ಅರುಣಾಚಲ ಪ್ರದೇಶದ ತವಾಂಗ್‌ಗೆ ಬೌದ್ಧ ಧರ್ಮಗುರು ದಲೈ ಲಾಮಾ ಭೇಟಿ ನೀಡುವ ನಾಲ್ಕು ದಿನ ಮೊದಲು ನಾನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಬೈಲಕುಪ್ಪೆ ಗ್ರಾಮದಲ್ಲಿದ್ದೆ. ಬೈಲಕುಪ್ಪೆಯಲ್ಲಿ ಹದಿನೆಂಟು ಸಾವಿರಕ್ಕೂ ಹೆಚ್ಚು ಮಂದಿ ಟಿಬೆಟಿಯನ್ ಬೌದ್ಧರು ನೆಲಸಿದ್ದಾರೆ. ಟಿಬೆಟ್ ಮೇಲೆ ಚೀನಾ ನಡೆಸಿದ ದುರಾಕ್ರಮಣದಿಂದಾಗಿ ಭಾರತಕ್ಕೆ ವಲಸೆ ಬಂದ ಟಿಬೆಟಿಯನ್ ನಿರಾಶ್ರಿತರಿಗೆ ಭಾರತ ಸರ್ಕಾರವು ದೇಶದ ವಿವಿಧೆಡೆ ಒದಗಿಸಿಕೊಟ್ಟ ಆಶ್ರಯತಾಣಗಳ ಪೈಕಿ ಅತಿ ದೊಡ್ಡ ಆಶ್ರಯತಾಣ ಬೈಲಕುಪ್ಪೆ. ಕೃಷಿ ಕಾರ್ಯದಲ್ಲಿ ಮತ್ತು ಉಣ್ಣೆ ಬಟ್ಟೆ ತಯಾರಿಕೆಯಲ್ಲಿ ನಿರತವಾಗಿರುವ ಸಹಸ್ರಾರು ಬೌದ್ಧ ಕುಟುಂಬಗಳಲ್ಲದೆ ಬೌಧ್ಧ ಧರ್ಮ ಶಿಕ್ಷಣ ಹಾಗೂ ಧಾರ್ಮಿಕ ವಿಧಿಗಳಲ್ಲಿ ತೊಡಗಿರುವ ಏಳು ಸಾವಿರಕ್ಕೂ ಹೆಚ್ಚು ಮಂದಿ ಭಿಕ್ಷುಗಳು ಬೈಲಕುಪ್ಪೆಯ ಆಶ್ರಯತಾಣದಲ್ಲಿದ್ದಾರೆ. ೩೦೩೦ ಎಕರೆ ವಿಸ್ತೀರ್ಣದ ಈ ಆಶ್ರಯತಾಣವು ಬೈಲಕುಪ್ಪೆ ಗ್ರಾಮದಿಂದ ಮೊದಲ್ಗೊಂಡು ಕೊಡಗು ಜಿಲ್ಲೆಯ ಕುಶಾಲನಗರಕ್ಕೆ ಅಂಟಿಕೊಂಡಿರುವ ಕೊಪ್ಪ ಗ್ರಾಮದವರೆಗೂ ವ್ಯಾಪಿಸಿದೆ.  
  ಅರುಣಾಚಲ ಪ್ರದೇಶ ತನಗೆ ಸೇರಬೇಕಾದ್ದೆಂದು ಹೇಳಿಕೊಂಡು ಚೀನಾವು ದಲೈ ಲಾಮಾ ಅವರ ತವಾಂಗ್ ಭೇಟಿಯನ್ನು ಆಕ್ಷೇಪಿಸಿದ್ದ ಆ ಸಂದರ್ಭದಲ್ಲಿ ಬೈಲಕುಪ್ಪೆಯ ಟಿಬೆಟಿಯನ್ನರ ಮನಃಸ್ಥಿತಿಯನ್ನು ಅರಿಯುವುದು ನನ್ನ ಬೈಲಕುಪ್ಪೆ ಭೇಟಿಯ ಉದ್ದೇಶವಾಗಿತ್ತು. ಜೊತೆಗೆ, ಅವರ ಜೀವನಕ್ರಮವನ್ನು ಕಣ್ಣಾರೆ ನೋಡುವ ಇಚ್ಛೆಯೂ ನನಗಿತ್ತು.
  ಕೊಪ್ಪದಿಂದ ಆರಂಭ
  ಕೊಪ್ಪ ಗ್ರಾಮದಲ್ಲಿ ಬಸ್ ಇಳಿದು ಎರಡು ಕಿಲೋಮೀಟರ್ ನಡೆದು ನಾನು ಟಿಬೆಟಿಯನ್ ಆಶ್ರಯತಾಣದ ಕ್ಯಾಂಪ್‌ಗಳಲ್ಲೊಂದಾದ ’ನಾಮ್‌ದ್ರೊಲಿಂಗ್ ನಿಯಿಂಗ್‌ಮಪಾ ವಿರಕ್ತ ವಿಹಾರ (ಮೊನಾಸ್ಟರಿ)’ ತಲುಪಿದೆ. ’ಗೋಲ್ಡನ್ ಟೆಂಪಲ್’ ಎಂಬ ಹೆಸರಿನಲ್ಲಿ ಜನಪ್ರಿಯವಾಗಿರುವ ’ಪದ್ಮಸಂಭವ ಬೌದ್ಧವಿಹಾರ’ ಮತ್ತು ನಿಯಿಂಗ್‌ಮಪಾ ಮಹಾವಿದ್ಯಾಲಯ ಇಲ್ಲಿವೆ.
  ಬೈಲಕುಪ್ಪೆಯ ಆಶ್ರಯತಾಣಸಮುಚ್ಚಯದ ಸ್ಥಳವಿವರವನ್ನಾಗಲೀ ಪ್ರೇಕ್ಷಣೀಯ ವಿಶೇಷಗಳ ಮಾಹಿತಿಯನ್ನಾಗಲೀ ನಾನು ಈ ಲೇಖನದಲ್ಲಿ ನೀಡುವುದಿಲ್ಲ. ಆ ವಿವರಗಳಿಗೆ ಸಾಕಷ್ಟು ಪ್ರವಾಸಿ ಸಾಹಿತ್ಯ ಲಭ್ಯವಿದೆ. ಒಂದು ಕಾಲದಲ್ಲಿ ಟಿಬೆಟ್ ತೊರೆದು ನಿರಾಶ್ರಿತರಾಗಿ ಇಲ್ಲಿಗೆ ಬಂದು ಇಂದಿಲ್ಲಿ ಜೀವನ ಕಟ್ಟಿಕೊಂಡಿರುವ ದಲೈ ಲಾಮಾ ಅನುಯಾಯಿಗಳ ಮನದಾಳದ ಮಾತುಗಳನ್ನು ತಿಳಿಸುವುದು ಮತ್ತು ಅವರ ಜೀವನ, ವ್ಯಕ್ತಿತ್ವ ಇವುಗಳ ಒಂದು ಸ್ಥೂಲ ಚಿತ್ರಣವನ್ನು ನೀಡುವುದು ಈ ಲೇಖನದ ಉದ್ದೇಶ.
  ’ಪದ್ಮಸಂಭವ ಬೌದ್ಧವಿಹಾರ’ದಲ್ಲಿ ನನಗೆ ಭಿಕ್ಷುವೊಬ್ಬ ತನ್ನ ಪ್ಲಾಸ್ಟಿಕ್ ಬಾಟಲ್‌ನಲ್ಲಿ ಕುಡಿಯಲು ನೀರು ಕೊಟ್ಟಾಗ ಆತನೊಡನೆ ಸಂಭಾಷಿಸುವುದರೊಂದಿಗೆ ಅಲ್ಲಿನ ಟಿಬೆಟಿಯನ್ನರೊಡನೆ ನನ್ನ ಮಾತುಕತೆ ಆರಂಭವಾಯಿತು. ಅಲ್ಲಿಂದ ಮುಂದುವರಿದು ನಾನು ಆ ಬೆಳಗಿನಿಂದ ಸಂಜೆಯ ತನಕ ಅನೇಕ ಮಂದಿ ಟಿಬೆಟಿಯನ್ನರೊಡನೆ ಮಾತುಕತೆ ನಡೆಸಿದೆ. ಭಿಕ್ಷುಗಳು, ಕೃಷಿಕರು, ಅಂಗಡಿಕಾರರು, ವಿದ್ಯಾರ್ಥಿಗಳು ಹೀಗೆ ನಾನಾ ಬಗೆಯ ಮತ್ತು ನಾನಾ ವಯಸ್ಸಿನ ಟಿಬೆಟಿಯನ್ನರೊಡನೆ ಅವರ ಬೇರೆ ಬೇರೆ ಕ್ಯಾಂಪ್‌ಗಳಲ್ಲಿ ನಾನು ನಡೆಸಿದ ಮಾತುಕತೆಗಳಲ್ಲಿ ಅವರೆಲ್ಲರ ಅಭಿಪ್ರಾಯಗಳೂ ಏಕರೀತಿಯವಾಗಿದ್ದುದು ಗಮನಾರ್ಹ. ನಾನು ಕೇಳಿದ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರಗಳನ್ನು ಆಧರಿಸಿ, ಒಟ್ಟಾರೆಯಾಗಿ ಅವರ ಮನೋಭಿಪ್ರಾಯವನ್ನು ಸ್ಥೂಲವಾಗಿ ಈ ಕೆಳಗಿನಂತೆ ದಾಖಲಿಸಬಹುದಾಗಿದೆ.
  * ಭಾರತದ ಬಗ್ಗೆ ಅವರೆಲ್ಲರಿಗೂ ಅತೀವ ಗೌರವವಿದೆ. ತಮಗೆ ಆಶ್ರಯ ನೀಡಿದ ದೇಶವೆಂಬ ಕೃತಜ್ಞತಾ ಭಾವವಿದೆ. (ಅವರ ಕ್ಯಾಂಪ್‌ಗಳಲ್ಲಿ ಕೆಲವು ಕಡೆ ಭಾರತಕ್ಕೆ ಕೃತಜ್ಞತೆ ವ್ಯಕ್ತಪಡಿಸಿ ಬೋರ್ಡ್‌ಗಳನ್ನೂ ಹಾಕಿದ್ದಾರೆ.)
  * ತಮ್ಮ ಗುರು ದಲೈ ಲಾಮಾರವರ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿರುವ ಭಾರತದ ಬಗ್ಗೆ ಈ ಟಿಬೆಟಿಯನ್ನರಿಗೆ ಹೆಮ್ಮೆಯಿದೆ.
  * ಹಿಂದೂ ಧರ್ಮದ ಬಗ್ಗೆ ಇವರಿಗೆ ಅಪಾರ ಪ್ರೀತಿಯಿದೆ, ಆದರವಿದೆ. (ಎಷ್ಟೆಂದರೂ ಹಿಂದೂ ಧರ್ಮದ ತಳಹದಿಯಿಂದೆದ್ದು ಕವಲೊಡೆದು ಬೆಳೆದ ಧರ್ಮಗಳಲ್ಲವೇ ಬೌದ್ಧ ಮತ್ತು ಜೈನ ಧರ್ಮಗಳು?)
  * ತಮ್ಮ ದೇಶವನ್ನು ಕಬಳಿಸಿದ ಚೀನಾದಮೇಲೆ ಇವರಿಗೆ ಭಾರೀ ಸಿಟ್ಟಿದೆ. ಅರುಣಾಚಲ ಪ್ರದೇಶ ತನಗೆ ಸೇರಬೇಕೆಂದು ಚೀನಾ ಹೇಳುತ್ತಿರುವುದನ್ನು ಇವರು ಕಡುವಾಗಿ ವಿರೋಧಿಸುತ್ತಾರೆ. "ತನ್ನ ಸ್ವಾರ್ಥಕ್ಕಾಗಿ ಇತರರಿಗೆ ಏನು ಮಾಡಲೂ ಹೇಸದ ಚೀನಾ ಎಂಥ ವಂಚಕ ಮತ್ತು ದುಷ್ಟ ದೇಶವೆಂದು ಟಿಬೆಟ್‌ನಲ್ಲಿ ನಲವತ್ತು ವರ್ಷ ಬಾಳಿ ಬಂದಿದ್ದ ನನ್ನಜ್ಜ ವರ್ಣಿಸುತ್ತಿದ್ದ", ಎಂದು ಮಧ್ಯವಯಸ್ಕನೊಬ್ಬ ನನಗೆ ಹೇಳಿದ.
  * ಅರುಣಾಚಲ ಪ್ರದೇಶದ ಬಗ್ಗೆಯಾಗಲೀ ದಲೈ ಲಾಮಾರವರ ತವಾಂಗ್ ಭೇಟಿಯ ಬಗ್ಗೆಯಾಗಲೀ ಚೀನಾವು ಏನೇ ತಗಾದೆ ತೆಗೆಯಲಿ, ಭಾರತದ ದೃಢತೆಯ ಮುಂದೆ ಚೀನಾದ ಆಟ ಏನೇನೂ ನಡೆಯುವುದಿಲ್ಲವೆಂಬ ವಿಶ್ವಾಸ ಈ ಟಿಬಿಟಿಯನ್ನರದ್ದಾಗಿದೆ.
  * ಜೀವನ ನಿರ್ವಹಣೆಗೆ ಯಾವ ಸಮಸ್ಯೆಯೂ ಇಲ್ಲದೆ ಭಾರತದಲ್ಲಿ ಈ ಟಿಬೆಟಿಯನ್ನರು ಸುಖವಾಗಿಯೇ ಇದ್ದಾರಾದರೂ ತಮ್ಮ ಮೂಲಸ್ಥಳವನ್ನು ತೊರೆದುಬರಬೇಕಾಗಿ ಬಂದ ಬಗ್ಗೆ ಅವರ ಮನದಾಳದಲ್ಲಿ ನೋವಿದೆ.
  * ಚೀನಾದ ತೆಕ್ಕೆಯಿಂದ ಮುಕ್ತಗೊಂಡು ಟಿಬೆಟ್ ಸ್ವತಂತ್ರ ದೇಶವಾಗಬೇಕೆಂಬ ಹಂಬಲ ಇವರೆಲ್ಲರ ಮನಸ್ಸಿನಲ್ಲೂ ಗಾಢವಾಗಿದೆ.
  ಸರಳ ಜೀವನ
  ಬೈಲಕುಪ್ಪೆಯ ಟಿಬೆಟಿಯನ್ ಕ್ಯಾಂಪ್‌ಗಳಲ್ಲಿ ನನ್ನ ಗಮನ ಸೆಳೆದದ್ದು ಆ ಜನರ ಸರಳ ಜೀವನ.
  ಮಂದಿರಗಳನ್ನು ಮತ್ತು ವಿದ್ಯಾಲಯಗಳನ್ನು ಭರ್ಜರಿಯಾಗಿ ಕಟ್ಟಿಸಿರುವ ಇವರು ತಾವು ಮಾತ್ರ ತೀರಾ ಸಾಮಾನ್ಯ ದರ್ಜೆಯ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಬಹುತೇಕ ಮನೆಗಳು ಹಳೆಯ, ಒಂದಂತಸ್ತಿನ ಮನೆಗಳು.
  ವಿರಕ್ತ ವಿಹಾರಗಳ ವಿದ್ಯಾಲಯಗಳಲ್ಲಿ ಅಭ್ಯಸಿಸುತ್ತಿರುವ ಮತ್ತು ಧಾರ್ಮಿಕ ಜೀವನ ಸಾಗಿಸುತ್ತಿರುವ ಭಿಕ್ಷುಗಳು ಬೃಹತ್ ಕಟ್ಟಡಗಳಲ್ಲಿ ಸಾಲಾಗಿ ನಿರ್ಮಿಸಲಾಗಿರುವ ಚಿಕ್ಕಚಿಕ್ಕ, ಅತಿ ಸರಳ ಕೊಠಡಿಗಳಲ್ಲಿ ವಾಸಿಸುತ್ತಿದ್ದರೆ ಬಹುಪಾಲು ಕೃಷಿಕರಾಗಿರುವ ಸಂಸಾರಸ್ಥರು ವಿವಿಧ ಕ್ಯಾಂಪ್‌ಗಳಲ್ಲಿ, ಮೇಲೆ ಹೇಳಿದಂತೆ ಹಳೆಯ, ಒಂದಂತಸ್ತಿನ ಸಾಲುಮನೆಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತ್ಯೇಕವಾಗಿ ದೊಡ್ಡ ಮನೆಗಳನ್ನು ಕಟ್ಟಿಕೊಂಡವರು ಇದ್ದಾರಾದರೂ ಅಂಥವರ ಸಂಖ್ಯೆ ಬಲು ಕಮ್ಮಿ.
  ಹಲವರು ಸ್ಕೂಟರ್, ಮೋಟರ್ ಬೈಕ್ ಅಥವಾ ಕಾರ್ ಹೊಂದಿದ್ದಾರಾದರೂ ಅಂಥವರ ಸಂಖ್ಯೆ ತೀರಾ ಕಡಿಮೆ. ಒಂದು ಕ್ಯಾಂಪ್‌ನಿಂದ ಮೂರ್‍ನಾಲ್ಕು ಕಿಲೋಮೀಟರ್ ದೂರವಿರುವ ಇನ್ನೊಂದು ಕ್ಯಾಂಪ್‌ಗೆ, ಅಷ್ಟೇ ಅಥವಾ ಇನ್ನೂ ಹೆಚ್ಚು ದೂರದ ಬೈಲಕುಪ್ಪೆ ಬಸ್ ತಂಗುದಾಣ, ಕೊಪ್ಪ ಗ್ರಾಮ, ಕುಶಾಲನಗರ ಈ ಸ್ಥಳಗಳಿಗೆ ಓಡಾಡಲು ಬಹುತೇಕರು ಅವಲಂಬಿಸುವುದು ಆಟೋರಿಕ್ಷಾಗಳನ್ನು.
  ಮೆರೆದ ಮಾನವೀಯತೆ
  ಒಂದಿಡೀ ದಿನದ ನನ್ನ ಬೈಲಕುಪ್ಪೆ ಸುತ್ತಾಟದಲ್ಲಿ ನಾನು ಕಂಡನುಭವಿಸಿದ ಕೆಲವು ಮಾನವೀಯ ಅಂಶದ ಘಟನೆಗಳನ್ನಿಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ನಿರಾಶ್ರಿತರಾಗಿ ಬಂದಿಲ್ಲಿ ನೆಲಸಿದ ಟಿಬೆಟಿಯನ್ನರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿವೆ ಈ ಘಟನೆಗಳು.
  ’ನಾಮ್‌ದ್ರೊಲಿಂಗ್ ನಿಯಿಂಗ್‌ಮಪಾ ವಿರಕ್ತ ವಿಹಾರ’ದಿಂದ ನನಗೆ ಮೂರು ಕಿಲೋಮೀಟರ್ ದೂರದ ’ಸೆರಾ ಝೆ ವಿರಕ್ತ ವಿಹಾರ’ಕ್ಕೆ ಹೋಗಬೇಕಾಗಿತ್ತು. ಬೈಲಕುಪ್ಪೆಯ ಟಿಬೆಟಿಯನ್ ಕ್ಯಾಂಪ್ ಸಮುಚ್ಚಯದಲ್ಲೆಲ್ಲೂ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದೆ. ಹದಿನೈದು ನಿಮಿಷ ಕಾದರೂ ಒಂದೂ ಆಟೋ ಬರಲಿಲ್ಲ. ಅಷ್ಟರಲ್ಲಿ ವಿರುದ್ಧ ದಿಕ್ಕಿನಿಂದ ಒಂದು ಮೋಟರ್ ಬೈಕ್ ಬಂತು. ನನ್ನೆದುರು ಬೈಕ್ ನಿಲ್ಲಿಸಿ ಅದರ ಸವಾರ ನನ್ನನ್ನು ವಿಚಾರಿಸಿದ. ಬಳಿಕ ಮೋಟರ್ ಬೈಕ್‌ನಲ್ಲಿ ನನ್ನನ್ನು ’ಸೆರಾ ಝೆ ವಿರಕ್ತ ವಿಹಾರ’ಕ್ಕೆ ಕೊಂಡೊಯ್ದು ಬಿಟ್ಟು, ತಾನು ಬಂದ ದಾರಿಯಲ್ಲೇ ವಾಪಸ್ ಹಿಂತಿರುಗಿದ. ಆತ ಆರು ಕಿಲೋಮೀಟರ್ ದಾರಿ ನನಗಾಗಿ ಕ್ರಮಿಸಿದ.
  ’ಸೆರಾ ಝೆ ವಿರಕ್ತ ವಿಹಾರ’ದ ನಂತರ ನಾನು ಹೋಗಲಿಚ್ಛಿಸಿದ್ದು ಅಪೂರ್ಣವಾಗುಳಿದಿರುವ ಹೊಸ ಕರ್ಮಪಾ ಮಂದಿರಕ್ಕೆ. ಅದರ ನಿರ್ಮಾಣಕಾರ್ಯ ಅರ್ಧಕ್ಕೇ ನಿಂತಿರುವುದರ ಕಾರಣವನ್ನು ಅಲ್ಲಿನವರಿಂದಲೇ ತಿಳಿಯುವ ಅಪೇಕ್ಷೆ ನನ್ನದಾಗಿತ್ತು. ಆ ನಿರ್ಜನ ಪ್ರದೇಶಕ್ಕೆ ಆಟೋ ಸಿಗದಿದ್ದುದರಿಂದ ಮೂರ್‍ನಾಲ್ಕು ಕಿಲೋಮೀಟರ್‌ಗಳಷ್ಟು ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಲು ನಿರ್ಧರಿಸಿದೆ. ನಿರ್ಜನ ಗುಡ್ಡಗಾಡಿನಲ್ಲಿ ಕಾಲ್ನಡಿಗೆಯ ಸೊಗಸನ್ನು ಅನುಭವಿಸುತ್ತ, ಪ್ರಕೃತಿಯನ್ನು ಆಸ್ವಾದಿಸುತ್ತ ನಾನು ಎರಡು-ಎರಡೂವರೆ ಕಿಲೋಮೀಟರ್‌ನಷ್ಟು ದೂರ ನಡೆದಿರಬಹುದು, ಎಲ್ಲಿಂದಲೋ ಒಂದು ಮೋಟರ್ ಬೈಕ್ ಧಾವಿಸುತ್ತ ಬಂದು ನನ್ನೆದುರು ನಿಂತಿತು.
  ಕರ್ಮಪಾ ಮಂದಿರದವರೆಗೂ ನನಗೆ ಡ್ರಾಪ್ ದೊರೆಯಿತು. ಬೇರೆಲ್ಲಿಗೋ ಹೋಗುತ್ತಿದ್ದ ಆ ಬೈಕ್ ಸವಾರ ದೂರದಿಂದಲೇ ನನ್ನನ್ನು ನೋಡಿ ನನ್ನೆಡೆ ಬೈಕ್ ತಿರುಗಿಸಿದ್ದ! ಆತ ಎಂ.ಬಿ.ಎ ಪದವೀಧರ. ಆತನೊಡನೆ ಆತನ ಪುಟ್ಟ ಮಗುವೂ ಬೈಕ್‌ಗೆ ಅಂಟಿಕೊಂಡು ಕುಳಿತಿತ್ತು.
  ಎತ್ತರದ ಪ್ರದೇಶದಲ್ಲಿ ಭವ್ಯವಾಗಿ ಕಂಗೊಳಿಸುತ್ತಿದ್ದ ಹೊಸ ಕರ್ಮಪಾ ಮಂದಿರದ ನಿರ್ಮಾಣಕಾರ್ಯವು ಹಣದ ಕೊರತೆಯಿಂದಾಗಿ ಅರ್ಧಕ್ಕೇ ನಿಂತುಬಿಟ್ಟಿದೆಯೆಂದು ತಿಳಿದು ನನಗೆ ವಿಷಾದವಾಯಿತು. ಈ ವಿಷಯ ತಿಳಿಸಿದಾತ ನನ್ನ ದೂರವಾಣಿ ಸಂಖ್ಯೆಯನ್ನು ಕೇಳಿ ಬರೆದುಕೊಂಡ. "ಮಂದಿರ ನಿರ್ಮಾಣ ಪೂರ್ಣವಾದಕೂಡಲೇ ನಿಮಗೆ ಫೋನ್ ಮಾಡಿ ತಿಳಿಸುತ್ತೇನೆ. ಆಗ ಮಂದಿರಕ್ಕೆ ಮತ್ತೊಮ್ಮೆ ಭೇಟಿ ಕೊಡಿ", ಎಂದು ಹರಕು ಮುರಕು ಆಂಗ್ಲೋ ಹಿಂದಿಯಲ್ಲಿ ಆತ ನನಗೆ ಹೇಳಿದ.
  ಅಲ್ಲಿಂದ ಮುಂದಿನ ತಾಣಕ್ಕೂ ನಾನು ನಡೆದೇ ಹೋಗಬೇಕಾಯಿತು. ಮಟಮಟ ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಅರ್ಧ ಗಂಟೆ ನಡೆದಿರಬಹುದು, ಇನ್ನೇನು ನನ್ನ ಗಮ್ಯಸ್ಥಳ ಅಗೋ ಅಲ್ಲಿ ಕಾಣುತ್ತಿದೆ ಎನ್ನುತ್ತಿರುವಾಗ ಇದ್ದಕ್ಕಿದ್ದಂತೆ ಕರಿಮೋಡ ಕವಿದು ಮಳೆ ಶುರುವಾಯಿತು. ಇಕ್ಕೆಲವೂ ಗದ್ದೆಗಳಿರುವ ಆ ಗುಡ್ಡದ ಬಯಲಿನಲ್ಲಿ ಮತ್ತೆ ಹತ್ತು ನಿಮಿಷ ನಡೆಯುವಷ್ಟರಲ್ಲಿ ನಾನು ಒದ್ದೆಮುದ್ದೆಯಾಗಿಹೋಗಿದ್ದೆ.
  ಹಾಗೇ ಒಂದಷ್ಟು ದೂರ ನಡೆದಮೇಲೆ ಕೆಲವು ಪುಟ್ಟ ಕಟ್ಟಡಗಳು ಕಣ್ಣಿಗೆ ಬಿದ್ದವು. ಆ ಪೈಕಿ, ಮನೆಯೋ ಹೋಟೆಲ್ಲೋ ಗೊತ್ತಾಗದಂತಹ ಕಟ್ಟಡವೊಂದರೊಳಗೆ ಹೋಗಿ ನಾನು, ಅಲ್ಲಿದ್ದ ಟಿಬೆಟಿಯನ್ ವೃದ್ಧೆಯನ್ನು, "ತಿನ್ನಲು ಏನಾದರೂ ಸಿಕ್ಕಬಹುದೇ?" ಎಂದು ಹಿಂದಿಯಲ್ಲಿ ಕೇಳಿದೆ. ನನಗೆ ತಡೆಯಲಾರದಷ್ಟು ಹಸಿವೆಯಾಗಿತ್ತು.
  "ಅರ್ಧ ಗಂಟೆ ಕಾಯುತ್ತೀರಾ?" ಎಂದು ಆ ವೃದ್ಧೆಯ ಮಗಳಿರಬೇಕು, ಪ್ರಶ್ನಿಸಿದಳು.
  "ಸರಿ, ಕಾಯುತ್ತೇನೆ. ತಿನ್ನಲು ಏನೂ ಆದೀತು, ಆದರೆ ವೆಜ್ ಮಾತ್ರ", ಎಂದೆ.
  ಅರ್ಧ ಗಂಟೆಯೊಳಗೆ ಮೂರು ಬಿಸಿಬಿಸಿ ಪರೋಟಾ ಮತ್ತು ಭಾಜಿ ನನ್ನೆದುರು ಪ್ರತ್ಯಕ್ಷ. ತದನಂತರ ಗರಂ ಚಾಯ್. ಬಿಲ್ಲು ಕೇವಲ ಹದಿನೈದು ರೂಪಾಯಿ.
  ಸಂಜೆವರೆಗೆ ವಿವಿಧ ಕ್ಯಾಂಪ್‌ಗಳನ್ನು ಸಂದರ್ಶಿಸಿದ ನಂತರ ನನ್ನ ಭೇಟಿಯ ಕೊನೆಯ ತಾಣವಾದ ’ಒಂದನೇ ಕ್ಯಾಂಪ್’ ಕಡೆಗೆ ಯಥಾಪ್ರಕಾರ ನಡೆದುಕೊಂಡು ಹೊರಟೆ. ಪಕ್ಕದ ಗದ್ದೆಯಲ್ಲಿ ತೆನೆ ಕೀಳುತ್ತಿದ್ದ ಕೃಷಿಕ ಟಿಬೆಟಿಯನ್ ವೃದ್ಧರೋರ್ವರು ತೆನೆಯನ್ನು ಅಲ್ಲೇ ಹಾಕಿ ನನ್ನ ಬಳಿ ಬಂದು ವಿಚಾರಿಸಿ, ಅನತಿ ದೂರದಲ್ಲಿ ನಿಲ್ಲಿಸಿದ್ದ ತಮ್ಮ ಸ್ಕೂಟರ್ ತೆಗೆದುಕೊಂಡುಬಂದು ’ಒಂದನೇ ಕ್ಯಾಂಪ್’ಗೆ ನನ್ನನ್ನು ಬಿಟ್ಟು ತಮ್ಮ ಗದ್ದೆಗೆ ವಾಪಸಾದರು.
  ’ಒಂದನೇ ಕ್ಯಾಂಪ್’ ನಂತರ ಟಿಬೆಟಿಯನ್ ವಸತಿ ಪ್ರದೇಶದಿಂದ ಹೊರಹೊರಟ ನಾನು ಎರಡು ಕಿಲೋಮೀಟರ್ ನಡೆದು ಬೈಲಕುಪ್ಪೆಯ ಬಸ್ ತಂಗುದಾಣ ತಲುಪಿದಾಗ ರಾತ್ರಿಯಾಗಿತ್ತು.
  ಉಪಸಂಹಾರ
  ಮಾನವೀಯ ಮೌಲ್ಯಗಳಿಗೆ ಬೆಲೆಕೊಡುವವರೂ ಶಾಂತಿಪ್ರಿಯರೂ ಧರ್ಮಭೀರುಗಳೂ ಆಗಿರುವ ಟಿಬೆಟಿಯನ್ನರ ನೆಲವನ್ನು ನುಂಗಿರುವ ಚೀನಾ ದೇಶವು ನಮ್ಮ ಅರುಣಾಚಲ ಪ್ರದೇಶದ ಭೂಭಾಗಗಳನ್ನೂ ತನ್ನದೆಂದು ಹೇಳಿಕೊಳ್ಳುತ್ತಿರುವುದನ್ನು ಕಂಡರೆ ರಕ್ತ ಕುದಿಯುತ್ತದೆ. ತಾನು ಹಿಂಸಿಸಿ ಓಡಿಸಿದ ಈ ಟಿಬೆಟಿಯನ್ ಬೌದ್ಧರೇನಿದ್ದಾರೆ ಇವರ ಧರ್ಮಗುರು ದಲೈ ಲಾಮಾ ಭಾರತದ ತವಾಂಗ್‌ಗೆ ಭೇಟಿ ನೀಡುವುದನ್ನೂ ಈ ಚೀನಾ ಆಕ್ಷೇಪಿಸುತ್ತಿದೆಯಲ್ಲಾ, ಅದಿನ್ನೆಂಥ ಧೂರ್ತ ದೇಶವಾಗಿದ್ದೀತು!