ಪರಿಸರ ಸ್ನೇಹಿ ಮನೆ ಕಟ್ಟಿದರೆ ಏನಾಗುತ್ತದೆ? ಪರಿಸರವೇ ಮನೆಗೆ ಬಂದು ಠಳಾಯಿಸುತ್ತದೆ! ರಸ್ಕಿನ್ ಬಾಂಡ್ ಅವರ ‘ಎಕ್ಸೆಂಟ್ರಿಕ್ ಗೆಸ್ಟ್ಸ್’ ಕಿರುಗತೆ ನೆನೆಪಾಗಿರಬಹುದು ತಮಗೆ.

ಧಾರವಾಡದ ಡಾ. ಪ್ರಕಾಶ ಭಟ್ ಲ್ಯಾರಿ ಬೇಕರ್ ಮಾದರಿಯ ಕಡಿಮೆ ವೆಚ್ಚದ ಪರಿಸರ ಸ್ನೇಹಿ ‘ಬಯಲು’ ಮನೆ ನಿರ್ಮಿಸಿದ್ದಾರೆ. ಅದು ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿನ ಮನೆಗಳಂತೆ  ಧಾರವಾಡದ ಕಾಂಕ್ರೀಟ್ ಕಾಡಿನ ಮಧ್ಯೆ ಕಂಗೊಳಿಸುತ್ತಿದೆ. ಹಳಿಯಾಳ ರಸ್ತೆಯ ಮೇಲೆ ತಪೋವನ ದಾಟಿ ತುಸು ಮುಂದೆ ಸಾಗಿದರೆ ಧಾರವಾಡದ ಹೊರವಲಯವಾದ ಹೊಯ್ಸಳನಗರದಲ್ಲಿ ಈ ಸುಂದರ ಮನೆ ಇದೆ. ಆ ಮನೆಯ ಬಗ್ಗೆಯೇ ನಾಲ್ಕು ಲೇಖನ ಬರೆಯಬಹುದು! ಆದರೆ ನನಗೀಗ ಮುಖ್ಯವಾಗಿರೋದು ಆ ಮನೆಯಲ್ಲಿ ‘ಗೂಡು ಕಟ್ಟಿದ’ ಕೆಂಪು ಬಾಲದ ಪಿಕಳಾರ Red-Vented Bulbul.

 

ನಮ್ಮ ಸುದ್ದಿ ನಾಸಿಕಕ್ಕೆ ವಾಸನೆ ಬಡಿದದ್ದೇ ತಡ; ಡಾ. ಪ್ರಕಾಶ ಅಣ್ಣ ಅವರಿಗೆ ನಾನು ದುಂಬಾಲು ಬಿದ್ದೆ. "ಸರಿ..ಹರ್ಷ ಮನೆಗೆ ಬನ್ನಿ, ಆದರೆ ಫ್ಲ್ಯಾಷ್ ಹಾಕಿ ಫೋಟೊ ತೆಗೆಯಬೇಡಿ. ಬುಲ್ ಬುಲ್ ಸಮೀಪ ಹೋಗಿ Disturb ಮಾಡಬೇಡಿ"  ಅಂತ ತಮ್ಮ ಕಾಳಜಿ ವ್ಯಕ್ತ ಪಡಿಸಿದರು. ಆದರೆ ಇತ್ತ ಕೇದಾರ ಅಣ್ಣ ಸೂಕ್ಷ್ಮವಾಗಿ ಕಿವಿಯಲ್ಲಿ ಉಸುರಿದರು.."ಹರ್ಷ..ಫ್ಲ್ಯಾಷ್ ಹಾಕದೇ ಫೋಟೊ ಬರೋದಿಲ್ಲ..". ಧರ್ಮ ಸಂಕಟದಲ್ಲಿ ಬಿದ್ದೆ. ಡಾ. ಪ್ರಕಾಶ ಅಣ್ಣ ಹೇಳಿದರು.." ಮೊದಲೂ ಒಮ್ಮೆ ಇಲ್ಲಿಯೇ ಅದು ಗೂಡು ಕಟ್ಟಿತ್ತು. ಆ ಪಕ್ಕ ನಮ್ಮ ಮಕ್ಕಳ ಟಿ.ವಿ. ರೂಮ್ ಇದೆ. ಕ್ರಿಕೇಟ್ ಮ್ಯಾಚ್ ಇದ್ದ ಕಾರಣ ಅವರು ಲೈಟ್ ಹಾಕಿಕೊಂಡು ಹಗಲೂ-ರಾತ್ರಿ ಮ್ಯಾಚ್ ನೋಡಿದರು. ಬಹುಶ: ಆ ಬುಲ್-ಬುಲ್ ಪಕ್ಷಿಯ ಶಾಂತತೆಗೆ ಭಂಗ ಬಂತು ಅಂತ ಕಾಣಸ್ತದೆ; ಒಂದು ದಿನ ಬೆಳಿಗ್ಗೆ ಗೂಡು ಬಿಟ್ಟು ಹಾರಿ ಹೋಗಿದ್ದು ಮತ್ತೆ ಮರಳಿ ಬರಲೇ ಇಲ್ಲ. ಈ ಬಾರಿ ಮಕ್ಕಳು ಹುಷಾರಾಗಿದ್ದಾರೆ, ಅದು ಗೂಡು ಕಟ್ಟಿದ ಮೇಲೆ ಆ ಟಿ.ವಿ ರೂಮಿನ ಕಡೆ ಅವರು ಸುಳಿದಿಲ್ಲ!. ಅದು ಮೂರು ಮೊಟ್ಟೆ ಇಟ್ಟಿರುವುದನ್ನು ಸುನಂದಾ (ಅವರ ಶ್ರೀಮತಿ, ನಮ್ಮ ವೈನಿ) ನೋಡಿದ್ದಾಳೆ. ಅದಕ್ಕೆ ನಾವು ಸುಖಾಸುಮ್ನೆ ತೊಂದರೆ ಕೊಡುವುದು ಬೇಡ" ಸ್ಪಷ್ಟಸ್ವಾಗಿತ್ತು ಅವರ ನಿಲುವು.

ಕೇದಾರ ಅಣ್ಣ ಅಂದ್ರು "ಸರ್..ಅವರ ಕಳಕಳಿ ಮೆಚ್ಚಬೇಕು. ನಿಮ್ಮ ಫೀಚರ್ ಬರದೇ ಇದ್ರೂ ಪರವಾಗಿಲ್ಲ..ಕೇವಲ ನೋಡಿಕೊಂಡು ಹೋಗೋಣ". ಎಲಾ ಇವನ..ಯಾರ ಪಾರ್ಟಿ ಕೇದಾರ ಅಣ್ಣ? ನಾವು ಇಲ್ಲಿ ತನಕ ಬಂದಿದ್ಯಾಕೆ? "ಹೇಗಾದರೂ ಮಾಡಿ ಒಂದು ಫೋಟೊ ಬೇಕೆ ಬೇಕು" ನಾನು ಕೇದಾರ ಅಣ್ಣನ ಮುಂದೆ ಸತ್ಯಾಗ್ರಹಕ್ಕೆ ಅಣಿಯಾದೆ. ಫ್ಲ್ಯಾಷ್ ಹಾಕದೇ ಇದ್ದ ಬೆಳಕಿನಲ್ಲಿಯೇ ನಾಲ್ಕಾರು ಫೋಟೊ ಕ್ಲಿಕ್ಕಿಸಿದರು! (ಫೋಟೊ ನೋಡಿ.) ‘ಕ್ರಿಮ್’ ಎಂದು ಒಮ್ಮೆ ತಾಯಿ ಹಕ್ಕಿ ಮೆಲು ದನಿಯಲ್ಲಿ ಕೂಗಿ ಎಚ್ಚರಿಸಿತು. ಕಿಟಕಿಯ ಸರಳಿಗೆ ಕುಳಿತಿದ್ದ ಯಜಮಾನ ಪಿಕಳಾರ ‘ಕ್ರಿಮ್ ಕ್ರಿಮ್..ಕ್ರಿಮ್’ ಎಂದು ಮೂರ್ನಾಲ್ಕು ಬಾರಿ ಕೂಗಿ ಅಪಾಯದ ಮುನ್ಸೂಚನೆ ನೀಡಿ, ಹಾರುತ್ತ ನಮ್ಮ ದಾರಿ ತಪ್ಪಿಸಲು ಯತ್ನಿಸಿತು. ಪ್ರಕಾಶ ಅಣ್ಣ ಒಲ್ಲದ ಮನಸ್ಸಿನಿಂದ ನಮ್ಮನ್ನು ನೋಡುತ್ತಿದ್ದರು. ಅಷ್ಟಕ್ಕೇ ನಮ್ಮ ಸರ್ಕಸ್ ನಿಲ್ಲಿಸಿ ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆವು.

ನೈಸರ್ಗಿಕವಾಗಿ ಗಾಳಿ, ಬೆಳಕು ಹಾಗೆಯೇ ಮನೆಯೊಳಗಿನ ವಾತಾವರಣ ತಂಪಾಗಿರಬೇಕು ಎಂದು ಹಾಲ್ ಪಕ್ಕದಲ್ಲಿಯೇ ನಾಲ್ಕಾರು ಗಿಡಗಳನ್ನು, ನೀರಿನ ಸಣ್ಣ ಹೊಂಡವನ್ನು ಅವರು ನಿರ್ಮಿಸಿದ್ದಾರೆ. ಆ ಗಿಡಗಳಲ್ಲಿ ನಾಲ್ಕಾರು ಬಿದಿರಿನ ಗಿಡಗಳೂ ಸೇರಿವೆ. ಅವು ಮನೆಯ ಮೇಲ್ಛಾವಣಿಗೆ ತಾಗುವಷ್ಟು ಎತ್ತರ ಬೆಳೆದುನಿಂತಿವೆ. ಮಧ್ಯದ ಹೊಂಡದಲ್ಲಿ ಅಕ್ವೇರಿಯಂ ಇದೆ. ಅದರಲ್ಲಿ ಬಣ್ಣ ಬಣ್ಣದ ಚಿಕ್ಕ ಮೀನುಗಳು; ಜೊತೆಗೆ ಅವರ ಮಕ್ಕಳು ತಂದು ಬಿಟ್ಟ ಕಲ್ಲಾಮೆಯ ಮರಿ ಅನ್ಯೋನ್ಯವಾಗಿವೆ. ಒಟ್ಟಾರೆ ಆ ಮನೆ ನಂದನವನ. ಆ ಬಿದಿರಿನ ಒಂದು ಗಳಕ್ಕೆ ನಮ್ಮ ಕೆಂಪುಬಾಲದ ಪಿಕಳಾರ ಗೂಡು ಕಟ್ಟಿದೆ. ಹಾಗಾಗಿ ಮನೆಯ ಎರಡನೇ ಮಹಡಿಯ ಕಿಟಕಿಗಳನ್ನು ಸದಾ ತೆರೆದೇ ಇಡಲಾಗಿದೆ. ಪಿಕಳಾರ ದಂಪತಿಗಳು ತಮಗೆ ಬೇಕೆನಿಸಿದಾಗ ಪೇಟೆಗೆ-ಮನೆಗೆ ಹೋಗಿ-ಬಂದು ಮಾಡಬಹುದು!

ಕನ್ನಡದಲ್ಲಿ ಪಿಕಳಾರ ಎಂದು ಕರೆಯಿಸಿಕೊಳ್ಳುವ ಈ ಹಕ್ಕಿಗೆ ಹಿಂದಿ ಭಾಷೆಯಲ್ಲಿ ಬುಲ್ ಬುಲ್, ಗುಲ್ಡುಮ್, ತೆಲುಗಿನಲ್ಲಿ ಪಿಗಲಿ ಪಿಟ್ಟಾ, ತಮಿಳಿನಲ್ಲಿ ಕೊಂಡಲಾಟಿ, ಕೊಂಡಾಯಿ ಕುರುವಿ, ಮಲಯಾಳಿ ಭಾಷೆಯಲ್ಲಿ ನಟ್ಟು ಬುಲ್ ಬುಲ್ ಎನ್ನಲಾಗುತ್ತದೆ. ಕೆಂಪು ಬಾಲದ ಪಿಕಳಾರ ೮ ಇಂಚು ಅಥವಾ ೨೦ ಸೆಂಟಿ ಮೀಟರ್, ಅರ್ಥಾತ್ ಮೈನಾ ಪಕ್ಷಿಯಷ್ಟು ಗಾತ್ರ ಹೊಂದಿರುತ್ತದೆ. ಹೊಗೆಗಪ್ಪು ಮೈ ಬಣ್ಣ . ತಲೆಯ ಮೇಲೆ ಚೋಟುದ್ದ ‘ಕಿರೀಟ’ ವಿಟ್ಟಂತೆ ತುರಾಯಿ . ಎದೆ ಹಾಗೂ ಬೆನ್ನಿನ ಮೇಲೆ ಮೀನಿನ ಹುರುಪೆಯ ರೀತಿ ಸ್ಪಷ್ಟವಾಗಿ ಕಾಣುವಂತೆ ಪುಕ್ಕಗಳ ಜೋಡಣೆ ಇದೆ. ಬಾಲದ ಪುಕ್ಕಗಳ ಬುಡದಲ್ಲಿ (ಕೆಂಗುಂಡಿ) ಎದ್ದು ಕಾಣುವಂತೆ ರಕ್ತಗೆಂಪು ಬಣ್ಣ ಈ ಪಕ್ಷಿಯನ್ನು ಸುಲಭವಾಗಿ ಗುರುತಿಸುವ ವಿಧಾನ. ಬಾಲದ ತುದಿ ಬೆಳ್ಳಗಿದ್ದು ಹಾರುವಾಗ ತುಂಬ ಸುಂದರವಾಗಿ ‘ಬ್ಲ್ಯಾಕ್ ಅಂಡ್ ವ್ಹೈಟ್’ ಕಾಂಬಿನೇಷನ್ ಕಾಣಿಸುತ್ತದೆ. ಒಟ್ಟಾರೆ ಈ ಬುಲ್ ಬುಲ್ ಸಮುದಾಯದಲ್ಲಿ ೭ ಪ್ರಜಾತಿಗಳಿವೆ. ಬಣ್ಣ, ಆಕಾರ, ಗಾತ್ರ,ಗೂಡು ಕಟ್ಟುವಿಕೆ, ಬದುಕು ಸವೆಸುವುದು ಎಲ್ಲ ವಿಭಿನ್ನವಾಗಿದ್ದು ಪ್ರಕೃತಿಗೆ ತಮ್ಮದೇ ಆದ ಕಾಣಿಕೆ ನೀಡುತ್ತ ಬಂದಿವೆ.

ಯಾವತ್ತೂ ಜೋಡಿಯಾಗಿಯೇ ಕಾಣ ಸಿಗುವ ಪಿಕಳಾರಗಳು , ಚದುರಿದ ಗುಂಪುಗಳಲ್ಲಿಯೂ ಕಾಣಸಿಗುತ್ತವೆ. ಕೆಂಪುಬಾಲದ ಪಿಕಳಾರ ಹಣ್ಣಿನ ಗಿಡಗಳಿರುವ ಪುಟ್ಟ ಕಾಡುಗಳಲ್ಲಿ, ತೋಟಗಳಲ್ಲಿ, ಉದ್ಯಾನವನಗಳಲ್ಲಿ ಹುಳು ಹಿಡಿಯುತ್ತ ಕಾಣಸಿಗುತ್ತವೆ. ಮನುಷ್ಯರ ವಾಸಸ್ಥಳಗಳ ಬಳಿ ವಾಸಿಸಲು, ತನ್ಮೂಲಕ ತಮಗೂ ಹಾಗೂ ತಮ್ಮ ಗೂಡು, ಮೊಟ್ಟೆ, ಮರಿಗಳಿಗೆ ಮನುಷ್ಯರ ಆಶ್ರಯ, ರಕ್ಷಣೆ ಬಯಸುತ್ತವೆ. ಗೋಣಿ, ಆಲ, ಬಸರಿ, ಅಂಜೂರು, ಸಿಂಗಾಪೂರ ಚೆರ್ರಿ, ಚಕ್ಕೋತ, ಪಪ್ಪಾಯಾ, ಮರ ಸೇಬು, ಬಟರಫ್ರುಟ್ ಮೊದಲಾದ ಗಿಡಗಳು ಹಣ್ಣು ಬಿಟ್ಟಾಗ ಹಲವಾರು ಹಕ್ಕಿಗಳೊಂದಿಗೆ ಅಲ್ಲಿ ನೆರೆದು ಸಂಗೀತ ಕಚೇರಿಯನ್ನೇ ನಡೆಸುತ್ತವೆ. ಕೆಮ್ಮೀಸೆಯ ಪಿಕಳಾರ ಎಂದು ಕರೆಯಿಸಿಕೊಳುವ Red-whiskered Bulbul ದಂತೆ ಕೆಂಪು ಬಾಲದ ಪಿಕಳಾರ ಸದಾ ಗಲಾಟೆ ಮಾಡುವ ಪಕ್ಷಿಯಲ್ಲ. ಸ್ವಭಾವತ: ಶಾಂತ ಮನಸ್ಸಿನ ಹಕ್ಕಿ. ‘ಕ್ರಿಮ್’ ಎಂದು ಮೆಲುದನಿಯಲ್ಲಿ ಮಧುರವಾಗಿ ಕೂಗುತ್ತದೆ. ಅಪಾಯ, ದು:ಖ, ಖುಷಿ ಮೊದಲಾದ ಸಂದರ್ಭಗಳಲ್ಲಿ ವಿವಿಧ ಸ್ವರಗಳಲ್ಲಿ ಕೂಗಿ ತಮ್ಮ ಭಾವನೆಯನ್ನು ಇವು ವ್ಯಕ್ತ ಪಡಿಸುತ್ತವೆ. ಹಾರುವಾಗಲೂ ಅಷ್ಟೇ ಭಾವನೆಗಳಿಗೆ ತಕ್ಕಂತೆ ತೇಲುತ್ತ ಮೇಲೆ-ಕೆಳಗೆ ಹಾರಿ ನೋಡುಗರ ಗಮನ ಸೆಳೆಯುತ್ತವೆ.

ಭಾರತದಾದ್ಯಂತ, ಬಾಂಗ್ಲಾದೇಶ, ಶ್ರೀಲಂಕಾ, ಮಯನ್ಮಾರ ಸೇರಿದಂತೆ ಪಾಕಿಸ್ತಾನದ ಬಹುತೇಕ ಸಮುದ್ರ ಮಟ್ಟದಿಂದ ೧೫೦೦ ಮೀಟರ್ ಎತ್ತರದ ಪ್ರದೇಶಗಳಲ್ಲಿಯೂ ೭ ಪ್ರಜಾತಿಯ ಬುಲ್ ಬುಲ್ ಗಳು ವಾಸ ಮಾಡುತ್ತವೆ.

ಕೀಟಗಳು, ಕ್ರಿಮಿಗಳನ್ನು ಭಕ್ಷಿಸಿ ರೈತ ಸ್ನೇಹಿ ಎಂದು ಸಹ ಕರೆಯಿಸಿಕೊಳ್ಳುವ ಪಿಕಳಾರಗಳು, ಹಣ್ಣು, ಮಕರಂಧ ಸಹ ಇಷ್ಟಪಟ್ಟು ಸೇವಿಸುತ್ತವೆ. ಫೆಬ್ರುವರಿಯಿಂದ ಮೇ ತಿಂಗಳಿನ ವರೆಗೆ, ಕೆಲವೊಮ್ಮೆ ಆಗಸ್ಟ್ ತಿಂಗಳಿನ ವರೆಗೂ ಸಂತಾನೋತ್ಪತ್ತಿಯಲ್ಲಿ ಅವು ತೊಡಗಿಕೊಳ್ಳುತ್ತವೆ. ಪೊದೆಗಳ ಕವಲುಗಳಲ್ಲಿ, ದಾಸವಾಳ ಗಿಡದ ದಟ್ಟಾದ ಎಲೆಗಳ ಮರೆಯಲ್ಲಿ, ನಾರು ಹುಲ್ಲು ಮತ್ತು ಜೇಡನನ್ನು ಕೊಂದು ಬಲೆ ಎಗರಿಸಿ ತಂದು ಗೂಡಿಗೆ ಹೆಣಿಕೆ ಹಾಕಿ ಬಟ್ಟಲಾಕಾರದಲ್ಲಿ ಗೂಡುಗಳನ್ನು ನಿರ್ಮಿಸುತ್ತವೆ. ಗೂಡು ನೋಡಲು ಅಷ್ಟೇನೂ ಆಕರ್ಷಕವಾಗಿರುವುದಿಲ್ಲ. ಇದು ನೆಲದಿಂದ ಸುಮಾರು ೩ ಅಡಿಯಿಂದ ೩೦ ಅಡಿಗಳಷ್ಟು ಎತ್ತರದಲ್ಲಿ ಗೂಡು ಕಟ್ಟುತ್ತವೆ. ತಿಳಿ ಗುಲಾಬಿ ಬಣ್ಣದ ೨ ರಿಂದ ೩ ಮೊಟ್ಟೆಗಳನ್ನು ಇಟ್ಟು ತಂದೆ-ತಾಯಿ ಹಕ್ಕಿಗಳೆರಡೂ ಮಕ್ಕಳ ಪಾಲನೆ ಪೋಷಣೆಯಲ್ಲಿ ತೊಡಗಿಕೊಳ್ಳುತ್ತವೆ.

ಡಾ. ಪ್ರಕಾಶ ಭಟ್ ಅವರ ಮನೆಯಲ್ಲಿ ಮೂರು ಮೊಟ್ಟೆಗಳು ಯಶಸ್ವಿಯಾಗಿ ೨೧ ದಿನಗಳಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದವು. ನಂತರ ೨೪ ದಿನಗಳಲ್ಲಿ ಗೂಡನ್ನು ಖಾಲಿ ಮಾಡಿ ತಮ್ಮ ಪುಟ್ಟ ಮರಿಗಳನ್ನು ಕರೆದುಕೊಂಡು ಬುಲು ಬುಲ್ ಹಾರಿ ಹೋಗಿವೆ. ಈಗ ಡಾ. ಪ್ರಕಾಶ ಅಣ್ಣ ಅವರ ಮನೆಯಲ್ಲಿ ಖಾಲಿ ಗೂಡು ಜೊತೆಗೆ ಅವುಗಳ ಸವಿ ನೆನಪು ಉಳಿದಿವೆ. ಆಗಾಗ ಮತ್ತೆ ಐದು ಹಾರಿ ಬಂದು ಮನೆಯ ವರಾಂಡಾದಲ್ಲಿ ಕುಳಿತು ಹಾಡಿ, ಹಾರಿಹೋಗುತ್ತವಂತೆ..ಸುನಂದಾ ವೈನಿ ಜ್ಞಾಪಿಸಿಕೊಳ್ಳುತ್ತಾರೆ.