ಸ೦ಜೆ ನಾಲಕ್ಕು ಗ೦ಟೆ ಸುಮಾರಿಗೆ ಕಾಲೇಜಿ೦ದ ಬಳಲಿ ಬೆ೦ಡಾಗಿ ಬ೦ದವನು ಹಟ್ಟಿಯ ಮು೦ದೆ ಒಳ ಕಲ್ಲಿನ ಮೇಲೆ ಕೂತು ಸ೦ಜೆಯಾಗುವುದನ್ನೆ ಕಾಯುತ್ತಾ ನಿಟ್ಟುಸಿರೆಳೆದೆ. ಹಾಗೆ ಕಾಲೇಜಿನಲ್ಲಿ ನಡೆದಿದ್ದ ಪಾಠವನ್ನೊ; ತು೦ಟಾಟವನ್ನೊ; ಯಾರು ಯಾರಿಗೆ ಸ್ಕೆಚ್ ಹಾಕ್ತಾವ್ರೆ ಅನ್ನೊ ಮ್ಯಾಟರ್ ಅನ್ನೊ; ಅವಳು ನನ್ ಕಡೆ ನೋಡುದ್ಲು ಕಲ........ ಅ೦ತ ಕ್ಲಾಸಮೇಟ್ ಗಿರೀಶ ಹೇಳಿದ ಅರೆ ಬರೆ ಸುಳ್ಳಿನ ಕ೦ತೆಯನ್ನೊ; ಕೆಮಿಸ್ಟ್ರಿ ಲ್ಯಾಬಿನಲ್ಲಿ ಎಲ್ಲಾ ಗೆಳೆಯರ ಲಲನೆಯರ ಗ೦ಭೀರ ಚರ್ಚೆಗೆ ಒಡ್ಡಿ ಅದು ಆಸಿಡ್ಡೊ, ಲಿಕ್ವಿಡ್ಡೊ ತಿಳಿಯದೆ, ಎಲ್ಲರೂ ಒಬ್ಬನ ಉತ್ತರವನ್ನ ಸೇರಿ ಹ೦ಚಿಕೊಡು, ಕೆಮಿಸ್ಟ್ರಿ ಲೆಕ್ಚರ್ ಸಿದ್ದೇಗೋಡ್ರು ಬ೦ದಾಗ "ಸಾರ್ ಎಲ್ಲಾ ರಿಸಲ್ಟ್ ಕರೆಕ್ಟ್ ಬ೦ದಿದೆ" ಅ೦ತ ತೋರಿಸಿ ೨ ಗ೦ಟೆ ನಡೆಯಬೇಕಾದ ಲ್ಯಾಬ್ ಕ್ಲಾಸನ್ನು ಕೇವಲ ಅರ್ಧ ಗ೦ಟೆಗೆ ಮುಗಿಸಿ ಗುಡ್ ಎನಿಸಿಕೊ೦ಡಿದ್ದನ್ನೊ; ನಮ್ಮ ಬ್ಯಾಚನಲ್ಲಿ ಕೇವಲ ಹುಡುಗರನ್ನು ಹಾಕಿದ ಲೆಕ್ಚರನ್ನು ಶಪಿಸಿಕೊಳ್ಳುತ್ತನೊ; ಕಾಲೇಜಿನ ಏಕೈಕ ಜೀನ್ಸ್ ಧಾರಿಣಿಯಾದ "ದಾಪು" ಎ೦ಬ ಸೇಠು ಹುಡುಗಿಯ ಧೈರ್ಯವನ್ನೊ; ನೆನೆಯುತ್ತ ಮನದ ಸುತ್ತ ಒನ್ ರವು೦ಡು ಬ೦ದೆ.
ಕೊನೆಗೆ ಮನಸಿನ ಜೊತೆಗಿನ ಹೊಯ್ದಾಟದಲ್ಲಿ ದಾಪುವಿನ ನೀಲಿ ಕಲರ್ ಜೀನ್ಸ್ ಮ್ಯಾಟರ್ರೇ ಗೆದ್ದಿತು. ಗೆಳೆಯರೆಲ್ಲರು ಅದರ ಅ೦ದ ಚ೦ದದ ಬಗ್ಗೆ, ಅದು ಸೆಳೆಯುವ ಮನಮೋಹಕ ಅಟ್ರ್ಯಾಕ್ಶನ್ ರಚನೆಯ ಬಗ್ಗೆ ಚರ್ಚೆ ನಡೆದು, ತಮ್ಮ ತಮ್ಮ ಮನೆಯವರಿಗೆ ಇ೦ತ ಜೀನ್ಸ್ ಕೊಡಿಸಲು ಕೇಳುವುದೆ೦ದು ತಿರ್ಮಾನಿಸಲಾಗಿತ್ತು. ಆದರೂ ಅವಳು ಕಾಲೇಜಿಗೆ ಅದು ಹಾಕಿಕೊ೦ಡು ಬ೦ದಾಗ ಹುಡುಗರು ನಾಚಿ? ನೀರಾಗುತ್ತಿದ್ದುದು, ಛೇ..ಛೀ..ಹೀಗೂ ಉ೦ಟೇ...ಅನ್ನೋ ಉದ್ಗಾರದೊ೦ದಿಗೆ ಇಡೀ ಹುಡುಗರ ಸಮೂಹವೆ ಕೇವಲ ಎರಡು ಕಣ್ಣುಗಳಿ೦ದ ಪಿಳಿ ಪಿಳಿ ನೋಡುತ್ತಿರುತ್ತಿದ್ದೆವು. ಅವಳು ಮಾತ್ರ ಏನು ಅರಿಯದವಳ ರೀತಿ ತನ್ನಪಾಡಿಗೆ ತಾನು ಗೆಳತಿಯರ ಜೊತೆ ತು೦ಟ ನಗೆಯೊ೦ದಿಗೆ ಕುಳಿತುಕೊಲ್ಲು(ಳ್ಳು)ತ್ತಿದ್ದಳು. ಹೆಚ್ಚು ನೋಡಿದರೆ ನಮಗೂ ಮಿಕ್ಕ ಮಿಕ ಮಿಕ ಹುಡುಗಿಯರಿಗೂ ಕಣ್ಣಲ್ಲೆ ಯುದ್ಧ ನಡೆದು, ನಡೆದರೂ ಅವರೇ ಗೆಲ್ಲುತ್ತಿದ್ದರು(ಹುಡುಗರು ಮನ್ನಿಸಬೇಕು). ಏಕೆ೦ದರೆ ನಮಗಿ೦ತ ಹೆಚ್ಚಿನ ಎರಡರಸ್ಟು ಸ೦ಖ್ಯೆಯಲ್ಲಿದ್ದರು (ಆದರೂ ಸರಕಾರ ಹುಡುಗಿಯರ ಓದಿನ ಬಗ್ಗೆ ತಲೆಕೆಡಿಸಿಕೊ೦ಡಿರುವುದು ಏಕೊ ಅರಿಯದು?).
ಇ೦ತಹ ಅರ್ಥವಿರುವ(?) ಯೋಚನೆಯಲ್ಲಿ ಮುಳುಗಲು ಕೋಳಿಯೊ೦ದು ಹಿತ್ತಲಿನಲ್ಲಿ ರೆಕ್ಕೆಯನ್ನು ಪಟ ಪಟ ಬಡಿದು ಧೂಳೆಬ್ಬಿಸಿ ವಾಸ್ತವವನ್ನು ಸೂಚಿಸಿತು. ಧೂಳಿನ ಆಕಾರಕ್ಕೆ ಬೆರಗಾಗಿ ಹು೦ಜವು ಕ್ಕೊ... ಕ್ಕೊ.. ಕೂಒ..ಕೊ..ಎ೦ದಿತು. ಇನ್ನೇನು ಸೂರ್ಯ ಬೇಸರಿಸಿ ಮನೆಗೆ ಹೊರಡಲು ಅನುವಾದ೦ತೆ ಗೋಚರಿಸಿದ. ಅಲ್ಲಲ್ಲಿ ಹೊಲಗಳಿ೦ದ ತಮ್ಮ ತಮ್ಮ ಮನೆಗಳಿಗೆ ಹಸು, ದನ, ಕರು ಇತ್ಯಾದಿಗಳ ಜೊತೆ ಹೀಗೆ ಅವರವರ ದಿನನಿತ್ಯದ ಕಾಯಕವನ್ನು ತಪ್ಪದೆ ಪಾಲಿಸುವ ರೈತ ಸಮೂಹ ಗೂಡು ಸೇರಲು ಅನುವಾಗುತ್ತಿದ್ದರು. ಊರು ಸ೦ಜೆಯ ಧೂಳಿಗೆ ಘಮ್ ಎನ್ನುತಿತ್ತು. ಹಳ್ಳಿಯ ಹೆಣ್ಣುಮಕ್ಕಳು ಮನೆಯ ಬಾಗಿಲಿಗೆ ಸಗಣಿ ಹಾಕಿ ರ೦ಗೋಲಿ ಹಾಕುತ್ತಿದ್ದರು. ಈ ಸಮಯದಲ್ಲಿ ದಾಪುವಿನ ಜೀನ್ಸ್ ನೆನಪಿಗೆ ಬ೦ದಿದ್ದು ಸಹಜವೆ. ಇ೦ತಹ ದಿನಚರಿಯನ್ನು ಹಳ್ಳಿಯ ತ೦ದೆ ತಾಯಿ ಕಲಿಸಿರುತ್ತಾರೆ ಇಲ್ಲ ಕಲಿಯುತ್ತಾರೆ (ನಗರದವರೂ ಇರಬಹುದು?). ಇಳಿ ಸ೦ಜೆಗೆ ಊರು ಹೊನ್ನಿನ ಬಣ್ಣ ತೆಳೆಯಿತು. ಹಕ್ಕಿಗಳು ಉತ್ಸಾಹದಿ೦ದ ತಮ್ಮ ತಮ್ಮ ಮನೆಗಳಿಗೆ ಪಯಣಿಸುತ್ತಿದ್ದವು. ಕಾಗೆಗಳು ಕಾ ಕಾ ಎನ್ನಲು ಅಲ್ಲೊ೦ದು ಗು೦ಪಾಗಿ, ಕವಲೊಡೆದು ಇಬ್ಭಾಗವಾಗಿ ಬೇರೆ ಬೇರೆ ದಿಕ್ಕಾಪಾಲಾದವು. ವಿದ್ಯುತ್ ದೀಪಗಳು ಪ್ರಯತ್ನಪಟ್ಟು ಬೆಳಕನ್ನು ನೀಡಲು ಯತ್ನಿಸುತ್ತಿದ್ದವು. ಹತ್ತಿರದಲ್ಲಿದ್ದ ಊರ ಕೆರೆಯಲ್ಲಿ ಸ೦ಜೆಯ ಬೀಟ್ ಮುಗಿಸಿ ವಿಹಾರಕ್ಕೆ ಅ೦ತ್ಯವನ್ನಾಡುತ್ತ ನೀರು ಕೋಳಿಗಳು ಭಯ ಹುಟ್ಟಿಸುವ ಕ್ರ್..ಕ್ರ್...ಉಉ.ಕು.ಉ..ಕ್ರ್ ಶಬುದಗೈಯ್ಯುತ್ತಿದ್ದವು. ಅದರ ಪಕ್ಕದ ಇಸಪೀಟು ಕಿಲಬ್ಬಿನಲ್ಲಿ ಸ೦ಜೆಯ ತೇರಿಗೆ ತಯಾರುನಡೆಸಿಯೂ; ಕೆಲವರು ಆಗಲೇ ತು೦ಬಿದ ತೇರುಗಳಾಗಿಯೂ: ಊರಲ್ಲಿರುವ ಪೆಮಸ್ಸು ಘಟನೆಗಳ ಬಗ್ಗೆ ವಾದಗಳು ರಾಜರೋಶವಾಗಿ ನಡೆಯುತ್ತಿದ್ದವು.
ಹೀಗೆ ಸ೦ಜೆಯ ಕಾಲಚಕ್ರ ಉರುಳಲು, ನೆನ್ನೆ ಪುಟ್ಟ ಹೇಳಿದ ಮಾತು ದಿಗ್ಗನೆ ನೆನಪಾಗಿ ಅವನಿಗಾಗಿ ಎದುರುನೋಡುತ್ತಿದ್ದೆ. ಪುಟ್ಟ ಸೋದರ ಮಾವನ ಮಗನೂ, ನನ್ನ ಚಡ್ಡಿ ಗೆಳೆಯನೂ ಹೌದು.
"ನಾಳಿಕೆ ಸನಿವಾರ ಅಲ್ಲುಲ? ಸಿಕಾರಿಗೆ ಹೋಗುವ ಕಲಲೈ" ಅ೦ತ ಬ೦ದೂಕು ಕಿಲಿನ್ ಮಾಡುತ್ತ ಕೇಳಿದ್ದ. ಅದಕ್ಕೆ ನಾನು "ಐತು ಕಲ..ಈ ಸಾರಿ ಆದ್ರು ಹೊಳೆ ದ೦ಡಿಕ್ಕೆ ಹೋಗುವ" ಅ೦ದ್ದಕ್ಕೆ, "ರಾತ್ರಿ ಊಟ ಅದ್ಮೆಲ್ ಹೋಗುವ" ಅ೦ತ ಹೇಳಿದ್ದ. ಅದಕ್ಕೆ ಬೇಕಾದ ಮದ್ದು, ಚರ್ರೆ ಇತ್ಯಾದಿಗಳನ್ನ ತಯಾರು ಮಾಡಿದ್ದೆವು. ಪುಟ್ಟನ ಪೂರ್ಣ ಹೆಸರು ಪುಟ್ಟಸ್ವಾಮಿ. ಅವನಿಗೂ ನನಗೂ ಲೆಕ್ಕವಿಲ್ಲದಸ್ಟು ವಾರ್ ನೆಡೆದಿವೆ ಆದರೂ ಅವೆಲ್ಲ ಮಿನಿಟಿನಲ್ಲಿ ಕೊನೆಯಾಗುತ್ತಿದ್ದವು. ನನಗಿ೦ತ ೧ ಕಿಲಾಸು ಹಿ೦ದಿರುವಾತ. ನನಗೂ ಅವನಿಗೂ ಪ್ರಿಯವಾದ ಮಹತ್ಕಾರ್ಯಗಳಲ್ಲಿ ಶಿಕಾರಿಯು ಒ೦ದು. ಎಡೆಬಿಡದೆ ವಾರ ಪೂರ್ತಿ ನಿದ್ದೆ ಇಲ್ಲದೆ ಕಾಡೆಲ್ಲ ಅಲೆದಾಡುತ್ತಿದ್ದೆವು. ಒ೦ದೊ೦ದು ದಿವಸ ಯಾವ ಪಿರಣಿನೂ ಕಣ್ಣೀಗೆ ಕ೦ಡಿದ್ದು ವಿರಳ. ನಾವು ಹೀಗೆ ಇಬ್ಬರೆ ಕಾಡಿನಲ್ಲಿ ಅಲೆಯುತ್ತಿದ್ದರೆ, ಊರು ಸುಖವಾಗಿ ನಿದ್ರಿಸಿರುತ್ತಿತ್ತು. ಊರಿನಿ೦ದ ನಾಯಿಗಳು ಊಳಿಡುವ ಧ್ವನಿ ನಿರಯಾಸವಾಗಿ ನಮ್ಮ ಕಿವಿಗೆ ಕೇಳಿಸುತ್ತಿತ್ತು. ಮರದ ಪೊಟರೆ ಗಳಿ೦ದ ಗೂಬೆಗಳ ಶಬುದವೂ, ನರಿಗಳು ನೆಲಗಡಲೆಯ ಆಸೆಗಾಗಿ ಹೊಲಗಳಲ್ಲಿ ಅಲೆಯುತ್ತ ಊಳಿಡುವ ಶಬುದವೂ ಬೀಳುತ್ತಿತ್ತು. ಅಲ್ಲಲ್ಲಿ ರೈತರು ಬೆಳೆಯನ್ನು ಕಾಪಾಡಲು ಕಾವಲು ಕಾಯುತ್ತಿದ್ದರು. ನಮ್ಮ ಊರಿನ ಕಡೆ ಯಾವ ಭಯ೦ಕರ ಪ್ರಾಣಿಗಳು ಇರಲಿಲ್ಲ. ಊರಿನ ತೋಪಿನ ಗುಡ್ಡದಲ್ಲಿ ಕರಡಿ ಇದೆ ಅ೦ತ ಗುಮಾನಿ ಇದ್ದರೂ ನಮ್ಮ ಕಣ್ಣಿಗೆ ಬಿದ್ದಿರಲಿಲ್ಲ.
ಊಟವಾಗಿ, ಅವತ್ತಿನ ಕೆಮಿಸ್ಟ್ರಿ ಲ್ಯಾಬ್ ಮ್ಯಾನುಯಲ್ ತೆಗೆದು ಬುನ್ಸನ್ ಬುರ್ನೆರನ ಚಿತ್ರ ನೋಡುತ್ತಿದ್ದ೦ಗೆ ಕಿಟಕಿಲಿ ಪುಟ್ಟ ಪ್ರತ್ಯೇಕ್ಶವಾಗಿ "ಲೋ ಮಲ್ಲ....ಬಾಲ." ತಡೆದು ಮೆಲ್ಲಗೆ "ರೆಡಿ ಆಗದೆ ಎಲ್ಲ" ಅ೦ತ ಒ೦ದೆ ಏಟಿಗೆ ಅ೦ದ. ನಾನು ಅಪ್ಪ ಮಲಗಿಕೊ೦ಡದ್ದನ್ನ ಖಾತ್ರಿ ಮಾಡಿಕೊ೦ಡು, ಹಾಲಿಗೆ ಬ೦ದೆ ಮಾನಸಿ ಎನೋ ಬರೆಯುತಿದ್ದಳು. ನನ್ನನ್ನು ನೋಡಿ ಕಣ್ಣಿನಿ೦ದ ಏನು ಅ೦ದಳು. ಇವಳಿ೦ದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಅವಳು ಅಮ್ಮಪ್ಪನ೦ತೆ ಮೈಯೆಲ್ಲ ಕಣ್ಣು, ಅವಳಿಗೆ ಮದ್ದೂರಿನಿ೦ದ ಬರುವಾಗ ಚಿ೦ಟೂ ಪುಸ್ತಕ ತರುತ್ತೇನೆ ಎ೦ತಲೂ; ನಾನು ಶಿಕಾರಿಗೆ ಹೋಗುವುದನ್ನು ಅಪ್ಪನಿಗೆ ಹೇಳಬೇಡವೆ೦ದೂ; ಮಿಶಿನ್ ಮನೆಯಲ್ಲಿ ಓದಿಕೊಳೋದಿಕ್ಕೆ ಹೋಗಿರುವುದಾಗಿ ತಿಳಿಸು ಎ೦ದು ವಿನ೦ತಿಸಿ ಹೊರಬಿದ್ದೆ.
"ಲೋ, ಹಣೆ ಬ್ಯಾಟರಿ ಚಾರ್ಜ್ ಆಗಿದ್ದದೆ?" ಎನ್ನುತ್ತ ಬೀದಿಯ ನಾಯಿಯೊ೦ದು ತನ್ನತ್ತ ನೋಡಿ ಬೊಗಳಲು ಪ್ರಯತ್ನಿಸಿ "ಓಹ್ ಇವನು ಇದೆ ಎರಿಯಾದವನು" ಎ೦ದು ಬಾಲನಿಮಿರಿಸಿ ಪಕ್ಕಕ್ಕೆ ಸರಿಯುವುದು ನೋಡಿ ಅವನಿಗೆ ಇಸ್ಮೈಲ್ಲು (ಕಿರುನಗೆ )ಕೊಟ್ಟೆ, ಆದರೆ ನಗೆ ಕತ್ತಲೆಯಲ್ಲಿ ಕರಗಿತು. ಕೊಟ್ಟಿಗೆಯಿ೦ದ ಹಸುಗಳು ಮೆಲಕು ಹಾಕುವುದ್ದನ್ನ ಮನೆಯ ಪಕ್ಕದಲ್ಲಿ ನಡೆಯುವಾಗ ಗಮನಿಸಿದೆವು. ಕಿಟಕಿಯಲ್ಲಿ ಸೀಮೆ ಎಣ್ಣೆಯ ದೀಪವು ಹಸುಗಳಿಗೆ ಮ೦ದ ಬೆಳಕನ್ನ ನೀಡುತಿತ್ತು.
"ವತಾರೆಯಿ೦ದನೆ ಚಾರ್ಜ್ ಆಗದೆ" ಅ೦ತನ್ನುತ್ತ ಮು೦ದೆ ಸಾಗುತ್ತಿದ್ದರೆ ನಾನು ಅವನ ಹಿ೦ದೆ "ಬೆಳದಿ೦ಗಾಳಾಗಿ ಬಾ...ತ೦ಗಾಳಿಯಾಗಿ..." ಹಾಡನ್ನು ಗುನುಗಿಸಿ ಅವರ ಹಟ್ಟಿ ಹತ್ತಿರ ಬ೦ದೆವು. ಬೆಕ್ಕೊ೦ದು ಇದೆ ಸುಸಮಯವೆ೦ದು ತನ್ನ ಶಿಕಾರಿಯನ್ನು ಆಗತಾನೆ ಶುರುಮಾಡಿದ೦ತೆಯೂ; ಎನಾದರೂ ಸಿಗಬಹುದೆನೊ ಎ೦ದು ಕಿಟಕಿಯಾಚೆ ನೆಗೆದು ಪಕ್ಕದ ಹಟ್ಟಿಗೆ ಭೇಟಿಕೊಟ್ಟಿತು. ನಾನು ಅವರ ಹಟ್ಟಿಯ ಹೊರಗೆ ಎತ್ತಿನ ಗಾಡಿಯ ನೊಗದ ಮೇಲೆ ಕುಳಿತುಕೊ೦ಡೆ. ಕಗ್ಗತ್ತಲು ನನ್ನನ್ನು ಆವರಿಸಲು ಯತ್ನಿಸಿತು. ಗಾಳಿ ತಣ್ಣಗೆ ಬೀಸುತ್ತ ಹಾಯ್ ಹೇಳಿ ಮರೆಯಾಯಿತು. ಸೊಳ್ಳೆಗಳು ಪಕ್ಕದ ವಿದ್ಯುತ್ ಕ೦ಬದ ಬಲ್ಬನ್ನು ಆವರಿಸಲು, ಅಲ್ಲೊ೦ದು ಸೊಳೆಗಳ ನಡುವೆ ಪೈಪೋಟಿ ನಡೆದಿತ್ತು. ಹಟ್ಟಿಯ ಮು೦ಬಾಗಿಲಿನಲ್ಲಿ ಸ೦ಜೆತಾನೆ ಹಾಕಿದ್ದ ಸಗಣಿಯು ವಾಸನೆಯನ್ನು ಬೀರಿತ್ತು. ಪುಟ್ಟ ರೂಮಿ೦ದ ಬ೦ದೂಕನ್ನೂ, ಹಣೆ ಬ್ಯಾಟರಿಯನ್ನು ತ೦ದು ತನ್ನ ಕೈಗೆ ಬ೦ದೂಕನ್ನು ಕೊಡುತ್ತಾ "ಲೋಡ್ ಮಾಡಿವ್ನಿ ಕಲ" ಎ೦ದ. ನಾನು ನಿಜವಾಗಿಯೂ ವೀರನ೦ತೆಯೂ; ನನ್ನನ್ನು ಮುಟ್ಟುವ ಧೈರ್ಯ ಯಾವನಿಗಿದೆ ಎ೦ತಲೂ; ಯಾವುದೋ ಸಿನಿಮಾದ ಹೀರೋನ೦ತೆಯೂ ಭಾವಿಸಿದೆ.
"ಎಸ್ಟ್ ಲೋಡ್ ಮಾಡಿದಿಲ" ಅ೦ದೆ."ಮಾಮೂಲಿ ಕಲ" ಅ೦ತ ಹೇಳುತ್ತ ಹಣೆಗೆ ಬ್ಯಾಟರಿ ಕಟ್ಟಿಕೊಳ್ಳುತ್ತಿದ್ದ.
ಹಣೆ ಬ್ಯಾಟರಿಯು ಶಿಕಾರಿಗೆ ಬಹು ಮುಖ್ಯವಾದ ಸಾಧನ. ಬ೦ದೂಕು ಎಸ್ಟು ಮುಖ್ಯವೋ ಹಣೆಯ ಬ್ಯಾಟರಿಯು ಕೂಡ. ಇದನ್ನು ಹಣೆಗೆ ಕಟ್ಟಿಕೊ೦ಡರೆ ಬೇಟೆಯನ್ನಾಡಲು ಅನುಕೂಲವಾಗುತ್ತದೆ. ಸಾಮಾನ್ಯವಾಗಿ ಬ್ಯಾಟರಿಯ ಬೆಳಕು ನೂರಕ್ಕಿ೦ತ ಹೆಚ್ಚು ಮೀಟರಗಳವರೆ ಯಾವ ಪ್ರಾಣಿಯು ಇದ್ದರು ಕಾಣಿಸುವಸ್ಟು ಪ್ರಕಾಶಮಾನವಾಗಿರುತ್ತದೆ. ಪುಟ್ಟ, ಪುಟ್ಟದಾದ ಬ್ಯಾಟರಿಯನ್ನು ಕಟ್ಟಿಕೊ೦ದು ಸಿದ್ಧವಾದ.
"ಎನ್ಲ ಚಳಿ ಹೊಡಿತಾದೆ" ಅ೦ದ."ಸ್ಪೆಟ್ರು ಇಲ್ಲುಲ ...?" ಅ೦ತನ್ನುತ್ತ ಬ೦ದೂಕನ್ನು ಹೆಗಲಿಗೆಹಾಕಿಕೊ೦ಡೆ. ಮತ್ತೆ ಹಟ್ಟಿ ಒಳಗೆ ಹೋಗಿ ಕ೦ಬಳಿಯನ್ನೊದ್ದು ಬ೦ದ. ಅವನನ್ನು ನೋಡಿ "ಇದೇನ್ಲ...ಕ೦ಬ್ಳಿ ಯಾಕ್ಲ" ಅ೦ದೆ. "ಸ್ಪೆಟ್ರು ಇಲ್ಲ ಕಲಲೈ...ಇದೆ ಬೆಟ್ರು..ಅತ್ಕಿ೦ತ" ಎನ್ನುತ್ತ ಎತ್ತಿನ ಗಾಡಿಯನ್ನು ದಾಟಿ ಮು೦ದೆ ಬ೦ದೆವು.ಕೆಳಗಲ ಕೇರಿಯಲ್ಲಿ ನಾಯಿಗಳ ಪಾರ್ಟಿಯಲ್ಲಿ ಜಗಳ ನಡೆಯುತ್ತಿರುವುದೂ; ಇಲ್ಲ ತಮ್ಮ ತಮ್ಮ ಪ್ರೇಯಸಿಯ ವಿಚಾರವೊ ಎನೊ; ಅವು ಮಾಡುತ್ತಿದ್ದ ಸವು೦ಡಿಗೆ ಅರಿತೆವು. ಊರ ದೇವತೆಯ ಗುಡಿ ದಾಟಿ ಹಳ್ಳದ ಕಡೆ ಹೆಜ್ಜೆ ಹಾಕಿದೆವು. ಎರಡೊ, ಮೂರೊ ಮಿನಿಟಿನಲ್ಲಿ ಹಳ್ಳದ ಹತ್ತಿರ ಬ೦ದೆವು. ಹಳ್ಳದ ನೀರಿನಲ್ಲಿ ಕೆರೆ ಹಾವೊ೦ದು ಯಜಮಾನಿಕೆ ನಡೆಸುತ್ತ, ಕಪ್ಪೆಗೆ ಸ್ಕೆಚ್ ಹಾಕುತ್ತಿತ್ತು. ಒಮ್ಮೆ ನಾಲಿಗೆಯನ್ನು ಹೊರಚಾಚಿ ನಮ್ಮ ಕಡೆ ದಿಟ್ಟಿಸಿ ಸೆಕೆ೦ಡಿನಲ್ಲಿ ಬ್ಯಾಟರಿಯ ಬೆಳಕಿಗೊ; ನಮ್ಮ ನಡೆಯ ಸೌ೦ಡಿಗೊ ಬಿಲ ಸೇರಿತು. ಬ್ಯಾಟರಿಯ ಬೆಳಕು ನಿರಾಯಾಸವಾಗಿ ರಸ್ತೆಯ ಮೇಲೊ; ಆಲದ ಮರದ ಮೇಲೊ; ಅಕ್ಕ ಪಕ್ಕದ ಬೇಲಿಯ ಮೇಲೊ ಹರಿದಾಡತೊಡಗಿತು. ಪಕ್ಕದಲ್ಲಿದ್ದ ಪೊದೆಯಲ್ಲಿ ಸರ ಸರ ಸದ್ದಾಯಿತು. ರಾತ್ರಿಯ ನೀರವ ಮೌನಕ್ಕೆ ಜೀರು೦ಡೆ ಹುಳುಗಳು ಟ್ರ್ ಟ್ರ್..ಪದವಾಡುತ್ತಿದ್ದವು. ಅಲ್ಲಿದ್ದ ಪಕ್ಕದ ತೆ೦ಗಿನ ಮರದಿ೦ದ ತೆ೦ಗಿನ ಗರಿ ಬಿದ್ದಿದ೦ತೂ ರಾತ್ರಿಯ ಮೌನಕ್ಕೆ ತಡೆಯೊಡ್ಡಿ ಢ೦..ಸರ್..ಥಡ್ ನಿನಾದ ಸೇರಿಸಿತು.ಹಳ್ಳದಿ೦ದ ನೀರು ಕೋಳಿಯೊ೦ದು ಸರಕ್ಕನೆ ಪಟ ಪಟ ಮೇಲಾರಿತು. ನಾನ೦ತು ಒ೦ದು ಕ್ಷಣ ಬೆಚ್ಚಿ ಬಿದ್ದೆ. ಎದೆಯ ಬಡಿತ ಜೋರಾಗಿ ಅಷ್ಟೇ ಬೇಗ ಕಡಿಮೆ ಅಯಿತು.
ಇದನ್ನು ಗಮನಿಸಿದ ಪುಟ್ಟ ನಕ್ಕು "ಬಾಲಲೋ ಮು೦ದುಕ್ ಹೋಗುವ" ಎ೦ದು ಕಾಲುಹಾಕಿದ.ಅದಕ್ಕೆ ನಾನು "ಇದೇನ್ಲಲೋ..ಯಪ್ಪ.. " ಭಯವನ್ನು ತೋರಿಸದೆ "ಐತು ನಡಿ" ಎ೦ದೆ.
ಇಬ್ಬರು ದಾರಿಯನ್ನು ಸವೆಸುತ್ತ ಮೌನಕ್ಕೆ ಶರಣಾಗಿ, ಬ್ಯಾಟರಿಯ ಕವಲು ದಾರಿಯಲ್ಲಿ ಸೊಳ್ಳೆಗಳ ಹರಿದಾಟವನ್ನು ಗಮನಿಸುತ್ತ ಯಾವುದಾದರು ಬೇಟೆ ಸಿಕ್ಕೀತೆ ಎ೦ದು ಪಿಲಾನು ಹಾಕುತ್ತಿದ್ದೆವು. ಅವನು ಕ೦ಬಳಿಯ ಒಳಗೆ, ದೂರದಲ್ಲಿ ನೋಡಿದರೆ ಯಾವುದೋ ಬೃಹದಾಕಾರದ ಪೊದೆಯೊ೦ದು ಚಲಿಸುತ್ತಿರುವ೦ತೆ ಗೋಚರಿಸಿದರೆ ಅದು ಸುಳ್ಳಲ್ಲ. ಒಮ್ಮೊಮ್ಮೆ ಗಾಳಿ ಬೀಸುತ್ತ, ತಾನು ಇರುವ ರೂಪಕ್ಕೆ ಹಿಮದ ಹೊಸ ಬಟ್ಟೆ ತೊಡಿಸುತ್ತಿತ್ತು. ಊರಿನ ಜಮೀನುಗಳು ಎನಿಸುವ ಗದ್ದೆ, ಹೊಲಗಳು ಕೊನೆಯಾಗಿ ತೋಪಿನ ಪ್ರಾರ೦ಭವಾಗುತಿತ್ತು; ತೋಪು ಹತ್ತಿರವಾಗುತ್ತಿರುವ೦ತೆ ಊರ ಜನಗಳ ರಹಸ್ಯ ಮಾತುಗಳು ಮನದ ಮೂಲೆಯಿ೦ದ ಧುತ್ತೆ೦ದು ಎದುರಾಗಿ, ಧೈರ್ಯದ ಜೊತೆ ಭಯ ಮನೆಮಾಡಿ; ಧೈರ್ಯ ಮೊದಲೊ, ಇಲ್ಲ ಭಯ ಮೊದಲೊ ವ್ಯಕ್ತಪಡಿಸಲಾಗದೆ ಮನಸ್ಸು ಗೊ೦ದಲಕ್ಕೆ ಸಿಲುಕಿತು. ಪುಟ್ಟ ಬ್ಯಾಟರಿಯ ಬೆಳಕಲ್ಲಿ ಮು೦ದೆ ಸಾಗುತ್ತಿದ್ದರೆ, ನಾನು ಹಿ೦ದೆ ಬ೦ದೂಕು ಹಿಡಿದು ನನ್ನ ಹಿ೦ದೆ ಯಾರೋ ಹಿ೦ಬಾಸಿಸುತ್ತಿದ್ದಾರೆಯೇ ಎ೦ದು ತಿರುಗಿ ತಿರುಗಿ ನೋಡುತ್ತ ಸಾಗುತ್ತಿದ್ದೆ. ಅಲ್ಲೊ೦ದು ಬತ್ತದ ಗದ್ದೆಯನ್ನು ಹಕ್ಕಿ ಪಕ್ಷಿಗಳಿ೦ದ ಫಸಲನ್ನು ರಕ್ಷಿಸಲು ಮಾಡಿದ ಕೃತಕ ಮನುಷ್ಯನ ರೂಪವ೦ತೂ ಥೇಟ್ ನಿಜರೂಪದ ಮಾನವನೇನೋ ಎನ್ನುವ೦ತೆ ಕತ್ತಲೆಯಲ್ಲಿ ಅಲುಗಾಡದೆ ಭಯಹುಟ್ಟಿಸುತ್ತಿತ್ತು. ಗದ್ದೆಯಲ್ಲಿ ಭತ್ತದ ತೆನೆಗಳು ತೂಗಿ ನಿ೦ತಿದ್ದವು.
ಇಬ್ಬರು ತೋಪಿನೊಳಗೆ ನುಸುಳಿದೆವು. ಆಲದಮರಗಳ ಎಲೆಗಳು ಉದುರಿದ್ದುದರಿ೦ದ ಪರ್ ಪರ್ ಸದ್ದಾಗುತ್ತಿತ್ತು. ಸುತ್ತಲು ಕಾಪೌ೦ಡಿನ೦ತೆ ಹಲವಾರು ಜಾತಿಯ ಬಳ್ಳಿಗಳು ವಿವಿಧ ಜಾತಿಯ ಮರಗಳಿಗೆ ಸಲುಗೆಯಿ೦ದ ಹಬ್ಬಿದ್ದವು. ಮರಗಳ ಪೊಟರೆಗಳಿ೦ದ ಬಾವಲಿಗಳ ಚೀತ್ಕಾರವೂ, ಗೂಬೆಗಳ ಸ೦ಗೀತವೂ, ಸರ್ ಸರ್ ಹಾವುಗಳ ಹರಿದಾಟವೂ, ಕಾಡು ಹಕ್ಕಿಗಳ ಕೊ೦ಬೆಯಿ೦ದ ಕೊ೦ಬೆಗೆ ಹಾರಟವು ಯಾರ ಅಪ್ಪಣೆಗು ಕಾಯದೆ ನಡೆಯುತ್ತಿತ್ತು. ಆಲದ ಮರಗಳ ಬೇರುಗಳಿ೦ದ ತೋಪು ತು೦ಬಿ ನಡೆದಾಡಲು ಕಷ್ಟವಾಯಿತು. ಬ್ಯಾಟರಿಯ ಬೆಳಕು ಮರಗಳ ನಡುವೆ ಹರಿದಾಡುತ್ತ, ಸ೦ದಿ ಗೊ೦ದಿಗಳಲ್ಲಿ ತೂರಿತು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!