ಹಲವು ನೋವ ತಡೆದ ಸಹನೆ ನೋವ ತಿಂಡಿಯಂತೆ ನುಂಗಿಹಳು,
ಬಿಟ್ಟಿಹಳು ದೋಸೆ ಕಣ್ಣೀರ ಕಾವಲಿಯು ಚುರ್ ಎನಲು ತುರಿಯಲು
ಕಾಯಿ ಎದೆ ಹೊಟ್ಟೆ ನೋವಿನಾ ಮಧ್ಯೆ ಬರಿದಾದ ಮನ ಖಾಲಿ ಹೃದಯ ಹೊತ್ತು,
ಎತ್ತಿ ಹಿಡಿದು ಕ್ಷೀಣ ಜೀರ್ಣ ಕೈಯಲಿ ಕರ್ತವ್ಯ ಗೋವರ್ಧನ ಗಿರಿಯ ಅನಾಥೆ ಪಾವನೆ
ಹಲವು ಸತ್ಪುರುಷರ ಜಿನುಗು ನೀರಿನಲಿ ಅಮ್ಮನಿದ್ದಳು ಗಂಗೆಯಂತೆ
ಕರುಳ ಭಾವನೆಯೇ ಉಸಿರು, ಬಿಟ್ಟಿಹಳು ನಿಟ್ಟುಸಿರು ಪಾಪಿಸಮೂಹದಲಿ
ನಾಯಿ ನರಿ ಹದ್ದು ಕಿತ್ತು ತಿಂದವು ಆ ದೇವತೆಯ ಕಣ್ಣ ಮುಂದೆ
ದುಷ್ಟ ರಕ್ಕಸರ ಕುತಂತ್ರದಾ ಬಲಿಪಶುವಾದಳು ಅನರ್ಹಳೆಂದು ಜರೆಸಿಕೊಂಡಳು
ಇದ್ದುದೆಲ್ಲವ ಕೊಟ್ಟು ಬರಿದಾಗಿಸಿಕೊಂಡಳು ಸೆರಗ ಮೈ ಮನ ಧನವ ಹಾಡಿದಳು
ಒಂದು ಹಾಡ ಕರುಣ ಕತೆಯ, ಭಂಡರು ಮರೆತರಾ ತ್ಯಾಗವನು ನಿಸ್ವಾರ್ಥ ಕರ್ತವ್ಯ ನಿಷ್ಠೆಯನು
ಮರೆತು ನೀಡಲು ಪ್ರತಿ ಉಪಕಾರವ ದ್ರೋಹ ಮಾಡಿಹರು ಊರುಗೋಲನೂ ಕಿತ್ತುಕೊಂಡು
ಉಪವಾಸವಿಕ್ಕಿ ನಗುತಿಹರು ಬಿಡುವನಾ ಕಾಲಯಮನು ಸಿಡಿಲು ಎರಗದೆ ಬೆಂಕಿ ಮಳೆ ಬರದೆ ?
ಅವಳು ತಿಳಿಯದ ದೇವರಿಲ್ಲ ಉಪವಾಸ ನಿಯಮಗಳಿಲ್ಲ ಕಾದಿಹಳು ಧರ್ಮವ
ಹಾಡಿಹಳು ಕೀರ್ತನೆ ದೇವರ ನೀಡಿಹಳು ಜಗಕೆ ಜಗದೋಧಾರಕರ, ಕೊಂಡಿಲ್ಲ ಏನೂ
ಕಲಿಸಿಹಳು ದಯೆಯ ಪರಮತತ್ವ ಇನ್ನೇಕೆ ನಾ ಹೆದರಲಿ ನಾನು ಕಂಡೆ ಅನ್ನಪೂರ್ಣೆ,
ಸೀತೆ, ಕ್ಷಮಾ, ಲಕ್ಷ್ಮಿಯರ ತಾಯಿ ಈಶ್ವರಿಯ ಧನ್ಯ ಅವಳ ಕಂಡ ಈ ದೇಹ ಮನ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!