ಏಕದಿನ ಇತಿಹಾಸದಲ್ಲೇ ಚೊಚ್ಚಲ ದ್ವಿಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ದೇಶದ ಅತ್ಯುನ್ನತ್ತ ನಾಗರಿಕ ಪ್ರಶಸ್ತಿ 'ಭಾರತ ರತ್ನ'ದಿಂದ ಗೌರವಾನ್ವಿತನಾಗುವುದು ಪ್ರತಿಯೊಬ್ಬ ಭಾರತೀಯನ ಕನಸಾಗಿದೆ ಎಂದು ಹೇಳಿದ್ದಾರೆ.
ಮಾತು ಮುಂದುವರಿಸಿದ ಲಿಟ್ಲ್ ಮಾಸ್ಟರ್ ತಾನು ಈ ಪ್ರಶಸ್ತಿಗೆ ಅರ್ಹನಾಗಲು ಇನ್ನೂ ಸಾಕಷ್ಟು ದೂರ ಕ್ರಮಿಕರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಗ್ವಾಲಿಯರ್ನಲ್ಲಿ ನಡೆದಿದ್ದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸಚಿನ್ ವಿಶ್ವದಾಖಲೆಯ ದ್ವಿಶತಕದ ಸಾಧನೆ ಮಾಡಿದ್ದರು. ಇದು ಏಕದಿನ ಇತಿಹಾಸದಲ್ಲೇ ದಾಖಲಾದ ಚೊಚ್ಚಲ ದ್ವಿಶತಕವಾಗಿತ್ತು.
ಈ ಬಗ್ಗೆ ಹಲವು ಗಣ್ಯರಿಂದ ಸಚಿನ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂಬ ಅಭಿಪ್ರಾಯ ಮೂಡಿಬಂದಿತ್ತು. ಈ ಬೇಡಿಕೆ ಮುಂದಿಟ್ಟವರಲ್ಲಿ ಮಹಾರಾಷ್ಟ್ರ ಸರಕಾರ, ಕ್ರಿಕೆಟ್ ದಿಗ್ಗಜರಾದ ಕಪಿಲ್ ದೇವ್, ದಿಲೀಪ್ ವೆಂಗಾಸರ್ಕಾರ್ ಪ್ರಮುಖರು.
ದೇಶದ ನಾಗರಿಕನೊಬ್ಬನಿಗೆ ಸಿಗಬಹುದಾದ ಅತೀ ದೊಡ್ಡ ಗೌರವ ಭಾರತ ರತ್ನ; ಆದರೆ ಈ ಪ್ರಶಸ್ತಿಗೆ ಅರ್ಹರಾದವರೆಲ್ಲ ನನ್ನಕ್ಕಿಂತ ಶ್ರೇಷ್ಠ ವ್ಯಕ್ತಿಗಳು. ಅವರ ಸಾಲಿಗೆ ನನ್ನನ್ನು ಹೋಲಿಸುವಂತಿಲ್ಲ ಎಂದು ಹೇಳುವ ಮೂಲಕ ಲಿಟ್ಲ್ ಮಾಸ್ಟರ್ ಹಿರಿಮೆ ಮೆರೆದಿದ್ದಾರೆ.
ಒಂದು ವೇಳೆ ಈ ಪ್ರಶಸ್ತಿಗೆ ನಾನು ಅರ್ಹನಾದರೆ ಅದು ಹೆಮ್ಮೆಯ ಕ್ಷಣವಾಗಿರಲಿದೆ ಎಂದವರು ಅಭಿಪ್ರಾಯಪಟ್ಟರು.
ನಾನೀಗ ಪ್ರಶಸ್ತಿ ಬಗ್ಗೆ ಚಿಂತಿತನಾಗಿಲ್ಲ. ಈ ಗೌರವಕ್ಕೆ ಅರ್ಹನಾಗಿದ್ದರೆ ಖಂಡಿತವಾಗಿಯೂ ನನ್ನನ್ನು ಹರಸಿ ಬರಲಿದೆ. ಏನಿದ್ದರೂ ಆಟದತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿದ್ದು, ಈ ಬಗ್ಗೆ ಯೋಚಿಸುವುದು ನನಗೆ ಇಷ್ಟವಿಲ್ಲ ಎಂದವರು ಹೇಳಿದರು.
ಸಂದೇಹವೇ ಇಲ್ಲ... ಸಚಿನ್ ಇಸ್ ಗ್ರೇಟ್ ..........ಏನಂತೀರಾ .........?
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!