಯ ಸವಿ ಮತ್ತೊಮ್ಮೆ ಬೇಕೆಂದು ಮನಸ್ಸು ಹಾತೊರೆಯುತ್ತದೆ. ಒಂದು ಬಾರಿ ಅವನಲ್ಲಿ ಮಾತನಾಡ ಬೇಕೆಂಬ ತುಡಿತ. ಅವನೋ ಅವಳ ಪ್ರೇಮದಲ್ಲಿ ಭಗ್ನ ಪ್ರೇಮಿಯೆಂದೆನಿಸಿಕೊಂಡಿದ್ದಾನೆ. ಹುಡುಗಿ ಅವನಿಗೆ ಕರೆ ಮಾಡಿ "ನೋಡು ಹೀಗೆಲ್ಲಾ ಆಗೋಯ್ತು.. ಎಂದು ಮತ್ತೆ ಕಣ್ಣೀರಿಡುತ್ತಾಳೆ. ಹೀಗೆ ಅವಳ ವಿರಹದಲ್ಲಿ ಬರಡಾಗಿದ್ದ ಆ ಜೀವ ಮತ್ತೆ ಚಿಗುರೊಡೆಯಲು ಮಿಡಿಯುತ್ತದೆ. ನಿಶ್ಚಿತಾರ್ಥ ತಾನೇ ನಡೆದಿರುವುದು. ಇನ್ನೂ ಮದುವೆ ಆಗಿಲ್ಲವಲ್ಲಾ ... ನೀನಿರದೆ ನನ್ನಿಂದ ಬದುಕಲು ಆಗ್ತಾ ಇಲ್ಲ. ಈಗಲೂ ನಿನ್ನನ್ನು ಸ್ವೀಕರಿಸಲು ತಯಾರಿದ್ದೇನೆ...ನನ್ನೊಂದಿಗೆ ಬರ್ತೀಯಾ.." ಎಂದು ಕೇಳುತ್ತಾನೆ.
ಆದರೆ ಕಟ್ಟುಪಾಡುಗಳನ್ನು ಬೇಧಿಸಿ ಬರಲು ಆ ಹೆಣ್ಣು ಮಗಳು ಒಪ್ಪುವುದಿಲ್ಲ. ಅವಳಿಗೆ ಈ ಸಮಯದಲ್ಲಿ ಬೇಕಾಗಿರುವುದು ಒಂದಿಷ್ಟು ಪ್ರೀತಿ ಮತ್ತು ಸಾಂತ್ವನದ ನುಡಿಗಳು. ಆದಾಗ್ಯೂ ತನ್ನ ದುಃಖವನ್ನೆಲ್ಲಾ ಹಂಚಿಕೊಂಡು ಮನಸ್ಸು ಹಗುರವಾಗಿರಿಸಿದ ಮೇಲೆ ಅವಳು "ತಾನು ತನ್ನಮನೆಯವರನ್ನ ಅವಮಾನಕ್ಕೊಳಗಾಗುವಂತೆ ಮಾಡಲ್ಲ. ಹೇಗಿದ್ದರೂ ನಾನು ಅವನನ್ನೇ ಮದುವೆಯಾಗುತ್ತೇನೆ. ಇನ್ನು ನಾನು ನಿನ್ನತ್ತ ಬರಲ್ಲ'' ಎಂದು ಪುನಃ ಮನಸ್ಸು ಗಟ್ಟಿ ಮಾಡಿಕೊಂಡು ಹೇಳುತ್ತಾಳೆ. ಇನ್ನು ಮುಂದೆ ಜೀವನದಲ್ಲಿ ಏನೇ ಬಂದರೂ ಸಹಿಸುತ್ತೇನೆ ಎಂದು ಅವಳನ್ನು ಅವಳೇ ಸ್ವತಃ ತಯಾರು ಮಾಡಿಕೊಳ್ಳುತ್ತಾಳೆ. ಹೀಗೆ ಹೆಣ್ಣು ಮಗಳ ಜೀವನ ದ್ವಂದ್ವಗಳಲ್ಲಿ ಸಿಲುಕಿದರೂ ದ್ವಂದ್ವಗಳ ಜತೆಗೇ ಮುಂದುವರಿಯುತ್ತದೆ.
ಪ್ರತಿಕ್ರಿಯೆ (3)