ದಿನಾಂಕ ೭.೧೧.೨೦೦೯ರಂದು ಶನಿವಾರ ಹಾಸನದ ಸಂಸ್ಕೃತ ಸಂಘದ ಆವರಣದಲ್ಲಿ  ಭಗವದ್ಗೀತಾ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಾಗಾರವು  ನಡೆಯಿತು. ಅದರಲ್ಲಿ ಪಾಲ್ಗೊಂಡ ಅಭಿಯಾನದ ಮುಖ್ಯ ಪ್ರವರ್ತಕರಾದ ಶ್ರೀ  ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ   ಪೀಠಾಧೀಶ್ವರರಾದ ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ  ಆಶೀರ್ವಚನದ ಬರಹ ರೊಪ.
 ಇವತ್ತು  ಜಗತ್ತಿಗೆ ಬೇಕಿರುವುದು ನಗು. ನಗು ಮಾಯವಾಗಿದೆ.ಇಂದು ಅನೇಕ ಮಾನಸಿಕ ರೋಗಿಗಳಿಗೆ ನಗುವುದು ಒಂದು ಚಿಕಿತ್ಸೆ. ಇಡೀ ಭಗವದ್ಗೀತೆಯ ಸಂದೇಶವೇ “ನಗುತ್ತಾ ಇರು. ಧೈರ್ಯದಿಂದಿರು.ಮಾನಸಿಕವಾಗಿ ಸೊರಗಬೇಡ”ಎಂಬುದು. ರೋಗಕ್ಕೆ ಚಿಕಿತ್ಸೆ ಕೊಡುವುದು ಒಂದು ಸಮಾಜ ಸೇವೆ.ಸಮಾಜವನ್ನು ಸಂತೋಶವಾಗಿಡುವುದೇ ಈಶ್ವರಾರಾಧನೆ.ಅಂತಹಾ ಒಂದು ಚಿಕಿತ್ಸೆ ಭಗವದ್ಗೀತೆಯಲ್ಲಿ ನಮಗೆ ಲಭ್ಯವಿದೆ.
ಭಗವದ್ಗೀತೆ ಪ್ರಾರಂಭವಾಗುವುದೇ "ಅಳಬೇಡ " ಎಂಬ ಮಾತಿನಿಂದ.ಅಳು ಎಂಬುದು ಅನೇಕ ಶಾರೀರಿಕ ಮಾನಸಿಕ ರೋಗಗಳಿಗೆ ಕಾರಣ.ಅಳುವಿಗೆ ಕಾರಣ ದು:ಖ-ಚಿಂತೆ.ಅಂತಹ ಚಿಂತೆಯನ್ನು, ದು:ಖವನ್ನು ಹೋಗಲಾಡಿಸುವ ಚಿಕಿತ್ಸೆಯು ಭಗವದ್ಗೀತೆಯಲ್ಲಿದೆ.ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ   " ನಿನ್ನಲ್ಲಿ ಒಳ್ಳೆಯಗುಣಗಳಿವೆ.ನಿನ್ನಲ್ಲಿ ಒಳ್ಳೆಯಗುಣಗಳಿಲ್ಲವೆಂದು ಕೊರಗಬೇಡ." ಹಾಗೇನಾದರೂ ನಿನ್ನಲ್ಲಿ ಅವಗುಣಗಳಿದ್ದರೆ ನಾನು ಅದನ್ನು ತೆಗೆದು ಹಾಕುವೆ. ನನ್ನಲ್ಲಿ ಶರಣಾಗು" ಇಂತಹಾ ಅಳಬೇಡವೆಂಬ ಸಾಂತ್ವನ ನುಡಿಗಳು ಭಗವದ್ಗೀತೆಯಲ್ಲಿ ನಮಗೆ ಸಿಗುತ್ತದೆ.
ಅಮೇರಿಕಾ ದೇಶದಲ್ಲಿ ಒಬ್ಬ ತಜ್ಞ ಮನೋವೈದ್ಯರಿದ್ದರು.ಅವರನ್ನು ಭೇಟಿಯಾಗಲು ಭಾರತದ ಒಬ್ಬ ಮನೋವೈದ್ಯರು ಹೋದರು.ಅವರ ಕ್ಲಿನಿಕ್ ನಲ್ಲಿ ಒಂದು ಗೀತೋಪದೇಶದ ದೊಡ್ದ ಫೋಟೋ ಇವರ ಕಣ್ಸೆಳಿಯಿತು.ಸಾಮಾನ್ಯವಾಗಿ ಮನೋವೈದ್ಯರು ದೇವರನ್ನು ನಂಬುದು ಕಡಿಮೆ. ಆದರೆ ಒಬ್ಬ ಅಮೇರಿಕದ ಹಿಂದುವಲ್ಲದ ವೈದ್ಯರ ಕ್ಲಿನಿಕ್ ನಲ್ಲಿ ಭಗವಾನ್ ಶ್ರೀ ಕೃಷ್ಣನ ಗೀತೋಪದೇಶದ ಫೋಟೋ ಇದ್ದುದನ್ನು ಕಂಡು ಭಾರತದ ವೈದ್ಯರಿಗೆ ಆಶ್ಚರ್ಯವಾಯ್ತು. ಪರಸ್ಪರ ಮಾತುಕತೆ ಪ್ರಾರಂಭವಾಯ್ತು.ಭಾರತೀಯ ವೈದ್ಯರು ಅಮೇರಿಕಾದ ವೈದ್ಯರನ್ನು ಕೇಳಿದರು " ನೀವು ಒಬ್ಬ ಮನೋವೈದ್ಯರಾಗಿ ದೇವರ ಫೋಟೋ ಹಾಕಿಕೊಂಡಿದ್ದೀರಲ್ಲಾ! ಇದು ಎಷ್ಟು ಸರಿ? ಆಗ ಅಮೇರಿಕಾದ ಮನೋವೈದ್ಯರು ಹೇಳಿದರು" ಪ್ರಪಂಚದ ಮೊಟ್ಟ ಮೊದಲ ಮನೋ ವೈದ್ಯನೆಂದರೆ ಶ್ರೀ ಕೃಷ್ಣನೇ ಹೌದು. ಏಕೆಂದರೆ ಅರ್ಜುನನಿಗೆ  ಡಿಪ್ರೆಷನ್ ಎಂಬ ರೋಗ ಬಂದಿತ್ತು. ಅದಕ್ಕೆ ಶ್ರೀ ಕೃಷ್ಣನು ಚಿಕಿತ್ಸೆ ನೀಡೀದ. ಅರ್ಜುನನಿಗೆ ಶ್ರೀ ಕೃಷ್ಣನು ಮಾಡಿದ ಕೌನ್ಸಿಲ್ಲಿಂಗ್ ಇದೆಯಲ್ಲಾ ಅದೇ ಭಗವದ್ಗೀತೆ.
ಭಾರತದ ಯಾರೇ ಪಂಡಿತರು ಹೊರದೇಶಗಳಿಗೆ ಹೋದರೂ ಅಲ್ಲಿನವರು ನಮ್ಮ ಪಂಡಿತರಿಗೆ ಕೇಳುವ ಪ್ರಶ್ನೆ" ನೀವು ಭಗವದ್ಗೀತೆಯನ್ನು ಓದಿದ್ದೀರಾ? ಎಂದು. ನೀವು ಖುರಾನ್ ಅಥವಾ ಬೈಬಲ್ ಓದಿದ್ದೀರಾ ? ಎಂದು ಕೇಳುವುದಿಲ್ಲ. ಭಗವದ್ಗೀತೆಯ ನಾಡಿನಿಂದ ಬಂದಿರುವ ನೀವು ಭಗವದ್ಗೀತೆಯನ್ನು ಓದಿದ್ದೀರಾ? ಎಂದೇ ಕೇಳುತ್ತಾರೆ. ಮನುಷ್ಯನಿಗೆ ಮನ:ಶಾಂತಿಯನ್ನು ಕೊಡುವ ಭಗವದ್ಗೀತೆಗೆ ಇಂತಹಾ ವಿಶ್ವ ವ್ಯಾಪಕತೆ ಇದೆ. ಅನೇಕ ವಚನ ಸಾಹಿತ್ಯಗಳಲ್ಲಿ ಭಗವದ್ಗೀತೆಯ ಸಂದೇಶವನ್ನು ನಾವು ಕಾಣಬಹುದು. ಬಹಳ ಸರಳವಾಗಿ ಭಗವದ್ಗೀತೆಯ ಸಂದೇಶವನ್ನು ವಚನ ಸಾಹಿತ್ಯದಲ್ಲಿ ಸಾರಲಾಗಿದೆ. ಭಗವದ್ಗೀತೆಯು ಬರುವುದಕ್ಕೂ ಮುಂಚೆಯೂ ಈ ಸಂದೇಶವು ಉಪನಿಷತ್ತು ಗಳಲ್ಲಿ ಲಭ್ಯವಿತ್ತು. ಆದರೆ ಅದರ ನಿರೂಪಣೆ ಕ್ಲಿಷ್ಟವಾಗಿತ್ತು. ಆದರೆ ಭಗವ್ದ್ಗೀತೆಯ ನಿರೂಪಣೆ ಸರಳ-ಸುಲಭ. ಸಾಮಾನ್ಯರಿಗೆ ಅರ್ಥವಾಗುವ ಮಟ್ಟದ್ದು. ಸರಳವಾದ ಸಂಸ್ಕೃತದಲ್ಲಿ ಮನುಷ್ಯನ ದು:ಖವನ್ನು ಹೋಗಲಾಡಿಸುವ , ಮನಶಾಂತಿಯನ್ನು ನೀಡುವ ಮಾತುಗಳು ಭಗವದ್ಗೀತೆಯಲ್ಲಿದೆ.
ಭಗವದ್ಗೀತೆಯ ಆಂಧೋಳನದ ಮುಖ್ಯ ಉದ್ಧೇಶವೂ ಇದೇ ಆಗಿದೆ. ಸಮಾಜಕ್ಕೆ ಅಂಟಿರುವ ದೌರ್ಬಲ್ಯವನ್ನು ಹೋಗಲಾಡಿಸುವುದು.ಸಮಾಜಕ್ಕೆ ಅಂಟಿರುವ ಪ್ರಮುಖವಾದ ದೌರ್ಬಲ್ಯವೇ ಮಾನಸಿಕ ಅಸ್ವಾಸ್ಥ್ಯ.. ಇದರೊಡನೆ ಹೃದಯದೌರ್ಬಲ್ಯ, ಅಧಿಕ ರಕ್ತದೊತ್ತಡ,ಸಕ್ಕರೆ ಖಾಯಿಲೆಗಳಿಂದ ಜನರು ಜರ್ಜರಿತರಾಗಿದ್ದಾರೆ.ಇದೊಂದು ಗಂಭೀರ ವಿಷಯ. ಅಷ್ಟೇ ಅಲ್ಲ. ರೋಗ ತಗಲುವ ವಯೋಮಾನವು ಕೂಡ ಕಡಿಮೆಯಾಗುತ್ತಿದೆ. ಹೃದಯ ವೈದ್ಯರ ಸಂಘದ ವರದಿಯಂತೆ  ಈ ಮುಂಚೆ ಐವತ್ತು ವಯಸ್ಸು ದಾಟಿದವರಿಗೆ ಈ ಖಾಯಿಲೆಗಳು ಕಾಡಲು ಶುರುವಾಗುತ್ತಿದ್ದರೆ ಈಗೀಗ ಇಪ್ಪತ್ತೈದು ವರ್ಷ ವಯೋಮಾನದ ಯುವಕರಿಗೂ ಈ ರೋಗಗಳು ಕಾಡುತ್ತಿವೆ.ಮಾನಸಿಕ ಅಸ್ವಾಸ್ಥ್ಯ ಹೆಚ್ಚುತ್ತಿದೆ. ಅದಕ್ಕೆ ಕಾರಣವನ್ನು ಕಂಡುಕೊಳ್ಳಬೇಕಾಗಿದೆ. ತತ್ವರಹಿತ ಜೀವನವೇ ಇದಕ್ಕೆ ಮುಖ್ಯ ಕಾರಣವಾಗಿದೆ.ಸ್ವಸ್ಥ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ದಿನದಿಂದ ದಿನಕ್ಕೆ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ.ಕೊಲೆ,ಸುಲಿಗೆ, ಅತ್ಯಾಚಾರ ಘಟನೆಗಳ ಸಂಖ್ಯೆ  ಹೆಚ್ಚಾಗುತ್ತಿದೆ.ಇದಕ್ಕೆಲ್ಲಾ ಶಾಶ್ವತ ಪರಿಹಾರ  ಬೇಕೆಂದರೆ ಜನರ ಮನ ಪರಿವರ್ತನೆಯಾಗಬೇಕು.ಕಾನೂನು,ಅಪರಾಧಶಾಸ್ತ್ರಗಳು,ಮನ:ಶಾಸ್ತ್ರಗಳು ಸಾಕಷ್ಟು ಸಂಶೋಧನೆ ಮಾಡಿದರೂ ಸಹ  ಜನರ ಮನ:ಪರಿವರ್ತನೆಯಲ್ಲಿ ಹಿಂದೆ ಬಿದ್ದಿವೆ. ಜನರ ಮನ: ಪರಿವರ್ತನೆಗೆ ಆಧ್ಯಾತ್ಮಿಕ ನೆಲೆ ಬೇಕು. ಕಾನೂನಿಂದ ಮಾಡಲಾಗದ ಕೆಲಸವನ್ನು ಭಗವದ್ಗೀತೆಯಿಂದ ಈಗ ಮಾಡಬೇಕಾಗಿದೆ. ಕಾನೂನುಗಳಿಂದ ಈ ಕೆಲಸ ಸಾಧ್ಯವಿಲ್ಲ. ಕಾನೂನುಗಳನ್ನು ಮಾಡಿದರೆ ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಸಲಹೆಕೊಡಲು ಈ ದೇಶದ ವಿದ್ಯಾವಂತರೆನಿಸಿಕೊಂಡವರು ಆಲೋಚಿಸುತ್ತಾರೆ.ನಮ್ಮ ಬುದ್ಧಿ ಹೇಗೆ ಕೆಲಸ ಮಾಡುತ್ತದೆಂದರೆ ಕಾನೂನಿನಿಂದ ತಪ್ಪಿಸಿಕೊಳ್ಳುವುದು ಹೇಗೆ, ಎಂದು ಯೋಜನೆ ರೂಪಿಸುತ್ತದೆ.ಕಾನೂನಿನಂತೆ ನಡೆಯುವುದಲ್ಲ, ಕಾನೂನಿನಿಂದ ತಪ್ಪಿಸಿಕೊಳ್ಳುವುದು ಹೇಗೆಂಬ ಚಿಂತೆ! ಎಂತಹಾ ದೌರ್ಭಾಗ್ಯದ ಸಂಗತಿ! ಈ ಹಿನ್ನೆಲೆಯಲ್ಲಿ ಒಂದು ವ್ಯಾಪಕವದ ಪರಿವರ್ತನೆ ತರಬೇಕಾಗಿದೆ. ಅದಕ್ಕೆ ಭಗವದ್ಗೀತೆಯು ಒಂದು ಸುಲಭ ಸಾಧನವಾಗಿದೆ. ಆದ್ದರಿಂದ ಭಗವದ್ಗೀತಾ ಅಂಧೋಲನದ ಮೂಲಕ ಜನರ ಮನ:ಪರಿವರ್ತನೆ ಮಾಡುವುದು ಅಭಿಯಾನದ ಮೊದಲ ಉದ್ಧೇಶವಾಗಿದೆ.
ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ ಮತ್ತು ಮತಾಂತರ ಪಿಡುಗುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನೂ ಕೂಡ ಭಗವದ್ಗೀತಾ ಆಂಧೋಳನದಲ್ಲಿ ಚಿಂತಿಸಲಾಗುತ್ತದೆ. ಯುವಕರಲ್ಲಿ ಒಂದು ಉತ್ತಮ ಆದರ್ಶಗಳ ಮತ್ತು ಮೌಲ್ಯಗಳ ಕೊರತೆಯಿಂದ ಭಯೋತ್ಪಾದನೆಯು ತಲೆಯೆತ್ತುತ್ತದೆ.ಇಂತಹ ಉತ್ತಮ ಆದರ್ಶ ಹಾಗೂ ಮೌಲ್ಯಗಳಿಂದ ವಂಚಿತರಾದ ಯುವಕರನ್ನು ಭಯೋತ್ಪಾದನ ಸಂಘಟನೆಗಳು ಸೆಳೆದು ಅವರ ಬ್ರೈನ್ ವಾಶ್ ಮಾಡಿಬಿಡುತ್ತವೆ.ಆನಂತರ ಈ ಯುವಕರು ದೇಶದ ಮುಖ್ಯವಾಹಿನಿಗೆ ಬರಲು ಇಷ್ಟಪಡುವುದೇ ಇಲ್ಲ. ಆ ಮಟ್ಟಿಗೆ ಅವರ ಬ್ರೈನ್ ವಾಶ್ ಆಗಿರುತ್ತದೆ.ಆದ್ದರಿಂದ ಚಿಕ್ಕ ವಯಸ್ಸಿನಿಂದಲೇ ನಮ್ಮ ದೇಶದ ಪರಂಪರೆಯ ಉತ್ತಮ ಮೌಲ್ಯಗಳನ್ನು  ಹಾಗೂ ಆದರ್ಶಗಳನ್ನು ಮಕ್ಕಳಿಗೆ ಕಲಿಸಬೇಕು. ಆಗ ಸಹಜವಾಗಿ ಮಕ್ಕಳು ಬೆಳೆದು ಉತ್ತಮ ಯುವಕರಾಗುತ್ತಾರೆ.ಈ ಬಗ್ಗೆ ಕೂಡ ಭಗವದ್ಗೀತಾ ಆಂಧೋಳನದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.
ಸ್ವಧರ್ಮ ನಿಷ್ಠೆ ಸ್ವಕರ್ಮ ನಿಷ್ಠೆಯು ಕಡಿಮೆಯಾದಗಲೇ ಮತಾಂತರವೆಂಬ ಪಿಡುಗು ಪ್ರಾರಂಭವಾಯ್ತು. ತನ್ನ ಧರ್ಮದಲ್ಲಿ ತನ್ನ ಕರ್ಮದಲ್ಲಿ ನಿಷ್ಠೆಯಿದ್ದರೆ ಯರನ್ನೂ ಯಾರೂ ಮತಾಂತರ ಮಾಡಲುಲು ಸಾಧ್ಯವಿಲ್ಲ.ಆದರೆ ತನ್ನ ಧರ್ಮದಲ್ಲಿ ತಿಳುವಳಿಕೆ ಇಲ್ಲವಾದಾಗ, ತನ್ನ ಕರ್ತವ್ಯದಲ್ಲಿ ಪ್ರಜ್ಞೆ ಇಲ್ಲವಾದಾಗ  ಸಹಜವಾಗಿ ಮತಾಂತರದ ಪಿಡುಗು ಆರಂಭವಾಯ್ತು.ಯಾರು ತನ್ನ ಧರ್ಮದಲ್ಲಿ, ಕರ್ತವ್ಯದಲ್ಲಿ ನಿಷ್ಠೆಯನ್ನು ಕಳೆದುಕೊಳ್ಳುತ್ತಾನೆ, ಅವನಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ.ಅವನಲ್ಲಿ ನೆಮ್ಮದಿ ಇರುವುದಿಲ್ಲ. ಅಂತಹಾ ಒಂದು ಕರ್ತವ್ಯ ನಿಷ್ಠೆಯನ್ನು ಸ್ವಧರ್ಮ ನಿಷ್ಠೆಯನ್ನು ಭಗವದ್ಗೀತೆಯು ಕೊಡುತ್ತದೆ. ಆದ್ದರಿಂದ ಭಗವದ್ಗೀತಾ ಆಮ್ಧೋಳನದಿಂದ ಮತಾಂತರಕ್ಕೂ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಸಮಾಜವೆಂಬ ಮನುಷ್ಯನಿಗೆ ಉಂಟಾಗಿರುವ ಹೃದಯ ದೌರ್ಬಲ್ಯವೆಂಬ ರೋಗಕ್ಕೆ ಭಗವದ್ಗೀತೆಯೆಂಬ ಔಷಧವನ್ನು ಕೊಡುವ ಕೆಲಸದಲ್ಲಿ ಸಮಾಜ ಚಿಂತಕರು ಕೈ ಜೋಡಿಸ ಬೇಕಾಗಿದೆ.