ಎಣ್ಣೆ ಎಂದ ಕೂಡಲೇ ನಿಮಗೆ ಯಾವ್ಯಾವುದೋ ಎಣ್ಣೆ ನೆನಪಾಗಬಹುದು. ನಾನು ಇಲ್ಲಿ ಹೇಳ ಹೊರಟಿರುವುದು ಪೆಟ್ರೋಲಿಯಮ್ ಎಣ್ಣೆ ಬಗ್ಗೆ. ನಾನು ಈ ಲೇಖನ ಬರೆಯಲು ಪ್ರೇರಣೆ UK, USA ಗಳ ಪತ್ರಿಕೆಗಳಲ್ಲಿ ಇತ್ತೀಚೆಗೆ ಪ್ರಕಟವಾದ ಕೆಲವು ಲೇಖನಗಳು. ಈ ಲೇಖನಗಳೆಲ್ಲವೂ 'peak oil' ಎಂಬ ವಿಷಯದ ಸುತ್ತ ಹೆಣೆದ ಬರಹಗಳು. ಹಾಗಾಗಿ ಈ 'peak oil' ಎಂದರೆ ಏನು ಎಂದು ನೋಡೋಣ.
'peak oil' ಅನ್ನು ಅರ್ಥ ಮಾಡಿಕೊಳ್ಳಲು ನಾನೊಂದು ಕಥೆ ಹೇಳುತ್ತೇನೆ ನಿಮಗೆ. ಇದು ನನ್ನದೇ ಕಥೆ/ಉದಾಹರಣೆ, ಯಾವುದೇ ಲೇಖನದಿಂದ ಕದ್ದಿದ್ದಲ್ಲ.
ಒಂದೂರಲ್ಲಿ ಒಂದು ಇರುವೆ ಕುಟುಂಬ ವಾಸವಾಗಿತ್ತು. ಆ ಇರುವೆ ಕುಟುಂಬದಲ್ಲಿ ಸಾವಿರಾರು ಇರುವೆಗಳು ವಾಸವಾಗಿದ್ದವು. ಎಷ್ಟೋ ವರ್ಷಗಳಿಂದ ಆ ಕುಟುಂಬ ಅಲ್ಲೇ ನೆಲೆಸಿದೆ. ಅಲ್ಲಿಂದ ಬೇರೆಡೆಗೆ ವಲಸೆ ಹೋಗುವ ಯಾವ ಅಗತ್ಯವೂ ಇರಲಿಲ್ಲ ಅವುಗಳಿಗೆ. ಯಾಕೆಂದರೆ ಅವುಗಳಿಗೆ ಬೇಕಾದ ಎಲ್ಲಾ ವಸ್ತುಗಳೂ ಸುಲಭವಾಗಿ ದೊರಕುತಿತ್ತು. ಬೆಚ್ಚಗಿನ ಗೂಡು, ಸುತ್ತ ಮುತ್ತ ಕಾಡಲ್ಲಿ ಸಾಕಷ್ಟು ಆಹಾರ, ಇತ್ಯಾದಿ. ಕುಟುಂಬದ ಸಂಖ್ಯೆ ಹೆಚ್ಚು ಕಮ್ಮಿ ಅಷ್ಟೇ ಇದೆ, ಆದರೆ ಬರಗಾಲದಲ್ಲಿ, ನೆರೆ ಬಂದ ಸಂದರ್ಭದಲ್ಲಿ ಸಂಖ್ಯೆ ಹೆಚ್ಚುಕಡಿಮೆಯಾದದ್ದಿದೆ. ಆದರೆ ಕಮ್ಮಿ ಬಿದ್ದ ಸಂಖ್ಯೆ ಮುಂದಿನ ವರ್ಷ ಸರಿದೂಗುತಿತ್ತು. ಇದು ಎಷ್ಟೋ ವರ್ಷಗಳಿಂದ ಇದ್ದ ಪರಿಸ್ಥಿತಿ.
ಕಥೆಯ ತಿರುವು ಬರುವುದು ಈಗ. ಯೂವುದೋ ಒಬ್ಬ 'ಮನುಷ್ಯ' ದಾರಿಹೋಕ ಈ ಇರುವೆ ಗೂಡು ಇದ್ದ ಕಡೆಯಲ್ಲೇ ಹಾದುಹೋಗುತ್ತಿದ್ದ. ಅದೇನು ಕಾರಣವೋ ಗೊತ್ತಿಲ್ಲ, ಇದ್ದಕ್ಕಿಂದಂತೆ ತಾನು ಹೊತ್ತು ತಂದಿದ್ದ ಮೂಟೆಯೊಂದನ್ನು ಈ ಇರುವೆ ಕುಟುಂಬದ ಪಕ್ಕದಲ್ಲೇ ಬಿಸುಟು ವೇಗವಾಗಿ ಹೊರಟು ಹೋದ. ಹೆಚ್ಚುಕಮ್ಮಿ 25 ಕೆಜಿ ತೂಕದ ಮೂಟೆಯದು. ಅದರಲ್ಲೇನಿದೆಯೋ ಯಾರಿಗೆ ಗೊತ್ತು. ಯಾವ ಇರುವೆಯೂ ಅದನ್ನು ನೋಡುವ ಗೋಜಿಗೆ ಹೋಗಲಿಲ್ಲ. ಆದರೆ ಆ ಇರುವೆಗಳಲ್ಲಿ ಬುಧ್ಧಿವಂತ ಇರುವೆಗಳ ಗುಂಪೊಂದಿತ್ತು. ಅವುಗಳಿಗೆ 'ವಿಜ್ಞಾನಿಗಳು' ಅಂತ ಕರೆಯುತ್ತಿದ್ದರು. ಅಂತಹವರಲ್ಲೊಬ್ಬ ವಿಜ್ಞಾನಿ ಕುತೂಹಲಕ್ಕೆಂದು ಒಂದು ದಿನ ಆ ಮೂಟೆಯಲ್ಲಿ ಸಣ್ಣದೊಂದು ತೂತು ಕೊರೆದೇ ಬಿಟ್ಟ! ನೋಡನೋಡುತ್ತಿದ್ದಂತೆ ಮೂಟೆಯ ಒಳಗಿದ್ದ ಸಕ್ಕರೆ ಹೊರಬರಲಾರಂಭಿಸಿತು. ಯುರೇಕಾ ಎಂದು ಚೀರಿದ ಆ ವಿಜ್ಞಾನಿ ಇರುವೆ ಎಲ್ಲರನ್ನೂ ಕರೆತಂದು ಸಕ್ಕರೆಯ ರುಚಿ ಹತ್ತಿಸಿದ. ಅಕಸ್ಮತ್ತಾಗಿ ಸಿಕ್ಕಿದ ಸಕ್ಕರೆ ಖಜಾನೆ ಕಂಡು ಎಲ್ಲಾ ಇರುವೆಗಳಿಗೆ ಖುಷಿಯೋ ಖುಷಿ. ಎಲ್ಲಾ ಇರುವೆಗಳು ಪೈಪೋಟಿಗೆ ಬಿದ್ದು ಸಕ್ಕರೆ ತಿನ್ನಲಾರಂಭಿಸಿದವು.
ನೋಡ ನೋಡುತ್ತಿದ್ದಂತೆ ಇರುವೆ ಕುಟುಂಬದ ಚಿತ್ರಣವೇ ಬದಲಾಯಿತು. ಸಕ್ಕರೆ ಚೀಲ ಬಂದ ಮೇಲೆ ಆಹಾರ ಅರಸಿಕೊಂಡು ಊರು ಕೇರಿ ಅಲೆಯಬೇಕಾದ್ದಿಲ್ಲ ಈಗ. ಒಂದು ಮಾರುದ್ದ ಹೋದರೆ ಹೊಟ್ಟೆ ತುಂಬ ಸಕ್ಕರೆ. ಹಾಗಾಗಿ ಇರುವೆಗಳಿಗೆ ಸಾಕಷ್ಟು ಬಿಡುವಿನ ವೇಳೆ ಸಿಕ್ಕಿತು. ಬಿಡುವಿನ ವೇಳೆಯಲ್ಲಿ ಏನು ಮಾಡುವುದು? ಒಂದೊಂದು ಇರುವೆಗೆ ಒಂದೊಂದು ಗೀಳು ಹತ್ತಿಕೊಂಡಿತು. ಕೆಲವು ಇರುವೆಗಳು ಸಿನಿಮಾಕ್ಕೆ ಹೋಗಿ ಟೈಮ್ ಪಾಸ್ ಮಾಡಿದರೆ ಇನ್ನು ಕೆಲವು ಕ್ರಿಕೆಟ್ಟೋ, ಇಸ್ಪೀಟಾಟವೋ ಇನ್ನೇನೋ ಒಂದು... ಅಂತೂ ಬೆಳಗ್ಗೆದ್ದು ಆಹಾರ ಹುಡುಕಲು ಹೊರಡುತ್ತಿದ್ದ ಇರುವೆಗಳೂ ಈಗ ಏಳುವುದೇ ಸೂರ್ಯನಿಗೆ ಕಾಫಿ ತಿಂಡಿ ಆದ ಮೇಲೆ.
ಈ ಸಕ್ಕರೆ ಚೀಲ ಸಿಕ್ಕ ಮೇಲೆ ಇರುವೆಗಳ ಓಡಾಟವೂ ಸ್ವಲ್ಪ ಜಾಸ್ತಿಯಾಯಿತು. ಮೊದಲೆಲ್ಲ ಎಲ್ಲೆಂದರಲ್ಲಿ ತಿರುಗಾಡಲು ಸಮಯವೆಲ್ಲಿತ್ತು? ಇವತ್ತು ಕಾಳು ತರದೇ ಹೋದರೆ ನಾಳೆ ಕೂಳಿಗೆ ಗತಿಯಿಲ್ಲ! ಅಲ್ಪ ಸ್ವಲ್ಪ ಕೂಡಿಡುವ ಅಭ್ಯಾಸ ಇತ್ತು ಆದರೆ ಕೂಡಿಟ್ಟ ಕಾಳು ಎಷ್ಟು ದಿನ ಅಂತ ಬರ್ತಿತ್ತು? ಈಗ ಆ ತಲೆಬಿಸಿ ಇಲ್ಲ. ಮನೆ ಮುಂದೆಯೇ ಸಕ್ಕರೆ ಇರುವಾಗ ಕೂಡಿಡುವ ರಗಳೆಯೇಕೆ? ಹಾಗಾಗಿ ಈಗ ಬಿಂದಾಸ್.. ಫ್ರೀ..
ಅದೇ ಸಮಯಕ್ಕೆ ಬೇರೆ ಕುಟುಂಬದ ಇರುವೆಗಳೂ ಇವರ ಕುಟುಂಬಕ್ಕೆ ಭೇಟಿ ಕೊಡಲಾರಂಭಿಸಿದವು. ಈ ಸಕ್ಕರೆ ಕುಟುಂಬಕ್ಕೆ ಬೇಕಾದ ಕೆಲವು ಐಷಾರಾಮಿ ವಸ್ತುಗಳು ಇತರೆ ಇರುವೆ ಕುಟುಂಬಗಳಿಂದ ಬರಬೇಕಾದ್ದರಿಂದ ಅದಕ್ಕೆ ಪ್ರತಿಯಾಗಿ ಸಕ್ಕರೆ ಕೊಡಲು ಸಕ್ಕರೆ ಇರುವೆಗಳೂ ಒಪ್ಪಿದವು. ಅಲ್ಲಿಗೆ ಸಕ್ಕರೆ ರುಚಿ ಇತರ ಇರುವೆಗಳಿಗೂ ಹತ್ತಿತು. ಇಷ್ಟಾಗುವಾಗ ಇಡೀ ಇರುವೆ ಪ್ರಪಂಚದ ಬದುಕಿನ ಶೈಲಿಯೇ ಬದಲಾಗಿ ಹೋಯಿತು. ಸಕ್ಕರೆ ತಿನ್ನುವುದೇ ಜೀವನದ ಉದ್ದೇಶವೋ ಎಂಬಂತಾಯಿತು. ಸಕ್ಕರೆ ಬರುವುದಕ್ಕಿಂತ ಮೊದಲು ಇರುವೆ ಜೀವನ ಹೇಗಿತ್ತು ಎಂಬುದೇ ಬಹುತೇಕ ಇರುವೆಗಳಿಗೆ ಮರೆತುಹೋಗಿತ್ತು. ಸಕ್ಕರೆ ತಿಂದು ತಿಂದು ಇದ್ದ ಬದ್ದ ರೋಗಗಳೆಲ್ಲ ಮೈಗೆ ಹತ್ತಿಕೊಂಡರೂ ಸಕ್ಕರೆಯ ರುಚಿಯ ಮುಂದೆ ಅವು ನಗಣ್ಯವಾದವು. ಸಕ್ಕರೆಯ ಅಮಲು ಎಷ್ಟಿತ್ತೆಂದರೆ ಸಕ್ಕರೆ ಮುಂದೊಂದು ದಿನ ಮುಗಿದು ಹೋದರೆ ಮತ್ತೇನು ಎಂಬ ಸರಳ ಪ್ರಶ್ನೆಯೂ ಅವುಗಳ ತಲೆಯಲ್ಲಿ ಸುಳಿಯಲಿಲ್ಲ!
ಹೀಗೆ ಇರುವೆಗಳೆಲ್ಲ ಸಕ್ಕರೆಯ ಮತ್ತಿನಲ್ಲಿ ತೇಲಿಕೊಂಡಿದ್ದಂತೆ ಇರುವೆ ಸಮಾಜದಲ್ಲೂ ಸಾಕಷ್ಟು ಬದಲಾವಣೆಗಳಾದವು. ಈಗ ಬೇಕಾದಷ್ಟು ಆಹಾರ ಸುಲಭದಲ್ಲಿ ದೊರಕುತ್ತಿದ್ದುದರಿಂದ ಇರುವೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು. ಕೆಲವು ಸಾವಿರದಷ್ಟಿದ್ದ ಇರುವೆಗಳ ಸಂಖ್ಯೆ ಈಗ ಲಕ್ಷ ದಾಟಿತ್ತು! ಆದರೆ ಸಮಾಜದಲ್ಲಿ ಮೊದಲಿದ್ದ ಶಾಂತಿ ನೆಮ್ಮದಿಗಳಿರಲಿಲ್ಲ. ಹಾಗೆಂದು ಅವುಗಳಿಗೆ ಗೊತ್ತಿರಲಿಲ್ಲ. ಅವು ಇರುವೆ ಸಮಾಜ ಇರುವುದೇ ಹೀಗೆ ಎಂದು ನಂಬಿಕೊಂಡಿದ್ದವು! ಸಕ್ಕರೆಯ ಮತ್ತಿನ ಪ್ರಭಾವ ಅದು. ಆದರೆ ಸಮಾಜದಲ್ಲಿ ಹಿಂಸೆ, ಅತ್ಯಾಚಾರ, ಮೋಸ ಇತ್ಯಾದಿ ಹೆಚ್ಚಾದದ್ದು ನಿಜ. ಸುಲಭವಾಗಿ ಐಷಾರಾಮಿ ಸವಲತ್ತುಗಳು ಸಿಗುತ್ತಿತ್ತಲ್ಲಾ.. ಅದಕ್ಕೆ ಮನಸ್ಸು ಕೆಟ್ಟ ಬುಧ್ಧಿಯತ್ತ ತಂತಾನೇ ಹರಿದಿತ್ತು.. ಬಹುತೇಕ ಇರುವೆಗಳಿಗೆ.. ತಮ್ಮ ಕುಟುಂಬದ ಬಗ್ಗೆ, ಇರುವೆ ಸಂಸ್ಕೃತಿಯ ಬಗ್ಗೆ, ಇನ್ನೊಬ್ಬರ ಕಷ್ಟ ಸುಖಗಳ ಬಗ್ಗೆ ಯೋಚಿಸುವುದನ್ನೇ ಅವು ಮರೆತಿದ್ದವು. ಈ ಮರೆವೇ ಅವುಗಳಿಗೆ ಹೊಸ ಜೀವನ ಪಧ್ಧತಿಯಾಗಿತ್ತು. ಇರುವೆಗಳ ಪರಿಸ್ಥಿತಿ ಇಂತಿರಲು... ಕ್ಲೈಮಾಕ್ಸ್ ಒಂದು ಅವುಗಳ ಜೀವನದಲ್ಲಿ ಬಂದೇ ಬಿಟ್ಟಿತು.
ಅದೇನಾಯಿತೆಂದರೆ ಮೊದಮೊದಲು ಎಷ್ಟು ಮೊಗೆದರೂ ಸಿಗುತ್ತಿದ್ದ ಸಕ್ಕರೆ, ಇತರ ಇರುವೆಗಳು ಬಂದು ತಿನ್ನಲಾರಂಭಿಸಿದಂತೆ ಸಕ್ಕರೆ ಅಗೆಯುವುದು ದುಸ್ತರವಾಗುತ್ತಾ ಬಂತು. ಬೇಕಾಬಿಟ್ಟಿ ತಿಂದಿದ್ದರಿಂದ ಇಗಾಗಲೇ ಸುಮಾರು ಅರ್ಧದಷ್ಟು ಸಕ್ಕರೆ ಮುಗಿದಿತ್ತು! ಸಕ್ಕರೆ ಮತ್ತಿನಲ್ಲಿದ್ದ ಇರುವೆಗಳಿಗೆ ಸಕ್ಕರೆ ಖಾಲಿಯಾಗುತ್ತಿದ್ದುದು ಅರಿವಿಗೆ ಬಂದಿರಲಿಲ್ಲ! ಇದು ಸಾಲದೆಂದು ಧುತ್ತನೆ ಮತ್ತೊಂದು ಸಮಸ್ಯೆ ಎದುರಾಯಿತು ಇರುವೆಗಳಿಗೆ. ಅರ್ಧ ಚೀಲ ಸಕ್ಕರೆ ಮುಗಿದ ಮೇಲೆ ಅವುಗಳಿಗೆ ಗೊತ್ತಾಯಿತು - ಇನ್ನರ್ಧ ಚೀಲದಲ್ಲಿರು ಸಕ್ಕರೆ ಶುಧ್ಧ ಸಕ್ಕರೆಯಾಗಿರಲಿಲ್ಲ! ಅದು ಮರಳು ಮಿಶ್ರಿತ ಸಕ್ಕರೆ ಪುಡಿಯಾಗಿತ್ತು. ಬೇರೆ ಕುಟುಂಬಗಳು ಬಂದಿದ್ದರಿಂದ ಬೇಡಿಕೆ ಜಾಸ್ತಿಯಾಗಿ ಪೈಪೋಟಿ ಶುರುವಾದ ಸಮಸ್ಯೆ ಒಂದು ಕಡೆಯಾದರೆ, ಉಳಿದರ್ಧ ಸಕ್ಕರೆಯಲ್ಲಿ ಕಲಬೆರಕೆಯಾಗಿರುವುದು ಇನ್ನೊಂದು ಸಮಸ್ಯೆಯಾಗಿತ್ತು. ಏನು ಮಾಡುವುದೆಂದು ತೋಚಲಿಲ್ಲ ಇರುವೆಗಳಿಗೆ. ತಾವು ನಿಂತಿದ್ದ ಭೂಮಿ ಇದ್ದಕ್ಕಿಂದಂತೆ ಪಾತಾಳಕ್ಕಿಳಿದ ಅನುಭವ. ಸಕ್ಕರೆಯಿಲ್ಲದೆ ಮಾಡುವುದಾದರೂ ಏನು! ಮೊದಲಿನಂತೆ ಕಾಡು ಮೇಡು ಅಲೆದು ಆಹಾರ ಹುಡುಕಿ ತರಲು ಯಾವ ಇರುವೆಗಳ ಕೈಲೂ ಸಾಧ್ಯವಿಲ್ಲ. ಆ ಕೆಲಸ ಮರೆತೇ ಹೋಗಿತ್ತು. ಈಗ ಮಾಡುವ ಮನಸ್ಸಿದ್ದರೂ ಮಾಡುವ ಬಗೆ ಯಾರಿಗೂ ಗೊತ್ತಿಲ್ಲ. ಆಲಸ್ಯ ಹತ್ತಿದ, ರೋಗಗಳ ಗೂಡಾಗಿದ್ದ ಮೈಗೆ ಮೊದಲಿನ ಹಳೆ ಕೆಲಸ ಒಗ್ಗುವುದೂ ಇಲ್ಲ. ಹಾಗಿದ್ದರೆ ಏನು ಮಾಡುವುದು? ಧುತ್ತನೆ ಎದುರಾದ ಸಮಸ್ಯೆಯೊಂದರಿಂದ ಇರುವೆಗಳು ಚಿಂತಿಸತೊಡಗಿದವು. ಯಾರೋ ಕೆಲ ಇರುವೆಗಳು ಮೊದಲು ಸಕ್ಕರೆಯ ದುಷ್ಪರಿಣಾಮಗಳ ಬಗ್ಗೆ ಕೀರಲು ಧ್ವನಿಯಲ್ಲಿ ಕೂಗುತ್ತಿದ್ದುದು ನೆನಪಿಗೆ ಬಂತು. ಆಗ ಅವುಗಳನ್ನು 'ಅಭಿವೃಧ್ಧಿ ವಿರೋಧಿ' ಎಂತಲೂ 'ಹಳ್ಳೀ ಗುಗ್ಗು' ಎಂತಲೋ ಇನ್ನೂ ಏನೇನೋ ಹೆಸರುಗಳಿಂದ ಅಪಹಾಸ್ಯ ಮಾಡಿದ್ದೆವು! ಈಗ ಆ ಬಗ್ಗೆ ಯೋಚಿಸಿ ಉಪಯೋಗವಿಲ್ಲ. ಮುಂದೇನು ಮಾಡಬೇಕೆಂಬುದೇ ಚಿಂತೆ. ಈ ಕಲಬೆರಕೆ ಸಕ್ಕರೆ ಇನ್ನು ಹೆಚ್ಚು ದಿನ ಬಾಳದು. ಕಲಬೆರಕೆಯಲ್ಲು ಸಕ್ಕರೆ ಆರಿಸುವುದೂ ಆಗದ ಮಾತು. ಅಸಾಧ್ಯವೆಂದಲ್ಲ ಆದರೆ ಅದು ಸುಲಭವಲ್ಲ, ಮೊದಲಿನಂತೆ. ಹೇಗಿದ್ದರೂ ಇನ್ನು ಕೆಲವು ಸಮಯದಲ್ಲೇ ಎಲ್ಲ ಸಕ್ಕರೆಯೂ ಮುಗಿದು ಹೋಗುತ್ತ್ತದಲ್ಲ, ಆಮೇಲೇನು ಮಾಡುವುದು? ತಲೆಯಲ್ಲಿ ಇಷ್ಟು ದಿನ ಹೊಕ್ಕಿದ್ದ ಸಕ್ಕರೆ ಭೂತ ಈಗ ನಿಧಾನಕ್ಕೆ ಹೊರಬರುತ್ತಿದೆ. ವಾಸ್ತವದ ಅರಿವಾಗುತ್ತಿದೆ ಇರುವೆಗಳಿಗೆ. ಆದರೆ ಏನು ಮಾಡುವುದು ಈಗ?
ಇಲ್ಲಿಗೆ ಇರುವೆಯ ಕಥೆಯನ್ನು ನಿಲ್ಲಿಸೋಣ. ಯಾಕೆಂದರೆ ಈ ಕಥೆಯ ಅಂತ್ಯ ಹೇಗಿರಬೇಕೆಂದು ಲೇಖಕನಿಗೂ ಗೊತ್ತಿಲ್ಲ. ಕ್ಲೈಮ್ಯಾಕ್ಸ್ ವರೆಗೆ ಮಾತ್ರ ಕಥೆ ಗೊತ್ತು. ಇದನ್ನು ಪೂರ್ತಿ ಮಾಡುವ ಜವಾಬ್ದಾರಿ ಓದುಗರದ್ದು. ಇರುವೆ ಕಥೆಗೂ ಓದುಗರಿಗೂ ಏನು ಸಂಬಂಧ ಅಂತೀರ? ಓಹ್! ಮರೆತೇ ಹೋಯಿತು.. ನಾನು ಶುರು ಮಾಡಿದ್ದೇ ಎಣ್ಣೆ ಬಗ್ಗೆ ಅಲ್ಲವೇ? ಅದರ ಬಗ್ಗೆ ಹೇಳುವುದೇ ಮರೆತೆ!
ಈ ಇರುವೆ ಕಥೆಯಲ್ಲಿ ಕೆಲವು ಪಾತ್ರಗಳನ್ನು ಬೇರೆ ಪಾತ್ರಗಳಿಗೆ ಆರೋಪೀಕೊಳ್ಳಲು ಓದುಗರಲ್ಲಿ ವಿನಂತಿ. ಇರುವೆಗಳ ಸ್ಥಾನದಲ್ಲಿ ಮನುಷ್ಯರನ್ನೂ, ಇರುವೆ ಕುಟುಂಬದ ಜಾಗದಲ್ಲಿ ಬೇರೆ ಬೇರೆ ದೇಶಗಳನ್ನೂ, ಸಕ್ಕರೆಯ ಜಾಗದಲ್ಲಿ ಪೆಟ್ರೋಲಿಯಮ್ ಎಣ್ಣೆಯನ್ನೂ, ಇರುವೆ ಸಮಾಜದಲ್ಲಿ ಈಗಿನ ಆಧುನಿಕ ಸಮಾಜವನ್ನೂ ಆರೋಪಿಸಿಕೊಳ್ಳಿ. ಇನ್ನು ಅರ್ಧ ಚೀಲ ಸಕ್ಕರೆ ಖಾಲಿಯಾಗಿ, ಉಳಿದರ್ಧ ಕಲಬೆರಕೆಯಾಗಿರುವುದರನ್ನೇ ನಾನು 'peak oil' ಮೂಲಕ ಹೇಳ ಹೊರಟಿರುವುದು. ಈ 'peak oil' ಚರ್ಚೆ ಹೊಸದಾಗಿ ಶೂರುವಾದದ್ದಲ್ಲ. ಹಬ್ಬರ್ಟ್ ಎನ್ನುವ ವಿಜ್ಞಾನಿ 1956 ರಲ್ಲೇ ಇದರ ಬಗ್ಗೆ ಪ್ರಸ್ತಾಪಿಸಿದ್ದ. ಅವನ ಪ್ರಕಾರ 1970 ಆಸುಪಾಸಿನಲ್ಲಿ ಅಮೆರಿಕದ ಪೆಟ್ರೋಲಿಯಮ್ ಉತ್ಪಾದನೆ ಉಚ್ಛ (peak?)ವಾಗಲಿದೆ ಎಂದು ಆ ಸಮಯದಲ್ಲೇ ಹೆಳಿದ್ದ. ಅಂದರೆ ತೈಲ ಬೇಡಿಕೆ ಉತ್ಪಾದನೆಯನ್ನು ಮೀರುತ್ತದೆ ಅಂತ. ಅದರ ಪರಿಣಾಮವಾಗಿ ತೈಲ ಬೆಲೆ ಗಣನೀಯವಾಗಿ ಏರುತ್ತದೆ. ಈ ಭವಿಷ್ಯ ನಿಜವಾಯಿತು ಕೂಡ. ಈಗ ಅಮೆರಿಕ ತನ್ನ ಬೇಡಿಕೆಯ ಬಹುಪಾಲು ತೈಲವನ್ನು ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುತ್ತಿದೆ. ಅಮೆರಿಕದ ಸ್ವಂತ ತೈಲ ಉತ್ಪಾದನೆ ಹಬ್ಬರ್ಟ್ ಹೇಳಿದಂತೆ 1970 ರ ಸಮಯದಲ್ಲೇ 'ಉಚ್ಛ'ವಾಗಿತ್ತು. ಇದೇ ರೀತಿಯಲ್ಲಿ ಮುಂದುವರೆದರೆ ಹೆಚ್ಚುಕಮ್ಮಿ 50 ವರ್ಷದ ಅವಧಿಯಲ್ಲಿ ಜಾಗತಿಕ ತೈಲ ಉತ್ಪಾದನೆಯೂ peak ಆಗಲಿದೆ ಎಂದು ವಾದಿಸಿದ್ದ ಹಬ್ಬರ್ಟ್.
ಆಗಿನ ಸಮಯದಲ್ಲಿ ಹಬ್ಬರ್ಟ್ ಮಾತಿಗೆ ಯಾರೂ ಸೊಪ್ಪು ಹಾಕಲಿಲ್ಲ. ಹಾಗಾಗಿ ಅಮೆರಿಕವೂ ಸೇರಿದಂತೆ ಜಗತ್ತಿನ ಇತರ ಎಲ್ಲಾ ರಾಷ್ಟ್ರಗಳೂ ತೈಲ ನಿಕ್ಷೇಪಗಳನ್ನು ಅನಂತ ಶಕ್ತಿಯ ಮೂಲ ಎಂಬಂತೆ ಉಪಯೋಗಿಸತೊಡಗಿದವು. ಅದರ ಪರಿಣಾಮವೇ ಇಂದು peak oil ಬಗ್ಗೆ ಪುನಹ ಊಹಾಪೋಹಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ಈಗ್ಗೆ ಕೆಲವು ವರ್ಷಗಳ ಹಿಂದೆಯೂ ಈ ಬಗ್ಗೆ ಕೆಲವರು ದನಿಯೆತ್ತಿದ್ದರೂ ಅವು ಬರೇ ಊಹಾಪೋಹಗಳೆಂದೇ ಜನ ತಿಳಿದಿದ್ದರು. ಆದರೆ ಇತ್ತೀಚೆಗೆ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ಜನತೆಗೆ ಅರಿವಾಗುತ್ತಿರುವಂತೆ ಭಾಸವಾಗುತ್ತಿದೆ. ಅದರಲ್ಲೂ ಯುರೋಪ್ ಮತ್ತು ಅಮೇರಿಕಾಗಳಲ್ಲಿನ ಜನತೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತದೆ.
peak oil ನ ಮೊದಲ ಸೂಚನೆಯೆಂದರೆ ತೈಲ ಬೆಲೆ ಏರಿಕೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿಗಿಂತ ಮೊದಲು ಇದ್ದ ತೈಲ ಬೆಲೆ ನೆನಪಾಯಿತೇ? ಬ್ಯಾರೆಲಿಗೆ $180 ರ ಮೇಲೆ ಹೋಗಿತ್ತು ಕಚ್ಚಾ ತೈಲ ಬೆಲೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಈ ತೈಲ ಬೆಲೆಯೇ ಮೂಲ ಕಾರಣ ಅಂತ ವಾದಿಸುವವರೂ ಇದ್ದಾರೆ. ಅದು ನಿಜವೋ ಅಲ್ಲವೋ ಗೊತ್ತಿಲ್ಲ, ಅಂತೂ ತೈಲ ಬೆಲೆ ವಿಪರೀತವಾಗಿ ಏರಿದ್ದಂತೂ ನಿಜ. ಆರ್ಥಿಕ ಬಿಕ್ಕಟ್ಟಿನ ನಂತರ $35 ಕ್ಕೆ ಇಳಿದಿದ್ದ ತೈಲ ಬೆಲೆ ಕೆಲವೇ ಸಮಯದನಂತರ ಈಗ $85 ರ ಆಸುಪಾಸಿನಲ್ಲಿದೆ! ಅದೂ ಆರ್ಥಿಕ ಬಿಕ್ಕಟ್ಟು ನಿಜವಾಗಿಯೂ ಪರಿಹಾರವಾಗಿದೆಯೇ ಇಲ್ಲವೇ ಎಂದು ಚರ್ಚೆಯಾಗುತ್ತಿರುವಾಗ! ಇದೇ ಗತಿ ಮುಂದುವರೆದರೆ ತೈಲ ಬೆಲೆ ಮೊದಲಿನ ದಾಖಲೆ ಬೆಲೆಯನ್ನೂ ದಾಟಿ ಓಡುವುದು ಸಂಶಯವಿಲ್ಲ. ಈ ತೈಲ ಬೆಲೆ ಏರಿಕೆಯ ಮೊದಲ ಬಲಿಪಶುವೇ 'ಅಗತ್ಯ ವಸ್ತುಗಳ ಬೆಲೆ'ಯಲ್ಲಿ ಏರಿಕೆ. ಅಂದರೆ ಆಹಾರ ವಸ್ತುಗಳು ಮುಖ್ಯವಾಗಿ, ಹಾಗೂ ಇತರ ವಸ್ತುಗಳ ಬೆಲೆ ಕೂಡಾ. ಈ ಬೆಲೆಯೇರಿಕೆಗೆ ಪ್ರತ್ಯಕ್ಷವಾಗಿ ಕಾಣುವ ಕಾರಣವೆಂದರೆ ಸಾಗಾಣಿಕೆ ವೆಚ್ಚದಲ್ಲಿನ ಏರಿಕೆ. ಆದರೆ ಇದಲ್ಲದೆ ಇನ್ನೂ ಬೇರೆ ಪರೋಕ್ಷ ಕಾರಣಗಳಿವೆ. ಅದರಲ್ಲೂ ಕೃಷ್ಯುತ್ಪನ್ನಗಳ ಬಗ್ಗೆ. ಯಾಕೆಂದರೆ ಹಿಂದೆಂದಿಗಿಂತಲೂ ಕೃಷಿ ಇಂದು ಪೆಟ್ರೋಲಿಯಮ್ ತೈಲದ ಮೇಲೆ ಅವಲಂಬಿತವಾಗಿದೆ. ಕೃಷಿಯಲ್ಲಿ ಈಗ ಉಪಯೋಗಿಸಲ್ಪಡುತ್ತಿರುವ ರಸಗೊಬ್ಬರ ನೈಸರ್ಗಿಕ ಅನಿಲ ಮೂಲದ್ದು. ಅದೂ ಪೆಟ್ರೋಲಿಯಮ್ ತೈಲದಂತೆಯೇ ಮುಗಿದುಹೋಗುವ ಶಕ್ತಿ ಮೂಲ. ಇನ್ನು ಕೀಟನಾಶಕಗಳ ತಯಾರಿಕೆಗೆ ತೈಲ ಅತ್ಯವಶ್ಯ. ಕೃಷಿ ಯಂತ್ರೋಪಕರಣಗಳಿಗೆ ಪೆಟ್ರೋಲ್, ಡೀಸೆಲ್ ಬೇಕು. ಇನ್ನು ಕೃಷಿ ಸೇರಿದಂತೆ ಇತರ ಯಾವುದೇ ವಲಯದಲ್ಲಿ ಉಪಯೋಗಿಸಲ್ಪಡುವ ಕಾರ್ಖಾನೆ ಉತ್ಪಾದಿತ ವಸ್ತುಗಳಿಗೆ ಪೆಟ್ರೋಲಿಯಮ್ ತೈಲ ಅಥವಾ ಕಲ್ಲಿದ್ದಲು ಬೇಕೇ ಬೇಕು. ತೈವಿಲ್ಲದೆ ಯಾವ ಕಾರ್ಖಾನೆ ತಾನೇ ಕೆಲಸ ಮಾಡೀತು? ಅಂತು ಇವೆಲ್ಲದರ ಒಟ್ಟು ಪರಿಣಾಮವೆಂದರೆ ಆಹಾರ ವಸ್ತುಗಳ ಬೆಲೆಯೇರಿಕೆ. ತೊಗರಿ, ಸಕ್ಕರೆ ಇತ್ಯಾದಿ ಗಳ ಬೆಲೆಯೇರಿಕೆಯಾಗಿರುವುದನ್ನು ನೀವು ಗಮನಿಸಿರಬಹುದು. ಅಲ್ಲದೆ ಇವುಗಳ ಬೆಲೆಯೇರಿಕೆಗೆ ತೈಲ ಬೆಲೆಯೊಂದೇ ಕಾರಣವಲ್ಲ. ಜಾಗತಿಕ ತಾಪಮಾನ, ಹವಾಮಾನ ವೈಪರೀತ್ಯವೂ ಕಾರಣ. ಆ ದೃಷ್ಟಿಯಿಂದ ನೋಡಿದರೂ ಪರಿಸರದ ಸಮಸ್ಯೆಗಳಿಗೆ, ಹವಾಮಾನ ವೈಪರೀತ್ಯಗಳಿಗೆ ಮೂಲ ಕಾರಣ ಪುನಹ ಈ ತೈಲ ಶಕ್ತಿ ಮೂಲಗಳೇ!
ತೈಲ ಬೆಲೆಯೇರಿಕೆಯಿಂದಾಗಿ ಕೇವಲ ಆಹಾರೋತ್ಪನ್ನಗಳ ಬೆಲೆಯೇರಿಕೆಯಾಗುತ್ತದೆಯೆಂದರೆ ಸಮಸ್ಯೆಯ ಗಂಭೀರತೆಗೇ ಸಲ್ಲಿಸಿದ ಅವಮಾನ. ಹಾಗೆ ನೋಡಿದರೆ ತೈಲ ಬೆಲೆ ವಿಪರೀತ ಹೆಚ್ಚಿದಾಗ ಇನ್ನೊಂದು, ಮೊದಲಿಗಿಂತಲೂ ಭೀಕರ ಆರ್ಥಿಕ ಹಿಂಜರಿತ ಉಂಟಾಗಬಹುದು. ಯಾಕೆಂದರೆ ಈಗಿರುವ ಈ ಅಗಾಧ ಮಾರುಕಟ್ಟೆ ನಿಂತಿರುವುದೇ ಅಗ್ಗದ ತೈಲದ ಪೂರೈಕೆಯ ಮೇಲೆ. ಇದೇ ಕಾರಣಕ್ಕೆ ಮಾನವನ ಇತಿಹಾಸದೆಲ್ಲೆಂದೂ ಇಷ್ಟು ದೊಡ್ಡದಾದ ಮಾರುಕಟ್ಟೆ ಅದೂ ಜಾಗತಿಕ ಮಟ್ಟದಲ್ಲಿ ಇರಲಿಲ್ಲ. ಅದು ಸಾಧ್ಯವಾದದ್ದು ತೈಲ ಶಕ್ತಿಯ ಬಳಕೆಯಿಂದಲೇ. ಮುಂದೆ ತೈಲದ ಪೂರೈಕೆ ದುರ್ಲಭವಾದಾಗ ಇದೇ ಮಾರುಕಟ್ಟೆ ಸಂಕುಚಿತವಾಗುವುದು ಅನಿವಾರ್ಯ. ಇತ್ತೀಚಿನ ಹಿಂಜರಿಕೆಯಿಂದಲೇ ನಾವು ಇನ್ನೂ ಹೊರಬಂದಿಲ್ಲ. ಇನ್ನು ಇದಕ್ಕಿಂತ ಇನ್ನೂ ಹೆಚ್ಚು ಪರಿಣಾಮಕಾರಿಯಾದ ಹಿಂಜರಿತವುಂಟಾದರೆ ಆಗಬಹುದಾದ ಅನಾಹುತಗಳನ್ನು ನೀವೇ ಊಹಿಸಿ. ಇದರ ಜೊತೆಗೆ ಇರುವ ಇನ್ನೊಂದು ಸಮಸ್ಯೆ ಜನಸಂಖ್ಯೆಯದು. ಮೇಲಿನ ಇರುವೆ ಕಥೆಯಲ್ಲಿ ಸಕ್ಕರೆ ತಿಂದು ಬೆಳೆದ ಇರುವೆಗಳ ಸಂಖ್ಯೆ ಲಕ್ಷ ದಾಟಿತಲ್ಲವೇ? ಅದೇ ರೀತಿ ಭೂಮಿ ಮೇಲಿರುವ ಈಗಿನ ಜನಸಂಖ್ಯೆ ಹೆಚ್ಚುಕಮ್ಮಿ 7 ಬಿಲಿಯನ್. ಭೂಮಿಯ ಇತಿಹಾಸದಲ್ಲೇ ಈ ಬಗೆಯ ಜನಸಂಖ್ಯೆ ಇದ್ದಿದ್ದಿಲ್ಲ. ಅಂದರೆ ಈ ಜನಸಂಖ್ಯೆಗೂ ಅಗ್ಗದ ಶಕ್ತಿಮೂಲವಾದ ಪೆಟ್ರೋಲಿಯಮ್ ತೈಲವೇ ಕಾರಣ. ಜನಸಂಖ್ಯೆಗೂ ಅಗ್ಗದ ತೈಲಕ್ಕೂ ಇರುವ ಸಂಬಂಧ ಮೊದಲ ನೋಟಕ್ಕೆ ಗೊತ್ತಾಗದು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಯಾವುದೇ ಜೀವಿಗೆ ಆಹಾರ ಯಾಕೆ ಬೇಕು? ಶಕ್ತಿಗಾಗಿ. ಒಂದುವೇಳೆ ಆಹಾರ ತಿನ್ನದೇ ಶಕ್ತಿಮೂಲವೊಂದು ಸುಲಭವಾಗಿ ದೊರಕಿದರೆ? ಅದೂ ಆಹಾರ ತಿಂದಂತೆಯೇ. ಆ ಶಕ್ತಿಯನ್ನು ಉಪಯೋಗಿಸಿ ತಾನು ಮಾಡುವ ಕೆಲಸವನ್ನು ಯಂತ್ರಗಳ ಮೂಲಕ ಮಾಡಿಸಿದರಾಯಿತು. ತೈಲದ ವಿಷಯದಲ್ಲಿ ಆದದ್ದೂ ಇದೇ. ಇರುವೆಗಳು ಸಕ್ಕರೆಯನ್ನೇ ತಿಂದು ತಮ್ಮ ಸಂಖ್ಯೆ ವೃಧ್ಧಿಸಿಕೊಂಡವು, ಮನುಷ್ಯರು ಅಗ್ಗದ ತೈಲ ಉಪಯೋಗಿಸಿ ತಮ್ಮ ಕೃಷಿ ಉತ್ಪನ್ನಗಳನ್ನು ಹೆಚ್ಚಿಸಿಕೊಂಡು ಆ ಮೂಲಕ ತಮ್ಮ ಸಂಖ್ಯೆ ವೃಧ್ಧಿಸಿಕೊಂಡರು. ಇದರಲ್ಲಿ ವಿಜ್ಞಾನದ ಇತರ ಪ್ರಕಾರಗಳ ಪಾಲೂ ಇದೆ - ಆರೋಗ್ಯ, ಸಾಂಕ್ರಾಮಿಕ ರೋಗಗಳ ತಡೆ, ಇತ್ಯಾದಿ. ಆದರೂ ಸೂಕ್ಷ್ಮವಾಗಿ ನೋಡಿದಲ್ಲಿ ಇವೆಲ್ಲವುಗಳ ಹಿಂದೆ ಇರುವ ಅದೃಶ್ಯ ಶಕ್ತಿಯೇ ಅಗ್ಗದ ತೈಲ ಶಕ್ತಿ.
ಹೀಗೆ ಆಧುನಿಕ ಸಮಾಜದ ಯಾವುದೇ ಮಗ್ಗುಲನ್ನು ನೋಡಿದರೂ ನಿಮಗೆ ಅಂತಿಮವಾಗಿ ಕಾಣಸಿಗುವುದು ಒಂದೇ. ಅದುವೇ ಪೆಟ್ರೋಲಿಯಮ್ ತೈಲ. ಅದರ ಉತ್ಪಾದನೆಯೇ ಕುಂಠಿತವಾದರೆ? ಪರಿಣಾಮ ಏನಿರಬಹುದು? ನೀವೇ ಯೋಚಿಸಿ. ನೆನಪಿರಲಿ, ಇಲ್ಲಿ peak oil ಅಂದರೆ ತೈಲೋತ್ಪನ್ನಗಳು ಬರಿದಾಗುವ ಬಗ್ಗೆ ಅಲ್ಲ, ಅದರ ಉತ್ಪಾದನೆ ಕುಂಠಿತವಾಗುವುದರ ಬಗ್ಗೆ. ತೈಲ ಮತ್ತೂ ಸ್ವಲ್ಪ ಸಮಯ ಸಿಗುತ್ತಿರಬಹುದು. ಆದರೆ ಇಷ್ಟು ಅಗ್ಗದ ದರದಲ್ಲಿ ಸಿಗುವುದಿಲ್ಲ. ಉತ್ಪಾದನೆ ಕುಂಠಿತವಾದ್ದರಿಂದಲೇ ನಮ್ಮ ಮುಂದೆ ಇಷ್ಟು ಸಮಸ್ಯೆಗಳು ಕಾಣುತ್ತಿರುವಾಗ, ಇನ್ನು ಅವು ಬರಿದಾದರೆ ಎದುರಾಗಬಹುದಾದ ಸಮಸ್ಯೆಗಳನ್ನು ಊಹಿಸಲೂ ಈಗ ಸಾಧ್ಯವಿಲ್ಲ.
peak oil ಬಗ್ಗೆ ಪೂರ್ತಿಯಾಗಿ ಅರಿತುಕೊಳ್ಳುವುದು ಅಷ್ಟು ಸುಲಭವಲ್ಲ. ಈ ಪೆಟ್ರೋಲಿಯಮ್ ತೈಲ ಎಂದುದು ನಮಗೇ ಗೊತ್ತಿಲ್ಲದಂತೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ನಮಗೆ ಅದರ ಬಗ್ಗೆ ಅರಿವಿಲ್ಲ ಅಷ್ಟೆ. ಇರುವೆಗೆ ಸಕ್ಕರೆ ತಿಂದು ಮತ್ತು ಬಂದಂತೆ ಆಗಿದೆ ನಮಗೂ. ಉದಾಹರಣೆಗೆ ಕಂಪ್ಯೂಟರು. ಅಥವಾ ಇಂಟರ್ನೆಟ್. ಇದಕ್ಕೆ ಎಷ್ಟು ತೈಲ ಬೇಕು? ತೈಲ ಪೂರೈಕೆ ಕಡಿಮೆಯಾದರೆ ಅಥವಾ ದುಬಾರಿಯಾದರೆ ಇವುಗಳ ಮೇಲೆ ಏನಾದರೂ ಪರಿಣಾಮಗಳಿವೆಯೇ? http://www.lifeaftertheoilcrash.net ಎಂಬ ವೆಬ್ ಸೈಟಿನಲ್ಲಿ ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಗಳಿವೆ. ಆಸಕ್ತರು ಓದಬಹುದು. ಅಲ್ಲದೆ ಅಂತರ್ಜಾಲದಲ್ಲಿ peak oil ಬಗ್ಗೆಯೇ ಬರೆದ ಅಸಂಖ್ಯ ವೆಬ್ ಸೈಟುಗಳಿವೆ. ಓದುಗರ ಅನುಕೂಲಕ್ಕೆ ಕೆಲವು ಕೊಂಡಿಗಳನ್ನು ಲೇಖನದ ಕೊನೆಯಲ್ಲಿ ಕೊಟ್ಟಿದ್ದೇನೆ. ಇಲ್ಲಿ ಇನ್ನೂ ಒಂದು ಗಮನಿಸತಕ್ಕಂಥ ವಿಷಯವೆಂದರೆ ಭಾರತದಲ್ಲಿ ಇದರ ಬಗ್ಗೆ ಯೋಚಿಸಿದವರು ತುಂಬಾ ಕಡಿಮೆ. ಎಲ್ಲದಕ್ಕೂ ಪಾಶ್ಚಾತ್ಯರನ್ನು ಅನುಸರಿಸುವ ನಾವು ಬಹುಷಹ ನಿಧಾನವಾಗಿ ಈ ಬಗ್ಗೆ ಯೋಚಿಸುತ್ತೇವೋ ಏನೋ ಗೊತ್ತಿಲ್ಲ. ಅಂತೂ ಇದರ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡವರು ಕಡಿಮೆ. ನಾವು ಇನ್ನೂ ಗ್ಲೋಬಲೈಸೇಷನ್ ಅನ್ನು ಹಾಡಿ ಹೊಗಳಿ ಅದನ್ನೇ ಅನುಸರಿಸುತ್ತಿದ್ದರೆ, ಪಾಶ್ಚಾತ್ಯರು ಸದ್ದಿಲ್ಲದೇ 'ಲೋಕಲೈಸೇಶನ್' ಬಗ್ಗೆ ಮಾತಾಡುತ್ತಿದ್ದಾರೆ! ಹೆಚ್ಚಿನ ವಿವರಗಳಿಗೆ ಕೆಳಗಿನ ಕೊಂಡಿಗಳನ್ನು ಓದಬಹುದು :
http://en.wikipedia.org/wiki/Peak_oil
http://www.guardian.co.uk/business/2009/nov/29/peak-oil
http://www.guardian.co.uk/environment/2009/nov/09/peak-oil-international-energy-agency
http://www.countercurrents.org/peakoil.htm
http://oilprice.com/Energy/Oil-Prices/There-Will-be-No-Economic-Recovery-as-the-Era-of-Cheap-Oil-Comes-to-an-End.html
http://industry.bnet.com/energy/10004113/peak-oil-era-why-the-cost-and-risk-of-oil-exploration-will-keep-rising/
http://www.independent.co.uk/news/science/warning-oil-supplies-are-running-out-fast-1766585.html
http://www.aspo-usa.org/index.php/category/peak-oil-review/peak-oil-review/
http://www.guardian.co.uk/business/2009/nov/29/peak-oil
http://www.marketoracle.co.uk/Article18948.html
http://peakoil.com/
http://www.peakoil.net/
http://www.energybulletin.net/primer.php
http://www.theoildrum.com/
http://www.oildecline.com/
http://www.hubbertpeak.com/
http://www.peak-oil-news.info/
http://www.peak-oil-news.info/
http://www.akhilesh.in/life/india/peakoilandindia.php
ಈಗ ಹೇಳಿ, ನಮಗೆ ಎಣ್ಣೆಯ ಬಿಸಿ ಮುಟ್ಟುವುದು ಯಾವಾಗ? ಎಣ್ಣೆಯ ಬಿಸಿಯನ್ನು ಎದುರಿಸುವ ತಾಕತ್ತು ಯಾರಿಗಿದೆ? ಸರಕಾರಗಳು ಈ ವಿಷಯಗಳ ಬಗ್ಗೆ ಅಷ್ಟೇ ಅಲ್ಲ, ಯಾವ ಯೋಗ್ಯ ವಿಷಯಗಳ ಬಗ್ಗೆಯೂ ಯೋಚಿಸುವುದು ಅಷ್ಟರಲ್ಲೇ ಇದೆ. ಆದರೆ ಜನರಲ್ಲಿ ಇದರ ಬಗ್ಗೆ ಎಷ್ಟು ಜಾಗೃತಿಯಿದೆ? ಎಲ್ಲರೂ ಯೋಚಿಸಬೇಕಾದ ವಿಷಯ ಇದು.
ಈ ಬಗ್ಗೆ ನಿಮಗೇನನ್ನಿಸುತ್ತದೆ? ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಪ್ರತಿಕ್ರಿಯೆ (8)