ಧರೋಜಿ ಕರಡಿ ಧಾಮ ನೋಡಲು ಹೋದವರಿಗೆಲ್ಲ ಒಂದು ವಿಶೇಷ ಫಲಕ ಕಣ್ಣಿಗೆ ಬಿದ್ದಿರಲೇಬೇಕು.
"ಈ ಧರೋಜಿ ಕರಡಿ ಧಾಮದ ‘ಚಿನ್ನದ ಬೆಳೆಸು’ ತೋಟದಲ್ಲಿ ಬೆಳೆಸಲಾದ ಹಣ್ಣುಗಳು ಕೇವಲ ಕರಡಿಗಳಿಗೆ ಮಾತ್ರ ಮೀಸಲು. ಈ ತೋಟದಲ್ಲಿ ಮನುಷ್ಯರಿಗೆ ಯಾವ ಕಾರಣಕ್ಕೂ ಪ್ರವೇಶವಿಲ್ಲ!" ಹೀಗೇಕೆ ಬರೆಯಲಾಗಿದೆ ಎಂದು ನಾವು ತುಸು ವಿಚಾರ ಮಾಡಬಹುದೇ?
ಬಳ್ಳಾರಿಯ ಒಡಲು ಬಗೆಯುತ್ತಿರುವ ಗಣಿಗಾರಿಕೆಗೂ, ಗದಗ ಜಿಲ್ಲೆಯ ರೋಣ ತಾಲೂಕಿನ ಮಾರನಬಸರಿಯಲ್ಲಿ ಮೊನ್ನೆ (೨೮ನೇ ಎಪ್ರಿಲ್, ೨೦೧೦) ಅಸುನೀಗಿದ ಕರಡಿಯ ಸಾವಿಗೂ ಸಂಬಂಧವಿದೆಯೇ? ಬಹುಶ: ಈ ವಿಷಯ ಅಂತರ್ ಶಿಸ್ತೀಯ ಅಧ್ಯಯನಕ್ಕೆ ವಿಷಯವಸ್ತು ಆಗಬಹುದು! ಈ ಎರಡೂ ಬೆಳವಣಿಗೆಗಳ ಮಧ್ಯೆ ಸೂಕ್ಷ್ಮ ಸಂಬಂಧವಿದೆ ಎಂದು ನನಗೆ ಅನಿಸುತ್ತದೆ.
ಏಷ್ಯಾದಲ್ಲಿಯೇ ಅತ್ಯಂತ ದೊಡ್ಡದಾದ ಹಾಗೂ ಭೌಗೋಳಿಕವಾಗಿ ಸೂಕ್ತವಾದ ಕರಡಿ ಧಾಮ ಧರೋಜಿ. ಧರೋಜಿ ಕರಡಿ ಅಭಯಾರಣ್ಯ ಬಳ್ಳಾರಿ ಬಳಿ ಇದ್ದು, ಜಿಲ್ಲಾ ವ್ಯಾಪ್ತಿಯಲ್ಲಿಯೇ ಬರುತ್ತದೆ. ನಮ್ಮ ಬಳ್ಳಾರಿಯ ತ್ರಿಮೂರ್ತಿ ಗಣಿಧಣಿಗಳು; ಅರ್ಥಾತ್, ರಾಜ್ಯದ ಬಿಜೆಪಿ ಸರಕಾರವೆಂಬ ರಥದ ಚಕ್ರಗಳ ಕೀಲುಗಳು! ಅರ್ಥಾತ್, ಸೆಟಲೈಟ್ ಕೂಡ ಗುರುತಿಸಲಾಗದಂತೆ ರಾಜ್ಯದ ಗಡಿಗಳನ್ನು ಕಿತ್ತೆಸೆದು, ಕಾನೂನನ್ನು ಅಣಕಿಸುವಂತೆ ಧರೆಯ ಒಡಲು ಬಗೆದು, ಅದಿರಿನಲ್ಲಿ ಊರು ಅದರಿಸಿದ ಬುಲ್ಡೋಜರ್ಗಳು! ಇವರ ಕಸುಬಿಗೆ ಸೇರಿದ ಇನ್ನೂ ಅನೇಕರು ಮಿತಿ ಮೀರಿ ನಡೆಸಿದ, ನಡೆಸುತ್ತಿರುವ ಗಣಿಗಾರಿಕೆ ಕರಡಿ ಧಾಮಕ್ಕೆ ಪರೋಕ್ಷವಾಗಿ ಗಂಡಾಂತರತಂದೊಡ್ಡಿದೆ.
ನಿತ್ಯ ಡೈನಾಮೈಟ್ ಗಳಿಂದ ಕಂಪಿಸುವ ಭೂಮಿ, ಸಾವಿರಾರು ಮ್ಯಾಂಗನೀಸ್ ಲಾರಿಗಳ ಹಗಲು ರಾತ್ರಿ ಭರಾಟೆಯ ಸಂಚಾರ , ಭೂಮಿ ಅತಿಕ್ರಮಿಸಿ ನಿರ್ಮಾಣಗೊಳ್ಳುತ್ತಿರುವ ಲೇ ಔಟ್ ಗಳು, ಕೈಗಾರಿಕಾ ವಿನ್ಯಾಸಗಳು ಬಳ್ಳಾರಿಯ ಧರೋಜಿ ಕರಡಿ ಧಾಮಕ್ಕೆ ಸಂಚಕಾರ ತಂದಿವೆ. ಉಪಾಯಗಾಣದೇ ಬದುಕು, ಆಹಾರ, ವಾಸಯೋಗ್ಯ ಪರಿಸರ ಅರಸಿ ಕರಡಿಗಳು ಕ್ರಮೇಣ ಧರೋಜಿ ತ್ಯಜಿಸಿ ಜನವಸತಿ ಹಬ್ಬಿರುವ ಬಳ್ಳಾರಿ ಸುತ್ತಲಿನ ಜಿಲ್ಲೆಗಳಿಗೆ ಲಗ್ಗೆ ಹಾಕುತ್ತಿವೆ. ಮಾನವ-ವನ್ಯ ಜೀವಿಗಳ ಮಧ್ಯದ ಸಂಘರ್ಷ ತಾರಕಕ್ಕೇರಿದೆ. ಮೂಕ ಪ್ರಾಣಿ ಕರಡಿ ತನ್ನ ಜೀವದ ಹಂಗು ತೊರೆದು ಅಸ್ತಿತ್ವಕ್ಕೆ ಹೋರಾಡುತ್ತ ಅಸು ನೀಗುತ್ತಿವೆ.
ಊರಿನ ಸುತ್ತ ರಾತ್ರಿಯ ವೇಳೆ ಕರಡಿಗಳು ಹೆಚ್ಚು ಚಟುವಟಿಕೆಯಿಂದ ಸಂಚರಿಸುತ್ತಿರುವ ಬಗ್ಗೆ ಗ್ರಾಮಸ್ಥರಿಗೆ ಗುಮಾನಿ ಇದೆ. ಕೆಲವರು ಈ ಮೊದಲು ಕರಡಿಗಳನ್ನು ಕಣ್ಣಾರೆ ಕಂಡವರಿದ್ದಾರೆ. ಆದರೂ ಕೊಂದು ಮೋಜು ನೋಡುವ ಚಪಲ ಇನ್ನೂ ಮನೆ ಮಾಡಿದೆ. ಇಲ್ಲಿ ಅವರನ್ನಷ್ಟೇ ದೂಷಿಸಿದರೆ ಫಲವಿಲ್ಲ..ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗೆ, ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ಕೊಟ್ಟು, ವಿಷಯ ತಿಳಿಸಿ ಕೆಲವೊಮ್ಮೆ ಲಿಖಿತವಾಗಿಯೂ ಅರ್ಜಿ ಕೊಟ್ಟು ಅಂಗಲಾಚಿದಾಗಲೂ ಅರಣ್ಯ ಇಲಾಖೆಯವರು ‘ಇನ್ನೂಮ್ಮೆ ಕಂಡಕೂಡಲೇ ನಮಗೆ ಫೋನ್ ಮಾಡಿ’ ಎನ್ನುತ್ತಾರಂತೆ! ಪುಣ್ಯ ‘ನಿಮ್ಮ ಮೊಬೈಲ್ ಕೊಟ್ಟು ಕರಡಿ ಕೈಯಿಂದ ನಮಗೊಂದು ಫೋನ್ ಮಾಡಿಸಿ; ನಾವು ಅದಕ್ಕೆ ತಾಕೀತು ಮಾಡುತ್ತೇವೆ. ಕೇಳಿದರೆ ಸರಿ, ಇಲ್ಲದಿದ್ದರೆ ನಾವೇ ಬರುತ್ತೇವೆ’ ಎಂದಿಲ್ಲ!
ಮೇಲಾಗಿ ಕರಡಿ ಬಂದ ಮೇಲೆ ಇವರು ‘ಬಂದು’ ಮಾಡುವುದಾದರೂ ಏನು? ವನ್ಯ ಜೀವಿಗಳು ಗ್ರಾಮದ ಜನವಸತಿ ಭಾಗಕ್ಕೆ ನುಗ್ಗಿದಾಗ ಏನು ಮಾಡಬಹುದು? ಹೇಗೆ ಜೀವಂತ ಬಂಧಿಸಬಹುದು? ಎಂಬ ಬಗ್ಗೆ ಸೂಕ್ತ ತಿಳಿವಳಿಕೆ ನೀಡಿ, ಗ್ರಾಮ ಅರಣ್ಯ ಪಾಲನಾ ಸಮಿತಿ, ಅರಣ್ಯ ರಕ್ಷಣಾ ಸಮಿತಿ, ವನ್ಯ ಜೀವಿ ಸಂರಕ್ಷಣಾ ವಾರ್ಡನ್ ಮೊದಲಾದ ಸಮುದಾಯ ಸಹಭಾಗಿತ್ವದ ವನ್ಯ-ವೃಕ್ಷ ಪ್ರೇರೇಪಣಾ ಶಿಬಿರ ಸಂಘಟಿಸಿ ಜನರನ್ನೇ ಏಕೆ ತರಬೇತು ಗೊಳಿಸಬಾರದು?
ರಾತ್ರಿಯ ವೇಳೆ ಅಥವಾ ಬೆಳಗು ಮುಂಜಾನೆ ಹೊಲಕ್ಕೆ ಅಥವಾ ಬಹಿರ್ದೆಸೆಗೆಂದು ಬಯಲಿಗೆ ತೆರಳುವ ಬದಲು ಮನೆಗೊಂದು ಶೌಚಾಲಯ ಕಟ್ಟಿಸಿಕೊಂಡರೆ ಈ ಆಪಾಯ ಅರ್ಧ ದೂರಾದಂತೆ. ಜೊತೆಗೆ, ನಾಯಿಯನ್ನು ಕರೆದೊಯ್ಯುವುದು ಜೀವರಕ್ಷಕ ಸಾಧನ. ಹಾಗೆಯೇ ಕುರಿ ಮರಿಯಾದರೂ ನಡೆದೀತು. ನಾಯಿ ಕ್ವಚಿತ್ತಾಗಿ ಬಲಿಯಾದರೂ ವನ್ಯ ಜೀವಿಗಳೊಂದಿಗೆ ಸೆಣೆಸಲು ಮುಂದಾಗಿ ತನ್ನ ಮಾಲೀಕನ ಜೀವ ಉಳಿಸಬಲ್ಲುದು. ಹಾಗೆಯೇ ಕುರಿ ಸುಲಭವಾಗಿ ಕಾಡು ಪ್ರಾಣಿಗಳಿಗೆ ತುತ್ತಾದರೂ, ಮನುಷ್ಯನ ಜೀವ ಮಾತ್ರ ಸುರಕ್ಷಿತ. ಮನುಷರಿಗೆ ವನ್ಯ ಪ್ರಾಣಿಗಳ ಬಗ್ಗೆ ಇರುವಷ್ಟೇ ಭಯ ವನ್ಯ ಜೀವಿಗಳಿಗೂ ಮನುಷ್ಯರ ಬಗ್ಗೆ ಅಷ್ಟೇ ಪ್ರಮಾಣದ ಭಯ ಮನೆಮಾಡಿದೆ. ಹಾಗಾಗಿ, ಕೈಯಲ್ಲಿ ಬಲಿಷ್ಠವಾದ ಕೋಲು, ಬೆಂಕಿ ಹಚ್ಚಿದ ಹಿಲಾಲು, ಸಪ್ಪಳ ಮಾಡುವ ‘ಜಿರಕಿ ಚಪ್ಪಲ್’ ಧರಿಸಲು, ಊದಿನ ಕಡ್ಡಿ ನೀರಲ್ಲಿ ನೆನೆಸಿ ಮೂರು ಕಡೆಗಳಲ್ಲಿ ‘ಲಕ್ಷ್ಮಿ ಬಾಂಬ್’ ಕಟ್ಟಿಟ್ಟರೆ ಊದಿನ ಕಡ್ಡಿ ಸುಡುತ್ತ ಬಂದ ಹಾಗೆ, ಅಂದಾಜು ತಾಸಿಗೊಮ್ಮೆ ಭೀಕರ ಸಪ್ಪಳ ಮಾಡುತ್ತ ಬಾಂಬ್ ಸಿಡಿಯುವುದರಿಂದ ವನ್ಯ ಪ್ರಾಣಿಗಳು ಇಲ್ಲ ಸುಳಿಯಲಾರವು. ಈ ಕುರಿತಂತೆ ಅರಣ್ಯ ಇಲಾಖೆಯ ಕುಶಲಿಗಳು ಜನರಿಗೆ ಹೇಳಿಕೊಡಬಹುದು. ಹೀಗೆ ಮಾಡುವುದರಿಂದ ತಕ್ಕ ಮಟ್ಟಿಗೆ ಮಾನವ-ವನ್ಯ ಜೀವಿ ಸಂಘರ್ಷಕ್ಕೆ ತಡೆಹಾಕಿದಂತಾಗುತ್ತದೆ.
ಮೊನ್ನೆ ರೋಣ ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ನಡೆದದ್ದು ಇದೆ. ದಾರಿ ತಪ್ಪಿ ನಾಡಿಗೆ ಕಾಲಿಟ್ಟ ಆಗಂತುಕ ಅತಿಥಿಯನ್ನು ಬದುಕಿಸಬೇಕು ಎಂಬ ಚಿಂತೆ ಯಾರಿಗೂ ಇದಂತೆ ಕಾಣಿಸಲಿಲ್ಲ. ಊರ ಹಿಂದಿನ ಹಳ್ಳದಲ್ಲಿ ಏಕಾಏಕಿ ಪ್ರತ್ಯಕ್ಷವಾಗಿ ೧೪ ಜನರ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಲು ಮುಂದಾದ ಕರಡಿಯನ್ನು ಅವರು ಬದುಕಿಸಬೇಕಿತ್ತು ಎಂದು ನಾನು ಹೇಳಿದರೆ ಅದು ಅಮಾನವೀಯವಾದೀತು. ಆದರೆ, ಆ ಕರಡಿಗೆ ಪುಟ್ಟ ಮರಿಗಳಿದ್ದರೆ ಈ ರೀತಿಯ ಅತಿರೇಕದ ನಡವಳಿಕೆ ತೋರಿಸುತ್ತದೆ ಎಂದು ನಾವು ತಿಳಿದಿರಬೇಕು. ಮುಂದೆ ಆಗಿದ್ದೇನು, ಇಡೀ ಊರ ಜನ ಒಂದಾಗಿ ಕೈಗೆ ಸಿಕ್ಕ ಮಾರಕ ಆಯುಧಗಳನ್ನೆಲ್ಲ ಬಳಸಿ ಕರಡಿಯ ಮೇಲೆ ಹಲ್ಲೆಗೆ ಮುಂದಾದರು. ಎಲ್ಲರೂ ಪೌರುಷ ಮೆರೆದು ಕರಡಿಯ ಮೈ ಮೇಲೆ ಕೊಡಲಿಯ ಕಚ್ಚುಗಳನ್ನು ಹಾಕಿದರು. ಪೆಟ್ಟು ತಿಂದು ಬಸವಳಿದ ಕರಡಿ ಸಮೀಪದಲ್ಲೇ ಸಿಕ್ಕ ಯಾರದೋ ಮನೆ ಹೊಕ್ಕಿತು. ಜನ ಹೊರಗಿನಿಂದ ಅಗಳಿ ಹಾಕಿ, ಅರಣ್ಯ ಇಲಾಖೆಯವರು ಬರುವ ವರೆಗೆ ಕಾಯ್ದರು. ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಬಾಗಿಲು ತೆರೆಯುವ ಹೊತ್ತಿಗೆ ಕರಡಿ ತೀವ್ರ ರಕ್ತಸ್ರಾವದಿಂದ ಮಂಚದ ಬುಡದಲ್ಲೇ ಅಸುನೀಗಿತ್ತು. ಕೊನೆಗೂ ಕರಡಿಗೆ ನ್ಯಾಯ ಸಿಗಲೇ ಇಲ್ಲ.
ಈಗ ಮತ್ತೆ ಕಳೆದ ಗುರುವಾರ ರಾತ್ರಿ ಒಂದು ದೊಡ್ಡ ಕರಡಿ ಹಾಗೂ ಒಂದು ಮರಿ ಕರಡಿ ಊರ ಮುಂದಿನ ಹೊಲದಲ್ಲಿ ಗೋಚರಿಸಿವೆ. ಬಹುಶ: ಸತ್ತು ಹೋದ ಕರಡಿಯ ಕುಟುಂಬಕ್ಕೆ ಈ ಕರಡಿಗಳು ಸೇರಿರಬಹುದು ಎಂಬ ಗುಮಾನಿ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಕೂಡಲೇ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾರನಬಸರಿ ಗ್ರಾಮದವರು ಸುದ್ದಿ ಮುಟ್ಟಿಸಿದ್ದಾರೆ. ಅವರೂ ಸಹ ಆಗಮಿಸಿ ಗಸ್ತು ತಿರುಗಿದ್ದಾರೆ; ಆದರೆ ಕರಡಿಗಳು ಕಾಣಸಿಗದೇ ವಾಪಸ್ಸಾಗಿದ್ದಾರೆ. ದು:ಸ್ವಪ್ನವೆಂಬಂತೆ ಕಳೆದ ಶನಿವಾರ ಮತ್ತೆ ಗಜೇಂದ್ರಗಡ ರಸ್ತೆಯಲ್ಲಿರುವ ಮಾರನಬಸರಿ ಹಳ್ಳದಲ್ಲಿ ಉಸುಕು ತುಂಬಲು ಹೋಗಿದ್ದ ಬೂದಿಹಾಳ ಗ್ರಾಮದ ಕೆಲವರಿಗೆ ಕರಡಿಗಳು ಕಾಣಸಿಕ್ಕಿವೆ. ನಾಲ್ಕೈದು ವರ್ಷದ ಕೆಳಗೆ ಕಪ್ಪತ ಗುಡ್ಡದಲ್ಲಿ ಒಂದು ಕರಡಿ ಕಾಣಸಿಕ್ಕ ದಾಖಲೆ ಇದೆ. ಇತ್ತೀಚೆಗೆ ಕೊಪ್ಪಳ, ಹೊಸಪೇಟೆ, ಗಜೇಂದ್ರಗಡ ಹಾಗೂ ಕುಷ್ಟಗಿ ಭಾಗಗಳಲ್ಲಿ ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬಹುದೇ? ಕೊಂದು ಸೇಡು ತೀರಿಸಿಕೊಂಡಂತೆ, ಮುಯ್ಯಿಗೆ-ಮುಯ್ಯಿ ಎಂಬಂತೆ ನಡೆದುಕೊಳ್ಳುವುದನ್ನು ಬಿಟ್ಟು, ಪರಸ್ಪರ ನಮ್ಮ ಸಂಬಂಧಗಳನ್ನು, ಸ್ವಾತಂತ್ರ್ಯಗಳನ್ನು ಗೌರವಿಸುತ್ತ ಬದುಕುವ ಮನಸ್ಸು ಮಾಡೋಣವೇ? ಅಥವಾ ಮಾಧ್ಯಮಗಳಿಗೆ ಸುಗ್ರಾಸ ಭೋಜನ ಒದಗಿಸುವ ಇಂತಹ ಕ್ಷುಲ್ಲಕ ಪ್ರಚಾರಕ್ಕಾಗಿ ಹಾತೊರೆಯೋಣವೇ? ‘ವಿಚಾರವಂತ ಪ್ರಾಣಿ’ ಒಂದು ಕ್ಷಣ ನಿಂತು ಯೋಚಿಸಬೇಕು.
ಭೂಮಿ ಎನ್ನುವುದು ನಮ್ಮ ಸ್ವೇಚ್ಛಾರಕ್ಕೆ ಮೀಸಲಿರುವ ಜಹಾಗೀರ್ ಅಲ್ಲ. ಇಲ್ಲಿ ನಮ್ಮಂತೆ ಇತರರಿಗೂ ಬದುಕುವ ಹಕ್ಕಿದೆ.
ಪ್ರತಿಕ್ರಿಯೆ (8)