"ಡಾರ್ಲಿಂಗ್ ನಾಳೆ ಓನರ್ ಇರಲ್ಲ, ಬೆಳಗ್ಗೇನೇ ಹೊರಗಡೆ ತಿರುಗಾಡಲು ಹೋಗ್ತಾರಂತೆ,ಸಂಜೆವರೆಗೆ ನಾವಿಬ್ಬರೇ ಆರಾಂ ಆಗಿ ರಾಜ ರಾಣಿ ಹಾಗೆ ಮೆರೀಬಹುದು" ಕೃಷ್ಣ ಕಣ್ಣು ಮಿಟುಕಿಸಿದ. " ಸ್ಸರಿ.... ನೀವು ಮನೆಗೆ ಬಂದ ಮೇಲೇ ನೋಡಬೇಕಷ್ಟೇ, ಈ ಮಧ್ಯೆ ನಿಮ್ಮ ಬಾಸ್ ಕಲ್ಲೂರಾಮ್ ಏನಾದರೂ ಕೆಲಸ ಕೊಟ್ಟರೆ?" ಮಡದಿಯ ಹುಸಿನಗೆಯ ಬಾಣಕ್ಕೆ ಕೃಷ್ಣ ತಲೆಯಲ್ಲಾಡಿಸಿದ" ಹಾಗೇನಿಲ್ಲ ಬಿಡು ತಿಂಗಳ ಮಧ್ಯೆಅಂತಹಾ ಕೆಲ್ಸ ಏನೂ ಇರಲ್ಲ ಬಿಡು, ಮತ್ತೆ ಮಧ್ಯಾಹ್ನಕ್ಕೆ ಒಂದು ವೆಜ್ ಪಲಾವ್, ಸಾರು ಮಾಡು, ಮತ್ತೆ ನಂಜಿಕೊಳ್ಳೋಕೆ ನಿನ್ನ ಸೊಗಸಾದ ನೀರುಳ್ಳೀ ಪಕೋಡವಿರಲಿ. ನಾನುಸರಿಯಾಗಿ ಹನ್ನೆರಡೂ ಮುಕ್ಕಾಲಿಗೆ ಬರ್ತೇನೆ ರೆಡಿಯಾಗಿರು ಓ ಕೇ ಆಮೇಲೆ ಎರಡೂವರೆಯವರೆಗೆ ನಮ್ಮದೇ ಸಾಮ್ರಾಜ್ಯ ಕಣೇ.." ಇನ್ನೊಮ್ಮೆ ಕಣ್ಣು ಮಿಟುಕಿಸಿದ.
" ಮೊದಲು ನೀವು ಮನೆಗೆ ಬಂದು ಕೊಳ್ಳಿ ಬಾಕಿ ಎಲ್ಲಾ ಆಮೇಲೆ" ಎಂದಳು ನಿಷಾ ನಗುತ್ತಾ.

ಮದುವೆಯಾದ ಆರು ತಿಂಗಳಿಗೇ ಕೃಷ್ಣನಿಗೆ ಬೊಂಬಾಯಿಗೆ ಪೋಸ್ಟಿಂಗ್ ಬಂದು ಬಿಟ್ಟಿತು.ಅವನ ಅದೃಷ್ಟವೋ ಏನೋ ಅವನ ತಂದೆಯವರ ಸ್ನೇಹಿತರಿಂದಾಗಿ ಅವನಿಗೆ ಶಾರಿಂಗನಲ್ಲೇ ಒಂದು ಮನೆ ಸಿಕ್ಕಿತು, ಮುಂಬಯಿಯಲ್ಲಿ ಮನೆಗಳು ಸಿಗುವುದು ದುಸ್ತರವಾದುದರಿಂದ ಎರಡು ಮೂರು ಸಂಸಾರಗಳು ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುವುದು ಅಲ್ಲಿ ಅನಿವಾರ್ಯ, ಇದನ್ನೇ ಅಲ್ಲಿಯ ಭಾಷೆಯಲ್ಲಿ ಶಾರಿಂಗ್ ಅನ್ನುವರು. ಈತ ಅಲ್ಲಿ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡ ಹದಿನೈದೇ ದಿನಗಳಲ್ಲಿ ಮಗ ಸೊಸೆ ಇಬ್ಬರೂ ಹೊರಟು ನಿಂತುದು ಸಾವಿತ್ರಮ್ಮನಿಗೆ ತುಂಬಾನೇ ಸಂಕಟವಾಯ್ತು, ಇದ್ದದ್ದೊಬ್ಬ ಮಗ ಅವನೂ ದೂರ ಹೋಗುತ್ತೇನೆ ಎಂದುದು ಅವರಿಗೆ ಸರಿಕಾಣಲಿಲ್ಲ. ಆದರೆ ಗಂಡ ರಾಮರಾಯರು ಹೆಂಡತಿಯನ್ನ ಸಮಧಾನ ಮಾಡಿದರು , ಕೃಷ್ಣನಿದ್ದ ಕಂಪೆನಿಯ ರೂಲೇ ಅಂತಹದ್ದು ನಾಲ್ಕೈದು ವರ್ಷವಾದರೂ ಬೇರೆ ಊರಲ್ಲಿ ಕೆಲಸ ಮಾಡಲೇ ಬೇಕು, ಆಮೇಲೆ ಬೇಕಾದರೆ ಬೇಕಾದಲ್ಲಿ ವರ್ಗ ಮಾಡಿಸಿಕೊಳ್ಳಬಹುದು, ಈಗ ದೂರ ಹೋದರೂ ಅಮೇಲೆ ಹತ್ತಿರವೇ ಬರ್ತಾನಲ್ಲಾ ಎಂಬುದು ರಾಯರ ಅಂಬೋಣವಾದರೆ , ಮದುವೆಯಾದ ಹೊಸತು ಪಾಪ ಗಂಡ ಹೆಂಡತಿ ದೂರದ ಊರಲ್ಲಿ ಹೇಗೆ ಸಂಸಾರ ಸಾಗಿಸಿಯಾರು ಅಂತ ಸಾವಿತ್ರಮ್ಮನ ಅಳಲು.ಆದರೆ ಮಗ ಇದೆಲ್ಲವನ್ನು ಮೀರಿ ಹೆಂಡತಿಯನ್ನ ಹೊರಡಿಸಿಕೊಂಡು ಹೊರಟೇ ಹೋದ.

ಈ ಕಲ್ಲೂರಾಮ್ ಮೊದಮೊದಲು ಕೃಷ್ಣ ಕೆಲಸಕ್ಕೆ ಸೇರಿದ್ದಾಗ ತುಂಬಾ ಕಷ್ಟ ಕೊಡುತ್ತಿದ್ದರು.ಕೃಷ್ಣನಿಗೆ ಬೆಳಿಗ್ಗೆ ಏಳರಿಂದ ಸಂಜೆ ಎಂಟೊಂಬತ್ತು ಗಂಟೆಯ ವರೆಗೆ ಕೆಲ್ಸವೇ ಆಗಿರುತ್ತಿತ್ತು.ರಾತ್ರೆ ಸುಸ್ತಾಗಿ ಮನೆಗೆ ಬರುತ್ತಿದ್ದ ಕೃಷ್ನನ್ನ, ನೋಡಿ ಎಲ್ಲರೂ ಹೀಗೇ ಕೆಲಸ ಮಾಡ್ತಾರಾ,ಅಥವಾ ಇವರಿಗೆ ಮಾತ್ರವಾ ಈ ಆಫೀಸು, ಕೆಲಸ ಅನ್ನಿಸುತ್ತಿತ್ತು. ಅದಲ್ಲದೇ ಒಂದು ಮಿಟುಕಲಾಡಿ ನಳಿನಿ ಯೂ ಅಗಾಗ್ಗೆ ಅವಳ ಕಿವಿ ಕಚ್ಚಲು ಬರುತ್ತಿದ್ದಳು. ಈಕೆ ಕೃಷ್ಣನ ಸಹಯೋಗಿ ಶರ್ಮಾನ ಹೆಂಡತಿ.ಅವಳಿಗೆ ತಾನು ತನ್ನದಾದ ಪ್ರಪಂಚ ಬಿಟ್ಟರೆ ಬೇರೆ ಏನೂ ಅಲ್ಲವೇ ಅಲ್ಲ. ಇಡೀ ವಿಶ್ವವನ್ನೇ ತನ್ನ ದೃಷ್ಟಿಯಲ್ಲಿ ನೋಡುವ ಹೆಂಗಸಾಕೆ.ಇನ್ನೊಬ್ಬ ಬಲದೇವಭಾಯಿ ಗುಜರಾಥಿ ಯ ಮಡದಿ ಮೊದಲ ಹೆರಿಗೆಗಂತ ತವರೂರಿಗೆ ಹೋದಾಗ ಹೆರಿಗೆ ಸಮಯದಲ್ಲಿ ಬಾಸ್ ನನ್ನು ರಜೆ ಕೇಳಿದರೆ ಮನೆಯಲ್ಲಿ ಟೆಲಿಗ್ರಾಮ್ ಕೊಡಲು ಹೇಳಿ ಬಂದಿದ್ದೆಯೇನು ಅಂತ ಬಾಸ್ ಕೇಳಿದ್ದು ಗುಲ್ಲೋಗುಲ್ಲಾಗಿತ್ತು. ಬಲರಾಮ ಭಾಯಿ ಶರ್ಮಾನ ಹತ್ತಿರ ಮನೆಯವ್ರು ತನಗಲ್ಲದೇ ತನ್ನ ಬಾಸ್ ಗೆ ಟೆಲಿಗ್ರಾಮ್ ಕೊಡಬೇಕಾ ಅಂತ ಅಲವತ್ತು ಕೊಂಡಿದ್ದನಂತೆ.

ಅದಕ್ಕೆ ಕೃಷ್ಣ ಇಲ್ಲಿಗೆ ಬಂದ ಮೇಲೆ ಆತನಿಗೆ ರಜೆ ಸಿಗಲೇ ಇಲ್ಲ, ತಾನೂ ಕೆಲವೊಮ್ಮೆ ಹೊರಗಡೆ ತಿರುಗಾಡಲು ಹೋಗಲು ಉತ್ಸುಕತೆ ತೋರಿಸಿದಾಗ ಕೆಲಸದ, ಬಾಸ್ ನ ವಿಷಯ ಹೇಳಿ ಸುಮ್ಮನಾಗಿಸಿದ್ದ.ಆಮೇಲೆ ಅವಳೇ ಸುಮ್ಮನಾಗಿಬಿಟ್ಟಿದ್ದಳು.ಆದರೆ ಹಲಕೆಲವೊಮ್ಮೆ ಆಫೀಸು ಬಿಟ್ಟ ಮೇಲೆ ಅವರಿಬ್ಬರೂ ಕಲೊನಿಯ ಪಾರ್ಕಗೆ ಹೋಗಿ ಕುಳಿತು ಕಾಲ ಕಳೆದರೆ, ಕೆಲವೊಮ್ಮೆ ಹತ್ತಿರದ ಪೇಟೆಗೆ ಹೋಗಿ ಇಷ್ಟದ ತಿಂಡಿ ತಿಂದು ಬರುತ್ತಿದ್ದುದೂ ಉಂಟು.ಆದರೆ ಆತ ಇಂತಹ ಸಮಯ ಬರುತ್ತೇನೆ ಅಂತ ಹೇಳಿದ ದಿನ ಮಾತ್ರ ಆತನಿಂದ ಬರಲಾಗುತ್ತಲೇ ಇರಲಿಲ್ಲ.ಎಷ್ಟೋಸಲ ಹಾಗಾದುದರಿಂದ ಅವನು ಏನು ಹೇಳಿದರೂ ನಿಷಾ ನೀವು ಬಂದ ಮೇಲೆಯೇ ಯಾವುದಕ್ಕೂ ಸಿದ್ಧ, ನೋಡೋಣ ಎನ್ನುತ್ತಿದ್ದಳು.

ಇನ್ನು ಮನೆಯ ಶಾರಿಂಗ್ ಎಂದರೆ ಬೊಂಬಾಯಿಯಲ್ಲಿದು ಸಾಮನ್ಯವೆನ್ನಿಸಿದರೂ ದೊಡ್ಡ ಮನೆಯಲ್ಲಿ ಬೆಳೆದು ಬಂದ ಅವಳಿಗೆ ಇಲ್ಲಿ ಎಷ್ಟೋ ಸಲ ಇರಿಸು ಮುರಿಸಾದದ್ದು ಉಂಟು.ಆಚಾರ ವಿಚಾರ ಎಲ್ಲ ಬೇರೆ ಬೇರೆಯದೇ ಆಗಿರುವ ಎರಡು ಸಂಸಾರಗಳು ಒಂದೇ ಮನೆಯಲ್ಲಿ ಹೊಂದಿಕೊಳ್ಳುವುದೆಂದರೆ ತುಂಬಾನೇ ಕಷ್ಟ. ಆದರೆ ರಾತ್ರೆಯ ಸಾಮ್ರಾಜ್ಯವೆಲ್ಲಾ ಅವರಿಬ್ಬರದೇ ಆದುದರಿಂದ ಅಲ್ಲಿಯೇ ಆ ಒಂದು ರೂಮಿನಲ್ಲಿಯೇ ತನ್ನ ನಲಿವನ್ನು ಕಾಣುತ್ತಿದ್ದಳು.ಯಾಕೆಂದರೆ ದಿನದಲ್ಲಿ ಅಲ್ಲಿ ಏಕಾಂತತೆಗೆ ಅವಕಾಶವೇ ಇಲ್ಲವಿತ್ತು.ಇಂತಹ ದಿನಗಳಲ್ಲಿಯೇ ಅವರಿಗೆ ಅನುಕೂಲಕ್ಕಾಗಿಯೇನೋ ಎಂಬಂತೆ ಓನರ್ ನ ಪಿಕ್ನಿಕ್ ಪ್ರೋಗ್ರಾಮ್ ಒದಗಿ ಬಂದು ಅವ್ರಿಬ್ಬರಿಗೂ ಒಂದು ದಿನವಿಡೀ ಒಟ್ಟಾಗಿ ಕಳೆಯುವ ಅವಕಾಶ ತಂದಿತ್ತು.

ಹನ್ನೆರಡೂವರೆಗೊಮ್ಮೆ ತನ್ನ ಗಡಿಯಾರ ನೋಡಿಕೊಂಡ ಕೃಷ್ಣ ಹಿಂದಿನ ಕಿಟಕಿಯ ಮೂಲಕ ಬಿಲ್ಡಿಂಗ ನಾಲ್ಕನೆಯ ಮಹಡಿಯ ಬಾಲ್ಕನಿ ನೋಡಿ ಅಚ್ಚರಿಗೊಂಡ. ಒಣ ಹಾಕಿದ ಬಾಥ್ ಟವೆಲ್ ಕಂಡಿತು. ಮನೆಗೆ ಹೊರಡಲು ಇದು ರೆಡ್ ಸಿಗ್ನಲ್.ಯಾರೋ ಉಪದ್ರವಿ ಜೀವ ಮನೆಯಲಿದೆ ಅಂತ ಅರ್ಥ. ಇದು ಅವರ ನಡುವಿನ ಅಂಡಸ್ಟಾಂಡಿಂಗ್. ಇಲ್ಲಿನ ಈಗಿನ ಬಾಸು ಸಾಧಾರಣದವನಲ್ಲ.ಇವನಿಗೆ ಸೈಟೂ ಎಕ್ಸಿಕೂಷನ್ ಅಂತ ಹೊರಗಡೆ ಹೋಗಲಿಕ್ಕಿರುವಾಗ ಹತ್ತಿರದಲ್ಲೇ ಮನೆಯಿರುವ ಸ್ಟಾಫ್ ಗಳೆಲ್ಲ ಸೀದಾ ಮನೆಗೆ ಹೋಗಿ ಬಿಟ್ಟಿರುತ್ತಾರೆ. ಇದಕ್ಕಾತ ಒಂದು ಉಪಾಯ ಹೂಡಿದ, ತಾನು ಹೊರಗಡೆ ಎಲ್ಲಾದರೂ ಹೋಗಲಿಕ್ಕಿದ್ದರೆ, ಆ ಸಮಯದಲ್ಲಿ ತನ್ನ ಚೇಲಾಗಳನ್ನೋ , ಅಥವಾ ತನ್ನ ಮಡದಿಯನ್ನೋ ಅವನಿಗೆ ಸಂಶಯವಿರುವವರ ಮನೆಗೆ ಏನಾದರೊಂದು ನೆಪ ಮಾಡಿ ಕಳುಹಿಸುವುದು, ಒಂದೆರಡು ಸಾರಿ ಸಿಕ್ಕಿ ಬಿದ್ದ ಕೆಲವರು ಅದನ್ನ ಆಫೀಸಿನ ಎಲ್ಲರಿಗೂ ಹೇಳಿಬಿಟ್ಟರು, ಅಂದೇ ಕೃಷ್ಣ ಮತ್ತು ನಿಷಾ ಈ ಉಪಾಯ ಕಂಡು ಕೊಂಡಿದ್ದರು. ಅದು ಇಲ್ಲಿಯವರೆಗೆ ಕೈ ಕೊಟ್ಟಿರಲಿಲ್ಲ.

ನಿಷಾ ಗೋಡೆ ಗಡಿಯಾರವನ್ನು ನೋಡುವುದು ಹತ್ತನೇ ಬಾರಿ, ಗಂಟೆ ಐದೂವರೆ, ತಣ್ಣಗಾದ ಅಡಿಗೆಯನ್ನ ಆಗಲೇ ಎರಡು ಬಾರಿ ಬಿಸಿ ಮಾಡಿದ್ದಾಗಿದೆ. ಹನ್ನೆರಡೂ ಮುಕ್ಕಾಲಿಗೆ ಬರಬೇಕಾದ ಇವರು ಇಲ್ಲಿಯವರೆಗೂ ಪತ್ತೆಯಿಲ್ಲ.ತಡವಾಗುವುದಾದರೆ ನನಗೆ ಮೇಸೇಜ್ ಆದರೂ ಕಳುಹಿಸುತ್ತಿದ್ದರು, ಇವತ್ತಂತೂ ಅದೂ ಇಲ್ಲ, ಆಕ್ಸಿಡೆಂಟ್ ಏನಾದ್ರೂ ...ನಿಷಾನ ಎದೆ ಜಲ್ಲೆಂದಿತು, ಹಾಗೇನಾಗಲಿಕ್ಕಿಲ್ಲ.

(ಮುಂದುವರಿಯುವುದು)